ಉಡುಪಿ: ಚುನಾವಣಾ ದಿನಾಂಕ ಘೋಷಣೆಯಾಗುವ ಹಂತದಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ರವರನ್ನು ಬದಲಾವಣೆ ಮಾಡಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಚುನಾವಣೆ ಘೋಷಣೆಯಾಗುವ ಕೆಲವೇ ಕೆಲವು ದಿನ ಮೊದಲು ರಾಜ್ಯ ಸರಕಾರ ಮಾಡಿರುವ ಈ ಬದಲಾವಣೆ ಸೂಕ್ತವಾದುದಲ್ಲ. ರಾಜ್ಯ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತ ಈ ಬದಲಾವಣೆಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು.

ನಿನ್ನೆ ಮೊನ್ನೆಯವರೆಗೂ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಸರ್ಜನ್ ಆಗಿದ್ದವರು ಡಾ. ವೀಣಾ ಕುಮಾರಿ. ಇವರು ಪ್ರಾಮಾಣಿಕತೆ ಮತ್ತು ದಕ್ಷತೆಗೆ ಹೆಸರಾದವರು. ಜನಪರ ಕಾಳಜಿಯ ಜನಸೇವಕರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಯಾವುದೇ ರೀತಿಯ ಭ್ರಷ್ಟಾಚಾರಕ್ಕೂ ಅವಕಾಶ ನೀಡದೆ ಕರ್ತವ್ಯ ಪಾಲಿಸುತ್ತಿದ್ದ ಡಾ. ವೀಣಾ ಕುಮಾರಿ ಅವರನ್ನು ಬದಲಾಯಿಸಿರುವ ಸರಕಾರದ ಕ್ರಮ ಅಸ್ವೀಕಾರಾರ್ಹ ಮತ್ತು ಶಂಕಾಸ್ಪದ ನಿರ್ಧಾರವಾಗಿದೆ.
ಸೇವಾ ಹಿರಿತನದಲ್ಲೂ ಡಾ. ವೀಣಾಕುಮಾರಿ ಸೀನಿಯರ್ ಆಗಿದ್ದು, ಇದೀಗ ನಿಯುಕ್ತಿಗೊಂಡ ಡಾ. ಅಶೋಕ್ ಜೂನಿಯರ್ ಆಗಿದ್ದಾರೆ. ಎಂಡಿ ಆಗಿರುವ ಡಾ. ವೀಣಾ ಪರಿಶಿಷ್ಟ ಜಾತಿಯವರಾಗಿದ್ದು, ಇವರ ಬದಲಾವಣೆ ಮಹಿಳೆಯರಿಗೆ ಮತ್ತು ದಲಿತ ಸಮುದಾಯಕ್ಕೆ ಕಾಂಗ್ರೆಸ್ ಸರಕಾರ ಮಾಡಿದ ಅನ್ಯಾಯವಾಗಿದೆ.

ಡಾ. ಅಶೋಕ್ ವಿರುದ್ಧ ಹಲವು ದೂರುಗಳಿವೆ. ಮಹಿಳಾ ಸಿಬ್ಬಂದಿಗಳಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಅಮಾನತುಗೊಂಡವರೂ ಆಗಿದ್ದಾರೆ. ಪ್ರಕರಣಗಳ ತನಿಖೆ ಮುಕ್ತಾಯಗೊಳ್ಳುವ ಮೊದಲೇ ಜಿಲ್ಲಾ ಸರ್ಜನ್ ಆಗಿ ನಿಯುಕ್ತಿ ಮಾಡಿರುವುದು ಸರಿಯಾದ ಕ್ರಮವಲ್ಲ. ಮೂರು ತಿಂಗಳ ಹಿಂದೆಯಷ್ಟೇ ಹೆಬ್ರಿಗೆ ವರ್ಗಾವಣೆಯಾಗಿದ್ದ ಡಾ. ಅಶೋಕ್ ರನ್ನು ಇದೀಗ ಇಷ್ಟು ಅವಸರವಾಗಿ ಚುನಾವಣೆಯ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಆಗಿ ನಿಯುಕ್ತಿಗೊಳಿದ್ದು ಖಂಡನೀಯ.
ಡಾ. ಅಶೋಕ್ ರನ್ನು ನೇಮಕ ಮಾಡಿರುವುದು ಅಧಿಕಾರ ದುರುಪಯೋಗ ಮಾಡಲಿಕ್ಕಾಗಿಯೇ ಎಂಬ ಅನುಮಾನ ಸಾರ್ವಜನಿಕರಾದ ನಮಗೆ ಉಂಟಾಗಿದೆ. ಚುನಾಣಾ ಆಯೋಗ ಈ ವಿಷಯದಲ್ಲಿ ಕೂಡಲೇ ಮಧ್ಯಪ್ರವೇಶಿಸುವ ಮೂಲಕ ರಾಜ್ಯ ಸರಕಾರ ಮಾಡಿದ ನೇಮಕವನ್ನು ಹಿಂತೆಗೆದುಕೊಂಡು ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವಂತೆ ಮಾಡಬೇಕಾಗಿದೆ ಎಂಬುದು ರಾಜ್ಯ ಚುನಾವಣಾ ಆಯೋಗ, ಜಿಲ್ಲಾ ಚುನಾವಣಾ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ಮುಂದೆ ನಮ್ಮ ಒತ್ತಾಯವಾಗಿದೆ.

~ ಶ್ರೀರಾಮ ದಿವಾಣ, ಉಡುಪಿ
18/03/2024






































