ಚಂದ್ರಗಿರಿ ಕೊಪ್ಪಲು ಶ್ರೀ ಮಹಾಮ್ಮಾಯಿ ಅಮ್ಮನವರ ದೇವಳದ 55ನೇ ಪ್ರತಿಷ್ಠಾ ಮಹೋತ್ಸವ ಸಂಪನ್ನ







ಕಾಸರಗೋಡು: ಜಿಲ್ಲೆಯ ಇತಿಹಾಸ ಪ್ರಸಿದ್ಧ ಚಂದ್ರಗಿರಿ ಕೋಟೆ ಪರಿಸರದಲ್ಲಿರುವ ಚಂದ್ರಗಿರಿ ಕೊಪ್ಪಲು ಶ್ರೀ ಮಹಾಮ್ಮಾಯಿ ಅಮ್ಮನವರ ದೇವಳದ 55ನೇ ಪ್ರತಿಷ್ಠಾ ಮಹೋತ್ಸವವು ಏಪ್ರಿಲ್ 3 ರಿಂದ 5 ರವರೆಗೆ ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ನೆರವೇರಿತು.
ಬ್ರಹ್ಮಶ್ರೀ ಅರವತ್ ಪದ್ಮನಾಭ ತಂತ್ರಿಗಳ ಉಪಸ್ಥಿತಿಯಲ್ಲಿ, ಕೀಕಾಂಗೋಡು ಪನ್ನಿಪಳ್ಳಿ ಬ್ರಹ್ಮಶ್ರೀ ಶ್ರೀಧರ ಕಾಯರ್ ತ್ತಾಯರ ನೇತೃತ್ವದಲ್ಲಿ ಹಾಗೂ ಚಂದ್ರಗಿರಿ ಅವಿನಾಶ್ ಭಟ್ ಅವರ ಸಹಭಾಗಿತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ದೇವಳದ ಕುಲ ಪುರೋಹಿತರಾದ ನಾಗೇಶ್ ಭಟ್ ತಲ್ಲಾಣಿ ಅವರ ಪೌರೋಹಿತ್ಯದಲ್ಲಿ ಸಾಮೂಹಿಕ ಉಚಿತ ಬ್ರಹ್ಮೋಪದೇಶ, ಹರಿಸೇವೆ ಮತ್ತು ಧರ್ಮದೈವಗಳ ಕೋಲ ಕಾರ್ಯಕ್ರಮಗಳು ಯಶಸ್ವಿಯಾಗಿ ಜರಗಿದವು.
ಕೊಪ್ಪಲು ಕಾರ್ಯಕಾರ ಎಂಬ ಹೆಸರಿನಿಂದ ಪ್ರಸಿದ್ಧವಾದ ಕೊಪ್ಪಲು ಗುಳಿಗನ ಕೋಲವು ಈ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದು, ಕೇರಳ, ಕರ್ನಾಟಕ ಸೇರಿದಂತೆ ವಿದೇಶಗಳಿಂದ ಸಹಸ್ರಾರು ಭಕ್ತರು ಆಗಮಿಸಿ ದರ್ಶನ ಪಡೆದರು.
ಮಹೋತ್ಸವದ ಎರಡನೇ ದಿನ ನಡೆದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ವಿದ್ವತ್ ಸಭಾ ಕಾರ್ಯಕ್ರಮವನ್ನು ಬೆಂಗಳೂರಿನ ದೇವನಹಳ್ಳಿಯ ಆಕಾಶ್ ವೈದ್ಯಕೀಯ ಮೆಡಿಕಲ್ ಕಾಲೇಜಿನ ಮೆಡಿಕಲ್ ಸುಪರಿಂಟೆಂಡೆಂಟ್ ಡಾ. ಬ್ರಿಜೇಶ್ ಕೆ. ಉದ್ಘಾಟಿಸಿ, ಚಂದ್ರಗಿರಿ ಕೋಟೆ ಪ್ರದೇಶವು ಐತಿಹಾಸಿಕ, ಧಾರ್ಮಿಕ ಹಾಗೂ ಪ್ರವಾಸೋದ್ಯಮ ಕೇಂದ್ರವಾಗಿ ಇನ್ನಷ್ಟು ಅಭಿವೃದ್ಧಿಯಾಗಬೇಕು ಎಂದು ಅಭಿಪ್ರಾಯಪಟ್ಟರು.




































