ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಪದ್ಮರಾಜ್ ರಾಮಯ್ಯ ಅವರಿಗೆ ಬಿ ಫಾರಂ ಕೊಡುವುದಾಗಿ ಅಂತಿಮ ತೀರ್ಮಾನವಾಗಿದೆ ಎಂಬುದು ತಿಳಿದು ಬಂದಿದೆ.
ಬಿಜೆಪಿಯವರ ಹೊಸ ಮುಖ ಬೃಜೇಶ್ ಚೌಟರಿಗೆ ಪ್ರತಿಸ್ಪರ್ಧಿಯಾಗಿಸಿ ಕಾಂಗ್ರೆಸ್ ಕೂಡಾ ಹೊಸ ಮುಖವನ್ನೇ ಕಣಕ್ಕಿಳಿಸಿದೆ.ವಕೀಲ ವೃತ್ತಿಯವರಾಗಿರುವ ಪದ್ಮರಾಜ್ ರಾಮಯ್ಯ,ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ ಸಮಿತಿಯಲ್ಲಿ ಪ್ರಧಾನ ಹುದ್ದೆಯನ್ನು ಅಲಂಕರಿಸಿಕೊಂಡವರಾಗಿದ್ದಾರೆ.
ಗುರು ಬೆಳದಿಂಗಳು ಫೌಂಡೇಷನ್ ಸ್ಥಾಪಿಸಿ ಬಡವರು ಅಶಕ್ತರ ಪಾಲಿಗೆ ಆಶ್ರಯ ,ಬೆಳಕು ನೀಡುವ ಕೆಲಸ ಕಾರ್ಯ ಮಾಡುತ್ತ ಬಂದಿರುತ್ತಾರೆ.ಸಾವಿರಾರು ಕುಟುಂಬಗಳನ್ನು ಪೋಶಿಸಿರುವ ಗುರು ಬೆಳದಿಂಗಳು ಫೌಂಡೇಷನ್ ತನ್ನ ಉದ್ದೇಶ ಈಡೇರಿಸಿಕೊಂಡು ಬರುವಲ್ಲಿ ಪದ್ಮರಾಜ್ ಅವರ ಪಾತ್ರ ಬಹಳಷ್ಟಿದೆ.
ರಾಜಕೀಯದಲ್ಲಿ ಗುರುತಿಸಿಕೊಂಡದ್ದು ತೀರ ಅಪರೂಪವಾಗಿರುವುದು ಕಾಂಗ್ರೆಸ್ ಮಟ್ಟಿಗೆ ಕೊರತೆಯೆನ್ನಬಹುದಾದರೆ ಬಾಕಿ ಉಳಿದ ವಿಚಾರದಲ್ಲಿ ಪದ್ಮರಾಜ ರಾಮಯ್ಯ ಒಳ್ಳೆಯ ಜನಾಭಿಪ್ರಾಯ ಹೊಂದಿದ್ದಾರೆ.
ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿಯವರ ಪಟ್ಟ ಶಿಷ್ಯ ಅನ್ನುವುದು ಸದ್ಯದ ರಾಜಕೀಯದಲ್ಲಿ ಚಲಾವಣೆಯಾಗದ ಕಾರ್ಡ್.
ಕಾಂಗ್ರೆಸ್ ಪಕ್ಷವು ತಳ ಮಟ್ಟದಲ್ಲಿ ಕಾರ್ಯಕರ್ತರನ್ನು ಬೆಳೆಯಲು ಅನುವು ಮಾಡದೆ,ಯುವಕರನ್ನು ಬೆಂಬಲಿಸದೆ ಬರೇ ಹತ್ತಾರು ನಾಯಕರುಗಳ ಹಣೆಪಟ್ಟಿಯಲ್ಲಷ್ಟೆ ತನ್ನ ಅಸ್ಥಿತ್ವ ತೋರಿಸಿಕೊಂಡು ಬರುತ್ತಿದ್ದುದರಿಂದ ಬಿಜೆಪಿ ಯಲ್ಲಿ ಸಾಮಾನ್ಯ ರೈತ ಸ್ಪರ್ಧಿಸಿದರೂ ಎದುರಾಳಿಯಾಗಲು ಕಾಂಗ್ರೆಸ್ಸಿನವರು ಸಿದ್ಧರಾಗುವುದಿಲ್ಲದ ದಾರುಣ ಸ್ಥಿತಿ ನಿರ್ಮಾಣವಾಯಿತು.
ಬಿಲ್ಲವ ಜಾತಿಯ ಕಾರ್ಡ್ ಬಳಸಿ ಗೆಲುವಿನ ನಿರೀಕ್ಷೆ ಹೊತ್ತುಕೊಳ್ಳುವುದು ತಪ್ಪೇನಲ್ಲ. ರಾಜ್ಯದಲ್ಲಿ ರಾಜಕೀಯ ಕುಣಿದಾಡುವುದೇ ಜಾತಿ ಮತ ಧರ್ಮದ ಪದಗಳಿಂದ.ದ. ಕ. ಜಿಲ್ಲೆಯಂತೂ ಬಿಲ್ಲವರ ತೀರ್ಮಾನದಿಂದ.
ಕಳೆದ ಬಾರಿ ಉಮಾಮಾಥ ಕೋಟ್ಯಾನ್ ಅವರು ಕಾಂಗ್ರೆಸ್ ಟಿಕೇಟಲ್ಲಿ ಸ್ಪರ್ಧಿಸಿದ್ದರೆ ಅವರು ಇಡಗಂಟು ಕಳೆದುಕೊಳ್ಳುತ್ತಿದ್ದರೇನೊ. ಯಾಕೆಂದರೆ ಅವರೇ ಮೊನ್ನೆ ಹೇಳಿದಂತೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಲ್ಲವರ ಮತಗಳು ಸಾಕಷ್ಟಿದ್ದೂ ರಕ್ಷಿತ್ ಶಿವರಾಮ್ ಸೋಲಬಾರದಿತ್ತು ಎಂದು.
ಸಧ್ಯದ ಮತದಾನ ಪ್ರಕ್ರಿಯೆಯಲ್ಲಿ ಕರಾವಳಿಯ ಜಿಲ್ಲೆಯಲ್ಲಿ ಮುಸ್ಲಿಮರದ್ದು ಮತ್ತು ಕ್ರೈಸ್ತರದ್ದು ಮಾತ್ರ ಕಾಂಗ್ರೆಸ್ಸಿಗೆ ನಿರ್ಣಾಯಕ ಮತವೇ ಹೊರತು ಚುನಾವಣೆಗಳಲ್ಲಿ ಅಭ್ಯರ್ಥಿಯ ಪತ್ನಿ,ಭಾವ ಮೈದುನರೂ ಕಾಂಗ್ರೆಸ್ಸಿನ ಮತದಾರರಾಗಿದ್ದಾರೆ ಎಂದು ನಿಖರವಾಗಿ ಹೇಳುವ ವಾತಾವರಣ ಖಂಡಿತ ಇಲ್ಲವೇ ಇಲ್ಲ.
ಬಿಲ್ಲವರು ಮನಸ್ಸು ಮಾಡಿದರೆ ಬೃಜೇಶ್ ಚೌಟ ಅವರು ಸೋಲಬಹುದೇನೊ ಹೊರತು ಅದು ಸಾಧ್ಯವಾಗುವುದಿಲ್ಲವಾದರೆ ಇಬ್ಬರ ಹೋರಾಟವು ಕೂಡಾ ಟೈಟ್ ಫೈಟ್ ಎಂಬ ಶೀರ್ಷಿಕೆಗೂ ಬರುವುದಕ್ಕೂ ಅವಕಾಶವಿಲ್ಲವಾಗುತ್ತದೆ.
ಹಾಗಂತ ಬಂಟ ಸಮುದಾಯದವರ ಹೆಚ್ಚು ಶೇಕಡ ಮತಗಳು ಕಾಂಗ್ರೆಸ್ಸಿನಲ್ಲಿ ಈಗಲೂ ಇದೆ. ಅದಕ್ಕೆ ಬೆಳ್ತಂಗಡಿ ಕ್ಷೇತ್ರದಲ್ಲಿ ಅನೇಕ ಬಂಟ ಕುಟುಂಬಗಳ ಮತಗಳು ಇನ್ನೂ ಕಾಂಗ್ರೆಸ್ ಪರವಾಗಿಯೇ ಇದೆ. ಪುತ್ತೂರು,ಸುಳ್ಯ ಕಡೆಯಲ್ಲೂ ಬಂಟರು ಈಗಲೂ ಕಾಂಗ್ರೆಸಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ.
ಕರಾವಳಿಯ ಮಂಗಳೂರು ಜಿಲ್ಲೆಯಲ್ಲಿ ಸಂಸತ್ ಕ್ಷೇತ್ರದಲ್ಲಿ ಬಿಲ್ಲವರ ಮತ ಬಿಜೆಪಿಗೆ ಪರಿವರ್ತನೆಯಾಗಲು ಕಾರಣವೇ ಕಾಂಗ್ರೆಸ್ ಪಕ್ಷ. ಬಿಲ್ಲವರನ್ನೇ ಓಲೈಸಿಕೊಂಡು ಬಲಾಢ್ಯವಾಗಿ ಬೆಳೆದಿದ್ದ ಕಾಂಗ್ರೆಸ್ಸನ್ನು ಬಿಲ್ಲವರಿಂದಲೇ ಬದಿಗೆ ಸರಿಸಲು ಬಿಜೆಪಿ ಬಳಸಿದ ತಂತ್ರೋಪಾಯಗಳು ಬಿಲ್ಲವ ಯುವಕರಿಗೆ ಕೇಸರಿ ಶಾಲು ಕೊಟ್ಚು ಅಧಿಕಾರವಿಲ್ಲದ ಕೃತಕ ಹುದ್ದೆಯನ್ನು ಕೊಡುವುದಕ್ಕೆ ಶುರುಮಾಡಿದ್ದು !
ಮನೆಗೊಬ್ಬನಂತೆ ಬಿಜೆಪಿಯ ಮುಖಂಡ,ಅಂಗಳಕ್ಕೊಬ್ಬ ಅಧ್ಯಕ್ಷ, ಬಾವಿ ದಂಡೆಗೊಬ್ಬ ನಾಯಕ,ಗದ್ದೆಗೊಬ್ಬ ಕಾರ್ಯದರ್ಶಿ ಎಲ್ಲವುಗಳ ಹೆಸರಿನಲ್ಲಿ ಸಮಿತಿಗಳನ್ನು ರಚಿಸುತ್ತ ಇಡೀ ಕುಟುಂಬ ಇಡೀ ಗ್ರಾಮವನ್ನೆ ಬಿಜೆಪಿಯ ಭದ್ರ ಕೋಟೆಯನ್ನಾಗಿಸಿದ ಬಿಜೆಪಿಯು ಮತಕ್ಕಾಗಿ ಪಾಳೆಯಗಾರಿಕೆ ಆರಂಭಿಸಿತು. ಆ ಎಲ್ಲ ಸಮಿತಿಯಲ್ಲಿ ಬಹು ಸಂಖ್ಯಾಕರಾದ ಬಿಲ್ಲವರನ್ನೇ ಪ್ರಮುಖರನ್ನಾಗಿಸುತ್ತ ಪಕ್ಷದ ಪೋಷಕ ಸಂಘಟನೆಗಳನ್ನು ಬೆಳೆಸಿತು. ಕಾಂಗ್ರೆಸ್ ಅದೆಲ್ಲವನ್ನೂ ಕಣ್ಣರಳಿಸಿ ನೋಡುತ್ತ ಧರ್ಮರಾಜಕಾರಣ ಎಂದು ಹೇಳುತ್ತಲೇ ಮೂಲೆಗುಂಪಾಯಿತು.
ಪದ್ಮರಾಜ್ ರಾಮಯ್ಯ ಅವರು ಈ ಬಾರಿ ಗೆದ್ದ ಪಕ್ಷದಲ್ಲಿ ಜಿಲ್ಲೆಯ ರಾಜಕೀಯ ವಿದ್ಯಮಾನವೇ ಮುಂದಿನ ದಿನಗಳಲ್ಲಿ ಹೊಸ ತಿರುವು ಪಡೆಯುವುದರಲ್ಲಿ ಎರಡು ಮಾತಿಲ್ಲ.
ಪದ್ಮರಾಜ್ ರಾಮಯ್ಯ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು,ಶುಭಾಶಯಗಳು.
-ವಿ. ಕೆ. ವಾಲ್ಪಾಡಿ
ಚಿತ್ರ:ಪದ್ಮರಾಜ್ ರಾಮಯ್ಯ






































