ಅಮೆಜಾನ್‌ನಲ್ಲಿ ಸೀಲಿಂಗ್ ಫ್ಯಾನ್ ಆರ್ಡರ್: ₹1.30 ಲಕ್ಷ ಕಳೆದುಕೊಂಡ ಮಹಿಳೆ
RB NEWS
Bureau Report
ಅಮೆಜಾನ್‌ನಲ್ಲಿ ಸೀಲಿಂಗ್ ಫ್ಯಾನ್ ಆರ್ಡರ್: ₹1.30 ಲಕ್ಷ ಕಳೆದುಕೊಂಡ ಮಹಿಳೆ
ಚಿತ್ರ: ಎಐ
ಮಂಗಚಿಳೂರು: ಅಮೆಜಾನ್ ಕಸ್ಟಮರ್ ಕೇರ್ ಹೆಸರಿನಲ್ಲಿ ಗೂಗಲ್‌ನಲ್ಲಿ ನಕಲಿ ಸಹಾಯವಾಣಿ ಸಂಖ್ಯೆಯನ್ನು ಪ್ರಕಟಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಸೈಬರ್ ವಂಚಕರ ಜಾಲಕ್ಕೆ ನಗರದ 37 ವರ್ಷದ ಮಹಿಳೆಯೊಬ್ಬರು ಬಲಿಯಾಗಿದ್ದು, ಬರೋಬ್ಬರಿ ₹1.30 ಲಕ್ಷ ಕಳೆದುಕೊಂಡಿದ್ದಾರೆ.
ಈ ಕುರಿತು ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಮಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರ ಮಹಿಳೆ ಅಕ್ಟೋಬರ್ 21, 2026ರಂದು ತಮ್ಮ ಮೊಬೈಲ್‌ನ ಅಮೆಜಾನ್ ಆ್ಯಪ್ ಮೂಲಕ ಸೀಲಿಂಗ್ ಫ್ಯಾನ್ ಬುಕ್ ಮಾಡಿದ್ದರು. ಇದಕ್ಕಾಗಿ ಪತಿಯ ಗೂಗಲ್ ಪೇ ಖಾತೆಯಿಂದ ₹7,903 ಪಾವತಿಸಿದ್ದರು. ಆದರೆ ತಾಂತ್ರಿಕ ಕಾರಣದಿಂದ ಆರ್ಡರ್ ರದ್ದಾಗಿದ್ದು, ಪಾವತಿಸಿದ ಹಣ ಮರುಪಾವತಿಯಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಅಕ್ಟೋಬರ್ 31ರಂದು ಹಣ ಮರುಪಾವತಿ ಪಡೆಯುವ ಉದ್ದೇಶದಿಂದ ಗೂಗಲ್‌ನಲ್ಲಿ ಅಮೆಜಾನ್ ಕಸ್ಟಮರ್ ಕೇರ್ ಸಂಖ್ಯೆಯನ್ನು ಹುಡುಕಿದಾಗ 9940541823 ಎಂಬ ಮೊಬೈಲ್ ಸಂಖ್ಯೆ ಲಭ್ಯವಾಗಿತ್ತು. ಆ ಸಂಖ್ಯೆಗೆ ಕರೆ ಮಾಡಿದಾಗ ಆರಂಭದಲ್ಲಿ ಕರೆ ಸಂಪರ್ಕ ಕಡಿತಗೊಂಡಿತ್ತು.
ಕೆಲವು ಸಮಯದ ಬಳಿಕ ಅದೇ ಸಂಖ್ಯೆಯಿಂದ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ತಾನು ಅಮೆಜಾನ್ ಕಸ್ಟಮರ್ ಕೇರ್ ಪ್ರತಿನಿಧಿ ಎಂದು ಪರಿಚಯಿಸಿಕೊಂಡಿದ್ದಾನೆ. ತನ್ನ ಗುರುತಿನ ಚೀಟಿ ಸಂಖ್ಯೆ 40270676465242733 ಎಂದು ತಿಳಿಸಿ ಮಹಿಳೆಯ ವಿಶ್ವಾಸ ಗಳಿಸಿದ್ದಾನೆ.
ನಂತರ ಗೂಗಲ್ ಪೇನಲ್ಲಿ ‘RAKILEL ISLAM’ ಎಂದು ಹುಡುಕಿ 6003038834 ಸಂಖ್ಯೆಗೆ ₹80,000 ವರ್ಗಾಯಿಸುವಂತೆ ಸೂಚಿಸಿದ್ದಾನೆ. ಆತ ಹೇಳಿದಂತೆ ಪ್ರಕ್ರಿಯೆ ನಡೆಸುತ್ತಿದ್ದಾಗ ಮಹಿಳೆಯ ಅರಿವಿಗೆ ಬಾರದಂತೆ ಅವರ ಗೂಗಲ್ ಪೇ ಖಾತೆಯಿಂದ ₹80,000 ವರ್ಗಾವಣೆಯಾಗಿದೆ.
ಇದಾದ ಬಳಿಕ ಮಹಿಳೆಯ ಬ್ಯಾಂಕ್ ಖಾತೆಯಿಂದ IMPS ಮೂಲಕ ಮತ್ತೊಮ್ಮೆ ಸ್ವಯಂಚಾಲಿತವಾಗಿ ₹50,000 ಕಡಿತಗೊಂಡಿದೆ. ಹೀಗೆ ಒಟ್ಟು ₹1,30,000 ಹಣವನ್ನು ಸೈಬರ್ ವಂಚಕರು ದೋಚಿದ್ದಾರೆ.
ಅಮೆಜಾನ್ ಸಂಸ್ಥೆಯ ಹೆಸರನ್ನು ದುರುಪಯೋಗಪಡಿಸಿಕೊಂಡು ನಕಲಿ ಕಸ್ಟಮರ್ ಕೇರ್ ಜಾಲ ರಚಿಸಿ, ಹಣ ಮರುಪಾವತಿ ಮಾಡುವುದಾಗಿ ನಂಬಿಸಿ ವಂಚಿಸಿರುವ ಅಪರಿಚಿತ ಸೈಬರ್ ಅಪರಾಧಿಗಳ ವಿರುದ್ಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.