



ಕಾರ್ಕಳ: ಧರ್ಮ ಮತ್ತು ದೇವರು ನಮ್ಮ ಬದುಕಿಗೆ ಅಡಿಪಾಯ. ಜೀವನದಲ್ಲಿ ಎಂತಹ ಸಂಕಷ್ಟ ಬಂದರೂ, ಆ ಭಗವಂತನೇ ನಮ್ಮ ರಕ್ಷಕನಾಗುತ್ತಾನೆ. ದೇವರ ಮೇಲೆ ಇರಿಸುವ ಅಚಲವಾದ ಭಕ್ತಿ-ನಂಬಿಕೆ ಪ್ರತಿಯೊಬ್ಬರ ಬಾಳಿಗೆ ಶ್ರೀರಕ್ಷೆಯಾಗುತ್ತದೆ ಎಂದು ಕೇಮಾರು ಸಾಂದೀಪನಿ ಸಾಧನಶ್ರಮದ ಶ್ರೀ ಶ್ರೀ ಈಶವಿಠಲದಾಸ ಸ್ವಾಮೀಜಿ ಹೇಳಿದ್ದಾರೆ.
ಅವರು ಮುಡಾರು ಗ್ರಾಮದ ಬಜಗೋಳಿ ಬಸ್ ನಿಲ್ದಾಣ ಬಳಿಯ ಮಾ ಕಾಂಪ್ಲೆಕ್ಸ್ ನಲ್ಲಿ ಕಾರ್ಕಳ ಬಂಟ್ಸ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಬಜಗೋಳಿ ನೂತನ ಶಾಖೆಯ ಉದ್ಘಾಟನೆಯನ್ನು ನೆರವೇರಿಸಿ, ಬಳಿಕ ಶ್ರೀ ಸಾಯಿ ಸಭಾಬವನದ ತುಡಾರ್ ಕಾಂಪ್ಲೆಕ್ಸ್ನಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುನಿಯಾಲು ಉದಯ ಶೆಟ್ಟಿ ಒಬ್ಬರು ಅಪರೂಪದ ರಾಜಕಾರಣಿ. ಅವರಲ್ಲಿ ಸಂಪತ್ತು ಬಂದರೆ ಸಮಾಜಕ್ಕೆ ವಿನಿಯೋಗವಾಗುತ್ತದೆ. ಪ್ರಸ್ತುತ ಸಹಕಾರಿ ಸಂಘಗಳನ್ನು ಸ್ಥಾಪಿಸುವ ಮೂಲಕ ಸಮಾಜಕ್ಕೆ ಅವರು ಕೊಡುಗೆ ನೀಡುವಂತಾಗಲಿ ಎಂದು ಹಾರೈಸಿದರು.
ಉಡುಪಿ ಜಿಲ್ಲಾ ಸಹಕಾರ ಯೂನಿಯನ್ನ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಬಿ.ಜಯಕರ ಶೆಟ್ಟಿ ಇಂದ್ರಾಳಿ ಭದ್ರತಾ ಕೊಠಡಿ ಉದ್ಘಾಟಿಸಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿದ ಮೂರು ರಾಷ್ಟ್ರೀಕೃತ ಬ್ಯಾಂಕ್ಗಳ ಹೆಸರುಗಳು, ಅನ್ಯ ಬ್ಯಾಂಕಿನೊಂದಿಗೆ ವಿಲೀನವಾಗುವ ಮೂಲಕ ಹೇಳ ಹೆಸರಿಲ್ಲದೆ ಮಾಯವಾಗಿದೆ. ವ್ಯವಹಾರ ದೃಷ್ಟಿಕೋನದಲ್ಲಿ ಮುಂದುವರೆಯುತ್ತಿರುವ ಈ ಬ್ಯಾಂಕಿನಿಂದ ಜನತೆಗೆ ತೃಪ್ತಿಕರವಾದ ಸೇವೆಗಳು ಲಭ್ಯವಾಗುತ್ತಿಲ್ಲ. ಪರ್ಯಾಯವಾಗಿ ಸಹಕಾರಿ ಸಂಘಗಳು ಜಿಲ್ಲೆಯಲ್ಲಿ ಉತ್ತಮ ಸೇವೆ ನೀಡುವಲ್ಲಿ ಯಶಸ್ವೀಯಾಗಿದೆ. ಉಡುಪಿ ಜಿಲ್ಲೆಯಲ್ಲಿರುವ ಒಟ್ಟು ೭೫೦ ಸಹಕಾರಿ ಸಂಘಗಳು, ೨೬೦೦ ಶಾಖೆಗಳನ್ನು ಹೊಂದುವ ಮೂಲಕ ಆರ್ಥಿಕ ವ್ಯವಹಾರವನ್ನು ನಡೆಸುತ್ತಿದೆ. ಜನತೆ ಸಹಕಾರಿ ಸಂಘಗಳ ಮೇಲೆ ಇರಿಸಿದ ವಿಶ್ವಾಸವೇ ಇದಕ್ಕೆಲ್ಲಾ ಕಾರಣ ಎಂದು ಶ್ಲಾಘಿಸಿದರು.
ಕರ್ನಾಟಕ ಸ್ಟೋನ್ ಮತ್ತು ಕ್ರಷರ್ ಅಶೋಶಿಯೇಷನ್ ಅಧ್ಯಕ್ಷ ಡಾ.ರವೀಂದ್ರ ಶೆಟ್ಟಿ ಬಜಗೋಳಿ ಮಾತನಾಡಿ, ಕೇವಲ ಸಮುದಾಯಕ್ಕೆ ಮಾತ್ರ ಸೀಮಿತವಾಗದೆ ಎಲ್ಲಾ ವರ್ಗದ ಜನತೆಗೂ ಪ್ರಯೋಜನಕಾರಿಯಾಗುವ ರೀತಿಯಲ್ಲಿ ಈ ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸಲಿದೆ. ಎಲ್ಲರಿಗೂ ಸಹಕಾರಿಯಾಗುವ ರೀತಿಯಲ್ಲಿ ಈ ಸಹಕಾರಿ ಸಂಸ್ಥೆ ಕಾರ್ಯನಿರ್ವಹಿಸಲಿ ಎಂದು ಹಾರೈಸಿದರು.
ಕಾರ್ಕಳ ಬಂಟ್ಸ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಅಧ್ಯಕ್ಷತೆ ವಹಿಸಿದ್ದು, ವ್ಯವಹಾರ ನಡೆಸುವುದು ಮಾತ್ರ ಸಂಸ್ಥೆಯ ಉದ್ದೇಶವಲ್ಲ, ವ್ಯವಹಾರದ ಜತೆ ಜನತೆಗೆ ಸೇವೆಯೂ ಸಿಗುವಂತಾಗಬೇಕು. ಮುಂದಿನ ದಿನಗಳಲ್ಲಿ ಈ ಸಂಸ್ಥೆಯ ಶಾಖೆಗಳು ತಾಲೂಕಿನ ವಿವಿಧ ಭಾಗಕ್ಕೆ ವಿಸ್ತಾರಗೊಳ್ಳಲಿದೆ ಎಂದರು.

ವೇದಿಕೆಯಲ್ಲಿ ಮಹಾವೀರ ಜೈನ್ ಬಜಗೋಳಿ, ಡಾ.ವೆಂಕಟಗಿರಿ ರಾವ್, ಉದ್ಯಮಿ ಆನಂದ ಎಂ.ಶೆಟ್ಟಿ ಮಂಜೆಮನೆ ಪುಣೆ, ಉಮೇಶ್ ರಾವ್ ಬಜಗೋಳಿ, ಮುಡಾರು ಗ್ರಾ.ಪಂ.ಅಧ್ಯಕ್ಷ ಶ್ರುತಿ ಡಿ.ಅತಿಕಾರಿ, ನಲ್ಲೂರು ಗ್ರಾ.ಪಂ.ಅಧ್ಯಕ್ಷ ಅಶೋಕ್ ಪೂಜಾರಿ, ಕಟ್ಟಡದ ಮಾಲಿಕ ಸುಂದರ ಶೆಟ್ಟಿ ನಲ್ಲೂರು, ಕಾರ್ಕಳ ಮಡಿವಾಳ ಸಂಘದ ಅಧ್ಯಕ್ಷ ಉದಯ ಸಾಲಿಯಾನ್, ಮಾಳ-ಕೆರ್ವಾಶೆ ವಿಎಸ್ಎಸ್ ಬ್ಯಾಂಕಿನ ಅಧ್ಯಕ್ಷ ಅನಿಲ್.ಎಸ್.ಪೂಜಾರಿ, ಉದ್ಯಮಿ ನಲ್ಲೂರು ಪ್ರೇಮ ನಿವಾಸದ ಭಾಸ್ಕರ ಶೆಟ್ಟಿ ಪುಣೆ ಸೊಸೈಟಿಯ ಆಡಳಿತ ಮಂಡಳಿಯ ನಿರ್ದೇಶಕರಾದ ಸುಹಾಸ್ ಹೆಗ್ಡೆ ನಂದಳಿಕೆ, ಮಾಲಿನಿ ಎನ್.ರೈ ಸಾಣೂರು, ಸುಧಾಕರ ಶೆಟ್ಟಿ ಮುಡಾರು, ಬಂಟರ ಸಂಘಟನೆಯ ಪ್ರಮುಖರಾದ ಶ್ಯಾಮ್ ಶೆಟ್ಟಿ, ವಿಠಲ ಶೆಟ್ಟಿ ಸೀತಾನದಿ, ರತ್ನಾಕರ ಶೆಟ್ಟಿ ಮುಡಾರು, ಸೊಸೈಟಿ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಶಾಖಾ ಸಲಹಾ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.
ಸೊಸೈಟಿಯ ಉಪಾಧ್ಯಕ್ಷ ಮಂಜುನಾಥ ಶೆಟ್ಟಿ ಸ್ವಾಗತಿಸಿದರು, ಪ್ರಧಾನ ವ್ಯವಸ್ಥಾಪಕ ಕೃಷ್ಣ ಎಂ.ಶೆಟ್ಟಿ ವರದಿವಾಚಿಸಿದರು, ಪ್ರಶಾಂತ್ ಶೆಟ್ಟಿ ನಲ್ಲೂರು ಕಾರ್ಯಕ್ರಮ ನಿರೂಪಿಸಿದರು, ನಿರ್ದೇಶಕ ಸುಧಾಕರ ಶೆಟ್ಟಿ ಮುಡಾರು ವಂದಿಸಿದರು.






































