ಚಂದ್ರಗಿರಿ ಕೊಪ್ಪಲು ಶ್ರೀ ಮಹಾಮ್ಮಾಯಿ ಅಮ್ಮನವರ ದೇವಳದ 55ನೇ ಪ್ರತಿಷ್ಠಾ ಮಹೋತ್ಸವ ಸಂಪನ್ನ

Picture of RB NEWS

RB NEWS

Bureau Report


ಕಾಸರಗೋಡು: ಜಿಲ್ಲೆಯ ಇತಿಹಾಸ ಪ್ರಸಿದ್ಧ ಚಂದ್ರಗಿರಿ ಕೋಟೆ ಪರಿಸರದಲ್ಲಿರುವ ಚಂದ್ರಗಿರಿ ಕೊಪ್ಪಲು ಶ್ರೀ ಮಹಾಮ್ಮಾಯಿ ಅಮ್ಮನವರ ದೇವಳದ 55ನೇ ಪ್ರತಿಷ್ಠಾ ಮಹೋತ್ಸವವು ಏಪ್ರಿಲ್ 3 ರಿಂದ 5 ರವರೆಗೆ ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ನೆರವೇರಿತು.
ಬ್ರಹ್ಮಶ್ರೀ ಅರವತ್ ಪದ್ಮನಾಭ ತಂತ್ರಿಗಳ ಉಪಸ್ಥಿತಿಯಲ್ಲಿ, ಕೀಕಾಂಗೋಡು ಪನ್ನಿಪಳ್ಳಿ ಬ್ರಹ್ಮಶ್ರೀ ಶ್ರೀಧರ ಕಾಯರ್ ತ್ತಾಯರ ನೇತೃತ್ವದಲ್ಲಿ ಹಾಗೂ ಚಂದ್ರಗಿರಿ ಅವಿನಾಶ್ ಭಟ್ ಅವರ ಸಹಭಾಗಿತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ದೇವಳದ ಕುಲ ಪುರೋಹಿತರಾದ ನಾಗೇಶ್ ಭಟ್ ತಲ್ಲಾಣಿ ಅವರ ಪೌರೋಹಿತ್ಯದಲ್ಲಿ ಸಾಮೂಹಿಕ ಉಚಿತ ಬ್ರಹ್ಮೋಪದೇಶ, ಹರಿಸೇವೆ ಮತ್ತು ಧರ್ಮದೈವಗಳ ಕೋಲ ಕಾರ್ಯಕ್ರಮಗಳು ಯಶಸ್ವಿಯಾಗಿ ಜರಗಿದವು.
ಕೊಪ್ಪಲು ಕಾರ್ಯಕಾರ ಎಂಬ ಹೆಸರಿನಿಂದ ಪ್ರಸಿದ್ಧವಾದ ಕೊಪ್ಪಲು ಗುಳಿಗನ ಕೋಲವು ಈ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದು, ಕೇರಳ, ಕರ್ನಾಟಕ ಸೇರಿದಂತೆ ವಿದೇಶಗಳಿಂದ ಸಹಸ್ರಾರು ಭಕ್ತರು ಆಗಮಿಸಿ ದರ್ಶನ ಪಡೆದರು.
ಮಹೋತ್ಸವದ ಎರಡನೇ ದಿನ ನಡೆದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ವಿದ್ವತ್ ಸಭಾ ಕಾರ್ಯಕ್ರಮವನ್ನು ಬೆಂಗಳೂರಿನ ದೇವನಹಳ್ಳಿಯ ಆಕಾಶ್ ವೈದ್ಯಕೀಯ ಮೆಡಿಕಲ್ ಕಾಲೇಜಿನ ಮೆಡಿಕಲ್ ಸುಪರಿಂಟೆಂಡೆಂಟ್ ಡಾ. ಬ್ರಿಜೇಶ್ ಕೆ. ಉದ್ಘಾಟಿಸಿ, ಚಂದ್ರಗಿರಿ ಕೋಟೆ ಪ್ರದೇಶವು ಐತಿಹಾಸಿಕ, ಧಾರ್ಮಿಕ ಹಾಗೂ ಪ್ರವಾಸೋದ್ಯಮ ಕೇಂದ್ರವಾಗಿ ಇನ್ನಷ್ಟು ಅಭಿವೃದ್ಧಿಯಾಗಬೇಕು ಎಂದು ಅಭಿಪ್ರಾಯಪಟ್ಟರು.


ದೇವಳ ಸಮಿತಿಯ ಅಧ್ಯಕ್ಷ ಕೆ. ಲೋಕೇಶ್ ಕೊಪ್ಪಲು ಅಧ್ಯಕ್ಷತೆ ವಹಿಸಿದ್ದರು. ಸುರತ್ಕಲ್ ಪೊಲೀಸ್ ಇನ್ಸಪೆಕ್ಟರ್ ಪ್ರಮೋದ್ ಕುಮಾರ್ ಪಿ., ಮಂಗಳೂರು ಅಬಕಾರಿ ಅಧೀಕ್ಷಕಿ ಶೋಭಾ ರಾಮಚಂದ್ರ, ಕೇರಳ ತೀಯಾ ಮಹಾಸಭಾದ ರಾಜ್ಯಾಧ್ಯಕ್ಷ ಗಣೇಶ ಆರಮಂಗಾನ, ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ಘಟಕದ ಅಧ್ಯಕ್ಷ ಶಿವರಾಮ ಕಾಸರಗೋಡು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಈ ಸಂದರ್ಭದಲ್ಲಿ 75 ವರ್ಷ ಪೂರೈಸಿದ ಹಿರಿಯರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡೆ, ಚಲನಚಿತ್ರ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಯಿತು.
ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮೂರು ದಿನಗಳ ಕಾಲ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಭಜನಾ ಹಾಗೂ ದಾಸಸಂಕೀರ್ತನಾ ತಂಡಗಳಿಂದ ಭಕ್ತಿಗಾನ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮವನ್ನು ಸ್ವಾತಿ ಕೊಪ್ಪಲು ಹಾಗೂ ಕಿರಣ್ ಪ್ರಸಾದ್ ಕೂಡ್ಲು ನಿರೂಪಿಸಿದರು. ದೇವಳದ ಗೌರವಾಧ್ಯಕ್ಷ ಪ್ರಭಾಕರ ಕೊಪ್ಪಲು, ಉಪಾಧ್ಯಕ್ಷ ಪ್ರಶಾಂತ ಕುಮಾರ್ ಕೊಪ್ಪಲು, ಪ್ರಧಾನ ಕಾರ್ಯದರ್ಶಿ ಸೀತಾರಾಮ ಕೊಪ್ಪಲು ಬೀರಿ ಕೋಟೆಕಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


ವರದಿ: ಶಿವರಾಮ ಕಾಸರಗೋಡು
ಮೊಬೈಲ್: 9448572016

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top