[t4b-ticker]

23 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಲಾರಿ ಚಾಲಕ ಬಂಧನ

Picture of RB NEWS

RB NEWS

Bureau Report

23 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಲಾರಿ ಚಾಲಕ ಬಂಧನ

ಉಡುಪಿ: ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದರೂ 23 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಲಾರಿ ಚಾಲಕನನ್ನು ಪಡುಬಿದ್ರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

2002ರ ಸೆಪ್ಟೆಂಬರ್ 7ರಂದು ಬೆಳಿಗ್ಗೆ ಸುಮಾರು 8.30ಕ್ಕೆ ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಬಡಾ ಗ್ರಾಮದ ಮೂಳೂರು ಮಸೀದಿ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ಅಪಘಾತ ಸಂಭವಿಸಿತ್ತು. ಮಹಾರಾಷ್ಟ್ರ ನೋಂದಣಿ ಹೊಂದಿದ್ದ MH12FA6993 ಮಿನಿ ಗೂಡ್ಸ್ ಲಾರಿಯನ್ನು ಚಾಲನೆ ಮಾಡುತ್ತಿದ್ದ ವಿಲಾಸ್ ಶಿಂಧೆ (ವಾಸ: ಬೋರ್, ಉತ್ರಳ್ಳಿ ತಾಲೂಕು, ಪುನಾ ಜಿಲ್ಲೆ, ಮಹಾರಾಷ್ಟ್ರ) ಮಂಗಳೂರು ದಿಕ್ಕಿನಿಂದ ಉಡುಪಿ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶಾಲಾ ಬಾಲಕನಿಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಈ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ಪೂರ್ಣಗೊಂಡ ನಂತರ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಪಟ್ಟಿ ಸಲ್ಲಿಸಲಾಗಿತ್ತು. ಬಳಿಕ ಪ್ರಕರಣದ ವಿಚಾರಣೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ವಿಲಾಸ್ ಶಿಂಧೆಗೆ ಮೂರು ತಿಂಗಳ ಜೈಲು ಶಿಕ್ಷೆ ಹಾಗೂ ರೂ.1,000 ದಂಡ ವಿಧಿಸಿತ್ತು.

ಆದರೆ ತೀರ್ಪಿನ ಬಳಿಕ ಆರೋಪಿ ಕಳೆದ 23 ವರ್ಷಗಳಿಂದ ತಲೆಮರೆಸಿಕೊಂಡಿದ್ದರಿಂದ ನ್ಯಾಯಾಲಯವು ಅವನ ವಿರುದ್ಧ LPC ವಾರಂಟ್ ಹೊರಡಿಸಿತ್ತು.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಐಪಿಎಸ್ ಅವರ ಆದೇಶದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್. ನಾಯಕ್, ಕಾರ್ಕಳ ಉಪವಿಭಾಗದ ಡಿವೈಎಸ್‌ಪಿ ಎಸ್. ವಿಜಯಪ್ರಸಾದ್ ಹಾಗೂ ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ಪಡುಬಿದ್ರಿ ಪೊಲೀಸ್ ಠಾಣೆಯ ಪಿಎಸ್‌ಐ ಸಕ್ತಿವೇಲು ಹಾಗೂ ಅನಿಲ್ ಕುಮಾರ್ ಟಿ. ನಾಯಕ್ ಅವರ ನೇತೃತ್ವದಲ್ಲಿ ಎಎಸ್‌ಐ ರಾಜೇಶ್ ಪಿ, ಹೆಡ್ ಕಾನ್ಸ್ಟೇಬಲ್ ಕೃಷ್ಣಪ್ರಸಾದ್, ಪಿಸಿ ಸಂದೇಶ್ ಭಂಡಾರಿ ಅವರನ್ನೊಳಗೊಂಡ ತಂಡ ಮಹಾರಾಷ್ಟ್ರದ ಪುಣೆಯಲ್ಲಿ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಈ ಬಂಧನದೊಂದಿಗೆ ದೀರ್ಘಕಾಲದಿಂದ ಬಾಕಿ ಉಳಿದಿದ್ದ ಪ್ರಕರಣಕ್ಕೆ ತೆರೆ ಬಿದ್ದಂತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top