ಸಾಣೂರು : ಬ್ಯಾಂಕ್ ಆಫ್ ಬರೋಡ ಸಾಣೂರು ಶಾಖೆಯ ಪ್ರಬಂಧಕರಾಗಿದ್ದ ಮುಂಡ್ಕೂರು ಪ್ರಮೋದ್ ಕಾಮತ್ ರವರಿಗೆ ಸಾರ್ವಜನಿಕ ಅಭಿನಂದನೆ

Picture of RB NEWS

RB NEWS

Bureau Report

ಕಾರ್ಕಳ : ಬ್ಯಾಂಕ್ ಆಫ್ ಬರೋಡ ಸಾಣೂರು ಶಾಖೆಯಲ್ಲಿ ಎರಡೂವರೆ ವರ್ಷಗಳ ಕಾಲ ಜನಾನುರಾಗಿಯಾಗಿ ,ಗ್ರಾಹಕ ಸ್ನೇಹಿಯಾಗಿ ಅತ್ಯಪೂರ್ವ ಸೇವೆ ಸಲ್ಲಿಸಿ ಇದೀಗ ಗೋವಾಕ್ಕೆ ವರ್ಗಾವಣೆಗೊಂಡಿರುವ ಪ್ರಬಂಧಕ ಮುಂಡ್ಕೂರು ಪ್ರಮೋದ್ ಕಾಮತ್ ರವರಿಗೆ ಅವರ ಧರ್ಮಪತ್ನಿ ಮಂಗಳ ಕಾಮತ್ ರವರನ್ನು ಜೊತೆಗೂಡಿ ಸಾರ್ವಜನಿಕ ಅಭಿನಂದನೆ ಹಾಗೂ ಗೌರವಾರ್ಪಣೆಯ ಕಾರ್ಯಕ್ರಮವು ಸಾಣೂರು ಗ್ರಾಮ ಪಂಚಾಯತ್ ವಠಾರದ ಸುವರ್ಣ ಗ್ರಾಮೋದಯ ಸೌಧ ಸಭಾಭವನದಲ್ಲಿ ಜರುಗಿತು.

ಸಾಣೂರು ಗ್ರಾಮ ಪಂಚಾಯತ್, ಜಿಎಸ್‌ಬಿ ಸಭಾ ಶ್ರೀರಾಮ ಮಂದಿರ ಟ್ರಸ್ಟ್ (ರಿ.)ಸಾಣೂರು, ಯುವಕ ಮಂಡಲ(ರಿ.), ಸಾಣೂರು, ಶ್ರೀ ಬಾಲಾಂಜನೇಯ ಯುವಕ ಸಂಘ(ರಿ.), ಮುರತಂಗಡಿ ,ಶ್ರೀ ವಿಶ್ವಕರ್ಮ ಸಮಾಜಾಭ್ಯುದಯ ಸಂಘ, ಶಕ್ತಿ ಸಂಜೀವಿನಿ ಒಕ್ಕೂಟ ಮೊದಲಾದ ಸಂಘ-ಸಂಸ್ಥೆಗಳು, ಬ್ಯಾಂಕಿನ ಗ್ರಾಹಕರು ,ಸಿಬ್ಬಂದಿ ವರ್ಗ ಮತ್ತು ಅಭಿಮಾನಿ ಬಳಗದ ಪರವಾಗಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಎರಡೂವರೆ ವರ್ಷಗಳ ಅಲ್ಪಾವಧಿಯಲ್ಲಿ ಗ್ರಾಹಕ ಸ್ನೇಹಿಯಾಗಿ ನಗುಮೊಗದ ಸೇವೆಯ ಜೊತೆಗೆ ಕಾರ್ಯದಕ್ಷತೆ, ಬ್ಯಾಂಕಿಂಗ್ ಸೇವಾ ಸೌಲಭ್ಯವನ್ನು ಗ್ರಾಮದ ಕಟ್ಟಕಡೆಯ ವ್ಯಕ್ತಿಗೆ ಮುಟ್ಟಿಸುವಲ್ಲಿ ಯಶಸ್ವಿಯಾದ ಬ್ಯಾಂಕಿನ ಪ್ರಬಂಧಕ ಮುಂಡ್ಕೂರು ಪ್ರಮೋದ್ ಕಾಮತ್ ರವರ ನೆನಪು ಗ್ರಾಹಕರ ಮನಸ್ಸಿನಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿಯುತ್ತದೆ ಎಂದು ಅಭಿನಂದಿಸಿ ಮಾತನಾಡಿದ ಸಾಣೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಕೆಎಂಎಫ್ ನಿರ್ದೇಶಕ ಸಾಣೂರು ನರಸಿಂಹ ಕಾಮತ್ ರವರು ಅವರ ಮುಂದಿನ ಬ್ಯಾಂಕಿಂಗ್ ಪಯಣ ವರ್ಗಾವಣೆಗೊಂಡಿರುವ ಗೋವಾದಲ್ಲಿಯೂ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ನೂತನ ಬ್ಯಾಂಕ್ ಪ್ರಬಂಧಕರಾಗಿ ಅಧಿಕಾರ ಸ್ವೀಕರಿಸಿದ ಮೂಡಿಗೆರೆಯ ಅವಿನಾಶ್ ರವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಸ್ವಾಗತಿಸಲಾಯಿತು.

ಸಾಣೂರಿನ ವೈದ್ಯ ಡಾ. ಅಜಿತ್ ಪ್ರಕಾಶ್, ನಿಕಟಪೂರ್ವ ಜಿಪಂ ಸದಸ್ಯ ಇರುವತ್ತೂರಿನ ಉದಯ .ಎಸ್. ಕೋಟ್ಯಾನ್, ಜಯಕೀರ್ತಿ ಕಡಂಬ ಇರ್ವತ್ತೂರು, ಸಾಣೂರು ಗ್ರಾಪಂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಮ್ ಸಿ ಮಧು, ಸಾಣೂರು ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವೃಂದಾ, ಯುವಕ ಮಂಡಲ (ರಿ.),ಸಾಣೂರು ಇದರ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಶಕ್ತಿ ಸಂಜೀವಿನಿ ಒಕ್ಕೂಟದ ಜಯಲಕ್ಷ್ಮಿ ಶೆಟ್ಟಿಗಾರ್ ಅಭಿನಂದಿಸಿ ಮಾತನಾಡಿದರು.

ಸನ್ಮಾನಿತರಾದ ಮುಂಡ್ಕೂರು ಪ್ರಮೋದ್ ಕಾಮತ್ ರವರು ಸಾಣೂರು ಮತ್ತು ಇರುವತ್ತೂರು ಗ್ರಾಮಸ್ಥರ ಹಾಗೂ ಬ್ಯಾಂಕಿನ ಎಲ್ಲಾ ಗ್ರಾಹಕರು ,ಸಿಬ್ಬಂದಿ ವರ್ಗ, ಗ್ರಾಮದ ಎಲ್ಲಾ ವಿದ್ಯಾಸಂಸ್ಥೆಗಳು ಹಾಗೂ ಸಂಘ ಸಂಸ್ಥೆಗಳ ಸಹಕಾರವನ್ನು ಸ್ಮರಿಸಿ, ಎಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸಿರುವುದು ನನ್ನ ಜೀವನದ ಸಾರ್ಥಕ ಕ್ಷಣ ಎಂದು ಭಾವಪೂರ್ಣವಾಗಿ ಮಾತನಾಡಿದರು.

ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ಯುವರಾಜ್ ಜೈನ್ ರವರ ಅಧ್ಯಕ್ಷತೆಯಲ್ಲಿ ಜರುಗಿದ ಸಾರ್ವಜನಿಕ ಅಭಿನಂದನ ಸಮಾರಂಭದ ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಯಶೋಧ .ವಿ. ಶೆಟ್ಟಿ, ಆನಂದ ಶೆಟ್ಟಿ, ಚಂದ್ರರಾಜ ಅತಿಕಾರಿ, ಸಾಣೂರುಗುತ್ತು ಪ್ರಭಾತ್ ನಾಯ್ಕ್ ಉಪಸ್ಥಿತರಿದ್ದರು.

ಸಚ್ಚರಿಪೇಟೆ ಸುಧೀರ್ ನಾಯಕ ಸನ್ಮಾನ ಪತ್ರವನ್ನು ಓದಿ ಕಾರ್ಯಕ್ರಮವನ್ನು ನಿರೂಪಿಸಿದರು.

ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಪೂಜಾರಿ ಸ್ವಾಗತಿಸಿದರು. ಸಾಣೂರು ಯುವಕ ಮಂಡಲದ ಕಾರ್ಯದರ್ಶಿ ಮೋಹನ್ ಶೆಟ್ಟಿ ವಂದನಾರ್ಪಣೆಗೈದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top