ಕಾರ್ಕಳ : ರಾಷ್ಟ್ರೀಯ ಹೆದ್ದಾರಿಯ ಪಡುಬಿದ್ರೆಯಲ್ಲಿ ಬಸ್ ಪ್ರಯಾಣಿಕರಿಗೆ ಸೂಕ್ತವಾದ ಭದ್ರತೆಯೇ ಇಲ್ಲವಂದರೆ ನಂಬಲೇಬೇಕು .ಕಾರಣವೆಂದರೆ ನಮ್ಮ ಜನಪ್ರತಿನಿಧಿಗಳು ಮತ್ತು ಸರಕಾರ ಜನರ ಬಗ್ಯೆ ಯಾವೊಂದು ಕಾಳಜಿಯನ್ನೂ ಇಟ್ಚುಕೊಂಡಿಲ್ಲ.
ಕಾರ್ಕಳ,ಉಡುಪಿ ಕಡೆಯಿಂದ ಮಂಗಳೂರಿಗೆ ಹೋಗುವ ಬಸ್ಸುಗಳು ಪಡುಬಿದ್ರೆಯಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುವುದು ಬಸ್ಸಿಂದಿಳಿದವರಲ್ಲಿ ಯಾರಾದರೂ ಇನ್ನೊಂದು ವಾಹನದ ಚಕ್ರಗಳಡಿಗೆ ಬಿದ್ದು ಸಾಯಲೇಬೇಕಾದಲ್ಲಿ!
ಪ್ರಸಿದ್ಧ ವಿಜಯ ಭವನಕ್ಕಿಂತ ನೂರು ಅಡಿಗಳಷ್ಟು ಮುಂದಕ್ಕೆ ಒಂದು ಜಾಗದಲ್ಲಿ ಬಸ್ಸು ನಿಲ್ಲುವುದು.ಬಹುಶಃ ಆ ಜಾಗವನ್ನು ಬಸ್ ಚಾಲಕರೇ ಖಾಯಂ ಮಾಡಿಕೊಂಡಿರಬೇಕು.ಬೇರೆ ಎಲ್ಲಿ ನಿಲ್ಲಿಸುವುದಕ್ಕೂ ಆಗದು,ಡಿವೈಡರ್ ಸಮಸ್ಯೆ.
ಬಸ್ಸಿಂದಿಳಿದವನು ಕಾಲಿಡಬೇಕು ಇನ್ನೊಂದು ಸರ್ವೀಸ್ ರಸ್ತೆಗೇ!ಅದರಲ್ಲಿ ಎಲ್ಲ ಕಿರು ಗಾತ್ರದ ವಾಹನಗಳು ಓಡಾಡುತ್ತವೆ.ವಾಹನ ಲಘುವಾದರೇನಂತೆ ಢಿಕ್ಕಿಯ ಹೊಡೆದರೆ ಸಾವು ,ನೋವಿಗೆ ರಿಯಾಯ್ತಿ ಇಲ್ಲ ತಾನೆ?
ಹೆದ್ದಾರಿ ನಿಗಮದವರಿಗೆ ರಸ್ತೆ ನಿರ್ಮಾಣ ಯೋಜನೆಯೇ ಗೊತ್ತಿಲ್ಲವೆಂದೇ ಅಥವಾ ರಸ್ತೆಯೊಂದಿದ್ದರೆ ಸಾಕೆಂದೇ? ಬಸ್ಸುಗಳು ನಿಲ್ಲುವುದಕ್ಕೆಂದು ಜಾಗವನ್ನೇ ಮಾಡಿಲ್ಲ, ಬಸ್ ಪ್ರಯಾಣಿಕರಿಗೆ ತಂಗುದಾಣವೇ ಇಲ್ಲ. ಹಿರಿಯರು,ಮಕ್ಕಳು ಈ ರಸ್ತೆ ತುಂಬಾ ಕಕ್ಕಾಬಿಕ್ಕಿಯಾಗಿ ಅಡ್ಡಾಡುತ್ತಲೇ ರಸ್ತೆ ಅಂಚಿಗೆ ತಲುಪಬೇಕು.
ಈ ಹೆೆದ್ದಾರಿಯ ಇಕ್ಕೆಲಗಳಲ್ಲೂ ಒಂದೇ ತೆರನಾದ ಸಮಸ್ಯೆ. ಪಡುಬಿದ್ರಿ -ಕಾರ್ಕಳ ರಸ್ತೆ ವೃತ್ತವಿದೆ ಅಲ್ಲಿ ಒಬ್ಬ ನರಪಿಳ್ಳೆ ಕೂಡ ರಸ್ತೆ ದಾಟುವುದಕ್ಕೆ ಅಸಾಧ್ಯ.ಆ ಜಂಕ್ಷನ್ ಕಂಡಾಗ ಅಲ್ಲೇನೋ ಅವಘಡ ಸಂಭವಿಸಿರಬಹುದು ಅನಿಸುತ್ತದೆ, ಅಷ್ಟು ಸಂಖ್ಯೆಯಲ್ಲಿ ವಾಹನಗಳು ನಿಂತು ಹರಿದಾಡಿಕೊಳ್ಳುತ್ತಿರುತ್ತವೆ. ಅತ್ತಿಂದ ಮತ್ತು ಇತ್ತ ಮೂಲ್ಕಿ ಕಡೆಯಿಂದ ಬರುವ ವಾಹನಗಳು ಒಂದಲ್ಲ ಒಂದು ಕಾರಣಗಳಿಗಾಗಿ ತಾಗುತ್ತ,ಉಜ್ಜಿಕೊಳ್ಳುತ್ತ ಸಮಸ್ಯೆ ಸೃಷ್ಟಿಸಿಕೊಳ್ಳುತ್ತಲೆ ಇದೆ.
ಅವೈಜ್ಞಾನಿಕವಾಗಿ ರಸ್ತೆ ಸುಂಕ ವಸೂಲು ಮಾಡಿಕೊಂಡು ನಾಗರಿಕರನ್ನು ವಂಚಿಸುವ ಹೆದ್ದಾರಿ ಇಲಾಖೆಗೆ ರಸ್ತೆ ಅಗೆಯುವಾಗ ಮಾತ್ರವೇ ಕಾಳಜಿಯಿದ್ದು ನಂತರ ಎಲ್ಲ ನಿಯಮಗಳನ್ನೂ ಮರೆತುಬಿಡುವುದೇ ಅಥವಾ ನಮ್ಮ ಜನಪ್ರತಿನಿಧಿಗಳೇ ಹಾಗೆ ಮಾಡಿಸುತ್ತಾರೆ ಎಂದು ತಪ್ಪು ತಿಳಿದುಕೊಳ್ಳಬೇಕೆ?
–ವಿ. ಕೆ. ವಾಲ್ಪಾಡಿ
ಅದೇ ಬಸ್ಸಿನಿಂದ ನನ್ನ ಹಿಂದೆ ಇಳಿದು ಬರುತ್ತಿರುವವರು….







































