ಬೆಳಗಾಮ್‌ನಲ್ಲಿ ಆರೋಪಿ ಪುರಂದರ ಭಟ್ ಸಿಓಡಿ ವಶಕ್ಕೆ

Picture of RB NEWS

RB NEWS

Bureau Report


ಇಸ್ಮಾಯಿಲ್ ಹತ್ಯಾ ಪ್ರಕರಣದಲ್ಲಿ ಪ್ರಮುಖ ಆರೋಪಿ ಪುರಂದರ ಭಟ್. ಈ ವಿಚಾರ ಸಿಓಡಿ ಪೊಲೀಸರ ಗಮನಕ್ಕೆ ಬಂದದ್ದು ಶಿವಮೊಗ್ಗದಲ್ಲಿ ಮಹಾಬಲ ದೇವಾಡಿಗ ಅವರನ್ನು ಬಂಧಿಸಿದ ಬಳಿಕ. ಆ ವೇಳೆಗೆ ಪುರಂದರ ಭಟ್ ಅವರು ಸ್ಥಳೀಯ ಪೊಲೀಸರು ರಾಷ್ಟ ವಿರೋಧಿ ಕೃತ್ಯಗಳಿಗೆ ಸಹಕರಿಸಿದ್ದಾರೆ ಎಂಬ ಆರೋಪದಲ್ಲಿ ಬಂಧಿಸಿ ಬೆಳಗಾಮ್ ಸೆಂಟ್ರಲ್ ಜೈಲಿನಲ್ಲಿರಿಸಿದ್ದರು.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಆರೆಸ್ಸೆಸ್‌ನ ಪ್ರಮುಖರೆಲ್ಲರನ್ನು ಪೊಲೀಸರು ಮೀಸಾ ಕಾಯ್ದೆಯಡಿ ಬಂಧಿಸಿ ಜೈಲಿಗೆ ಅಟ್ಟಿದ್ದರು. ಅವರ ಪೈಕಿ ಪುರಂದರ ಭಟ್ಟರೂ ಒಬ್ಬರು. ಭಾರತೀಯ ವಾಯು ಸೇನೆಯಲ್ಲಿ ಅಧಿಕಾರಿಯಾಗಿದ್ದ ಅವರು ನಿವೃತ್ತಿಯ ಬಳಿಕ ಆರೆಸ್ಸೆಸ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಇದೇ ಕಾರಣಕ್ಕಾಗಿ ಅವರನ್ನು ಪೊಲೀಸರು ಬಂಧಿಸಿದ್ದರು.

ಅವರ ಬಂಧನದ ವೇಳೆ ಇಸ್ಮಾಯಿಲ್ ಅವರ ಹತ್ಯೆ ನಡೆದಿತ್ತು. ಆದರೆ ಪೊಲೀಸರು ಈ ಬಗ್ಗೆ ವಿಚಾರಣೆಯನ್ನೇ ನಡೆಸಿರಲಿಲ್ಲ. ಪುರಂದರ ಭಟ್ಟರೂ ಹೇಳಿರಲಿಲ್ಲ. ಆದರೆ ಸಿಓಡಿ ಪೊಲೀಸರಿಗೆ ಈ ವಿಚಾರ ಗಮನಕ್ಕೆ ಬಂದ ಬಳಿಕ ಪುರಂದರ ಭಟ್ ಅವರು ಬೆಳಗಾಮ್ ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾಗುತ್ತಾರೆ ಎಂಬ ಮಾಹಿತಿ ತಿಳಿದು ಅಲ್ಲಿಗೆ ಹೋಗಿ ಅವರನ್ನು ಕಸ್ಟಡಿಗೆ ಪಡೆದುಕೊಂಡವರು ಸಿಓಡಿ ಇನ್ಸ್‌ಪೆಕ್ಟರ್ ದಕ್ಷಿಣಾಮೂರ್ತಿ.

ಇವರು ನ್ಯಾಯಾಲಯದಲ್ಲಿ ಆ ಸಂದರ್ಭದಲ್ಲಿ ನಡೆದ ಘಟನಾವಳಿಗಳನ್ನು ಈ ರೀತಿ ವಿವರಿಸಿದರು.


74ನೇ ಸಾಕ್ಷಿ ಸಿಓಡಿ ಸರ್ಕಲ್ ಇನ್ಸ್‌ಪೆಕ್ಟರ್ ದಕ್ಷಿಣಾಮೂರ್ತಿಯವರು ಸಾಕ್ಷಿ ಹೇಳುತ್ತಾ ನಾನು ಸಿಓಡಿಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದೇನೆ, ತಾ. 14-10-76ರಲ್ಲಿ ಸಿಓಡಿ ಡಿಎಸ್‌ಪಿಯವರ ಆದೇಶದ ಮೇರೆಗೆ ಬಂಟ್ವಾಳಕ್ಕೆ ಬಂದು ಈ ಕೇಸಿನ ತನಿಖೆಯಲ್ಲಿ ಸಿಓಡಿ ಡಿಎಸ್‌ಪಿ ಸಿದ್ದಲಿಂಗಪ್ಪ ಅವರಿಗೆ ಸಹಕರಿಸಿದೆ. ಡಿಸೆಂಬರ್ ತಿಂಗಳಲ್ಲಿ ಸಿದ್ದಲಿಂಗಪ್ಪನವರು ರಜೆಯಲ್ಲಿ ಹೋದಾಗ ನಾನು ಈ ಕೇಸಿನ ತನಿಖೆಯನ್ನು ಮುಂದುವರಿಸಿದೆ. ಆ ಸಮಯದಲ್ಲಿ ಆರೋಪಿಗಳ ಬಗ್ಗೆ ನಾನಾ ಕಡೆಗಳಿಗೆ ಹೋಗಿ ಹುಡುಕಾಡಿದೆ. ಡಿಎಸ್‌ಪಿ ಸಿದ್ದಲಿಂಗಪ್ಪನವರು ರಜೆಯಿಂದ ಮರಳಿ ಬಂದ ಮೇಲೆ ಅವರಿಗೆ ತನಿಖೆಯಲ್ಲಿ ಸಹಾಯ ಮಾಡಿದೆ’ ಎಂದು ಹೇಳಿದರು.

ತಾ. 17-2-77ಮತ್ತು 18-2-77ರಂದು ನಾನು ಬೆಂಗಳೂರು ಸೆಕ್ರೆಟರಿಯೇಟ್‌ಗೆ ಹೋಗಿ ವಿಚಾರಿಸಿದಾಗ ಈ ಕೇಸಿನ 2ನೇ ಆರೋಪಿ ಪುರಂದರ ಭಟ್ಟರನ್ನು ತಾ. 19-2-77ರಂದು ಬೆಳಗಾಮ್ ಸೆಂಟ್ರಲ್ ಜೈಲಿನಿಂದ ಬಿಡುಗಡು ಮಾಡುತ್ತಾರೆ ಎಂಬ ವರ್ತಮಾನ ಸಿಕ್ಕಿತು. ಕೂಡಲೇ ನಾನು ಬೆಳಗಾಮ್‌ಗೆ ಹೋದೆ. ತಾ. 19-2-77ರಂದು ಸಾಧಾರಣ ಸಂಜೆ 7 ಗಂಟೆಯ ಸಮಯ 2ನೇ ಆರೋಪಿ ಪುರಂದರ ಭಟ್ಟರನ್ನು ಬೆಳಗಾಮ್ ಸೆಂಟ್ರಲ್ ಜೈಲಿನಲ್ಲಿ ಕಂಡೆ. ಆಗ ತಾನೆ ಅವರನ್ನು ಜೈಲಿನಿಂದ ಬಿಟ್ಟಿತ್ತು. ಅವರನ್ನು ಅಲ್ಲಿಂದ ಕರೆದುಕೊಂಡು ಬಂಟ್ವಾಳಕ್ಕೆ ಬಂದು ತಾ. 21-2-77ರಂದು ಸಿಓಡಿ ಡಿಎಸ್‌ಪಿಯವರ ಮುಂದೆ ಹಾಜರುಪಡಿಸಿದೆ’ ಎಂದವರು ವಿವರಿಸಿದರು.


ಲಾಡ್ಜಿಂಗ್‌ನಲ್ಲಿ ಬಂಧಿಸಿದೆ


ತಾ. 13-3-77ರಂದು ನಾನು ಬೆಂಗಳೂರಿನಲ್ಲಿದ್ದಾಗ ಡಿಎಸ್‌ಪಿ ಸಿದ್ದಲಿಂಗಪ್ಪನವರಿAದ ಒಂದು ವಯರ್‌ಲೆಸ್ ಮೆಸೇಜ್ ಬಂಟ್ವಾಳದಿಂದ ಬಂತು. ಅದರ ಪ್ರಕಾರ ಈ ಕೇಸಿಗೆ 3ನೇ ಆರೋಪಿ ಈಶ್ವರ ಭಟ್ಟ ಮತ್ತು 4ನೇ ಆರೋಪಿ ಮಹಾಬಲ ದೇವಾಡಿಗ ಹಾಗೂ 5ನೇ ಆರೋಪಿ ಭೋಜರಾಜ ಸೇಮಿತರು ಬೆಂಗಳೂರಿನ ಹೊಟೇಲೊಂದರಲ್ಲಿ ಇದ್ದಾರೆಂಬ ವರ್ತಮಾನವಿದ್ದು, ಅವರನ್ನು ಹುಡುಕಿ ದಸ್ತಗಿರಿ ಮಾಡಬೇಕಾಗಿ ಸೂಚನೆ ದೊರೆಯಿತು. ಆ ಪ್ರಕಾರ ನಾನು ಬೆಂಗಳೂರಿನಲ್ಲಿರುವ ಲಾಡ್ಜಿಂಗ್‌ಗಳಿಗೆಲ್ಲಾ ಹೋಗಿ ಹುಡುಕಾಡಿದೆ. ತಾ. 15-3-77ರಂದು ಮಧ್ಯಾಹ್ನದ ಹೊತ್ತಿಗೆ ಗಣೇಶ್ ಲಾಡ್ಜಿಗೆ ಹೋದೆ. ಅಲ್ಲಿಯ ಲಾಡ್ಜಿಂಗ್ ರಿಜಿಸ್ಟರ್‌ನಲ್ಲಿ ನೋಡಿದಾಗಈಶ್ವರನ್, ಉಷಾ ಮಿಲ್ಕ್ ಡೈರಿ ಬೆಳ್ತಂಗಡಿ’ ಎಂಬ ಹೆಸರು ವಿಳಾಸದವರು ಮತ್ತು ಇನ್ನೊಬ್ಬರು ರೂಮ್ ನಂಬ್ರ 114ರಲ್ಲಿ ಇರುವುದು ತಿಳಿಯಿತು. ಅದರಂತೆ ನಾನು ರೂಮ್ ನಂಬ್ರ 114ಕ್ಕೆ ಹೋಗಿ ನೋಡಿದಾಗ ಎರಡು ಜನರು ಇದ್ದರು. ಅವರು ವಿಳಾಸಗಳನ್ನು ತಿಳಿಸಿದಾಗ ಅವರ ಹೆಸರುಗಳು ಈಶ್ವರ ಭಟ್ಟ ಮತ್ತು ಭೋಜರಾಜ ಸೇಮಿತರೆಂದು, ಅವರು ಈ ಕೇಸಿಗೆ ಸಂಬAಧಪಟ್ಟ ಆರೋಪಿಗಳೆಂದೂ ತಿಳಿದುಬಂತು. ಹಾಗೆ ಅವರಿಬ್ಬರನ್ನೂ ಕರೆದುಕೊಂಡು ಶೇಷಾದ್ರಿಪುರ ಪೊಲೀಸ್ ಸ್ಟೇಶನಿಗೆ ಹೋದೆ. ಅವರನ್ನು ಅಲ್ಲಿ ಸ್ಟೇಶನಿನಲ್ಲಿ ಇರಿಸಿ ನಾನು ಸಿಓಡಿ ಆಫೀಸಿಗೆ ಹೋಗಿ ಮರಳಿ 5 ಅಥವಾ 5.30 ಗಂಟೆ ಹೊತ್ತಿಗೆ ಬಂದೆ’ ಎಂದು ಅವರು ವಿವರಿಸಿದರು.


ಸ್ವಇಚ್ಛೆಯಿಂದ ಹೇಳಿಕೆ ಕೊಟ್ಟರು


ಆಗ ಈಶ್ವರ ಭಟ್ಟರು ಮತ್ತು ಭೋಜರಾಜ ಸೇಮಿತರು ಸ್ವೇಚ್ಛೆಯಿಂದ ಒಂದು ಸ್ಟೇಟ್‌ಮೆಂಟ್ ಕೊಡಲು ಇಚ್ಛಿಸಿದ ಮೇರೆಗೆ ಇಬ್ಬರು ಸಾಕ್ಷಿಯವರನ್ನು ಬರಮಾಡಿಸಿ ಪ್ರಥಮತ: ಈಶ್ವರ ಭಟ್ಟರ ಹೇಳಿಕೆಯನ್ನು ಬರೆದುಕೊಂಡೆ. ಅದರ ಪ್ರಕಾರ ಅವರು ಬಟ್ಟೆ ಹೊತ್ತಿಸಿದ ಸ್ಥಳವನ್ನು ತೋರಿಸುವುದಾಗಿಯೂ, ಚಪ್ಪಲ್ ಬಿಸಾಡಿದ ಸ್ಥಳ ತೋರಿಸುವುದಾಗಿಯೂ, ನಂಬರ್ ಪ್ಲೇಟ್ ಬಿಸಾಡಿದ ಸ್ಥಳ ತೋರಿಸುವುದಾಗಿಯೂ, ಲಾಡಿ, ಅಂಗಿ ಬಟನ್ ಮೊದಲಾದವುಗಳನ್ನು ತೋರಿಸಿಕೊಡುವುದಾಗಿಯೂ ಹೇಳಿಕೆ ಕೊಟ್ಟೆ. ಅದನ್ನು ಬರೆದ ಮೇಲೆ ಪಂಚನಾಮೆ ಸಾಕ್ಷಿಗಳ ಸಹಿ ಹಾಕಿದೆ. ಆ ಬಳಿಕ ಭೋಜರಾಜ ಸೇಮಿತರ ಹೇಳಿಕೆ ಪಡೆದೆ. ಮಾರನೆ ದಿನ ಅವರಿಬ್ಬರನ್ನೂ ಬೆಂಗಳೂರು ಮೆಟ್ರೋ ಪೊಲಿಟನ್ ಮ್ಯಾಜಿಸ್ಟೇಟ್‌ರವರ ಮುಂದೆ ಹಾಜರುಪಡಿಸಲಾಯಿತು.

5ನೇ ಆರೋಪಿ ಭೋಜರಾಜ ಸೇಮಿತರಿಗೆ ಜ್ಯುಡಿಶಿಯಲ್ ರಿಮಾಂಡ್ ನೀಡಲಾಯಿತು. 3ನೇ ಆರೋಪಿ ಈಶ್ವರ ಭಟ್ಟರಿಗೆ ಪೊಲೀಸ್ ಕಸ್ಟಡಿ ಕೊಟ್ಟರು. ಆ ಪ್ರಕಾರ ಮರುದಿನ ಈಶ್ವರ ಭಟ್ಟರನ್ನು ಬಂಟ್ವಾಳಕ್ಕೆ ತಂದು ಡಿಎಸ್‌ಪಿ ಸಿದ್ದಲಿಂಗಪ್ಪನವರ ಮುಂದೆ ಹಾಜರುಪಡಿಸಿದೆ. ಅನಂತರ ಈ ಕೇಸಿನ ತನಿಖೆಯಲ್ಲಿ ಸಿಓಡಿ ಡಿಎಸ್‌ಪಿಯವರಿಗೆ ಸಹಕರಿಸಿದೆ ಎಂದು ದಕ್ಷಿಣಾಮೂರ್ತಿ ಹೇಳಿದರು.


ಅಡ್ಡ ವಿಚಾರಣೆಯಲ್ಲಿ 9-1-77ರಂದು ತಾವು 4ನೇ ಆರೋಪಿ ಮಹಾಬಲ ದೇವಾಡಿಗರನ್ನು ಶಿವಮೊಗ್ಗದಲ್ಲಿ ದಸ್ತಗಿರಿ ಮಾಡಿದುದಾಗಿ ಹೇಳುವುದು ಸರಿಯಲ್ಲವೆಂದೂ, ಅವರು (ಮಹಾಬಲ ದೇವಾಡಿಗ) ಪೊಲೀಸ್ ಕಸ್ಟಡಿಯಲ್ಲಿ ಇರಲಿಲ್ಲವೆಂದೂ ಹೇಳಿದರು.


1ನೇ ಆರೋಪಿ ಶ್ರೀಧರ ಭಟ್ಟ, 3ನೇ ಆರೋಪಿ ಈಶ್ವರ ಭಟ್ಟ ಮತ್ತು 5ನೇ ಆರೋಪಿ ಭೋಜರಾಜ ಸೇಮಿತರು ತಾ 20-1-77ರಂದು ಕರ್ನಾಟಕ ಹೈಕೋರ್ಟಿನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿದ ವಿಷಯ ತಮಗೆ ಗೊತ್ತಿಲ್ಲವೆಂದು ದಕ್ಷಿಣಾಮೂರ್ತಿ ಆರೋಪಿ ಪರ ವಕೀಲರ ಪ್ರಶ್ನೆಗಳಿಗೆ ಉತ್ತರಿಸಿದರು.


4ನೇ ಆರೋಪಿಯನ್ನು ತಾವು 9-1-77ರಲ್ಲಿ ದಸ್ತಗಿರಿ ಮಾಡಿದುದಾಗಿ ಹೇಬಿಯಸ್ ಕಾರ್ಪಸ್ ಅರ್ಜಿ ಹೈಕೋರ್ಟಿನಲ್ಲಿ ಹಾಕಿದ್ದುದು ಜನವರಿ ಕೊನೆ ಅಥವಾ ಫೆಬ್ರವರಿ 1ನೇ ವಾರದಲ್ಲಿ ತಮಗೆ ತಿಳಿದುಬಂತೆAದು ಹೇಳಿದ ಅವರು, ಮೂರನೆ ಮತ್ತು 5ನೇ ಆರೋಪಿಗಳನ್ನು ಬೆಂಗಳೂರು ಗಣೆಶ್ ಲಾಡ್ಜ್ ನಲ್ಲಿ ದಸ್ತಗಿರಿ ಮಾಡಿಲ್ಲವೆಂಬ ವಾದ ಸರಿಯಲ್ಲವೆಂದು ತಿಳಿಸಿ ಇದು ಸಿಓಡಿ ಪೊಲೀಸರ ಸೃಷ್ಠಿಯೆಂಬುದನ್ನು ನಿರಾಕರಿಸಿದರು.


ತನಿಖಾಧಿಕಾರಿ ಸಿದ್ದಲಿಂಗಪ್ಪ ಹೇಳಿಕೆ


ತನಿಖೆಯ ಅಧಿಕಾರಿ ಸಿದ್ದಲಿಂಗಪ್ಪನವರು ತಮ್ಮ ಹೇಳಿಕೆಯಲ್ಲಿ ನಾನು ಬಳ್ಳಾರಿಯಲ್ಲಿ ಈಗ ಡಿಎಸ್‌ಪಿ ಯಾಗಿ ಕೆಲಸ ಮಾಡುತ್ತಿದ್ದೇನೆ. 1976ಮೇ ತಿಂಗಳಿAದ 1977 ಜೂನ್ ತನಕ ನಾನು ಸಿಓಡಿಯಲ್ಲಿ ಡಿಎಸ್‌ಪಿಯಾಗಿ ಕೆಲಸ ಮಾಡುತ್ತಿದ್ದೆ. ಈ ಕೇಸಿನ ವಿಷಯದಲ್ಲಿ ನಾನು 9-9-76ರಂದು ಮೇಲಧಿಕಾರಿಗಳ ಜೊತೆಯಲ್ಲಿ ಬಂಟ್ವಾಳಕ್ಕೆ ಬಂದೆ. ಈ ಕೇಸಿನ ತನಿಖೆಯನ್ನು ನಾನು ನಡೆಸಬೇಕಾಗಿ ಮೇಲಧಿಕಾರಿಗಳು ಅಪ್ಪಣೆ ಕೊಡಿಸಿದ ಪ್ರಕಾರ ಕೇಸಿನ ತನಿಖೆಯನ್ನು ಪುತ್ತೂರು ಡಿಎಸ್‌ಪಿಯವರಿಂದ ತಾ. 10-9-76ರಂದು ತೆಗೆದುಕೊಂಡೆ. ಅಲ್ಲಿನವರೆಗಿನ ರೆಕಾರ್ಡ್ ಗಳನ್ನು ಹಾಗೂ ಸ್ವಾಧೀನಪಡಿಸಿಕೊಂಡಿದ್ದ ವಸ್ತುಗಳನ್ನು ನನ್ನ ವಶಕ್ಕೆ ತೆಗೆದುಕೊಂಡೆ’ ಎಂದು ಹೇಳಿದರು. ಆ ದಿನ ಬೆಂಗಳೂರಿನಿಂದ ಸೈಂಟಿಫಿಕ್ ಆಫೀಸರ್ ಕೆಂಚಪ್ಪನವರು ಸಾಧಾರಣ 9 ಗಂಟೆಗೆ ಬಂಟ್ವಾಳಕ್ಕೆ ಬಂದು ತಲುಪಿದರು. ನಾನು ಅವರಿಗೆ ಮೃತರ ಕೊರಳಲ್ಲಿದ್ದ ಹುರಿ ಹಗ್ಗ ಹಾಗೂ ನೈಲಾನ್ ಹಗ್ಗವನ್ನು ಪರೀಕ್ಷೆಗಾಗಿ ಕೊಟ್ಟೆ. ಅಷ್ಟು ಮಾತ್ರವಲ್ಲದೆ ಸೈಂಟಿಫಿಕ್ ಆಫೀಸರ್ ಅವರಿಗೆ ಕಳುಹಿಸಲಾದ ಜೀಪುಗಳನ್ನೆಲ್ಲ ಪರೀಕ್ಷೆ ಮಾಡಬೇಕೆಂದು ಕೇಳಿಕೊಂಡೆ. ಸಿಓಡಿ ಸಬ್ ಇನ್ಸ್ಪೆಕ್ಟರ್ ವಿನ್ಸೆಂಟ್ ಕರ್ವೆಲೊ ಅವರಿಗೆ ಜೀಪುಗಳನ್ನೆಲ್ಲ ಸೈಂಟಿಫಿಕ್ ಆಫೀಸರ್ ಮುಂದೆ ಹಾಜರುಪಡಿಸುವಂತೆ ಆದೇಶ ಕೊಟ್ಟೆ’ ಎಂದವರು ವಿವರಿಸಿದರು.


ಕಲ್ಲಡ್ಕದಲ್ಲಿ ತನಿಖೆ


ಆ ಬಳಿಕ ನಾನು ಕಲ್ಲಡ್ಕಕ್ಕೆ ಹೋಗಿ 1ನೇ ಸಾಕ್ಷಿ ನರಸಿಂಹ ಮಡಿವಾಳರನ್ನು ಕರೆಸಿ ಸ್ಥಳ ತನಿಖೆ ಮಾಡಿದೆ. ಅಂಗಡಿಯ ಒಳಗೆ ಹೋಗಿ ಅಂಗಡಿಯ ವಿಷಯವನ್ನೆಲ್ಲಾ ನೋಡಿದ ನಂತರ ಮೃತ ಇಸ್ಮಾಯಿಲ್ ಅವರ ಮನೆಗೆ ಹೋಗಿ ಇಸ್ಮಾಯಿಲ್ ಅವರ ಪತ್ನಿ ಬೀಪಾತಿಮ್ಮರ ಹೇಳಿಕೆಯನ್ನು ಬಂಟ್ವಾಳ ಇನ್ಸ್‌ಪೆಕ್ಟರ್ ತವರ ಸಹಾಯದಿಂದ (ಮಲೆಯಾಳಿ ಭಾಷೆಯಾದುದರಿಂದ) ಪಡೆದೆ. ಅಲ್ಲದೆ ಬೀಪಾತಿಮ್ಮರ ತಂಗಿ ಬೇಬಿ ರಝಿಯಾ, ಅಂಗಡಿಯಲ್ಲಿ ಕೆಲಸಕ್ಕಿದ್ದ ಸಮ್ಮೋನು, ಮೃತರ ಅಣ್ಣ ಶೇಷಾಯಿ ಶಾಫಿ ಅವರ ಹೇಳಿಕೆಗಳನ್ನು ಪಡೆದುಕೊಂಡೆ’ ಎಂದುಸಾಕ್ಷಿ ತಿಳಿಸಿದರು.

ತಾ. 11-9-76ರಂದು ಈ ಕೇಸಿನ ತನಿಖೆಯನ್ನು ಮುಂದುವರಿಸಿ ಸದಾನಂದ ಪೈ, ಪದ್ಮನಾಭ ರೈ, ಮತ್ತಿತರರ ಹೇಳಿಕೆಗಳನ್ನು ತಾನು ಪಡೆದುಕೊಂಡುದಾಗಿಯೂ, ತಾ. 12-9-76ರಂದು ಪುನ: ಕಲ್ಲಡ್ಕಕ್ಕೆ ಹೋಗಿ ಅಲ್ಲಿ ಅನೇಕ ಅಂಗಡಿಗಳ ಮಾಲಿಕರುಗಳನ್ನು ಪ್ರಶ್ನಿಸಿದುದಾಗಿಯೂ, ಆ ಮೊದಲೇ ಅವರವರ ಅಂಗಡಿಗಳವರಿಂದ ಈ ಕೇಸಿಗೆ ಸಂಬಂಧಪಟ್ಟ ವಿಷಯಗಳೇನೂ ತಿಳಿಯಲಿಲ್ಲವೆಂದೂ ಸಿದ್ದಲಿಂಗಪ್ಪ ತಿಳಿಸಿದರು.

ಗತ ರೆಕಾರ್ಡುಗಳ ಪರಿಶೀಲನೆ ಆಮೇಲೆ ನಾನು ಪುನ: ಬಂಟ್ವಾಳಕ್ಕೆ ಬಂದು ಬಂಟ್ವಾಳ ಪೊಲೀಸ್ ಸ್ಟೇಶನ್‌ನಲ್ಲಿ ಕ್ರೆöÊಮ್ ನಂಬ್ರ 87/74ರ ರೆಕಾರ್ಡ್ ಗಳನ್ನು ಓದಿ ನೋಡಿದೆ.

ಅದರ ಪ್ರಕಾರ ತಾ. 27-4-74ರಂದು ಸಚಿವ ರಂಗನಾಥ್ ಅವರು ಬಂದಾಗ ಕಲ್ಲಡ್ಕದಲ್ಲಿ ಆದ ಗಲಾಟೆಯ ವಿಷಯವೊಂದು ತಿಳಿದುಬಂತು. ಆ ಕೇಸಿನಲ್ಲಿ ಡಾ. ಪ್ರಭಾಕರ ಭಟ್ಟ, ಈ ಕೇಸಿನ ಆರೋಪಿಗಳಾದ ಪುರಂದರ ಭಟ್ಟ, ಮಹಾಬಲ ದೇವಾಡಿಗ ಮತ್ತಿತರರ ಮೇಲೆ ಚಾರ್ಜ್ಶೀಟ್ ಆಗಿತ್ತೆಂದು ತಿಳಿಯಿತು. ಆ ಕೇಸಿನಲ್ಲಿ ಮೃತ ಇಸ್ಮಾಯಿಲ್ ಹಾಗೂ ಸದಾನಂದ ಪೈಯವರು ಪ್ರಾಸಿಕ್ಯೂಷನ್ ಪರ ಸಾಕ್ಷಿ ಹೇಳಿದ್ದರು’ ಎಂಬುದಾಗಿ ಅವರು ವಿವರಿಸಿದರು.


ತಾ. 13-9-76ರಂದು ತಾವು ಕಲ್ಲಡ್ಕಕ್ಕೆ ಹೋಗಿ ಅಲ್ಲಿ ನಾರಾಯಣ ರಾವ್, ಕೇಶವ, ರಮೇಶ ಹಾಗೂ ಇನ್ನಿತರರನ್ನು ಪ್ರಶ್ನಿಸಿ ಹೇಳಿಕೆಗಳನ್ನು ಬರೆದುಕೊಂಡುದಾಗಿ ತಿಳಿಸಿದ ಅವರು ಅಂದು ಬಂಟ್ವಾಳ ಅರಕಾರಿ ಆಸ್ಪತ್ರೆಯ ಡಾಕ್ಟರರಿಂದ ಮರಣೋತ್ತರ ಶಸ್ತç ಪರೀಕ್ಷೆಯ ಸರ್ಟಿಫಿಕೇಟು ಸಿಕ್ಕಿತೆಂದೂ ಆ ಬಳಿಕ ತನಿಖೆ ಮಾಡಿದಾಗ ಮೃತ ಇಸ್ಮಾಯಿಲ್ ಅವರಿಗೂ ಜನಸಂಘ ಹಾಗೂ ಆರೆಸ್ಸೆಸ್‌ನವರಿಗೂ ವೈಮನಸ್ಸಿತ್ತೆಂದೂ ತಿಳಿದುಬಂದುದಾಗಿ ಸಿದ್ದಲಿಂಗಪ್ಪನವರು ಹೇಳಿದರು.


ಮೃತರ ಶವ ಪರೀಕ್ಷೆಯ ಸಮಯದಲ್ಲಿ ಡಾಕ್ಟರ್ ತೆಗೆದ ವಿಸಿರಾ’ವನ್ನು ಹೆಡ್‌ಕಾನ್‌ಸ್ಟೇಬಲ್ ಲಕ್ಷö್ಮಣರವರ ಮುಖಾಂತರ ಪರೀಕ್ಷೆಗಾಗಿ ಬೆಂಗಳೂರಿನ ಫೊರೆನ್ಸಿಕ ಸಯನ್ಸ್ ಲೆಬೋರೇಟರಿಗೆ ಕಳುಹಿಸಲಾಯಿತೆಂದು ಹೇಳಿದ ಅವರುತಾ 14-9-76ರಂದು ಆಗಿನ ಬಂಟ್ವಾಳ ಸರ್ಕಲ್ ಇನ್ಸ್‌ಪೆಕ್ಟರ್ ಎಸ್. ಪಿ. ಕೋಲ್ಕರ್ ಹಾಗೂ ಮತ್ತಿತರ ಹೆಡ್‌ಕಾನ್‌ಸ್ಟೇಬಲ್ ಮತ್ತು ಪೊಲೀಸ್ ಕಾನ್‌ಸ್ಟೇಬಲ್‌ಗಳ ಹೇಳಿಕೆಗಳನ್ನು ಪಡೆದುಕೊಂಡೆ. ಹೆಡ್‌ಕಾನ್‌ಸ್ಟೇಬಲ್ ನಂಬ್ರ 778 ಇವರನ್ನು ಈ ಕೇಸಿನ 4ನೇ ಆರೋಪಿ ಮಹಾಬಲ ದೇವಾಡಿಗರ ತಪಾಸಣೆಗೆ ನೇಮಿಸಿದೆ. ಅಬ್ದುಲ್ ಖಾದರ್ ಮತ್ತಿತರರ ಹೇಳಿಕೆಗಳನ್ನು ಪಡೆದೆ. ಸಬ್ ಇನ್ಸ್‌ಪೆಕ್ಟರ್ ನಾಯ್ಡು ಮತ್ತು ಸಬ್ ಇನ್ಸ್‌ಪೆಕ್ಟರ್ ಜಗನ್ನಾಥ ರೈ ಮೊದಲಾದವರನ್ನು ಜೀಪುಗಳ ಹಾಗೂ ಆರೋಪಿಗಳ ತಪಾಸಣೆಗೆ ಕಳುಹಿಸಿದೆ’ಎಂದು ವಿವರಿಸಿದರು.


ನಂಬರ್ ಪ್ಲೇಟಿನಲ್ಲಿ ಬೆರಳಚ್ಚು


`ತಾ. 15-9-76ರಂದು ಈ ಕೇಸಿನ 4ನೇ ಆರೋಪಿ ಮಹಾಬಲ ದೇವಾಡಿಗರ ಮನೆ ಜಪ್ತಿ ಮಾಡಿದೆ. ಆಗ ಮಹಾಬಲ ದೇವಾಡಿಗರು ಮನೆಯಲ್ಲಿರಲಿಲ್ಲ. ಅಂದು ಕಲ್ಲಡ್ಕದ ನರಸಿಂಹ ಹೊಳ್ಳರು, 1ನೇ ಸಾಕ್ಷಿ ನರಸಿಂಹ ಮಡಿವಾಳ ಮತ್ತು ಸರ್ಕಲ್ ಇನ್ಸ್ಪೆಕ್ಟರ್ ಅಯ್ಯೂರ್ ಮೊದಲಾದವರ ಹೇಳಿಕೆಗಳನ್ನು ಬರೆದು ತೆಗೆದುಕೊಂಡೆ. ಸಾಧಾರಣ ಸಂಜೆ ಗಂಟೆಯ ಹೊತ್ತಿಗೆ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಬಂದು ನಂಬರ್ ಪ್ಲೇಟನ್ನು ನಿಡಿಂಗಲ್ ಬ್ರಿಜ್‌ನ ಬಳಿ ಸ್ವಾಧೀನಪಡಿಕೊಂಡ ಸಂಗತಿ ತಿಳಿಸಿದರು.

ಕೂಡಲೇ ಬೆಳ್ತಂಗಡಿಗೆ ಹೋದೆ. ಅಲ್ಲಿ ಸಬ್ ಇನ್ಸ್‌ಪೆಕ್ಟರ್ ರವರ ವಶದಲ್ಲಿದ್ದ ನಂಬರ್ ಪ್ಲೇಟನ್ನು ನನ್ನ ಸ್ವಾಧೀನಕ್ಕೆ ತೆಗೆದುಕೊಂಡೆ. ಆ ನಂಬರ್ ಪ್ಲೇಟಿನಲ್ಲಿ ಒಂದು ಕಡೆ ಎಂಇಎಕ್ಸ್ 5471ಎಂದೂ, ಇನ್ನೊಂದು ಕಡೆ ಎಂವೈಎಕ್ಸ್ 1017ಎಂದೂ ಇತ್ತು. ಎಂಇಎಕ್ಸ್ 5471 ಇದ್ದ ಭಾಗದಲ್ಲಿ ಎಂ ಅಕ್ಷರದ ಹತ್ತಿರ ಒಂದು ಬೆರಳಿನ ಕೈಯಚ್ಚು, 1 ಎಂದು ಬರೆದುದರ ಹತ್ತಿರ ಎರಡು ಬೆರಳಚ್ಚುಗಳೂ ಇದ್ದವು. ಎಂವೈಎಕ್ಸ್ 1017 ಎಂಬ ನಂಬ್ರ ಮಂಗಳೂರು ಟ್ರಾಫಿಕ್ ಸರ್ಕಲ್ ಇನ್ಸ್‌ಪೆಕ್ಟರ್ ಜೀಪಿನ ನಂಬ್ರವೆಂದೂ, ಎಂಇಎಕ್ಸ್ 5471 ಅಂಚೆ-ತಂತಿ ಇಲಾಖೆಯ ಜೀಪಿನ ನಂಬ್ರ ಆಗಿದೆಯೆಂದೂ ತಿಳಿದುಬಂತು. ನಾನು ಸಬ್ ಇನ್ಸ್‌ಪೆಕ್ಟರ್ ಸಿ.ಕೆ. ಅಯ್ಯೂರ್ ರವರ ಹೇಳಿಕೆಯನ್ನು ಬರಹ ಮೂಲಕ ಪಡೆದೆ’ ಎಂದು ತಿಳಿಸಿದರು.


ತಾ. 16-9-76ರಂದು ಬಂಟ್ವಾಳ ಸ್ಟೇಶನ್‌ನಲ್ಲಿ ಡಿ.ಐಆರ್ ಪ್ರಕಾರ ಆದ ಕೇಸುಗಳ ಅಂದರೆ ಕ್ರೈಂ ನಂಬ್ರಗಳು 110/75, 111/75, 173/75, 182/75, 188/75, 190/75. 77/76 ಮತ್ತು 25/76 ಮೊದಲಾದ ಕೇಸುಗಳ ರಿಕಾರ್ಡುಗಳನ್ನು ತಾವು ಓದಿ ನೋಡಿದುದಾಗಿ ತಿಳಿಸಿದ ಅಧಿಕಾರಿಗಳು ಅಂದೇ ನಿಡಿಂಗಲ್ಲು ಬ್ರಜ್‌ನ ಬಳಿ ಮೇಲೆ ಹೇಳಿದ ನಂಬರ್ ಪ್ಲೇಟನ್ನು ಹಾಜರುಪಡಿಸಿದ ಎನ್. ಕೆ. ಮೋನಪ್ಪ ಹಾಗೂ ದಿವಾಕರ ಭಂಡಾರಿಯವರ ಪ್ರತ್ಯೇಕ ಹೇಳಿಕೆಗಳನ್ನು ಬರೆದುಕೊಂಡುದಾಗಿಯೂ, ಆ ಬಳಿಕ ಹೋಗಿ ನಂಬರ್ ಪ್ಲೇಟ್ ಸಿಕ್ಕಿದ ಸ್ಥಳವನ್ನು ತಾವು ನೋಡಿದುದಾಗಿಯೂ, ಅಲ್ಲಿ ನಂಬರ್ ಪ್ಲೇಟನ್ನು ಸ್ವಾಧೀನಪಡಿಸಿಕೊಂಡು ಹಾಜರಿದ್ದ ಪಕ್ರಬ್ಬ ಹಾಗೂ ಯೋಹನರವರನ್ನು ತಾವು ಪ್ರಶ್ನಿಸಿದುದಾಗಿಯೂ ವಿವರಿಸಿದರು.

ಮುಂದುವರಿಯುವುದು…..

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top