ಸಂವಿಧಾನ – ಶಿಸ್ತು ಮತ್ತು ಮಾನವೀಯತೆಯ ದೀಪ

Picture of RB NEWS

RB NEWS

Bureau Report


ಸುಖಕರ ಹಾಗೂ ಶಾಂತಿಯುತ ಜೀವನ ನಡೆಸುವುದು ಮಾನವನ ಮಹತ್ತಾದ ಆಶಯ. ಸಮಾಜದಲ್ಲಿ ಶಾಂತಿ, ನೆಮ್ಮದಿ ಮತ್ತು ಶಿಸ್ತು ನೆಲೆಸಬೇಕಾದರೆ ಮಾನವನ ವರ್ತನೆಗೆ ಕೆಲವು ನಿಯಮಗಳು, ನೀತಿಗಳು ಮತ್ತು ಕಟ್ಟಳೆಗಳ ಮೂಲಕ ಮಿತಿಯಿರಬೇಕು. ಯಾವುದೇ ಶಾಸನವಾಗಲಿ, ಅದು ಮಾನವನಿಗೆ ಉತ್ತಮ ನಡವಳಿಕೆಯನ್ನು ಅನುಸರಿಸಲು ಮಾರ್ಗದರ್ಶನ ನೀಡುವುದೇ ಅದರ ಉದ್ದೇಶ.
ಇಂದು ಜಾತಿ ಎಂಬ ವಿಷಬೀಜ ಬೆಳೆದು, ನಮ್ಮದೇ ನೆಮ್ಮದಿಯನ್ನು ನಾವೇ ಹಾಳುಮಾಡಿಕೊಳ್ಳುತ್ತಿದ್ದೇವೆ. ಯಾವ ಧರ್ಮವಾದರೂ ಏನು? ಯಾವ ಜಾತಿಯಾದರೂ ಏನು? ಎಲ್ಲರ ಮೈಯಲ್ಲೂ ಹರಿಯುವ ರಕ್ತ ಒಂದೇ, ಕುಡಿಯುವ ನೀರು ಒಂದೇ, ನೆಲ ಒಂದೇ, ಉಸಿರಾಡುವ ಗಾಳಿ ಒಂದೇ ಆಗಿರುವಾಗ ಜಾತೀಯತೆಯ ಅಗತ್ಯವೇನು? ಮಾನವನಿಗೆ ಮೊದಲು ಬೇಕಾಗಿರುವುದು ಮಾನವೀಯ ಮೌಲ್ಯಗಳು. ಅವು ಇಲ್ಲದಿದ್ದರೆ ನಿಯಮಗಳೂ ಕಟ್ಟಳೆಗಳೂ ಅರ್ಥವಿಲ್ಲ.
ಬದುಕಿರುವವರೆಗೂ ಐಕ್ಯತೆಯ ಮಂತ್ರವನ್ನು ಜಪಿಸಿ, ಶಾಂತಿಯ ಮಂತ್ರವನ್ನು ಪಠಿಸಿ, ಅಹಿಂಸೆಯ ಮಾರ್ಗದಲ್ಲಿ ನಡೆಯುವುದು ನಮ್ಮ ಕರ್ತವ್ಯ. ಆದರೂ ಮಾನವನ ವರ್ತನೆಯನ್ನು ನಿಯಂತ್ರಿಸಲು ಕೆಲವು ನೀತಿಗಳು ಮತ್ತು ಕಟ್ಟಳೆಗಳು ಅತ್ಯಗತ್ಯ. ಇಂತಹ ನೀತಿಗಳು ಮತ್ತು ನಿಯಮಗಳನ್ನು ಸೂಚಿಸುವ ಮಾರ್ಗಸೂಚಿಯನ್ನೇ ಸಂವಿಧಾನ ಎಂದು ಕರೆಯಲಾಗುತ್ತದೆ. ರಾಜ್ಯಶಾಸ್ತ್ರದಲ್ಲಿ ಇವುಗಳನ್ನು ಕಾನೂನುಗಳು ಎಂದು ಗುರುತಿಸಲಾಗುತ್ತದೆ.
ಸಾಮೂಹಿಕ ಜೀವನ ಇರುವ ಎಲ್ಲೆಡೆ ಕಾನೂನು ಅನಿವಾರ್ಯ. ಸಮಾಜದ ಶಿಸ್ತು ಕಾಪಾಡಲು ಅಗತ್ಯವಾದ ಕಾನೂನುಗಳನ್ನು ರಚಿಸಿ, ಅವನ್ನು ಕಾರ್ಯರೂಪಕ್ಕೆ ತಂದು, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ಅಧಿಕಾರ ಹೊಂದಿರುವ ಸಂಸ್ಥೆಯೇ ಸರ್ಕಾರ. ಆದರೆ ಸರ್ಕಾರವೂ ಸಹ ಸಂಪೂರ್ಣ ಸ್ವೇಚ್ಛೆಯಿಂದ ನಡೆಯಲು ಸಾಧ್ಯವಿಲ್ಲ. ಜನರಿಂದಲೇ ನಿರ್ಮಿತವಾದ ಸರ್ಕಾರವನ್ನು ನಿಯಂತ್ರಿಸುವ ಅಗತ್ಯವಿದೆ.
ಪ್ರಜೆಗಳನ್ನು ನಿಯಂತ್ರಿಸಲು ಕಾನೂನುಗಳಿರುವಂತೆ, ಸರ್ಕಾರದ ನಿಯಂತ್ರಣಕ್ಕೂ ಪ್ರತ್ಯೇಕ ಕಾನೂನುಗಳಿವೆ. ಇಂತಹ ಮೂಲಭೂತ ಮತ್ತು ಮಹತ್ವದ ಕಾನೂನುಗಳನ್ನೇ ಸಂವಿಧಾನಾತ್ಮಕ ಕಾನೂನುಗಳು ಎಂದು ಕರೆಯಲಾಗುತ್ತದೆ. ಸರ್ಕಾರವು ಸಂವಿಧಾನದ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕು. ಹಾಗೆಯೇ ಪ್ರಜೆಗಳು ತಮ್ಮ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಈ ಕಾನೂನುಗಳ ಅನುಸಾರವೇ ಅನುಭವಿಸಬೇಕು ಮತ್ತು ಪಾಲಿಸಬೇಕು.
ರಾಷ್ಟ್ರದ ಅಗತ್ಯವಾದ ಹಾಗೂ ಮೂಲಭೂತ ನಿಯಮಗಳು ಮತ್ತು ತತ್ವಗಳ ಸಂಕಲನವೇ ಸಂವಿಧಾನ. ಸಂವಿಧಾನವು ಒಂದು ರಾಷ್ಟ್ರದ ಪರಮ ಪವಿತ್ರ ಕಾನೂನು. ಅದು ಕೇವಲ ನಿಯಮಗಳ ಪುಸ್ತಕವಲ್ಲ; ಅದು ಶಾಂತಿ, ಸಮಾನತೆ, ನ್ಯಾಯ ಮತ್ತು ಮಾನವೀಯತೆಯ ಜೀವಂತ ದೀಪ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top