[t4b-ticker]

ಬೆಳುವಾಯಿ ಕೆಳಹಾದಿಯಲ್ಲಿ ಬೈಕ್‌ಗಳ ತೆರವು ಕ್ರಮಕ್ಕೆ ಗ್ರಾಮಸ್ಥರ ತೀವ್ರ ಆಕ್ಷೇಪ

Picture of RB NEWS

RB NEWS

Bureau Report


ಮೂಡುಬಿದಿರೆ, ಜೂನ್ 5 : ಬೆಳುವಾಯಿ ಪೇಟೆಯಲ್ಲಿರುವ ಕೆಳಹಾದಿ (Underpass) ಪ್ರದೇಶದಲ್ಲಿ ವಾಹನ ನಿಲುಗಡೆ ನಿಷೇಧ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ, ಅಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಪೊಲೀಸ್ ಇಲಾಖೆ ತೆರವುಗೊಳಿಸುತ್ತಿರುವ ಕ್ರಮಕ್ಕೆ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಬೆಳುವಾಯಿ ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ 169ರ ಕಾಮಗಾರಿಯ ಭಾಗವಾಗಿ ಮೇಲುಹಾದಿ ನಿರ್ಮಾಣಗೊಂಡಿದ್ದು, ಅದರ ಕೆಳಭಾಗದಲ್ಲಿ ಸಾರ್ವಜನಿಕರ ಓಡಾಟ ಹಾಗೂ ಸಂಚಾರಕ್ಕೆ ಸುಮಾರು 45 ಮೀಟರ್ ಉದ್ದದ ಕೆಳಹಾದಿಯನ್ನು ನಿರ್ಮಿಸಲಾಗಿದೆ. ಹೆದ್ದಾರಿ ಅಭಿವೃದ್ಧಿಯ ಬಳಿಕ ಬೆಳುವಾಯಿ ಪೇಟೆಯಲ್ಲಿ ಸಮರ್ಪಕ ವಾಹನ ನಿಲುಗಡೆ ವ್ಯವಸ್ಥೆ ಇಲ್ಲದ ಕಾರಣ, ಈ ಕೆಳಹಾದಿ ಪ್ರದೇಶದಲ್ಲಿ ಆರಂಭದಿಂದಲೇ ಆಟೋರಿಕ್ಷಾ, ಟೆಂಪೊ, ದ್ವಿಚಕ್ರ ವಾಹನಗಳು ಹಾಗೂ ಕಾರುಗಳನ್ನು ನಿಲುಗಡೆ ಮಾಡಲಾಗುತ್ತಿತ್ತು.
ಇತ್ತೀಚೆಗೆ ಬೆಳುವಾಯಿ ಗ್ರಾಮ ಪಂಚಾಯತ್ ವತಿಯಿಂದ ಈ ಪ್ರದೇಶದಲ್ಲಿ “ವಾಹನ ನಿಲುಗಡೆ ನಿಷೇಧ” (No Parking) ಫಲಕ ಅಳವಡಿಸಲಾಗಿದೆ. ಇದರ ಬೆನ್ನಲ್ಲೇ ಕಳೆದ ಕೆಲ ದಿನಗಳಿಂದ ಅಲ್ಲಿದ್ದ ಸಾರ್ವಜನಿಕರ ಸ್ಕೂಟರ್ ಹಾಗೂ ಬೈಕ್‌ಗಳನ್ನು ಪಂಚಾಯತ್‌ನ ಸೂಚನೆಯ ಮೇರೆಗೆ ಮೂಡುಬಿದಿರೆ ಪೊಲೀಸ್ ಸಿಬ್ಬಂದಿ ಯಾವುದೇ ಪೂರ್ವ ಸೂಚನೆ ನೀಡದೆ ತೆರವುಗೊಳಿಸಿ ಪೊಲೀಸ್ ಠಾಣೆಗೆ ಸಾಗಿಸುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ಗ್ರಾಮಸ್ಥರ ಪ್ರಕಾರ, ಇದೇ ಸ್ಥಳದಲ್ಲಿ ಆಟೋರಿಕ್ಷಾ ಹಾಗೂ ಟೆಂಪೊಗಳು ಸಹ ನಿಲುಗಡೆಗೊಂಡಿದ್ದರೂ, ಕ್ರಮವು ಮುಖ್ಯವಾಗಿ ಬೈಕ್‌ಗಳ ವಿರುದ್ಧವೇ ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ವಾಹನ ನಿಲುಗಡೆ ನಿಷೇಧದ ನಿಯಮ ಎಲ್ಲ ವಾಹನಗಳಿಗೂ ಸಮಾನವಾಗಿ ಅನ್ವಯವಾಗಬೇಕಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಪ್ರಸ್ತುತ ಈ ಪ್ರದೇಶದಲ್ಲಿ ಬೈಕ್‌ಗಳನ್ನು ನಿಲುಗಡೆಗೊಳಿಸುತ್ತಿದ್ದವರಲ್ಲಿ ಬೆಳುವಾಯಿ, ದರಗುಡ್ಡೆ, ಇರ್ವತ್ತೂರು, ಮಾರ್ನಾಡು ಹಾಗೂ ಕಾಂತಾವರ ಗ್ರಾಮಗಳ ನಿವಾಸಿಗಳೇ ಹೆಚ್ಚಾಗಿದ್ದಾರೆ ಎಂದು ತಿಳಿದುಬಂದಿದೆ. ಗ್ರಾಮೀಣ ಪ್ರದೇಶಗಳಿಂದ ಬೆಳುವಾಯಿ ತನಕ ಸಮರ್ಪಕ ಸಂಪರ್ಕ ಬಸ್ ವ್ಯವಸ್ಥೆ ಇಲ್ಲದ ಕಾರಣ, ಅನೇಕ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ತಮ್ಮ ಬೈಕ್‌ಗಳನ್ನು ಇಲ್ಲಿ ನಿಲ್ಲಿಸಿ ಮಂಗಳೂರು ಹಾಗೂ ಉಡುಪಿ ಕಡೆಗೆ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ.


ಇದೇ ವೇಳೆ, ಮಂಗಳೂರಿನ ತೊಕ್ಕೊಟ್ಟು ರಾಷ್ಟ್ರೀಯ ಹೆದ್ದಾರಿ ಪ್ರದೇಶದಲ್ಲಿ ಇತ್ತೀಚೆಗೆ ವಾಹನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದ ಬಳಿಕ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪೊಲೀಸರು ಮಾರ್ಗದರ್ಶನ ಮತ್ತು ಸೂಚನಾ ಕಾರ್ಯಕ್ಕೆ ಆದ್ಯತೆ ನೀಡಿರುವುದು ನಾಗರಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಕಾನೂನು ಉಲ್ಲಂಘನೆಗೆ ಸಂಬಂಧಿಸಿದಂತೆ ತಕ್ಷಣದ ದಂಡಾತ್ಮಕ ಕ್ರಮಕ್ಕೆ ಮುಂದಾಗದೇ, ಮೊದಲು ಜನರಿಗೆ ಅರಿವು ಮೂಡಿಸುವ ಕಾರ್ಯ ನಡೆಸುತ್ತಿರುವುದನ್ನು ಸ್ಥಳೀಯರು ಶ್ಲಾಘಿಸಿದ್ದಾರೆ.


ಇಂತಹ ಜನಜಾಗೃತಿ ಅಭಿಯಾನವನ್ನು ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಮೊದಲ ಹಂತದಲ್ಲಿ ನಡೆಸಿ, ಸಾರ್ವಜನಿಕರಿಗೆ ಪರ್ಯಾಯ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಿದ ಬಳಿಕ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂಬುದು ನೆರೆಯ ಗ್ರಾಮಗಳ ನಿವಾಸಿಗಳ ಒತ್ತಾಯವಾಗಿದೆ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top