ಭೂಗತಪಾತಕಿ ಹೇಮಂತ್ ಪೂಜಾರಿಯನ್ನು ಸ್ವದೇಶಕ್ಕೆ ಕರೆ ತರಲು ಮುಂದಾದ ಭಾರತ?!

Picture of RB NEWS

RB NEWS

Bureau Report

ಭೂಗತಪಾತಕಿ ಹೇಮಂತ್ ಪೂಜಾರಿಯನ್ನು ಸ್ವದೇಶಕ್ಕೆ ಕರೆ ತರಲು ಮುಂದಾದ ಭಾರತ?!



ಉಡುಪಿ: ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕೊಲೆ, ಸುಲಿಗೆ, ಹಲ್ಲೆ ಹಾಗೂ ಕೊಲೆ ಬೆದರಿಕೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದ ಭೂಗತ ಪಾತಕಿ ಹೇಮಂತ್ ಪೂಜಾರಿಯನ್ನು ವಿದೇಶದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಭಾರತದ ಬಾಹ್ಯ ಗುಪ್ತಚರ ಸಂಸ್ಥೆಯಾದ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ (ರಾ) ನೆರವಿನೊಂದಿಗೆ ಇಂಟರ್‌ಪೋಲ್ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ. ಕೆಲವು ವಾರಗಳ ಹಿಂದೆ ಮಲೇಷ್ಯಾದಲ್ಲಿ ಬಂಧಿಸಲಾಗಿದೆ ಎಂದು ಕೆಲವು ಮೂಲಗಳು ಹೇಳುತ್ತಿದ್ದರೆ, ಇನ್ನು ಕೆಲವು ಮೂಲಗಳು ಮ್ಯಾನ್ಮಾರ್‌ನಲ್ಲಿ ಬಂಧಿಸಲಾಗಿದೆ ಎಂದು ವರದಿ ಮಾಡಿವೆ. ಆದರೆ ಬಂಧನ ನಡೆದ ಸ್ಥಳ ಹಾಗೂ ಕಾರ್ಯಾಚರಣೆಯ ನಿಖರ ವಿವರಗಳು ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ಮಹಾರಾಷ್ಟ್ರ ಪೊಲೀಸರೂ ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ.
25ಕ್ಕೂ ಹೆಚ್ಚು ಗಂಭೀರ ಪ್ರಕರಣಗಳಲ್ಲಿ ಆರೋಪ
ಹೇಮಂತ್ ಪೂಜಾರಿ ವಿರುದ್ಧ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ 25ಕ್ಕೂ ಹೆಚ್ಚು ಗಂಭೀರ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ. ಉಡುಪಿಯ ಮುದ್ರಂಗಡಿಯಲ್ಲಿ ಉದ್ಯಮಿ ಡೇವಿಡ್ ಡಿ’ಸೋಜಾ ಅವರ ಕೊಲೆ ಪ್ರಕರಣ ಸೇರಿದಂತೆ ಹಲವು ಕೊಲೆ, ಸುಲಿಗೆ ಹಾಗೂ ಜೀವ ಬೆದರಿಕೆ ಪ್ರಕರಣಗಳಲ್ಲಿ ಆತನ ಹೆಸರು ಕೇಳಿಬಂದಿತ್ತು.
ಉಡುಪಿಯ ಎರ್ಮಾಳ್ ಮೂಲದ ಕುಟುಂಬ
ಹೇಮಂತ್ ಪೂಜಾರಿಯ ಪೋಷಕರು ಮೂಲತಃ ಉಡುಪಿಯ ಎರ್ಮಾಳ್ ಮೂಲದವರು. ಮಹಾರಾಷ್ಟ್ರದಲ್ಲಿ ಜನಿಸಿದ ಆತ, ಕುಟುಂಬದ ಮೂಲ ಉಡುಪಿಯಲ್ಲಿದ್ದ ಕಾರಣ ಹಲವು ವರ್ಷಗಳ ಹಿಂದೆ ಎರ್ಮಾಳ್‌ಗೆ ಭೇಟಿ ನೀಡುತ್ತಿದ್ದ ಎನ್ನಲಾಗಿದೆ.
ಮುಂಬೈನಲ್ಲಿ ಆರಂಭದಲ್ಲಿ ಭೂಗತ ಪಾತಕಿ ಛೋಟಾ ರಾಜನ್ ಗ್ಯಾಂಗ್‌ನ ಸಹಚರರೊಂದಿಗೆ ಸಂಪರ್ಕ ಹೊಂದಿದ್ದ ಪೂಜಾರಿ, ಬಳಿಕ ಶೂಟರ್ ಹಾಗೂ ಸುಲಿಗೆಕೋರನಾಗಿ ಗುರುತಿಸಿಕೊಂಡಿದ್ದ. 1999ರಲ್ಲಿ ಮುಂಬೈನ ಖಾರ್ ಪ್ರದೇಶದಲ್ಲಿ ಬಿಲ್ಡರ್ ಶೌಕತ್ ಸರ್ಕಾರ್ ಹತ್ಯೆ ಪ್ರಕರಣದಲ್ಲಿ ಆತನ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. ನಂತರ ಛೋಟಾ ರಾಜನ್‌ನ ಆಪ್ತ ವಲಯದಲ್ಲೂ ಗುರುತಿಸಿಕೊಂಡಿದ್ದ.
ಛೋಟಾ ರಾಜನ್ ಗ್ಯಾಂಗ್‌ನಿಂದ ಪ್ರತ್ಯೇಕ
2002ರಲ್ಲಿ ಛೋಟಾ ರಾಜನ್ ಗ್ಯಾಂಗ್‌ನಿಂದ ಪ್ರತ್ಯೇಕಗೊಂಡ ಪೂಜಾರಿ ತನ್ನದೇ ಆದ ಕ್ರಿಮಿನಲ್ ಜಾಲವನ್ನು ರೂಪಿಸಿಕೊಂಡಿದ್ದ ಎನ್ನಲಾಗಿದೆ. ಮುಂಬೈ ಸೇರಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ತನ್ನ ಚಟುವಟಿಕೆಗಳನ್ನು ವಿಸ್ತರಿಸಿದ್ದ.
ಮುಂಬೈ ಹೋಟೆಲ್ ಉದ್ಯಮಿಗಳಾದ ರತ್ನಾಕರ್ ಶೆಟ್ಟಿ, ಮೊಹಮ್ಮದ್ ಶಫಿ, ಜಯಾ ಶೆಟ್ಟಿ, ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಅಕ್ಬರ್ ಖಾನ್ ಹಾಗೂ ಹೂವಿನ ವ್ಯಾಪಾರಿ ಸುನಿಲ್ ಸೋಹನ್ಸ್ ಹತ್ಯೆ ಸೇರಿದಂತೆ ಹಲವು ಪ್ರಮುಖ ಕೊಲೆ ಪ್ರಕರಣಗಳಲ್ಲಿ ಆತನ ಪಾತ್ರವಿರುವ ಆರೋಪಗಳಿವೆ.
ಡೇವಿಡ್ ಡಿ’ಸೋಜಾ ಕೊಲೆ ಪ್ರಕರಣದಿಂದ ಮತ್ತೆ ಬೆಳಕಿಗೆ
ಸುಮಾರು ಹತ್ತು ವರ್ಷಗಳಿಂದ ಪೂಜಾರಿಯ ಸುಳಿವು ಪೊಲೀಸರಿಗೆ ಲಭ್ಯವಾಗಿರಲಿಲ್ಲ. ಆತ ಅನಾರೋಗ್ಯದಿಂದ ಮೃತಪಟ್ಟಿರಬಹುದು ಎಂಬ ಶಂಕೆಯೂ ತನಿಖಾ ವಲಯದಲ್ಲಿತ್ತು ಎಂದು ವರದಿಯಾಗಿದೆ.
ಆದರೆ ಆಗಸ್ಟ್ 7ರಂದು ಉಡುಪಿಯ ಮುದ್ರಂಗಡಿಯಲ್ಲಿ ಉದ್ಯಮಿ ಡೇವಿಡ್ ಡಿ’ಸೋಜಾ ಹತ್ಯೆಯಾದ ಬಳಿಕ ಮತ್ತೆ ಆತನ ಹೆಸರು ಮುನ್ನೆಲೆಗೆ ಬಂದಿತ್ತು. ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳ ವಿಚಾರಣೆ ವೇಳೆ ಲಭ್ಯವಾದ ಮಾಹಿತಿಯಿಂದ ಪೂಜಾರಿ ಜೀವಂತವಾಗಿರುವುದು ಹಾಗೂ ವಿದೇಶದಲ್ಲಿದ್ದುಕೊಂಡು ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುತ್ತಿರುವ ಬಗ್ಗೆ ತನಿಖಾಧಿಕಾರಿಗಳಿಗೆ ಸುಳಿವು ದೊರೆತಿತ್ತು ಎನ್ನಲಾಗಿದೆ.
ಉದ್ಯಮಿಗಳಿಗೆ ಬೆದರಿಕೆ ಕರೆ: ಎಂಟು ಪ್ರಕರಣ ದಾಖಲು
ಡೇವಿಡ್ ಡಿ’ಸೋಜಾ ಹತ್ಯೆಯ ಬಳಿಕ ಜಿಲ್ಲೆಯ ಉದ್ಯಮಿಗಳು, ಗುತ್ತಿಗೆದಾರರು ಹಾಗೂ ಹೋಟೆಲ್ ಮಾಲೀಕರಿಗೆ ಭಾರಿ ಮೊತ್ತದ ಹಣಕ್ಕೆ ಬೇಡಿಕೆಯಿಟ್ಟು ಬೆದರಿಕೆ ಕರೆಗಳು ಬರಲಾರಂಭಿಸಿದ್ದವು.
ಗೃಹ ಸಚಿವರ ಸೂಚನೆಯ ಮೇರೆಗೆ ಜಿಲ್ಲಾ ಪೊಲೀಸರು ಶಿರ್ವ, ಪಡುಬಿದ್ರಿ, ಕಾಪು ಮತ್ತು ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಒಟ್ಟು ಎಂಟು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು. ಪೂಜಾರಿಗೆ ಮೊಬೈಲ್ ಫೋನ್ ಸಂಖ್ಯೆಗಳು ಪೂರೈಸುತ್ತಿದ್ದ ಆರೋಪದ ಮೇಲೆ ಸುರೇಶ್ ಅಮೀನ್ ಮತ್ತು ಹರೀಶ್ ಪೂಜಾರಿ ಎಂಬಿಬ್ಬರನ್ನು ಬಂಧಿಸಲಾಗಿತ್ತು. ತನಿಖೆಯ ವೇಳೆ ಪೊಲೀಸರು ಹಲವು ತಾಂತ್ರಿಕ ಮಾಹಿತಿಗಳನ್ನು ಸಂಗ್ರಹಿಸಿದ್ದರು.
ರೆಡ್ ಕಾರ್ನರ್ ನೋಟಿಸ್ ಮೂಲಕ ಪತ್ತೆ
ಪೂಜಾರಿಗಾಗಿ ಮುಂಬೈ ಪೊಲೀಸರು ಹುಡುಕಾಟ ನಡೆಸುತ್ತಿದ್ದ ವೇಳೆ ಆತ ವಿದೇಶದಲ್ಲಿ ನೆಲೆಸಿರುವ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗಿತ್ತು. ಆತನ ಆಪ್ತ ವಲಯದಿಂದ ದೊರೆತ ಮಾಹಿತಿಯೂ ಪತ್ತೆ ಕಾರ್ಯಾಚರಣೆಗೆ ನೆರವಾಗಿದೆ ಎನ್ನಲಾಗಿದೆ.
ಬಂಧಿತ ಹೇಮಂತ್ ಪೂಜಾರಿಯನ್ನು ಭಾರತಕ್ಕೆ ಕರೆತಂದು ಆತನ ವಿರುದ್ಧ ದಾಖಲಾಗಿರುವ ವಿವಿಧ ಪ್ರಕರಣಗಳ ವಿಚಾರಣೆ ನಡೆಸಲು ಅಧಿಕಾರಿಗಳು ಪ್ರಯತ್ನ ಮುಂದುವರಿಸಿದ್ದಾರೆ ಎಂದು ವರದಿಯಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top