[t4b-ticker]

ಮಂಗಳೂರು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ತೀರ್ಪು: ನಾಲ್ವರಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ

Picture of RB NEWS

RB NEWS

Bureau Report

ಮಂಗಳೂರು: ಬಹು ಚರ್ಚೆಗೆ ಗ್ರಾಸವಾದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಪ್ರಕರಣದಲ್ಲಿ ಆರೋಪಿಗಳಾಗಿದ್ದ ನಾಲ್ವರು ವಯಸ್ಕರಿಗೆ ತಲಾ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಒಟ್ಟು ₹74,000 ದಂಡ ವಿಧಿಸಲಾಗಿದೆ.

ಶಿಕ್ಷೆಗೆ ಗುರಿಯಾದವರು ಪ್ರಜ್ವಲ್ (33), ಅರುಣ್ ಅಮೀನ್ (34), ಆದಿತ್ಯ ಸಾಲ್ಯಾನ್ (28) ಮತ್ತು ಅಬ್ದುಲ್ ರಿಯಾಝ್ (40) ಆಗಿದ್ದಾರೆ.

ಈ ಘಟನೆ 2018ರ ನವೆಂಬರ್ 18ರಂದು ಸಂಭವಿಸಿತ್ತು. ಯುವತಿಯೊಬ್ಬಳು ತನ್ನ ಸ್ನೇಹಿತನೊಂದಿಗೆ ಬೀಚ್‌ಗೆ ತೆರಳಿದ್ದಾಗ, ಮೂವರು ಅಪ್ರಾಪ್ತರು ಸೇರಿದಂತೆ ಒಟ್ಟು ಏಳು ಜನರ ಗುಂಪು ಅವರನ್ನು ತಡೆದು, ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿತ್ತು. ಈ ಸಂಬಂಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಯನ್ನು ಅಂದಿನ ಪೊಲೀಸ್ ಇನ್ಸ್‌ಪೆಕ್ಟರ್ ಕಲಾವತಿ ಕೆ ಹಾಗೂ ಎಸಿಪಿ ಮಂಜುನಾಥ್ ಶೆಟ್ಟಿ ಅವರು ಕೈಗೊಂಡಿದ್ದರು. ನಂತರ ಅಂದಿನ ಎಸಿಪಿ ಶ್ರೀನಿವಾಸ ಗೌಡ ಆರ್ ಅವರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆಯನ್ನು ನಡೆಸಿದ ನ್ಯಾಯಾಧೀಶರಾದ ಜಗದೀಶ ವಿ.ಎನ್., ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಆರೋಪಗಳು ಸಾಬೀತಾಗಿವೆ ಎಂದು ತೀರ್ಮಾನಿಸಿದರು. ಅದರ ಆಧಾರದ ಮೇಲೆ ನಾಲ್ವರು ವಯಸ್ಕ ಅಪರಾಧಿಗಳಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ಪ್ರಕಟಿಸಿದರು.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್ ನಾಯಕ್ ಅವರು ಸಾಕ್ಷಿಗಳನ್ನು ವಿಚಾರಣೆ ನಡೆಸಿ ವಾದ ಮಂಡಿಸಿದರು.

ಇದಲ್ಲದೆ, ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಅಪ್ರಾಪ್ತ ಬಾಲಕರ ವಿಚಾರಣೆ ಪ್ರಸ್ತುತ ಬಾಲ ನ್ಯಾಯ ಮಂಡಳಿಯಲ್ಲಿ ಮುಂದುವರಿದಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top