[t4b-ticker]

ಕ್ಷೇತ್ರದ ಜನರಿಂದ ಆಯ್ಕೆಯಾಗಿ ಶಾಸಕನಾಗುವ ಸಿದ್ಧತೆಯಲ್ಲಿ ಐವನ್ ಡಿಸೋಜ

Picture of RB NEWS

RB NEWS

Bureau Report


ಮಂಗಳೂರಿನ ರಾಜಕಾರಣಿಗಳಲ್ಲಿ ಎದ್ದು ಕಾಣುತ್ತಿರುವ ಆಜಾನುಬಾಹು ರಾಜಕಾರಣಿಯೆಂದರೆ ಐವನ್ ಡಿಸೋಜಾ. ಇದೀಗ ವಿಧಾನಪರಿಷತ್ ಸದಸ್ಯನಾಗಿರುವ ಡಿಸೋಜಾ ಹಿಂದೆಯೂ ಒಂದು ಅವಧಿಗೆ ವಿಧಾನಪರಿಷತ್ ಸದಸ್ಯನಾಗಿದ್ದರು.
ಜನತಾಪರಿವಾರದಲ್ಲಿ ರಾಜಕೀಯ ಪ್ರಾರಂಭಿಸಿದ್ದ ಅವರು ಹಿಂದೊಮ್ಮೆ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು. ತನ್ನ ಹುಟ್ಟೂರು ಮುದರಂಗಡಿಗೆ ಸೇರಿದ್ದ ಕಾಪು ವಿಧಾನಭಾ ಕ್ಷೇತ್ರದ ಚುನಾವಣೆಯಲ್ಲಿ ಸೋತ ಬಳಿಕ ಅವರು ತನ್ನ ಕಾರ್ಯಕ್ಷೇತ್ರವನ್ನು ಮಂಗಳೂರಿಗೆ ಖಾಯಮ್ಮಾಗಿ ವರ್ಗಾಯಿಸಿಕೊಂಡರು.

ತಾನು ಜನರಪರವಾಗಿ ಮಾಡುವ ಕೆಲಸ ಕಾರ್ಯದ ವಿರುದ್ಧ ಯಾರೇನೆ ಅಂದರೂ, ಟೀಕೆ,ಅಪಸ್ವರ ಹಾಡಿದರೂ ಅದನ್ನು ಕೇಳಿಸಿಕೊಳ್ಳದವರಂತೆ ಬೆಳೆದು ಬಂದು ಅದೇ ಪ್ರಕಾರ ಸಾರ್ವಜನಿಕರ ಸೇವೆಯಲ್ಲಿ ಮುಂದುವರಿಯುತ್ತಿರುವ ಒಬ್ಬ ಅತ್ಯಪರೂಪದ ನಾಯಕನಾಗಿದ್ದಾರೆ ಐವನ್.

ಆಗಿನ ಅವಿಭಜಿತ ದ. ಕ. ಜಿಲ್ಲೆಯಲ್ಲಿ ಗೂಡಂಗಡಿ ವ್ಯಾಪಾರಸ್ಥರು, ರಿಕ್ಷಾ ,ಬಸ್ ಚಾಲಕರು,ಕಂಡಕ್ಟರುಗಳು ಹಾಗೂ ಇನ್ನಿತರ ಅಸಂಘಟಿತ ಕಾರ್ಮಿಕ ವರ್ಗದವರನ್ನು ಒಟ್ಟು ಸೇರಿಸಿ ಅಲ್ಲೊಂದು ಪುಟ್ಟ ಪುಟ್ಟ ಸಂಘಟನೆಯನ್ನು ಮಾಡಿದವರಲ್ಲಿ ಮೊಟ್ಟಮೊದಲ ರಾಜಕಾರಣಿ ಈ ಐವನ್ ಡಿಸೋಜಾ .
ಆ ದಿನಗಳಲ್ಲಿ ಶಾಸಕರು,ಮಂತ್ರಿಗಳು,ಪಕ್ಷಗಳ ಜಿಲ್ಲಾಧ್ಯಕ್ಷರದ್ದೆಲ್ಲ ಒಂದು ಬಗೆಯ ಮೇಲ್ಮಟ್ಟದ ಸಭೆ,ಸಮಾರಂಭಗಳ ಪ್ರತಿಭಟನೆ ! ಐವನ್ ಡಿಸೋಜಾರದ್ದು ಕೆಳವರ್ಗದಲ್ಲಿ ದುಡಿಯುವ ವರ್ಗದವರೊಡನೆ ಮಾತುಕತೆ,ಬೇಡಿಕೆಗಳ ಹೋರಾಟಕ್ಕೆ ತಯಾರಿ ಇತ್ಯಾದಿ. ಬೆಳಿಗ್ಗೆ ರಿಕ್ಷಾ ಚಾಲಕರೊಂದಿಗಿನ ಪ್ರತಿಭಟನೆಯಾದರೆ ಸಂಜೆ ಬಸ್ ಚಾಲಕರು,ನಿರ್ವಾಹಕರನ್ನು ಒಟ್ಟು ಸೇರಿಸಿದ ಪ್ರತಿಭಟನೆ. ಜಿಲ್ಲೆಯಲ್ಲಿ ಐವನ್ ಹೆಸರು ಎಲ್ಲರ ಮಾತಿನಲ್ಲೂ ಇರುತ್ತಿತ್ತು.
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಅವರಿಗೆ ಪಕ್ಷದಲ್ಲಿ ಉತ್ತಮವಾದ ಅವಕಾಶ ದೊರಕಿತು. ಬೇರೆ ಬೇರೆ ರಾಜ್ಯಗಳಲ್ಲಿ ಚುನಾವಣಾ ವೀಕ್ಷಕರಾಗಿ ಕೆಲಸ ಮಾಡುವ ಅವಕಾಶ ದೊರಕಿತು. ಎ. ಐ. ಸಿ. ಸಿ. ನಲ್ಲೂ ಐವನ್ ತನ್ನದೇ ಪ್ರಭಾವವನ್ನು ಮೂಡಿಸಿಕೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಅತ್ಯಾಪ್ತರಲ್ಲೊಬ್ಬನಾಗಿದ್ದು ,ಎರಡು ಬಾರಿ ವಿಧಾನಪರಿಷತ್ ಸದಸ್ಯತನವನ್ನೂ ಪಡೆದುಕೊಂಡರು.
ಸಂಘಟನೆಯಲ್ಲಿ ಬಹಳ ಚುರುಕಾಗಿದ್ದು ಜನರೊಡನೆ ಹೆಚ್ಚು ಬೆರೆಯುವ ಗುಣಸ್ವಭಾವ ಐವನ್ ಡಿಸೋಜಾ ತುಂಬಾ ಆಕರ್ಷಣೆಯ ರಾಜಕಾರಣಿಯಾಗಿದ್ದಾರೆ.

ಎರಡು ಬಾರಿ ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಯಾಗಿ ಸರಕರಾದೊಡನೆ ಬಹಳವಾಗಿ ಗುರುತಿಸಿಕೊಂಡಿದ್ದರೂ ತಾನು ಮತದಾರರ ಮತದಿಂದ ಗೆದ್ದು ಬಂದು ಜನಪ್ರತಿನಿಧಿಯಾಗಬೇಕೆನ್ನುವುದೇ ಡಿಸೋಜಾ ಅವರ ಕನಸಾಗಿದೆ. ಮಂಗಳೂರು ಮಹಾನಗರಪಾಲಿಕೆಯ ಕಟ್ಟಡದ ಮಹಡಿಯಲ್ಲಿನ ಅವರ ಕಚೇರಿಯಲ್ಲಿ ಜನರಿಗಾಗಿ ಸ್ಪಂದಿಸುವ ಸಿಬ್ಬಂದಿ ವರ್ಗವನ್ನು ಗಮನಿಸಿದಾಗಲೇ ಖುಶಿಯಾಗುತ್ತದೆ. ಯಾರೇ ಆಗಮಿಸಿ ತಮ್ಮ ಅಹವಾಲುಗಳನ್ನು ಮುಂದಿಟ್ಟರೂ ಅದಕ್ಕೆ ತಕ್ಷಣವಾಗಿ ಸ್ಪಂದನೆ ದೊರಕುವಂತೆ ಮಾಡಲಾಗಿದೆ.
ಡಿಸೋಜಾ ಅವರು ತನ್ನ ಮನೆಯ ಕಚೇರಿಯಲ್ಲೂ , ಬೆಳಿಗ್ಗೆ ಎಂಟೂವರೆ ಗಂಟೆಗೇ ಕಾಣಸಿಗುತ್ತಾರೆ. ಆ ನಂತರ ಮಹಾನಗರಪಾಲಿಕೆಯ ತನ್ನ ಕಚೇರಿಗೆ ಆಗಮಿಸುತ್ತಾರೆ. ಅವರ ಅನುಪಸ್ಥಿತಿಯಿದ್ದಾಗಲೂ ಆಗಮಿಸಿರುವ ಯಾರಿಗೂ ಸಮಯ ವ್ಯರ್ಥವಾಗದ ರೀತಿಯ ಸ್ಪಂದನ ದೊರೆಯುವಂತೆ ಸಿಬ್ಬಂದಿಗಳನ್ನು ನೇಮಿಸಿರುತ್ತಾರೆ.

ಮಂಗಳೂರು ವಿಧಾನಸಭಾ ದಕ್ಷಿಣ ಕ್ಷೇತ್ರವನ್ನು ಮುಂದಿನ ಚುನಾವಣೆಗೆ ಸ್ಪರ್ಧಾ ಕ್ಷೇತ್ರವನ್ನಾಗಿ ಖಾತ್ರಿಮಾಡಿಕೊಂಡಿದ್ದಾರೆ. ಆ ಕ್ಷೇತ್ರವನ್ನು ಈ ಮೊದಲು ಜೆ. ಆರ್.ಲೋಬೊ ಅವರು ಒಂದು ಅವಧಿಗೆ ಪ್ರತಿನಿಧಿಸಿದ್ದು ನಂತರದಲ್ಲಿ ಹಾಲಿ ಶಾಸಕ ಬಿಜೆಪಿಯ ವೇದವ್ಯಾಸ ಕಾಮತ್ ಆಯ್ಕೆಯಾಗಿರುತ್ತಾರೆ.
ಕಳೆದ 2023 ರ ಚುನಾವಣೆಯಲ್ಲಿ ಆ ಕ್ಷೇತ್ರವನ್ನು ಐವನ್ ಡಿಸೋಜಾರವರಿಗೆ ಬಿಟ್ಟುಕೊಡುವುದಾಗಿತ್ತಾದರೂ ನಾಯಕರುಗಳ ರಾಜಕೀಯ ಲೆಕ್ಕಾಚಾರದ ಕಾರಣಕ್ಕಾಗಿ ಮತ್ತೆ ಲೋಬೊ ಅವರನ್ನೇ ಕಣಕ್ಕಿಳಿಸಲಾಗಿತ್ತು. ಅವರು ಎರಡು ಬಾರಿ(2018,2023)ಪರಾಭವಗೊಂಡಿದ್ದು ಮುಂದಿನ(2023) ಸಲ ಸ್ಪರ್ಧಿಸುವ ಆಸಕ್ತಿಯಿಂದ ಹಿಂದೆ ಸರಿದಿರುತ್ತಾರೆ ಎನ್ನಲಾಗುತ್ತಿದೆ.

ಪಾದರಸದಂತೆ ಚುರುಕಾಗಿರುವ ಐವನ್ ಡಿಸೋಜಾ ಅವರು ಎಲ್ಲ ಜಾತಿ ವರ್ಗ ಸಮುದಾಯದವರ ಸಣ್ಣ ಪುಟ್ಟ ಸಂಘ,ಸಂಘಟಕರೊಡನೆಯೂ ಆತ್ಮೀಯ ಒಡನಾಟವನ್ನಿಟ್ಟುಕೊಂಡು ಸಾರ್ವಜನಿಕ ಕೆಲಸದಲ್ಲಿ ಹೆಚ್ಚು ತೊಡಗಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ವತಿಯಿಂದಷ್ಚೇ ಅಲ್ಲದೆ ಅವರಲ್ಲಿರುವ ವೈಯಕ್ತಿಕವಾದ ಜನಬೆಂಬಲ ಕೂಡ ಅವರನ್ನು ಒಬ್ಬ ಜನಪ್ರತಿನಿಧಿಯನ್ನಾಗಿ ಮಾಡುವಲ್ಲಿ ಸಹಾಯವಾದೀತು.
ಮಂದಿನ ವಿಧಾನಸಭಾ ಚುನಾವಣೆಯಲ್ಲಿ ತಾನು ಈ ಕ್ಷೇತ್ರದಿಂದ ಗೆದ್ದುಬರುವ ಆತ್ಮವಿಶ್ವಾಸ
ಡಿಸೋಜಾರಲ್ಲಿ ತುಂಬಿಕೊಂಡಿದೆ. ಮತದಾರರ ಗಮನಸೆಳೆಯುವಂತಹ ಮತ್ತು ಪ್ರಯೋಜನ ಪಡೆಯುವಂತಹ ಕೆಲಸಗಳನ್ನು ತಾನು ಮಾಡುತ್ತಿರುವುದಾಗಿ ಅದರಿಂದ ಜನಬೆಂಬಲ ಮತ್ತಷ್ಟು ಹೆಚ್ಚಾಗಿರುವುದಾಗಿ ಐವನ್ ಡಿಸೋಜಾ ಹೇಳುತ್ತಿದ್ದು , ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಆತ್ಮಬಲವನ್ನೂ ವೃದ್ಧಿಸಿಕೊಂಡಿದ್ದಾರೆ.
ಮಂಗಳೂರು ವಿಧಾನಸಭಾ ದಕ್ಷಿಣ ಕ್ಷೇತ್ರವನ್ನು ಕ್ರೈಸ್ತ ಮುಂದಾಳು ಅಭ್ಯರ್ಥಿ ಸ್ಪರ್ಧಿಸುವುದಕ್ಕೆಂದೇ ಕಾಂಗ್ರೆಸ್ ಪಕ್ಷ ಮೀಸಲುಗೊಳಿಸಿರುತ್ತದೆ. ಮಂಗಳೂರು ವಿಧಾನಸಭಾ ಕ್ಷೇತ್ರವನ್ನು (ಆಗಿನ ಉಳ್ಳಾಲ) ಮುಸ್ಲಿಮ್ ಅಭ್ಯರ್ಥಿಗೆ ಅವಕಾಶ ಕೊಡುತ್ತ ಬಂದಿರುವುದೂ ಗಮನಾರ್ಹ. ಸುರತ್ಕಲ್ ವಿಧಾನಸಭಾ ಕ್ಷೇತ್ರವನ್ನು ಒಮ್ಮೆಗೆ ಮೈೂದ್ದಿನ್ ಬಾವ ಗೆದ್ದುಕೊಂಡರು . ಕಳೆದ ಬಾರಿ ಇನಾಯತ್ ಆಲಿಯವರು ಸ್ಪರ್ಧಿಸುವಾಗ ಅದನ್ನು ಮಂಗಳೂರು ವಿಧಾನಸಭಾ ಕ್ಷೇತ್ರ ಉತ್ತರ ಎಂದು ವಿಲೀನಗೊಳಿಸಲಾಯಿತು.


-ವಿ. ಕೆ. ವಾಲ್ಪಾಡಿ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top