ಕಾರ್ಕಳ: ಮಾಳ ಕೋಟೆ ಬಸದಿಯಲ್ಲಿ 5 ಅಪರೂಪದ ಜಿನ ಶಾಸನಗಳ ಪತ್ತೆ
RB NEWS
Bureau Report
ಕಾರ್ಕಳ: ಮಾಳ ಕೋಟೆ ಬಸದಿಯಲ್ಲಿ 5 ಅಪರೂಪದ ಜಿನ ಶಾಸನಗಳ ಪತ್ತೆ
ಸಂಶೋಧಕ ಶ್ರುತೇಶ್ ಆಚಾರ್ಯರಿಂದ ಸಮಗ್ರ ಅಧ್ಯಯನ; ಕೋಟೆ ಬಸದಿಯ ಇತಿಹಾಸಕ್ಕೆ ಹೊಸ ಪುರಾವೆ
ಕಾರ್ಕಳ, ಆ. 27: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಐತಿಹಾಸಿಕ ಕೋಟೆ ಬಸದಿಯಲ್ಲಿ ಐದು ಪ್ರಾಚೀನ ಜಿನ ಶಾಸನಗಳು ಪತ್ತೆಯಾಗಿದ್ದು, ಇತಿಹಾಸ ಮತ್ತು ಪುರಾತತ್ತ್ವ ಅಧ್ಯಯನಕ್ಕೆ ಮಹತ್ವದ ದಾಖಲೆಗಳು ಲಭ್ಯವಾಗಿವೆ.
ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ರಾಜಗುರು ಪೀಠದ ಪರಂಪರೆಗೆ ಒಳಪಟ್ಟಿರುವ ಕೋಟೆ ಬಸದಿಯಲ್ಲಿ ಆದಿನಾಥ ತೀರ್ಥಂಕರ, ನೇಮಿನಾಥ ಸ್ವಾಮಿ, ಪಾರ್ಶ್ವನಾಥ ಸ್ವಾಮಿ, ಚಂದ್ರನಾಥ ಸ್ವಾಮಿ ಹಾಗೂ ಪದ್ಮಾವತಿ ದೇವಿಯ ಸನ್ನಿಧಿಗಳಿವೆ. ಅನಾದಿ ಕಾಲದಿಂದ ಪೆರ್ಮುಡೆ ಗುತ್ತು, ಸೌಟಬೆಟ್ಟು ಗುತ್ತು, ಕೊಡಂಗೆ ಗುತ್ತು ಮನೆತನಗಳವರು ಹಾಗೂ ಜೈನ ಸಮಾಜದವರು ಈ ಸನ್ನಿಧಿಗಳನ್ನು ಆರಾಧಿಸಿಕೊಂಡು ಬಂದಿದ್ದಾರೆ.
ಪ್ರಸ್ತುತ ಬಸದಿಯ ಜೀರ್ಣೋದ್ಧಾರ ಕಾರ್ಯದ ಹಿನ್ನೆಲೆಯಲ್ಲಿ ಮುಖ್ಯ ದೇವರು ಹಾಗೂ ಪರಿವಾರ ದೇವರುಗಳ ಮೂರ್ತಿಗಳನ್ನು ಬಾಲಾಲಯದಲ್ಲಿ ಇರಿಸಲಾಗಿದ್ದು, ಈ ಸಂದರ್ಭದಲ್ಲಿ ಒಟ್ಟು ಐದು ಪ್ರಾಚೀನ ಶಾಸನಗಳು ಬೆಳಕಿಗೆ ಬಂದಿವೆ.
ಖ್ಯಾತ ಆಯುರ್ವೇದ ವೈದ್ಯ ಡಾ. ಪಿ. ಸತ್ಯನಾರಾಯಣ ಭಟ್ ಅವರ ಮಾಹಿತಿಯ ಮೇರೆಗೆ ಉಡುಪಿಯ ಪ್ರಾಚ್ಯಸಂಚಯ ಸಂಶೋಧನ ಕೇಂದ್ರದ ಅಧ್ಯಯನ ನಿರ್ದೇಶಕ ಪ್ರೊ. ಎಸ್.ಎ. ಕೃಷ್ಣಯ್ಯ ಅವರ ನೇತೃತ್ವದ ತಂಡ ಕೋಟೆ ಬಸದಿಗೆ ಭೇಟಿ ನೀಡಿತ್ತು. ಈ ವೇಳೆ ಜಿನ ಪ್ರತಿಮೆಗಳು ಹಾಗೂ ಶ್ರುತಸ್ಕಂದದ ಪೀಠಭಾಗದಲ್ಲಿದ್ದ ಪ್ರಾಚೀನ ಶಾಸನಗಳನ್ನು ಗುರುತಿಸಲಾಯಿತು. ಬಳಿಕ ಪ್ರೊ. ಕೃಷ್ಣಯ್ಯ ಅವರ ಕೋರಿಕೆಯ ಮೇರೆಗೆ ಇತಿಹಾಸ ಮತ್ತು ಪುರಾತತ್ತ್ವ ಸಂಶೋಧಕ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಶಾಸನಗಳ ಸಮಗ್ರ ಅಧ್ಯಯನ ನಡೆಸಿದರು.
ಸಂಶೋಧನಾ ವರದಿಯ ಪ್ರಕಾರ, ಪತ್ತೆಯಾದ ಐದು ಶಾಸನಗಳಲ್ಲಿ ಮೂರು ಶಿಲಾ ಜಿನ ಪ್ರತಿಮೆಗಳ ಮೇಲೆ ಹಾಗೂ ಎರಡು ಲೋಹದ ವಸ್ತುಗಳ ಮೇಲೆ ಕೆತ್ತಲ್ಪಟ್ಟಿವೆ.
ಗಣಧರ ಪಾದ ಪ್ರತಿಷ್ಠಾ ಶಾಸನ: ಕಂಚಿನ ಗಣಧರ ಪಾದದ ಪೀಠಭಾಗದಲ್ಲಿರುವ ಮೂರು ಸಾಲಿನ ಶಾಸನವು ಮಾಳದ ಕೋಟೆ ಬಸದಿಗೆ ಹೆಗಡೆಯ ಮಗ ‘ವಿಞ’ ಎಂಬವರು ಗಣಧರ ಪಾದವನ್ನು ಮಾಡಿಸಿಕೊಟ್ಟಿರುವುದನ್ನು ದಾಖಲಿಸುತ್ತದೆ. ಲಿಪಿ ಲಕ್ಷಣಗಳ ಆಧಾರದಲ್ಲಿ ಈ ಶಾಸನವು 18–19ನೇ ಶತಮಾನಕ್ಕೆ ಸೇರಿದೆ ಎಂದು ಅಂದಾಜಿಸಲಾಗಿದೆ.
ಶ್ರುತಸ್ಕಂದ ಶಾಸನ: ಕಂಚಿನ ಶ್ರುತಸ್ಕಂದದ ಪೀಠದ ಹಿಂಭಾಗದಲ್ಲಿರುವ ನಾಲ್ಕು ಸಾಲಿನ ಶಾಸನವು ಜಯ ಸಂವತ್ಸರದ ಮಾಘ ಮಾಸದ ಕೃಷ್ಣ ಪಕ್ಷದ ಪಾಡ್ಯಮಿ ದಿನದಂದು ತೆಳಾರೆ (ಇಂದಿನ ತೆಲ್ಲಾರ್) ಬಳಿಯ ದೇಮ ನಾಯಕರು ತ್ರಿಕಾಲ ತದಿಗೆ ನೋಂಪಿಯ ಉದ್ಯಾಪನೆ ನೆರವೇರಿಸಿ ಮಾಳದ ಬಸದಿಗೆ ಶ್ರುತವನ್ನು ಸಮರ್ಪಿಸಿದ ವಿಚಾರವನ್ನು ದಾಖಲಿಸುತ್ತದೆ. ಇದರ ಕಾಲಮಾನ ಸಾಮಾನ್ಯ ಶಕೆ 1655, ಫೆಬ್ರವರಿ 15, ಗುರುವಾರಕ್ಕೆ ಹೊಂದಿಕೆಯಾಗುತ್ತದೆ.
ಪಾರ್ಶ್ವನಾಥ ತೀರ್ಥಂಕರರ ಪೀಠದ ಶಾಸನ: ಕಾಯೋತ್ಸರ್ಗ ಭಂಗಿಯಲ್ಲಿರುವ ಪಾರ್ಶ್ವನಾಥ ತೀರ್ಥಂಕರರ ಶಿಲಾ ಪ್ರತಿಮೆಯ ಪೀಠಭಾಗದಲ್ಲಿರುವ ಒಂದು ಸಾಲಿನ ಶಾಸನವು ‘ಪಾಯಂಣ’ ಎಂಬ ವ್ಯಕ್ತಿ ಪ್ರತಿಮೆಯನ್ನು ಮಾಡಿಸಿರುವುದನ್ನು ತಿಳಿಸುತ್ತದೆ. ಲಿಪಿ ಲಕ್ಷಣಗಳ ಆಧಾರದಲ್ಲಿ ಈ ಪ್ರತಿಮೆ ಹಾಗೂ ಶಾಸನವು 14ನೇ ಶತಮಾನಕ್ಕೆ ಸೇರಿದವು ಎಂದು ನಿರ್ಧರಿಸಲಾಗಿದೆ.
ಪಾರ್ಶ್ವನಾಥ ಪ್ರತಿಮೆಯ ಹಿಂಭಾಗದ ಶಾಸನ: ಮತ್ತೊಂದು ಪಾರ್ಶ್ವನಾಥ ಶಿಲಾ ಪ್ರತಿಮೆಯ ಹಿಂಭಾಗದಲ್ಲಿರುವ ಎಂಟು ಸಾಲಿನ ಶಾಸನದಲ್ಲಿ ‘ವಿರೋಧಿಕೃತು ಸಂವತ್ಸರ’ದ ವೈಶಾಖ ಶುದ್ಧ ತ್ರಯೋದಶಿಯಂದು ಐತಪ್ಪ ಬಳಿಯ ಸಿರುಳಾಲ (ಇಂದಿನ ಶಿರ್ಲಾಲು) ಕೋಟಿಲದೇವನು ಪ್ರತಿಷ್ಠಾಪಿಸಿದ ಚವಿಸತೀರ್ಥ ಪಾರ್ಶ್ವನಾಥ ಪ್ರತಿಮೆಯ ಅಮೃತಪಡಿಗೆ ಮೂರುವರೆ ಮುಡಿ ಅಕ್ಕಿಯನ್ನು ಸಮರ್ಪಿಸಿದ ವಿವರ ದಾಖಲಾಗಿದೆ. ಈ ದಿನಾಂಕ ಸಾಮಾನ್ಯ ಶಕೆ 1611, ಏಪ್ರಿಲ್ 15, ಸೋಮವಾರಕ್ಕೆ ಹೊಂದಿಕೆಯಾಗುತ್ತದೆ.
ಅಮೃತಶಿಲೆಯ ಪಾರ್ಶ್ವನಾಥ ಪ್ರತಿಮೆಯ ಶಾಸನ: ಅಮೃತಶಿಲೆಯಲ್ಲಿ ನಿರ್ಮಿಸಲಾದ ಪದ್ಮಾಸನ ಭಂಗಿಯ ಪಾರ್ಶ್ವನಾಥ ತೀರ್ಥಂಕರರ ಪ್ರತಿಮೆಯ ಪೀಠಭಾಗದಲ್ಲಿ ಎರಡು ಸಾಲಿನ ದೇವನಾಗರಿ ಲಿಪಿಯ ಶಾಸನವಿದೆ. ಈ ಶಾಸನವು ಸಾಮಾನ್ಯ ಶಕೆಯ 17ನೇ ಶತಮಾನಕ್ಕೆ ಸೇರಿದ ಪ್ರತಿಷ್ಠಾಪನಾ ವಿವರವನ್ನು ದಾಖಲಿಸುತ್ತದೆ.
ಈ ಶಾಸನಗಳ ತುಲನಾತ್ಮಕ ಅಧ್ಯಯನ ನಡೆಸಿದಾಗ ಕೆರ್ವಾಶೆಯ ವರ್ಧಮಾನ ಬಸದಿಯ ಶಾಸನಗಳ ಕಾಲಮಾನಕ್ಕೂ ಕೋಟೆ ಬಸದಿಯ ಶಾಸನಗಳ ಕಾಲಮಾನಕ್ಕೂ ನಿಖರ ಹೊಂದಾಣಿಕೆ ಕಂಡುಬಂದಿದೆ. ಲಭ್ಯವಿರುವ ಐತಿಹಾಸಿಕ ಸಾಕ್ಷ್ಯಾಧಾರಗಳ ಆಧಾರದಲ್ಲಿ ಕೋಟೆ ಬಸದಿಯ ಮೂಲ ಇತಿಹಾಸವು 14–15ನೇ ಶತಮಾನಗಳ ಕಾಲಘಟ್ಟಕ್ಕೆ ಸೇರಿರುವ ಸಾಧ್ಯತೆಯನ್ನು ಸಂಶೋಧಕರು ವ್ಯಕ್ತಪಡಿಸಿದ್ದಾರೆ.
ಕೋಟೆ ಬಸದಿಯ ಇತಿಹಾಸ, ಜೈನ ಧಾರ್ಮಿಕ ಪರಂಪರೆ ಹಾಗೂ ಕರಾವಳಿ ಕರ್ನಾಟಕದ ಪ್ರಾಚೀನ ಸಾಂಸ್ಕೃತಿಕ ಹಿನ್ನೆಲೆಯನ್ನು ತಿಳಿದುಕೊಳ್ಳಲು ಈ ಶಾಸನಗಳು ಮಹತ್ವದ ಪುರಾವೆಗಳಾಗಿವೆ. ಮುಂದಿನ ದಿನಗಳಲ್ಲಿ ಶಾಸನಗಳ ಹೆಚ್ಚಿನ ಅಧ್ಯಯನದಿಂದ ಬಸದಿಯ ಇತಿಹಾಸಕ್ಕೆ ಸಂಬಂಧಿಸಿದ ಇನ್ನಷ್ಟು ಮಹತ್ವದ ಮಾಹಿತಿಗಳು ಬೆಳಕಿಗೆ ಬರುವ ನಿರೀಕ್ಷೆಯಿದೆ.
ಈ ಕ್ಷೇತ್ರಕಾರ್ಯ ಮತ್ತು ಶೋಧನಾ ಕಾರ್ಯದಲ್ಲಿ ಕೋಟೆ ಬಸದಿಯ ಶ್ರೀ ಚಂದ್ರನಾಥ ಇಂದ್ರರು, ಇತಿಹಾಸ ಮತ್ತು ಪುರಾತತ್ತ್ವ ಸಂಶೋಧನಾರ್ಥಿ ಶಶಾಂತ್ ಪಳ್ಳಿ ಹಾಗೂ ಇತಿಹಾಸಾಸಕ್ತರಾದ ಕೇಶವ ಡೋಂಗ್ರೆ ಮತ್ತು ಯದುಗೋಪನ್ ಕೆ.ಆರ್. ಅವರು ಸಹಕರಿಸಿದ್ದಾರೆ.