ದ. ಕ. ಜಿಲ್ಲೆಯ ರಾಜಕೀಯ ಚರ್ಚೆಯಲ್ಲಿ ಅತ್ಯಂತ ಪ್ರಮುಖವಾಗಿ ಉದ್ಭವಿಸುವ ಪ್ರಶ್ನೆ ಅದು,ಜಿಲ್ಲೆಯ ಕಾಂಗ್ರೆಸ್ ಓಟ್ ಬ್ಯಾಂಕ್ ಸಮುದಾಯವಾಗಿಯೇ ಗುರುತಿಸಿಕೊಂಡು ಬೆಳೆದ ಬಿಲ್ಲವ ಸಮಾಜವು ಸಾಮೂಹಿಕವಾಗಿ ಕಾಂಗ್ರೆಸ್ ಬೆಂಬಲ ಕೈ ಬಿಡಲು ಕಾರಣವೇನು?
ಒಂದು ಅವಧಿಯವರೆಗೆ ಉಭಯ ಜಿಲ್ಲೆಗಳಲ್ಲಿ ಬಿಲ್ಲವ ಶಾಸಕರ ಸಂಖ್ಯೆಯೇ ಹೆಚ್ಚು ಇತ್ತು.ಮತ್ತೊಬ್ಬ ಸೋಲಿಸುವವರೆಗೂ ಅದೇ ವ್ಯಕ್ತಿ ಗೆಲ್ಲುತ್ತಿರುವುದು ಮಾತ್ರವಲ್ಲ ಕಾಂಗ್ರೆಸ್ ಪಕ್ಷ ಬಿ ಫಾರಂ ಕೊಡುವುದು ಕೂಡ. ಕಾಂಗ್ರೆಸ್ ಎಂದರೆ ಬಿಲ್ಲವರು;ಬಿಲ್ಲವರೆಂದರೆ ಕಾಂಗ್ರೆಸ್ ಎಂದೇ ಮಾತಾಗಿತ್ತು.
1977 ರಿಂದ ಲೋಕಸಭೆಗೆ ಆಯ್ಕೆಯಾಗಿ1991 ರಲ್ಲಿ ವಿ ಧನಂಜಯ ಕುಮಾರ್ ಅವರಿಂದ ಸೋಲುಣ್ಣುವ ತನಕವೂ ಮಂಗಳೂರಿನ ಸಂಸದರು ಆ ನಂತರ ಒಂದು ಅವಧಿಗೆ ರಾಜ್ಯ ಸಭಾ ಸದಸ್ಯರೂ ಆಗಿದ್ದ ಕಾಂಗ್ರೆಸ್ ಪಕ್ಷದಲ್ಲಿನ ನಿರ್ಣಾಯಕ ನಾಯಕನಾಗಿದ್ದರು ಬಿ. ಜನಾರ್ದನ ಪೂಜಾರಿಯವರು.
ಅವರು ಪಕ್ಷದಲ್ಲಿ ಯಾರನ್ನೂ ಮುಂದಿನ ಸಂಸದನನ್ನಾಗಿ ಮಾಡಲು ಕ್ಷಣ ಹೊತ್ತೂ ಯೋಚಿಸಿದ್ದೇ ಇಲ್ಲ ಅರ್ಥಾತ್,ಬೇರೆ ಯಾರೂ ನಾಯಕರಾಗಬೇಕು ಎಂದು ವಿಶಾಲ ಭಾವನೆ ರೂಪಿಸಿಕೊಂಡಿರಲಿಲ್ಲ. ಎಲ್ಲವೂ ತನ್ನ ಮೂಗಿನ ನೇರಕ್ಕೆ ಎಂದು ಹಠಮಾರಿ ತೀರ್ಮಾನ ಕೈಗೊಳ್ಳುತ್ತಿದ್ದ ಪೂಜಾರಿಯವರನ್ನು ಇನ್ನೊಂದು ಮಗ್ಗುಲಲ್ಲಿ ಗಮನಿಸಿದರೆ ಅವರು ಅಪ್ಪಟ ಬಿಲ್ಲವ ಪ್ರೇಮಿ ಮಾತ್ರವೇ ಆಗಿದ್ದರು.
ರಾಜಕೀಯವಾಗಲಿ,ಔದ್ಯೋೋಗಿಕವಾಗಲಿ ಬಿಲ್ಲವೇತರರನ್ನು ಬಂಬಲಿಸಿದ್ದೇ ಇಲ್ಲ ಹಾಗಿದ್ದಿದ್ದರೂ ಕಾಟಾಚಾರಕ್ಕೆ ಮಾತ್ರ. ಬಂಟ ಸಮುದಾಯವನ್ನು ಇನ್ನು ಅದರ ನಂತರದ ಕಡಿಮೆ ಸಂಖ್ಯೆಯ ಇತರ ಜಾತಿಯವರನ್ನು ಅವರು ಮೇಲೆತ್ತಲಿಲ್ಲ.ಬಿಲ್ಲವರು ಕೈ ಕೊಟ್ಟಾಗ ಬಾಕಿ ಉಳಿದವರು ಆಧರಿಸಲಿಲ್ಲ.
ಅದೊಮ್ಮೆ ಮಂಗಳೂರಿನ ಸರ್ಕ್ಯೂಟ್ ಹೌಸಲ್ಲಿ ಸಭೆ ಕರೆಯುತ್ತಾರೆ,ಬಿಲ್ಲವ ಮುಖಂಡರು,ಪ್ರಮುಖರಿಗೇ ಮೊದಲ ಸಂದರ್ಶನ ಅವಕಾಶ ಕೊಟ್ಟು ಕಟ್ಟ ಕಡೇಯ ವ್ಯಕ್ತಿಯನ್ನಾಗಿ ಕಾಂಗ್ರೆಸ್ಸಿನ ಹಿರಿಯ ನಾಯಕ ಮಾಜಿ ಸಚಿವ ಬಿ. ಸುಬ್ಬಯ್ಯ ಶೆಟ್ಟರನ್ನು ಒಳಗೆ ಕರೆಯುತ್ತಾರೆ.ಸಮುದಾಯದ ಮೇಲಿದ್ದ ಅತೀವ ದ್ವೇಷವನ್ನು ಅಕ್ಷರಶಃ ತೋರಿಸಿಕೊಂಡಿದ್ದರು ಪೂಜಾರಿಯವರು.
ಮಂಗಳೂರಿನಲ್ಲಿ ಭಾರೀ ದೊಡ್ಡ ಉದ್ಯಮಿ ,ಬಿಲ್ಲವ ಸಮಾಜದ ಸಂಘಟನೆಯ ಅಪ್ರತಿಮ ರೂವಾರಿ ಹಾಗೂ ಮಹಾ ಉದಾರಿಯಾಗಿದ್ದ ,ಆರಾಧ್ಯ ದೇವರಾಗಿದ್ದ ಕಾಂಗ್ರೆಸ್ ವ್ಯಕ್ತಿಯವರೊಂದಿಗೆ ಅದೇ ಸಂದರ್ಭದಲ್ಲಿ ಬಂಟರನ್ನು ಮಟ್ಟ ಹಾಕಬೇಕು ಎಂದು ಹಲ್ಲುಕಟೆದು ಹೇಳಿರುವ ಮಾತು,ಭಾವನೆಗಳೆಲ್ಲವನ್ನೂ ಆ ಬಿಲ್ಲವರ ಮಹಾನಾಯಕ,ಆರಾಧ್ಯ ದೇವರು ತನ್ನ ಆತ್ಯಾತ್ಮೀಯರಾಗಿದ್ದ ಬಿ. ಸುಬ್ಬಯ್ಯ ಶೆಟ್ಟಿಯವರಲ್ಲಿ ತುಂಬಾ ವಿಷಾದಪೂರ್ವಕವಾಗಿ ಹೇಳುತ್ತಾರೆ.
ಅನೇಕ ಸಂದರ್ಭಗಳಲ್ಲಿ ಜೈನ ಸಮುದಾಯವನ್ನೂ ಕಡೆಗಣನೆ ಮಾಡಿರುವುದು ಕೂಡಾ ಬಹಿರಂಗವಾಗಿದೆ.ಆ ಸಮಾಜದ ಮತದಾರ ಸಂಖ್ಯೆ ಅತೀ ವಿರಳವಾಗಿದ್ದರೂ ಬಹುಸಂಖ್ಯೀಯರಲ್ಲಿಯೂ ಪ್ರಭಾವ ಬೀರಿದ ಸಮುದಾಯವಾಗಿದೆ. ಅದೆಲ್ಲವನ್ನು ಬಹಳ ತುಚ್ಯವಾಗಿ ಕಡೆಗಣಿಸುತ್ತಲೇ ರಾಜಕೀಯ ಮಾಡಿದ ಬಿ. ಜನಾರ್ದನ ಪೂಜಾರಿಯವರನ್ನು ಅದೇ ಬಿಲ್ಲವ ಸಮಾಜವೇ ಕಾಂಗ್ರೆಸ್ಸನ್ನು ದೂರವಿಟ್ಟಿದ್ದು ಅಚ್ಚರಿಯ ರಾಜಕೀಯ ತಿರುವಾಗಿ ಬಿಟ್ಟಿತು.
ಬಿ. ಜನಾರ್ದನ ಪೂಜಾರಿಯವರಿಂದ ಬಿಲ್ಲವೇತರರು ಕಡೆಗಣಿಸಲ್ಪಡುವಾಗ ಅವರು ಜನತಾ ಗುಂಪನ್ನು ಬೆಂಬಲಿಸುವುದಕ್ಕೆ ಮುಂದಾಗಿದ್ದರು.ಭೂ ಮಸೂದೆ ಕಾಯ್ದೆಯಲ್ಲಿ ಭೂಮಿ ಪಡೆದುಕೊಂಡವರಲ್ಲಿ ಬಿಲ್ಲವ ಸಮಾಜದವರೇ ಜಾಸ್ತಿಯಾಗಿರುವಾಗ ಸಮಾನವಾದ ತೀರ್ಮಾನ ಸಿಗದೆ ಭೂಮಾಲಿಕರ ಕೈಗೆ ಗೆರಟೆ ಮತ್ತು ಕೋಲು ಕೊಟ್ಟ ಕಾಂಗ್ರೆಸನ್ನು ಇತರ ಸಮುದಾಯ ದೂರದಲ್ಲೇ ಇಟ್ಟಿತು.
ಬಿಲ್ಲವರಿಗೆ ಎಲ್ಲ ಬಗೆಯಲ್ಲಿಯೂ,ಮೂಲದಲ್ಲಿಯೂ ದೇವತಾ ಮನುಷ್ಯನಂತೆಯೆ ಆಗಿದ್ದ ಬಿ. ಜನಾರ್ದನ ಪೂಜಾರಿಯವರನ್ನು ಬಿಲ್ಲವರೇ ಮೂಲೆಗೊತ್ತಿದ್ದಕ್ಕೆ ಪ್ರಮುಖ ಕಾರಣ ಅವರು ಬೇರೆ ಬಿಲ್ಲವ ಯಾರನ್ನೂ ಕೇಂದ್ರದ ರಾಜಕೀಯಕ್ಕೆ ಹೋಗುವಂತೆ ಬೆಳೆಸಿಲ್ಲ,ಬೆಂಬಲಿಸಿಲ್ಲ.ಮುಂದಿನ ಸಂಸದನಾಗುವುದಕ್ಕೆ ಯಾವನೇ ಬಿಲ್ಲವನಿಗೆ ಅವಕಾಶ ಮಾಡಿಕೊಡದವರಾದರು.
ತಾನು 1991ರ ಲೋಕಸಭಾ ಚುನಾವಣೆಗೆ ಬೇರೊಬ್ಬ ನಾಯಕನಿಗೆ ಅವಕಾಶ ಮಾಡಿಕೊಟ್ಟಿದ್ದರೆ ದ. ಕ. ಜಿಲ್ಲೆಯ ಬಿಲ್ಲವ ಸಮುದಾಯಗಳವರು ಬಹುಶಃ ಬಿ ಜೆ ಪಿ ಯತ್ತ ಮುಖ ಮಾಡುತ್ತಿರಲಿಲ್ಲ. ಒಮ್ಮೆ ಸೋತ ನಂತರಲೂ ಮತ್ತೆ ಪುನಃ ಪುನಃ ಸ್ಪರ್ಧಿಸಿದ್ದರಿಂದ ಬಿಲ್ಲವರನ್ನು ಬಿಜೆಪಿಯಿಂದ ವಿಮುಖಗೊಳಿಸಲಿಕ್ಕೆ ಸಾಧ್ಯವಾಗಲಿಲ್ಲ.
ಜನಾರ್ದನ ಪೂಜಾರಿಯವರ ಏಕಚಕ್ರಾಧಿಪತ್ಯವನ್ನು ಖಂಡಿಸಿ ಬಿಲ್ಲವರಿಗೆ ಹೊಸ ರಾಜಕೀಯ ಪಕ್ಷಕ್ಕೆ ಆಹ್ವಾನ ಕೊಡಲು ಈ ಹಠಮಾರಿತನವನ್ನು ಬಿಜೆಪಿ ನಗದೀಕರಿಸಿತು. ಕೇಂದ್ರದಲ್ಲಿ ಇರಬೇಕಾಗಿದ್ದ ಬಿಲ್ಲವ ಸ್ಥಾನಮಾನಕ್ಕೆ ಪೂಜಾರಿಯವರೇ ತಜೆ ಮಾಡಿದರು ಎಂಬೆಲ್ಲ ವಿಚಾರಗಳನ್ನು ಬಿಲ್ಲವ ಯುವಕರಿಗೆ ಮನದಟ್ಟ ಮಾಡುವಲ್ಲಿ ಬಿಜೆಪಿಯು ಯಶಸ್ವೀಯಾಯಿತು.ಕಮ್ಮಟಗಳನ್ನು ರಚಿಸುತ್ತ ಬಿಲ್ಲವ ಯುವಕರಿಗೆ ಪಟ್ಟಕಟ್ಟತೊಡಗಿತು. ಗ್ರಾಮಾಂತರ ಪ್ರದೇಶಗಳಲ್ಲಿ ಮನೆಗೊಂದು ಸಮಿತಿ ರಚನೆ ಮಾಡತೊಡಗಿತು. ಅಲ್ಲಿ ಪ್ರತಿಯೊಬ್ಬನಿಗೂ ಅಧಿಕಾರ ರಹಿತ ಹುದ್ದೆ ಮತ್ತು ಶಾಲು ಕೊಡತೊಡಗಿತು. ಯುವಕರನ್ನು ಆ ಹುದ್ದೆಗಳು ಆಕರ್ಷಿಸಿತು ಮಾತ್ರವಲ್ಲದೆ ದೊಡ್ಡ ಸಭೆಗಳ ಏರ್ಪಾಡಿನಲ್ಲಿ ಅವರಿಗೆ ಮುಂದಾಳ್ತನ ಕೊಡುವಾಗ ಮತ್ತಷ್ಟು ಹುರುಪು ಹೆಚ್ಚಾಗತೊಡಗಿತು,ಬಿಲ್ಲವ ಯುವಕರು,ಯುವತಿಯರು ಭಾರೀ ಸಂಖ್ಯಯಲ್ಲಿಯೇ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿಬಿಟ್ಚರು.
ಕಾಂಗ್ರೆಸ್ ಪಕ್ಷವು ಅಂದಿನಿಂದ ಇವತ್ತಿನವರೆಗೂ ಮಧ್ಯಮ ಹಾಗೂ ಬಡ ವರ್ಗದವರಿಗೆ ಯಾರಿಗೂ ಒಂದು ಹುದ್ದೆ ಕೊಟ್ಟದ್ದೇ ಇಲ್ಲ.ಚುನಾವಣೆ ಸಮಯದಲ್ಲಿ ಜೀತದಾಳುಗಳಂತೆ ದುಡಿಸುತ್ತಿದ್ದುದೇ ಹೊರತು ಪಕ್ಷದಲ್ಲಿ ಪದಾಧಿಕಾರಿಯಾಗಿ ಅಥವಾ ಪಕ್ಷ ಬೆಂಬಲಿತ ಬೇರಾವುದೇ ಸಂಘಟನೆಯಲ್ಲಿ ,ಎನ್ ಎಸ್ ಯು ಐ ನಲ್ಲಿ ಗುರುತಿಸಿಕೊಂಡು ಎದೆಯುಬ್ಬಿಸಿ ಓಡಾಡುವುದಕ್ಕೆ ಕಾಂಗ್ರೆಸ್ ಅವಕಾಶ ಕೊಡಲಿಲ್ಲ.
ಬಿ. ಜನಾರ್ದನ ಪೂಜಾರಿಯವರು ತನ್ನ ಮಕ್ಕಳನ್ನು ಅಥವಾ ಕುಟುಂಬಿಕರನ್ನು ರಾಜಕೀಯದಲ್ಲಿ ಬೆಳೆಸುವುದಕ್ಕೆ ಮುಂದಾಗಲಿಲ್ಲ ಸತ್ಯ.ಆದರೆ ಅವರು ಸಾರ್ವಜನಿಕವಾಗಿ ಪಕ್ಷದ ನಾಯಕರಿಗೆ,ಕಾರ್ಯಕರ್ತರಿಗೆ ಸ್ಥಾನಮಾನ ಕೊಡಿಸುವಲ್ಲಿ ಯೋಚನೆ ಮಾಡಲಿಲ್ಲ ,ಬಿಲ್ಲವರಿಗೆ ಉದ್ಯೋಗ ಮತ್ತು ಉದ್ಯಮಕ್ಕಷ್ಟೇ ಬಹಳಷ್ಟು ಬೆಂಬಲ ನೀಡಿರುವುದನ್ನು ಆ ಸಮಾಜ ಯಾವತ್ತೂ ಮರೆಯುವಂತಿಲ್ಲ.ಅದೇ ಸಮಾಜವು ತಮ್ಮ ಆರಾಧ್ಯ ನಾಯಕನನ್ನು ಸಾರಸಗಾಟವಾಗಿ ತಿರಸ್ಕರಿಸಿರುವುದು ಮಾತ್ರ ಅತ್ಯದ್ಭುತ ಮತ್ತು ಅನಿವಾರ್ಯ ನಿರ್ಧಾರವೆನ್ನಬಹುದು.
-ವಿ. ಕೆ. ವಾಲ್ಪಾಡಿ







































