ಪುರಸಭೆ ವ್ಯಾಪ್ತಿಯಲ್ಲಿ ಅಸಮರ್ಪಕ ಕಸ ವಿಲೇವಾರಿ: ತಕ್ಷಣ ಕ್ರಮಕ್ಕೆ ಆಗ್ರಹ
RB NEWS
Bureau Report
ಪುರಸಭೆ ವ್ಯಾಪ್ತಿಯಲ್ಲಿ ಅಸಮರ್ಪಕ ಕಸ ವಿಲೇವಾರಿ: ತಕ್ಷಣ ಕ್ರಮಕ್ಕೆ ಆಗ್ರಹ
ಕಾರ್ಕಳ, ಜೂನ್ 5: ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಮನೆಗಳು ಹಾಗೂ ವಾಣಿಜ್ಯ ಸಂಕೀರ್ಣಗಳಿಂದ ಸಮರ್ಪಕವಾಗಿ ಕಸ ಸಂಗ್ರಹವಾಗದ ಪರಿಣಾಮ ಹಲವೆಡೆ ಕಸದ ರಾಶಿಗಳು ಗುಡ್ಡೆಯಾಗಿದ್ದು, ದುರ್ವಾಸನೆ ಹರಡುತ್ತಿದೆ. ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದ್ದು, ಪುರಸಭೆ ಆಡಳಿತವು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪುರಸಭೆಯ ನಿಕಟಪೂರ್ವ ಸದಸ್ಯ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಆಗ್ರಹಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಪುರಸಭಾ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಕಸ ಸಂಗ್ರಹಣೆಯಲ್ಲಿ ಉಂಟಾಗಿರುವ ವ್ಯತ್ಯಯದಿಂದ ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ರಸ್ತೆ ಬದಿಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ರಾಶಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ತಿಳಿಸಿದ್ದಾರೆ. ಹಿಂದೆ ಖಾಸಗಿ ಸಂಸ್ಥೆಯೊಂದು ಕಸ ವಿಂಗಡಣೆ ಮತ್ತು ವಿಲೇವಾರಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕಸ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿತ್ತು. ಅವರು ಯಾವುದೇ ಫಲಾಪೇಕ್ಷೆಯಿಲ್ಲದೆ ಉತ್ತಮ ಸೇವೆ ಸಲ್ಲಿಸುತ್ತಿದ್ದರು. ಆದರೆ ರಾಜಕೀಯ ಪ್ರೇರಿತ ಕಿರುಕುಳಗಳಿಂದಾಗಿ ಅವರು ತಮ್ಮ ಕಾರ್ಯವನ್ನು ಮಧ್ಯದಲ್ಲೇ ಸ್ಥಗಿತಗೊಳಿಸಿದ ಪರಿಣಾಮ, ಇದೀಗ ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಅವರು ಆರೋಪಿಸಿದ್ದಾರೆ. “ನಮ್ಮ ಆಡಳಿತದ ಅವಧಿಯಲ್ಲಿ ಕಾರ್ಕಳ ಪುರಸಭೆ ಕಸ ವಿಲೇವಾರಿಯ ಉತ್ತಮ ನಿರ್ವಹಣೆಗೆ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪಡೆದಿತ್ತು. ಆದರೆ ಪ್ರಸ್ತುತ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಜನರ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಹೆಚ್ಚಿನ ಕಾಳಜಿ ವಹಿಸಿ, ತ್ವರಿತವಾಗಿ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ” ಎಂದು ಶುಭದರಾವ್ ತಿಳಿಸಿದ್ದಾರೆ.