ಅಲೆಮಾರಿ ಶಿಳ್ಳೆಕ್ಯಾತ ಸಮುದಾಯದ ಗುಡಿಸಲಿಗೆ ನುಗ್ಗಿ ಮಾರಣಾಂತಿಕ ಹಲ್ಲೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ
ಕುಂದಾಪುರ : ಗುಲ್ವಾಡಿ ಹೊಳೆ ಬದಿಯಲ್ಲಿ ತೆಪ್ಪದ ಮೂಲಕ ಮೀನು ಹಿಡಿದು ಗುಡಿಸಲಿನಲ್ಲಿ ಬದುಕುತ್ತಿರುವ ಅತೀ ಸೂಕ್ಷ್ಮ ಬುಡಕಟ್ಟು ಅಲೆಮಾರಿ ಶಿಳ್ಳೆಕ್ಯಾತ ಸಮುದಾಯದವರ ಮೇಲೆ ಸ್ಥಳೀಯ ಗೂಂಡಾಗಳು ಏಕಾಏಕಿ ಮನೆಗೆ ನುಗ್ಗಿ ಹೆಂಗಸು ಮಕ್ಕಳೆಂದು ನೋಡದೆ ಎಲ್ಲರ ಮೇಲೂ ಆಯುಧಗಳ ಮೂಲಕ ಮಾರಣಾಂತಿಕ ಹಲ್ಲೆಯನ್ನು ನಡೆಸಿ ದಾಂಧಲೆ ಮೆರೆದಿದ್ದಾರೆ. ಈ ರೀತಿ ದೌರ್ಜನ್ಯಮೆರೆದ ತಪ್ಪಿತಸ್ತರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಸೆಕ್ಷನಡಿಯಲ್ಲಿ ಕ್ರಮಕೈಗೊಳ್ಳಬೇಕೆಂದು ಕರಾವಳಿ ವೃತ್ತಿನಿರತ ಅಲೆಮಾರಿ ಶಿಳ್ಳೆಕ್ಯಾತ ಹಕ್ಕುಗಳ ಉಡುಪಿ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ.
ಇತ್ತೀಚೆಗೆ ಕುಂದಾಪುರದ ಗುಲ್ವಾಡಿ ಹೊಳೆಯಲ್ಲಿ ಮೀನು ಹಿಡಿಯುತ್ತಿದ್ದ ವೇಳೆ ಸ್ಥಳೀಯ ಗೂಂಡಾಗಳು ಮೀನು ಹಿಡಿಯಲು ನೀರಿಗಿಳಿಯದಂತೆ ನಿರ್ಬಂಧ ಹೇರಿರುವ ಮತ್ತು ಜೀವ ಬೆದರಿಕೆ ನೀಡಿರುವ ಬಗ್ಗೆ ಸ್ಥಳೀಯ ಪೊಲೀಸ್ ಇಲಾಖೆ ಮತ್ತು ಮೀನುಗಾರಿಕಾ ಇಲಾಖೆಯ ಗಮನಕ್ಕೆ ತರಲಾಗಿತ್ತು. ಈಗ ಮತ್ತೆ ಸ್ಥಳೀಯ ಗೂಂಡಾಗಳು ಶಿಳ್ಳೆಕ್ಯಾತ ಸಮುದಾಯದ ಗುಡಿಸಲಿಗೆ ನುಗ್ಗಿ ದಾಂಧಲೆ ಮೆರೆದಿದ್ದಾರೆ. ಇಂದು (6-6-24) ಬೆಳಗ್ಗೆ ಸುಮಾರು 10-30 ರ ಹೊತ್ತಿಗೆ ಮೀನು ಹಿಡಿದು ತಮ್ಮ ಬಲೆಯಿಂದ ಮೀನು ಬಿಡಿಸುತ್ತಿದ್ದ ವೇಳೆ ಶಿಳ್ಳೆಕ್ಯಾತ ಸಮುದಾಯದ ಗುಡಿಸಲಿಗೆ ನಾಲ್ಕೈದು ಜನರ ಗುಂಪೊಂದು ಮಾರಕಾಯುಧಗಳೊಂದಿಗೆ ನುಗ್ಗಿ ಅಲ್ಲಿದ್ದ ಅಲೆಮಾರಿ ಸಮುದಾಯದ ಹಿರಿಯರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಸಾಮೂಹಿಕವಾಗಿ ದೊಣ್ಣೆಗಳ ಮೂಲಕ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಮಹಿಳೆಯರ ಮೇಲೂ ರಕ್ತ ಬರುವಷ್ಟರ ಮಟ್ಟಿಗೆ ದೈಹಿಕ ಹಲ್ಲೆ ನಡೆಸಿದ್ದಲ್ಲದೆ ಕರಿಮಣಿಯನ್ನು ಕಿತ್ತುಕೊಂಡು ಎಳೆದಾಡಿದ್ದಾರೆ. ಅಷ್ಟೇ ಅಲ್ಲದೆ ಜಾತಿ ನಿಂಧನೆಗೊಳಪಡಿಸಿ ಊರು ಬೀಡಬೇಕೆಂದು ಜೀವಬೆದರಿಕೆ ಒಡ್ಡಿರುತ್ತಾರೆ.
ಅಲ್ಲದೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಬದುಕುವ ಅವರ ಗುಡಿಸಲುಗಳನ್ನು ದ್ವಂಸ ಮಾಡಲು ಪ್ರಯತ್ನಿಸಿದ್ದಾರೆ. ಅಲೆಮಾರಿ ಸಮುದಾಯದ ಮೇಲಾಗುವ ಸಮಸ್ಯೆಗಳ ಬಗ್ಗೆ ಜಿಲ್ಲಾಡಳಿತ ಪೊಲೀಸ್ ಇಲಾಖೆಯ ಮೇಲೆ ಈ ಹಿಂದೆನೆ ದೂರುಗಳನ್ನು ನೀಡಿದ್ದರೂ ಆ ಬಗ್ಗೆ ಸರಿಯಾಗಿ ಸ್ಪಂದಿಸದ ಕಾರಣ ಅಲೆಮಾರಿ ಸಮುದಾಯವನ್ನು ನೇರವಾಗಿ ಗುರಿಯಾಗಿಸಿ ಅವರ ಗುಡಿಸಲಿಗೆ ಬಂದು ಮಾರಣಾತಿಂಕ ಹಲ್ಲೆ ನಡೆಸುವಷ್ಟರ ಮಟ್ಟಿಗೆ ಈ ಸ್ಥಳೀಯ ಗೂಂಡಾಗಳು ಇಳಿದಿದ್ದಾರೆ. ಆದ್ದರಿಂದ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಈ ಕೂಡಲೇ ಅಲೆಮಾರಿ ಶಿಳ್ಳೆಕ್ಯಾತ ಬುಡಕಟ್ಟು ಸಮುದಾಯದ ಕುಟುಂಬಗಳಿಗೆ ರಕ್ಷಣೆ ಒದಗಿಸಬೇಕು ಹಾಗೂ ಮಾರಕಾಯುಧಗಳಿಂದ ಹಲ್ಲೆ ನಡೆಸಿ ದಾಂಧಲೆ ಮೆರೆದ ತಪ್ಪಿತಸ್ತರ ವಿರುದ್ಧ ಕಠಿಣ ಸೆಕ್ಷನ್ ಗಳಡಿಯಲ್ಲಿ ಕ್ರಮಕೈಗೊಳ್ಳಬೇಕು ಮತ್ತು ಉಡುಪಿ ಜಿಲ್ಲೆಯಲ್ಲಿರುವ ಈ ಸಮುದಾಯಗಳಿಗೆ ಸೂಕ್ತ ರಕ್ಷಣೆ ಒದಗಿಸಿಕೊಡಬೇಕು ಇಲ್ಲದಿದ್ದಲ್ಲ ಮುಂದಿನ ದಿನ ಸಂಬಂಧಪಟ್ಟ ಇಲಾಖೆ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಡಿವೈಎಫ್ಐ ರಾಜ್ಯ ಮುಖಂಡ ಕರಾವಳಿ ವೃತ್ತಿನಿರತ ಅಲೆಮಾರಿ ಶಿಳ್ಳೆಕ್ಯಾತ ಸಮುದಾಯದ ಗೌರವಾಧ್ಯಕ್ಷ ಸಂತೋಷ್ ಬಜಾಲ್ , ಉಡುಪಿ ಜಿಲ್ಲಾ ಮೀನುಗಾರರ ಸಂಘಟನೆಯ ಮುಖಂಡ ಕವಿರಾಜ್ ಕಾಂಚನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

- ಈ ಘಟನೆ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಜೊತೆ ಪೋನ್ ಮುಖಾಂತರ ಸಂಪರ್ಕ ಸಾಧಿಸಿದ ಸಂತೋಷ್ ಬಜಾಲ್ ಅಲೆಮಾರಿ ಸಮುದಾಯದ ಮೇಲಾದ ದೌರ್ಜನ್ಯದ ಬಗ್ಗೆ ಚರ್ಚಿಸಿದರು ಈ ಬಗ್ಗೆ ಸ್ಪಂಧಿಸಿದ ಅಧಿಕಾರಿ ಸೂಕ್ತ ರಕ್ಷಣೆ ಒದಗಿಸುವ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿರುತ್ತಾರೆ.
ಹಲ್ಲೆಗೊಳಗಾದ ಸಂತ್ರಸ್ತರು ಬಸ್ರೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.






































