ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ತಿಂಗಳೆಯಲ್ಲಿನ ಈ ಬಾರಿಯ 63ನೇ ವರ್ಷದ ಧರ್ಮ ಕಲೆ ಸಾಹಿತ್ಯ ಸಮ್ಮೇಳನದಲ್ಲಿ ನಾನೂ ಭಾಗವಹಿಸಿದ್ದೆ.
ಹೆಬ್ರಿಯ ಆಗುಂಬೆ ರಸ್ತೆಯಲ್ಲಿ ಸಿಗುವ ನೆಲ್ಲಿಕಟ್ಚೆ ನಿಲ್ದಾಣದಲ್ಲಿ ಬಸ್ಸಿಳಿದು ಪಕ್ಕದಲ್ಲಿಯೆ ಇರುವ ಕೂಡ್ಲು ತೀರ್ಥ ಫಾಲ್ಸ್ ರಸ್ತೆಯಲ್ಲಿ ಮುಂದುವರಿದರೆ ಸುಮಾರು ಐದು ಕಿ. ಮೀ. ದೂರದಲ್ಲಿ ತಿಂಗಳೆ ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮದ ಸ್ಥಳ ಸಿಗುತ್ತದೆ.ಅದು ಬರೇ ಸ್ಥಳವಲ್ಲ ಕಾರಣಿಕ ದೈವಗಳು ಹಾಗೂ ಕೋಟಿ ಚೆನ್ನಯರ ಸಾನಿಧ್ಯ ಬೀಡು.

ಅಲ್ಲಿ ಕೋಟಿ ಚೆನ್ನಯರ ಗರಡಿಗೆ ಸೇರಿಸಿದಂತೆ ಉದ್ದನೆಯ ಸಭಾ ಮಂದಿರವನ್ನು ನಿರ್ಮಾಣ ಮಾಡಲಾಗಿದ್ದು,ಸಭಾ ಕಾರ್ಯಕ್ರಮಕ್ಕೆ ಸಾಕಷ್ಟು ಉದ್ದಗಲವಿದ್ದು ಸುಮಾರು ಒಂದು ಸಾವಿರ ಹತ್ತಿರದಷ್ಟು ಮಂದಿ ಆಸೀನರಾಗಲು ಕುರ್ಚಿಗಳಿಗೆ ಅವಕಾಶವಿದೆ.
ಆಳ್ವಾಸ್ ಸಾಂಸ್ಕೃತಿಕ ತಂಡದವರು ಗೆಜ್ಜೆ ಕಟ್ಟಿ ಕುಣಿಯುವುದಕ್ಕೆ ಸಾಕಾಗುವಷ್ಟಗಲದ ವೇದಿಕೆಯೊಂದು ಇರುವುದಾದರೆ ಸಭಾಭವನದ ಅಳತೆಯನ್ನು ಹೇಗೂ ಊಹಿಸಿಕೊಳ್ಳಬಹುದು.

ಕಳೆದ ಅರುವತ್ತೆರಡು ವರ್ಷಗಳಿಂದ ಲಾಗಾಯಿತು ತಿಂಗಳೆ ರವೀಂದ್ರ ಹೆಗ್ಗಡೆ ನಡೆಸಿಕೊಂಡು ಬಂದಿರುವ ಈ ಒಂದು ಧರ್ಮ ,ಕಲೆ,ಸಾಹಿತ್ಯ ಸಮಾರಂಭವು ಈ ಬಾರಿ ಅರುವತ್ತ ಮೂರನೆಯ ವರ್ಷದ್ದು.ಹಿರಿಯರು ಮಾಡಿಕೊಂಡಿದ್ದ ಪ್ರಾರಂಭಿಸಿದ್ದ ಸಂಸ್ಕೃತಿ. ಅಂದು ಕುಗ್ರಾಮವಾಗಿದ್ದ ತಿಂಗಳೆಯ ಜನರಿಗೆ ಸಾಂಸ್ಕೃತಿಕ ಸವಿರುಚಿಯನ್ನು ತಿಂಗಳೆ ರವೀಂದ್ರ ಹೆಗ್ಗಡೆಯವರು ಬಡಿಸುತ್ತಿದ್ದುದು ಇದೀಗ ,ಆಧುನಿಕತೆ ವಿಸ್ತರಿಸಿಕೊಂಡು ಹಳ್ಳಿಯ ಮಿನುಗನ್ನು ಅದು ಮುಕ್ಕುತ್ತಿದ್ದರೂ ಬಾಯೊಳಗೆ ಸಿಕ್ಕದೆ ಪರಂಪರೆಯ ಧರ್ಮ ,ಕಲೆ,ಸಾಹಿತ್ಯ ಸಂಸ್ಕೃತಿ ತನ್ನ ಅಟ್ಚಹಾಸ ಬೀರತ್ತಿರಬೇಕೆಂದುಕೊಳ್ಳುವ ಹಾಗೆ ತ್ರಿವಿಕ್ರಮಾರ್ಜುನ ಹೆಗ್ಡೆಯವರು ಹೊಸ ಹೊಸ ತಂಡಗಳು,ವ್ಯಕ್ತಿ ,ಸಾಹಿತಿಗಳನ್ನು ಆರಿಸಿ,ಆಮಂತ್ರಿಸಿ ಅದು ಪಳೆಯುಳಿಕೆಯಂತಾಗಿ ಕಾಣದೆ ವರುಷಗೊಬ್ಬಳು ಮಲೆನಾಡಿನ ಮದುಮಗಳಾಗಿ ಶೋಭಾಯಮಾನವಾಗಿ ಕಾಣುವಂತೆ ಸಭಾ ಕಾರ್ಯಕ್ರಮವನ್ನು ಚೆಂದ ಮಾಡುತ್ತ ಬರುತ್ತಿದ್ದಾರೆ.

ಅಪ್ಪನ ಸಾಂಸ್ಕೃತಿಕ ಆಸಕ್ತಿ ಹಾಗೂ ಅಭಿರುಚಿಯನ್ನು ಮಗ ಮೆಲ್ಲಬೇಕೆಂದೇನಿಲ್ಲ.ಹಾಗೇನಾದರೂ ಆಗುವುದಾದರೆ ಅದು ಮೆಲ್ಲುವುದಲ್ಲ, ಧಮನಿಗಳಲ್ಲಿ ಹರಿಯುತ್ತಿರುವ ಸಾಂಸ್ಕೃತಿಕ ಪರಂಪರೆಯ ರಕ್ತವೆನ್ನಬೇಕು.ತಿಂಗಳೆ ವಿಕ್ರಮಾರ್ಜುನ ಹೆಗ್ಡೆಯವರು ಆ ಧರ್ಮ ಕಲೆ ಸಾಹಿತ್ಯ ಸಂಗಮ ಕಾರ್ಯಕ್ರಮವನ್ನು ಈವರೆಗೂ,ಇನ್ನು ಮುಂದೆಗೂ ಮುಂದುವರಿಸಿಕೊಂಡು ಬಂದಿರುವುದರಲ್ಲಿ ಆ ಗ್ರಾಮದ ನೆಲೆವೀಡಿನ ಶುದ್ಧ ವಾತಾವರಣ ಹಾಗೂ ಎಲ್ಲ ಜನರ ಆಶೋತ್ತರಗಳಿದೆ,ಆಸೆ,ಅಭಿಲಾಷೆಯಿದೆ,ದೈವ ದೇವರುಗಳ ಶಾಶ್ವತ ಸಂಕಲ್ಪವುದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬಹುದು.

ದಶಕಗಳ ಹಿಂದೆ ತಿಂಗಳೆಗೆ ಹೋಗುವುದೆಂದರೆ ಕೋವಿ ,ಪಗರಿ ಹಿಡಿದುಕೊಂಡೇ ಹೋಗಬೇಕಾಗಿತ್ತು.ಅಂಥದ್ದಾದ ಸರಿಗಟ್ಟಿನ ರಸ್ತೆಯಿಲ್ಲದ ಕಾಡು.ಮುಂದೆ ಹತ್ತು ಕಿಲೋ ಮೀಟರ್ ನಡೆದರೆ ಕೂಡ್ಲು ತೀರ್ಥ. ಈ ಹಿಂದೆ ನಾರಾಯಣ ಮೂರ್ತಿಯವರು ಕುಂದಾಪುರ ಡಿ ಎಫ್ ಒ ಆಗಿದ್ದಾಗ ಅವರ ಜೊತೆ ಕೂಡ್ಲು ತೀರ್ಥಕ್ಕೆ ಹೋಗಿದ್ದೆ.ನಡೆದೇ ಹೋಗಿದ್ದು! ಅಲ್ಲಿ ಅಂಗಿ ಪ್ಯಾಂಟು ಒದ್ದೆ ಮಾಡಿಕೊಂಡದ್ದು ಮುಖ್ಯ ರಸ್ತೆಗೆ ಬರುವಷ್ಟರಲ್ಲಿ ಒಣಗಿ ಖಡಕ್ಕಾಗಿತ್ತು.
ಈಗ ವಾಹನಗಳ ಓಡಾಟಕ್ಕೆ ಅನುಕೂಲಕರ ರಸ್ತೆಯಿದೆ. ಸರಕಾರಿ ಬಸ್ಸು ಕೂಡಾ ಓಡಾಡುತ್ತಿದೆ.

ನೆಲ್ಲಿಕಟ್ಟೆಯಿಂದ ಈ ತಿಂಗಳೆ ಅಥವಾ ಕೂಡ್ಲು ತೀರ್ಥ ರಸ್ತೆಯಲ್ಲಿ ಹೋಗುತ್ತಿರುವಾಗ ಒಂದು ಕಿ ಮೀ ಸಾಗಿದಾಗ ದೇವೀ ದೇವಸ್ಥಾನವೊಂದಿದೆ.ಅದನ್ನು ದಾಟಿ ಮುಂದೆ ನಾಲ್ಕು ಕಿ ಮೀ ಕ್ರಮಿಸಿದರೆ ತಿಂಗಳೆ ಹೆಗ್ಡೆ ಮನೆತನದವರ ಯಜಮಾನಿಕೆಯ ಊರಿನ ದೈವ ಮತ್ತು ಕೋಟಿ ಚೆನ್ನಯ ಗರಡಿ ಸಿಗುತ್ತದೆ.ಅದೇ ಜಾಗದಲ್ಲಿ ಈ ಸಾಂಸ್ಕೃತಿಕ ವೈಭವ.ಮತ್ತೆ ತುಂಬಾ ಮುಂದೆ ಹೋದಾಗ ಆಂಜನೇಯ ಸ್ವಾಮಿ ದೇವಸ್ಥಾನವೂ ಸಿಗುವುದು.
ರಸ್ತೆ ಇಕ್ಕೆಲದಲ್ಲಿ ಬಾನೆತ್ತರಕ್ಕೆ ಬೆಳೆದು ನಿಂತ ರಕ್ಷಿತಾರಣ್ಯದ ಮರಗಳು.ಮಲೆ ಪರ್ವತಗಳು ರಮಣೀಯವಾಗಿವೆ.



ಸಮಾರಂಭದ ಪ್ರಾರಂಭವನ್ನು ಸಾಂಸ್ಕೃತಿಕ ನೃತ್ಯ,ರೂಪಕಗಳ ಪ್ರದರ್ಶನದಲ್ಲೆ ಮಾಡಿರುವುದು ಖುಷಿಯಾಯಿತು.ಅಧ್ಯಕ್ಷರು,ಅತಿಥಿಗಳ,ಆಹ್ವಾನಿತರ ಬರುವಿಕೆಯನ್ನು ಕಾಯುವುದಕ್ಕಲ್ಲ. ಅವರೆಲ್ಲರನ್ನೂ ವೇದಿಕೆಯ ಮುಂದೆ ಕೂರಿಸಿಯೇ ಸಾಂಸ್ಕೃತಿಕ ವೈಭವವನ್ನು ವಿಸ್ತಾರಪಡಿಸಲಾಯಿತು.
ನಂತರದ ಕಾರ್ಯಕ್ರಮದಲ್ಲಿ ಡಾ.ಎಮ್. ಮೋಹನ ಆಳ್ವರ ಅಧ್ಯಕ್ಷತೆ. ಚೆನ್ನಮಲ್ಲಿಕಾರ್ಜುನ ಬಗ್ಯೆ ಮಾತಾಡಲಿಕ್ಕಿದ್ದ ವೀಣಾ ಬನ್ನಂಜೆ, ಶಿವೋಪಾಸನೆ ಬಗ್ಗೆ ಮಾತಾಡುವುದ್ದಕ್ಕೆ ಬಂದ್ದಿದ್ದ ಎನ್. ಆರ್. ದಾಮೋದರ ಶರ್ಮ, ತಿಂಗಳೆ ಪ್ರತಿಷ್ಠಾನ ಗೌರವ ಸನ್ಮಾನ ಪಡೆಯಲಿಕ್ಕಿದ್ದ ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ(91) ಮತ್ತು ಸ್ವ ರಚಿತ ಕವನ ವಾಚಿಸುವುದಕ್ಕಾಗಿ ಆಮಂತ್ರಿತರಾಗಿದ್ದ ಜ್ಯೋತಿ ಮಹಾಲೆ,ಅಮೃತ ಕಡಿಯಾಳಿ,ಪ್ರಜ್ಞಾ ಮಾರ್ಪಳ್ಳಿ,ರೇವತಿ ನಾಡಿಗೇರ ಮತ್ತು ರಮ್ಯ ಸೀತಾನದಿ ಅವರು ವೇದಿಕೆಯಲ್ಲಿ ಸಭಾಸೀನರಾದರು.
ಕವನಗಳ ವಿಶೇಷ ಏನೆಂದರೆ ರಚಿಸಿರುವ ಕವನ ಅದು ಶಿವನ ಬಗ್ಯೆಯೇ ಬರೆದಿರಬೇಕು.ಎಲ್ಲ ಕವಿಯಿತ್ರಿಯವರು ತಾವು ರಚಿಸಿದ್ದ ಒಂದೊಂದು ಕವನವನ್ನು ವಾಚಿಸಿ ಎಲ್ಲರ ಮೆಚ್ಚುಗೆ ಗಳಿಸಿದರು.
ಉಪ್ಪಳ ಮುದ್ರಾಡಿಯ ಮಂಜುನಾಥ ಅಡಿಗರಿಗೆ ಕೊಡಮಾಡಲು ತೀರ್ಮಾನಿಸಿದ್ದ ಸೇವಾಭೂಷಣ ಸನ್ಮಾನ ಪ್ರಶಸ್ತಿಯನ್ನು ಡಾ.ಎಮ್. ಮೋಹನ ಆಳ್ವ ಅವರು ಅಡಿಗರಿಗೆ ಪ್ರದಾನಗೈದರು.
ತನ್ನ ಅದ್ಭುತ ಶೈಲಿಯ ಮಾತುಗಾರಿಕೆಯಿಂದ ಶೋತೃಗಳ ಮನಗೆಲ್ಲಿಸಿಕೊಳ್ಳುವ ಎನ್. ಆರ್. ದಾಮೋದರ ಶರ್ಮ ಅವರು ಶಿವೋಪಾಸನೆಯ ಕುರಿತಾಗಿ ಸೀಮಿತ ಅವಧಿಯೊಳಗೆೇ ತನ್ನಲ್ಲಿನ ಸೀಮಾತೀತ ಜ್ಞಾನವನ್ನು ಬಿಚ್ಚಿಟ್ಟು ಶಿವನ ಮಹಾತ್ಮೆ ಮತ್ತು ಭಕ್ತಿಯ ಕಾರಣಗಳ ಸುಧೆಯನ್ನು ಸಭೆಗೆ ಎರೆದರು.
ಬನ್ನಂಜೆ ಗೋವಿಂದಾಚಾರ್ಯರದ್ದೇ ಮಾತಿನ ಧ್ವನಿ,ಅವರದ್ದೇ ಕ್ರಮದಲ್ಲಿ ಮಾತು ಮಾತನ್ನೂ ತನ್ನ ಭಾವನೆಗಳಲ್ಲಿ ,ಕೈಗಳಲ್ಲಿ ಪ್ರಕಟಪಡಿಸುವುದು,ಅಷ್ಟೇ ವಿಸ್ತಾರವಾದ ಓದು,ಆಳವಾದ ಅಧ್ಯಯನ ಮಾಡಿರುವ ,ವಿದ್ವಾಂಸರಾಗಿರುವ ವೀಣಾ ಬನ್ನಂಜೆಯವರು ಅಕ್ಕ ಮಹಾದೇವಿಯ ಶಿವನ ಭಕ್ತಿ ಮತ್ತು ಅನುಸಂಧಾನವನ್ನು ಬಹಳ ಸ್ಪಷ್ಟವಾಗಿ ಹೇಳುತ್ತ ಬ್ರಹ್ಮ ವಿಷ್ಣು ಮಹೇಶ್ವರ ತ್ರಿಮೂರ್ತಿಗಳ ಮೇಲಿನ ಕೆಲವೊಂದು ಕತೆ ಉಪ ಕತೆಗಳನ್ನು ಕಾರಣ ಸಹಿತ ವಿವರಿಸಿ ಅಕ್ಕ ಮಹಾದೇವಿಯ ಶಿವಭಕ್ತಿಯ ಪಾರಮ್ಯವನ್ನು ಸಭಿಕರಿಗೆ ಅರ್ಥೈಸಿಕೊಟ್ಚರು.
ತಿಂಗಳೆ ಪ್ರಶಸ್ತಿ ಸನ್ಮಾನ ಸ್ವೀಕರಿಸಿದ ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆಯವರು ತಲೆಮಾರಿನ ಜೀವನ ಸಂಸ್ಕೃತಿ ಮತ್ತು ಈಗಿನ ಜನಾಂಗದ ನಡುವಿನ ಅಜಗಜಾಂತರ ವ್ಯತ್ಯಾಸಗಳನ್ನು ವಿವರವಾಗಿ ಹೇಳುತ್ತ,ತನ್ನ ರಾಜಕೀಯ ನಡವಳಿಕೆಗಳನ್ನು ಸ್ಮರಿಸಿಕೊಂಡರು.
ಪ್ರಾರಂಭದಲ್ಲಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆಯವರು ಸ್ವಾಗತ ಭಾಷಣ ಮಾಡಿದರು.ಶ್ರೀಮತಿ ಅಮಿತಾಂಜಲಿ ಕಿರಣ್ ಅವರು ಕಾರ್ಯಕ್ರಮ ನಿರೂಪಿಸಿದರು.
-ವಿ. ಕೆ. ವಾಲ್ಪಾಡಿ






































