ಪೊಲೀಸ್ ಠಾಣೆ ಎದುರಲ್ಲೇ ಮಾಜಿ ಶಿಕ್ಷಕಿಗೆ ಕೊಲೆ ಯತ್ನ

Picture of RB NEWS

RB NEWS

Bureau Report

ಪೊಲೀಸ್ ಠಾಣೆ ಎದುರಲ್ಲೇ ಮಾಜಿ ಶಿಕ್ಷಕಿಗೆ ಕೊಲೆ ಯತ್ನ
ಮಾದಕವಸ್ತು ಜಾಲದ ಪ್ರಕರಣದ ಪ್ರಮುಖ ಆರೋಪಿ ಮೇಲೆ ಚಾಕು ದಾಳಿ; ಪತಿ ಬಂಧನ


ಕೋಝಿಕ್ಕೋಡ್: ಕೇರಳವನ್ನು ಬೆಚ್ಚಿಬೀಳಿಸಿದ ವಡಕರ ಎಂಡಿಎಂಎ ಮಾದಕವಸ್ತು ಜಾಲದ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಾಜಿ ದೈಹಿಕ ಶಿಕ್ಷಣ ಶಿಕ್ಷಕಿ ಕೀರ್ತನಾ ಕೆ.ಸಿ. ಅವರ ಮೇಲೆ ಅವರ ಪತಿಯೇ ಪೊಲೀಸ್ ಠಾಣೆ ಸಮೀಪ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿರುವ ಘಟನೆ ನಡೆದಿದೆ.
ವಡಕರ ಪೊಲೀಸ್ ಠಾಣೆಯ ಸಮೀಪದ ಪೊಲೀಸ್ ಕಂಟ್ರೋಲ್ ರೂಂ ಎದುರಲ್ಲೇ ಶನಿವಾರ ಈ ಘಟನೆ ನಡೆದಿದ್ದು, ದಾಳಿ ನಡೆಸಿದ ಕೀರ್ತನಾ ಅವರ ಪತಿ ಜಿನೀಶ್ (39) ಎಂಬಾತನನ್ನು ಪೊಲೀಸರು ತಕ್ಷಣ ಬಂಧಿಸಿದ್ದಾರೆ.
ಚಾಕು ಇರಿತದಿಂದ ಕೀರ್ತನಾ ಅವರ ಕುತ್ತಿಗೆಗೆ ಆಳವಾದ ಗಾಯವಾಗಿದ್ದು, ಕೈ-ಕಾಲುಗಳಿಗೂ ಗಂಭೀರ ಗಾಯಗಳಾಗಿವೆ. ಅವರನ್ನು ಕೂಡಲೇ ವಡಕರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಪೊಲೀಸ್ ಠಾಣೆಗೆ ಸಹಿ ಹಾಕಿ ಹೊರಬರುತ್ತಿದ್ದ ವೇಳೆ ದಾಳಿ
ಪೆರಂಬ್ರಾ ಬಿಆರ್‌ಸಿಯಲ್ಲಿ ಶಿಕ್ಷಕಿಯಾಗಿದ್ದ ಕೀರ್ತನಾ ಅವರು ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಈ ಪ್ರಕರಣದಲ್ಲಿ ಇತ್ತೀಚೆಗೆ ಕೇರಳ ಹೈಕೋರ್ಟ್ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.
ಹೈಕೋರ್ಟ್‌ನ ಷರತ್ತಿನಂತೆ ಪ್ರತೀ ಶನಿವಾರ ವಡಕರ ಪೊಲೀಸ್ ಠಾಣೆಗೆ ಹಾಜರಾಗಿ ರಿಜಿಸ್ಟರ್‌ನಲ್ಲಿ ಸಹಿ ಮಾಡಬೇಕಾಗಿತ್ತು. ಅದರಂತೆ ಶನಿವಾರ ಪೊಲೀಸ್ ಠಾಣೆಗೆ ಆಗಮಿಸಿ ಸಹಿ ಹಾಕಿ ಹೊರಬರುತ್ತಿದ್ದ ಸಂದರ್ಭದಲ್ಲಿ, ಠಾಣೆಯ ಸಮೀಪ ಕಾದು ಕುಳಿತಿದ್ದ ಪತಿ ಜಿನೀಶ್ ದಿಢೀರ್ ದಾಳಿ ನಡೆಸಿ ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಟೋ ಚಾಲಕನ ಬಂಧನದಿಂದ ಬಯಲಾಗಿದ್ದ ಡ್ರಗ್ಸ್ ಜಾಲ
ಕಳೆದ ಜೂನ್ 28ರಂದು ವಡಕರೆಯಲ್ಲಿ ಆಟೋರಿಕ್ಷಾ ಚಾಲಕ ಸಫ್ವಾನ್ ಎಂಬಾತನನ್ನು ಎಂಡಿಎಂಎ ಪ್ರಕರಣದಲ್ಲಿ ಬಂಧಿಸಿ ವಿಚಾರಣೆ ನಡೆಸಿದ ವೇಳೆ ದೊಡ್ಡ ಮಟ್ಟದ ಮಾದಕವಸ್ತು ಜಾಲದ ಸುಳಿವು ಪೊಲೀಸರಿಗೆ ದೊರೆತಿತ್ತು.
ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರು ಜುಲೈ 11ರಂದು ಕೀರ್ತನಾ ಅವರನ್ನು ಬಂಧಿಸಿದ್ದರು. ಬಳಿಕ ಬಿಆರ್‌ಸಿ ಶಿಕ್ಷಕಿಯರಾದ ಕೆ. ಕಾವ್ಯ, ವಿ.ಪಿ. ನೀಷ್ಮಾ ಹಾಗೂ ಇರಿಟ್ಟಿ ಮೂಲದ ಜಿತಿನ್ ಕುರಿಯಾಕೋಸ್ ಸೇರಿದಂತೆ ಇತರ ಆರೋಪಿಗಳನ್ನು ಬಂಧಿಸಲಾಗಿತ್ತು.
ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಶಿಕ್ಷಣ ಇಲಾಖೆ ಮೂವರು ಶಿಕ್ಷಕಿಯರನ್ನು ಸೇವೆಯಿಂದ ವಜಾಗೊಳಿಸಿತ್ತು.
ಶಾಲಾ ಮಕ್ಕಳನ್ನು ಬಳಸಿಕೊಂಡ ಆರೋಪ
ಮಾಜಿ ಶಿಕ್ಷಕಿಯರು ಶಾಲಾ ಮಕ್ಕಳನ್ನೇ ಮಾದಕವಸ್ತು ಕಳ್ಳಸಾಗಣೆ ಜಾಲದಲ್ಲಿ ವಾಹಕರಾಗಿ ಬಳಸಿಕೊಳ್ಳುತ್ತಿದ್ದರು ಎಂಬ ಗಂಭೀರ ಆರೋಪವನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಕಸ್ಟಡಿ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಕೀರ್ತನಾ ಅವರ ಬ್ಯಾಂಕ್ ಖಾತೆ ಹಾಗೂ ಮೊಬೈಲ್ ಫೋನ್ ಪರಿಶೀಲಿಸಿದಾಗ, ಪ್ರಕರಣದ ಇತರ ಆರೋಪಿಗಳೊಂದಿಗೆ ಲಕ್ಷಾಂತರ ರೂಪಾಯಿಗಳ ಗೂಗಲ್ ಪೇ ವಹಿವಾಟುಗಳು ನಡೆದಿರುವುದು ಹಾಗೂ ಮಾದಕವಸ್ತು ಜಾಲದ ಸದಸ್ಯರೊಂದಿಗೆ ನಡೆಸಿದ ಚಾಟ್‌ಗಳು ಪತ್ತೆಯಾಗಿವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಮೂರನೇ ಆರೋಪಿ ಕಾವ್ಯಾಳಿಗೂ ಕೇರಳ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಈ ನಡುವೆ ಕೀರ್ತನಾ ಮೇಲಿನ ಚಾಕು ದಾಳಿ ಪ್ರಕರಣದ ತನಿಖೆಯನ್ನು ವಡಕರ ಪೊಲೀಸರು ಮುಂದುವರಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top