ರಾ.ಹೆ -169 ನಿರ್ಲಕ್ಷ್ಯ ಕಾಮಗಾರಿ; ಜಿಲ್ಲಾಧಿಕಾರಿಯ ಅದೇಶಕ್ಕೆ ನೀಡದ ಬೆಲೆ; ಶಾಸಕ ವಿ.ಸುನಿಲ್ ಕುಮಾರ್ ಸ್ಥಳ ಪರಿಶೀಲನೆ

Picture of RB NEWS

RB NEWS

Bureau Report

ಕಾರ್ಕಳ : ಮಂಗಳೂರು ಬಿಕರ್ನಕಟ್ಟೆ ಯಿಂದ ಕಾರ್ಕಳದ ಬೈಪಾಸ್ ತನಕ ನಡೆಯುತ್ತಿರುವ ಕಾಮಗಾರಿಯಲ್ಲಿ ಸಾಣೂರು ವ್ಯಾಪ್ತಿಯಲ್ಲಿ ಹಲವು ಲೋಪದೋಷಗಳು ಕಂಡುಬಂದಿದೆ. ಜಿಲ್ಲಾಧಿಕಾರಿಯ ನಿರ್ದೇಶನಕ್ಕೆ ಕವಡೆಕಾಸಿನ ಕಿಮ್ಮತ್ತು ನೀಡದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಕಂಟ್ರಾಕ್ಟರ್ ನಿಲುವಿಗೆ ಗ್ರಾಮಸ್ಥರಿಂದ ವ್ಯಾಪಕ ಆಕ್ರೋಶ ವ್ಯಕ್ತಗೊಂಡಿದ್ದಾರೆ. ಈ ನಡುವೆ ಜೂನ್ 30 ಆದಿತ್ಯವಾರದಂದು ಬೆಳಿಗ್ಗೆ 8:45 ಗಂಟೆಗೆ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ.ಸುನಿಲ್ ಕುಮಾರ್ ರವರು ಸಾಣೂರು ಪುಲ್ಕೇರಿ ಬೈಪಾಸ್ ಸರ್ಕಲ್ ನಿಂದ ಸಾಣೂರು ಪೇಟೆಯಾಗಿ ಮುರತಂಗಡಿಯವರೆಗೆ ವಿವಿಧಡೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಆಗಿರುವ ಲೋಪ ದೋಷಗಳನ್ನು ಸ್ಥಳೀಯ ಜನರೊಂದಿಗೆ ಪರಿಶೀಲನೆ ನಡೆಸಿದರು.

ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮುಖ್ಯ ಇಂಜಿನಿಯರ್ ಗಳು ಸ್ಥಳಕ್ಕೆ ಭೇಟಿ ನೀಡದ ಬಗ್ಗೆ ಅಸಮಾಧಾನ ಗೊಂಡ ಶಾಸಕರು, ಸ್ಥಳದಲ್ಲಿ ಹಾಜರಿದ್ದ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸಿಬ್ಬಂದಿಗಳ ಬಗ್ಗೆ ವಿಚಾರಿಸಿ ಮುಂದಿನ ಭೇಟಿ ಸಂದರ್ಭದಲ್ಲಿ ಸರಿಯಾದ ಮಾಹಿತಿ ಯೊಂದಿಗೆ ಯೋಜನಾಧಿಕಾರಿ ಹಾಗೂ ಮುಖ್ಯ ಇಂಜಿನಿಯರ್ ಗಳು ಸ್ಥಳದಲ್ಲಿ ಹಾಜರಿರುವಂತೆ ಸೂಚಿಸಿದರು.

ಪುಲ್ಕೇರಿ ಬೈಪಾಸ್ ಸರ್ಕಲ್ ನಲ್ಲಿ ಇಂದಿರಾ ನಗರಕ್ಕೆ ಹೋಗುವ ಅಡ್ಡರಸ್ತೆಯಲ್ಲಿ ಮಳೆ ನೀರು ಹರಿದು ಹೋಗುವಂತೆ ಸೂಕ್ತ ಚರಂಡಿ ವ್ಯವಸ್ಥೆಯನ್ನು ಕೂಡಲೇ ನಿರ್ಮಿಸುವಂತೆ ದಿಲೀಪ್ ಬಿಲ್ಡ್ ಕಾನ್ ಕಾನ್ಸ್ಟ್ರಕ್ಷನ್ ಮ್ಯಾನೇಜರ್ ಬಾಲಾಜಿಯವರಿಗೆ ಸೂಚಿಸಿದರು.

ಮುದ್ದುಕೃಷ್ಣ ಇಂಡಸ್ಟ್ರೀಸ್ ಎದುರಿಗಿರುವ ಡೈವರ್ಶನ್ ತಿರುವಿನಲ್ಲಿ ಅಪಾಯಕಾರಿಯಾಗಿದ್ದು, ಕೂಡಲೇ ಈ ಬಗ್ಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶ ನೀಡಿದರು.

ಶ್ರೀನಿವಾಸನಗರದ ನಿವಾಸಿ ವಯೋವೃದ್ಧ ಶಿವಾನಂದ ಕುಡ್ವ ರವರ ಜಮೀನಿನ ಮುಂಭಾಗದ ಟ್ರಾನ್ಸ್ ಫಾರ್ಮರ್ ಹಾಗೂ ಉದ್ದಕ್ಕೂ ಹಾಕಿರುವ ವಿದ್ಯುತ್ ಕಂಬಗಳು ವಾಲಿಕೊಂಡಿದ್ದು, ಕೂಡಲೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ನಿಗಾ ಇರಿಸುವಂತೆ ಸೂಚನೆ ನೀಡಿದರು.

ಸಾಣೂರು ಶಾಂಭವಿ ಸೇತುವೆ ಮೇಲೆ ನೀರು ನಿಲ್ಲದಂತೆ ಶ್ರಮದಾನದ ಮೂಲಕ ಬೆಳಗ್ಗಿನಿಂದಲೇ ರಸ್ತೆಯ ಮೇಲಿನ ಮಣ್ಣನ್ನು ತೆಗೆದು ಸ್ವಚ್ಛಗೊಳಿಸುತ್ತಿದ್ದ ಸಾಣೂರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ “ಶೌರ್ಯ” ತಂಡದ ಸ್ವಯಂಸೇವಕರನ್ನು ಶಾಸಕರು ಮಾತನಾಡಿಸಿ ಅವರ ಸಾಮಾಜಿಕ ಕಳಕಳಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ಸಾಣೂರು ಗ್ರಾಮದ ಸುಮಾರು 12 ಅಡ್ಡರಸ್ತೆಗಳಿಗೆ ಇನ್ನೂ ಕೂಡ ಡಾಮರೀಕರಣ ಮಾಡಿ ಸರಿಪಡಿಸದಿರುವ ಬಗ್ಗೆ ದಿಲೀಪ್ ಬಿಲ್ಡ್ ಕಾನ್ ಸಂಸ್ಥೆಯ ಪ್ರಮುಖರಿಗೆ ತರಾಟೆಗೆ ತೆಗೆದುಕೊಂಡ ಶಾಸಕರು, ಆದಷ್ಟು ಶೀಘ್ರ ಈ ಕಾಮಗಾರಿಯನ್ನು ಕೈಗೊಳ್ಳು ವಂತೆ ನಿರ್ದೇಶನ ನೀಡಿದರು.

ಕರ್ನಾಟಕ ವಿದ್ಯುತ್ ಕಾಯಿದೆಯ ಪ್ರಕಾರ ಇ ಟೆನ್ಶನ್ ವೈಯರ್ ಹಾದು ಹೋಗುವ ಅಕ್ಕಪಕ್ಕದ ಕನಿಷ್ಠ 10 ಮೀಟರ್ ವರೆಗೆ ಯಾವುದೇ ಕಾಮಗಾರಿಯನ್ನು ಕೈಗೊಳ್ಳುವ ಮೊದಲು ಅನುಮತಿ ಪಡೆಯಬೇಕೆಂದಿದ್ದು ಇದನ್ನು ಸಾರಾ ಸಗಟಾಗಿ ನಿರ್ಲಕ್ಷಿಸಿ, ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ರಸ್ತೆ ಕಾಮಗಾರಿಯನ್ನು ನಡೆಸುತ್ತಿರುವ ಬಗ್ಗೆ ಕೆಪಿಟಿಸಿಎಲ್ ಸಂಸ್ಥೆಯವರು ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆದಾರ ಕಂಪನಿಯ ಮೇಲೆ ಮೊಕದ್ದಮೆ ಹೂಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

ಮುರತಂಗಡಿ ಶುಂಠಿ ಗುಡ್ಡೆ ಸಂಪರ್ಕ ರಸ್ತೆಯ ಪಕ್ಕದಲ್ಲಿರುವ ರತ್ನಾಕರ ಕಾಮತ್ ಮನೆಗೆ ಮಳೆ ನೀರು ನುಗ್ಗಿ ಸುಮಾರು ಮೂರುವರೆ ಲಕ್ಷದಷ್ಟು ನಷ್ಟ ಪರಿಹಾರವನ್ನು ಭರಿಸುವಂತೆ ಗುತ್ತಿಗೆದಾರ ಕಂಪನಿಯ ಮ್ಯಾನೇಜರ್ ರವರಿಗೆ ನಿರ್ದೇಶನ ನೀಡಿದರು.

ಕಳೆದ ಡಿಸೆಂಬರ್ ತಿಂಗಳಿನಲ್ಲಿ ಯೋಜನಾಧಿಕಾರಿ ಮತ್ತು ಗುತ್ತಿಗೆದಾರ ಕಂಪನಿಯ ಮೇಲಾಧಿಕಾರಿಗಳಿಗೆ ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಅಪಾಯದ ಮುನ್ಸೂಚನೆ ನೀಡಿದರು, ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಗುಡ್ಡದಿಂದ ಹರಿಯುವ ನೀರು ಮತ್ತು ರಸ್ತೆಯ ಮೇಲೆ ಹರಿಯುವ ಮಳೆ ನೀರು, ಮನೆಗೆ ನುಗ್ಗಿ ಇನ್ನಷ್ಟು ಹಾನಿ ಮಾಡುವ ಅಪಾಯ ಇದೆ ಕೂಡಲೇ ಸೂಕ್ತ ಚರಂಡಿ ವ್ಯವಸ್ಥೆ ನಿರ್ಮಿಸುವಂತೆ ಶಾಸಕರು ನಿರ್ದೇಶನ ನೀಡಿದರು.

ಸಾಣೂರು ಗ್ರಾಮದ ವಿವಿಧಡೆ ತೆರವುಗೊಳಿಸಿರುವ ನಾಲ್ಕು ಬಸ್ಸು ಪ್ರಯಾಣಿಕರ ತಂಗುದಾಣ ಗಳಿಗೆ ಸೂಕ್ತ ಸ್ಥಳ ನಿಗದಿಪಡಿಸಿ ನಿರ್ಮಾಣ ಕಾರ್ಯ ಕೈಗೊಳ್ಳುವಂತೆ ಸೂಚಿಸಿದರು.

ಜುಲೈ 12 ಶುಕ್ರವಾರದಂದು ಮಧ್ಯಾಹ್ನ 12 ಗಂಟೆಗೆ ಕಾರ್ಕಳದ ಜನಸ್ಪಂದನ ಕಾರ್ಯಕ್ರಮ ಮುಗಿದ ಬಳಿಕ ಸಾಣೂರು ಸುವರ್ಣ ಗ್ರಾಮೋದಯ ಸೌಧದಲ್ಲಿ ಮಾನ್ಯ ಜಿಲ್ಲಾಧಿಕಾರಿಯವರು , ಮಾನ್ಯಸಂಸದರು ಹಾಗೂ ಮಾನ್ಯ ಶಾಸಕರ ನೇತೃತ್ವದಲ್ಲಿ ಸಭೆ ನಡೆಯಲಿದ್ದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಯೋಜನಾಧಿಕಾರಿ, ಇಂಜಿನಿಯರ್ ಗಳು ಹಾಗೂ ಸಂಸ್ಥೆಯ ಜನರಲ್ ಮ್ಯಾನೇಜರ್ ಸಹಿತ ಇತರ ಉನ್ನತಅಧಿಕಾರಿಗಳು ಕಡ್ಡಾಯವಾಗಿ ಹಾಜರಿದ್ದು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top