ಕಲ್ಲಡ್ಕ ಇಸ್ಮಾಯಿಲ್ ಬೆತ್ತಲೆ ಶವ ನೈಲಾನ್ ಹಗ್ಗದಿಂದ ಸುತ್ತಿತ್ತು!
ಭಾಗ-7
ಕಲ್ಲಡ್ಕ ಇಸ್ಮಾಯಿಲ್ ಅವರು ನಾಪತ್ತೆಯಾಗಿ ಮೂರು ದಿನಗಳ ನಂತರ ನೇತ್ರಾವತಿ ನದಿಯ ಮಧ್ಯದಲ್ಲಿ ಮೃತದೇಹವೊಂದು ಕಲ್ಲಿನ ಕೊರಕಲಿನಲ್ಲಿ ಸಿಲಕಿದೆ ಎಂದು ಮಾಹಿತಿಯೊಂದು ಕಲ್ಲಡ್ಕಕ್ಕೆ ಬಂದಿತ್ತು. ಈ ಮಾಹಿತಿಯನ್ವಯ ಮೃತದೇಹವನ್ನು ನೋಡಿ ಗುರುತಿಸಲು ಹೋದವರಲ್ಲಿ ಪ್ರಮುಖರಾಗಿದ್ದವರು ಅಬ್ದುಲ್ ಹಮೀದ್. ಇವರು ಇಸ್ಮಾಯಿಲ್ ಅವರ ತಂಗಿಯ ಗಂಡ. ಇವರ ಹೇಳಿಕೆ ಈ ಪ್ರಕರಣದ ವಿಚಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಅವರ ಹೇಳಿಕೆಯ ಪೂರ್ಣ ಪಾಠ ಹೀಗಿದೆ.
ತಾ. 22ರಂದು ಅವರ ತಂಗಿಯ ಗಂಡ ಅಬ್ದುಲ್ ಹಮೀದ್ ಅವರು ತಮ್ಮ ಹೇಳಿಕೆಯಲ್ಲಿ ಸರಪಾಡಿ ಹತ್ತಿರ ಪೆರ್ಲ ಎಂಬ ಸ್ಥಳದಲ್ಲಿ ಹೊಳೆಯಲ್ಲಿ ಕಲ್ಲೆನೆಡೆಯಲ್ಲಿ ಒಂದು ಹೆಣದ ಕಾಲು ಕಾಣುತ್ತಿದೆಯೆಂದು ಪೆರ್ಲ ಸುಲೇಮಾನ್ ಎಂಬವರು ಕಲ್ಲಡ್ಕಕ್ಕೆ ಬಂದು ತಿಳಿಸಿದ ಮೇರೆಗೆ ತಾನು ಇಬ್ರಾಹಿಂನೊOದಿಗೆ ಸ್ಕೂಟರ್ನಲ್ಲಿ ಪೆರ್ಲಕ್ಕೆ ತೆರಳಿ ಅಲ್ಲಿಂದ ಹೊಳೆಯಲ್ಲಿ ಅಬ್ದುಲ್ಲ ಎಂಬವರ ದೋಣಿಯಲ್ಲಿ ಹೆಣವಿದ್ದ ಸ್ಥಳಕ್ಕೆ ಹೋದುದಾಗಿಯೂ, ಅಲ್ಲಿ ಕಲ್ಲಿನ ಮೇಲೆ ಹೆಣವು ಬೆತ್ತಲೆಯಾಗಿ ಕವುಚಿ ಬಿದ್ದುದನ್ನು ತಾನು ನೋಡಿದುದಲ್ಲದೆ ಹೆಣದ ಗಂಟಲಿನ ಸುತ್ತಲೂ ನೈಲಾನ್ ಹಗ್ಗ ಮತ್ತು ಹುರಿ ಹಗ್ಗ ಸುತ್ತಿದ್ದುದನ್ನು ಕಂಡುದಾಗಿಯೂ ತಿಳಿಸಿದರು.
ಅದು ಇಸ್ಮಾಯಿಲ್ ಅವರ ಶವವೆಂದು ಗುರುತು ಸಿಕ್ಕಿದ ಮೇಲೆ ಅವರಿಬ್ಬರೂ ಅದೇ ದೋಣಿಯಲ್ಲಿ ಪುನ: ದಡಕ್ಕೆ ಬಂದು ಕಲ್ಲಡ್ಕಕ್ಕೆ ಮರಳಿ ಮೃತರ ಸಂಬOಧಿಕರಿಗೆ ಈ ವಿಚಾರ ತಿಳಿಸಿದುದಾಗಿ ಹೇಳಿದ ಅಬ್ದುಲ್ ಹಮೀದ್ ಅವರು, ಅನಂತರ ತಾನು ಆ ಸ್ಥಳಕ್ಕೆ ಮರಳಿ ಅದೇ ದೋಣಿಯಲ್ಲಿ ಹೊಳೆಯ ಆಚೆ ದಡಕ್ಕೆ ಹೋದಾಗ ಬಂಟ್ವಾಳ ಸಬ್ ಇನ್ಸ್ಪೆಕ್ಟರ್ ಮತ್ತು ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಗಳು ಕಾಣಸಿಕ್ಕಿದರೆಂದೂ, ಅವರು ಕೂಡಾ ಅದೇ ದೋಣಿಯಲ್ಲಿ ಹೆಣವಿದ್ದಲ್ಲಿಗೆ ಹೋದರೆಂದೂ ವಿವರಿಸಿದರು.
ಆ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಗಳು ಪೆಟ್ರೋಮ್ಯಾಕ್ಸ್ ಇರಿಸಿ ಅಲ್ಲಿ ಕಾದು ಕೂತರೆಂದೂ, ಸಬ್ ಇನ್ಸ್ಪೆಕ್ಟರ್ ಮರಳಿ ಹೋಗಿ ಸ್ವಲ್ಪ ಹೊತ್ತಿನಲ್ಲಿ ಪುತ್ತೂರು ಡಿಎಸ್ಪಿ ಪಿ. ಭಾಸ್ಕರ್ ಮತ್ತಿತರರು ಬಂದರೆOದೂ, ಪುತ್ತೂರು ಡಿಎಸ್ಪಿಯವರು ಅಲ್ಲಿಂದ ದಡಕ್ಕೆ ಮರಳಿ ಬೆಳಗಿನ ಜಾವ 5.30 ಗಂಟೆಗೆ ಅಲ್ಲಿಗೆ ಬಂದು ಶವದ ಮೇಲೆ ಪರೀಕ್ಷೆ ನಡೆಸಿದರೆಂದೂ, ಆ ಮೇಲೆ ಮರಣೊತ್ತರ ಶಸ್ತ್ರ ಪರಿಕ್ಷೆಯ ನಂತರ ಶವವನ್ನು ತಾ 9-9-76ರಂದು ಪೂರ್ವಾಹ್ನ 11 ಗಂಟೆಗೆ ತಮಗೆ ಬಿಟ್ಟುಕೊಟ್ಟರೆಂದೂ ಅಬ್ದುಲ್ ಹಮೀದ್ ಹೇಳಿದರು.
ಆಮೇಲೆ ಶವವನ್ನು ಪಾಣೆಮಂಗಳೂರಿನವರೆಗೆ ತಂದು, ಅಲ್ಲಿಂದ ಹೆಣದ ಪೆಟ್ಟಿಗೆಯಲ್ಲಿ ಶವವನ್ನು ಇರಿಸಿ ಹೊತ್ತುಕೊಂಡು ಇಸ್ಮಾಯಿಲ್ ಅವರ ಮನೆಗೆ ತಂದರೆOದೂ ತಿಳಿಸಿದ ಅವರು, ಇಸ್ಮಾಯಿಲ್ ಅವರ ಮನೆಯಲ್ಲಿ ಶವದ ಮುಖದ ಬಟ್ಟೆ ತೆಗೆದಾಗ ಇಸ್ಮಾಯಿಲ್ ಅವರ ಮಡದಿ, ತಾಯಿ ಮತ್ತಿತರರು ನೋಡಿ ಇಸ್ಮಾಯಿಲ್ ಅವರ ಹೆಣವೆಂಬುದನ್ನು ಗುರುತಿಸಿದರೆಂದೂ ಅನಂತರ ಶವ ಸಂಸ್ಕಾರ ನಡೆಯಿತೆಂದೂ ಹೇಳಿದರು.
ಕೋರ್ಟಿನಿಂದ ಆಸ್ಪತ್ರೆಗೆ
ಆದರೆ ಇಷ್ಟು ಹೇಳುತ್ತಿರುವಾಗ ಸಾಕ್ಷಿಯು ತಲೆ ತಿರುಗಿ ಬಿದ್ದು ಸ್ಮೃತಿ ತಪ್ಪಿದ ಕಾರಣ ಕೂಡಲೇ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಕೊಂಡು ಹೋಗಿ ಅಲ್ಲಿ ಒಳರೋಗಿಯಾಗಿ ದಾಖಲು ಮಾಡಲಾಯಿತು. ತಾ. 22ರಂದು ಸಂಜೆ ಈ ಘಟನೆ ನಡೆದಿದ್ದು ಅನಂತರ ವಿಚಾರಣೆಯನ್ನು ಮುಂದುವರಿಸಲಾಯಿತು. ಮುಂದಿನ ವಿಚಾರಣೆ ತಾ, 25ರಿಂದ ನಡೆಯಿತು.
ಆರೋಪಿಗಳ ಪರ ವಕೀಲರು ಪತ್ತೆ ಮಾಡಲ್ಪಟ್ಟ ಶವ ಮೃತ ಇಸ್ಮಾಯಿಲ್ರದ್ದಲ್ಲ. ಇದಕ್ಕೆ ನೀವೇನು ಹೇಳುತ್ತೀರಿ?’ ಎಂದು ಒಂದನೇ ಸಾಕ್ಷಿ ನರಸಿಂಹ ಮಡಿವಾಳರ ವಿಚಾರಣೆಯ ವೇಳೆ ಮರು ಸವಾಲು ಹಾಕಿದಾಗ ಇಸ್ಮಾಯಿಲ್ರವರ ಮನೆಗೆ ತಾ 9-9-76ರಂದು ತಂದ ಶವ ಮೃತ ಇಸ್ಮಾಯಿಲ್ ಅವರದ್ದಲ್ಲವೆಂದು ಹೇಳುವುದು ಸರಿಯಲ್ಲ. ನಾನು ಇಸ್ಮಾಯಿಲ್ ಅವರ ಶವವೇ ಎಂದು ಗುರುತಿಸಿದ್ದೇನೆ’ ಎಂದು ಉತ್ತರ ನೀಡಿದರು.
2ನೇ ಸಾಕ್ಷಿ ಪದ್ಮನಾಭ ರೈಯವರೂ ಆರೋಪಿ ಪರ ವಕೀಲರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಇಸ್ಮಾಯಿಲ್ ಅವರ ಶವವನ್ನು ನಾನು ಗುರುತಿಸಿದ್ದೇನೆ. ಗುರುತಿಸಲಾರದಷ್ಟು ಮುಖ ವಿಕಾರವಾಗಿರಲಿಲ್ಲ' ಎಂದು ಹೇಳಿದರು. ಸದಾನಂದ ಪೈ ಸಾಕ್ಷಿ ಮೃತ ಇಸ್ಮಾಯಿಲ್ ಅವರಿಗೂ ತಮಗೂ ಇದ್ದ ಪರಿಚಯ, ಸಂಬOಧವನ್ನು ವಿವರಿಸಿದ ಮೂರನೇ ಸಾಕ್ಷಿ ಸದಾನಂದ ಪೈ ಅವರು ತಾವು ಮತ್ತು ಇಸ್ಮಾಯಿಲ್ರವರು ಅಡಳಿತ ಕಾಂಗ್ರೆಸ್ನ ಸಕ್ರಿಯ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದುದನ್ನು ತಿಳಿಸಿದರು.

1974ರಲ್ಲಿ ಸಚಿವ ರಂಗನಾಥ ಅವರ ಕಾರಿಗೆ ಕಲ್ಲು ಹೊಡೆದ ಪ್ರಕರಣದಲ್ಲಿ ತಾವು ಮತ್ತು ಇಸ್ಮಾಯಿಲ್ ಇಬ್ಬರೂ ಪ್ರಾಸಿಕ್ಯೂಷನ್ ಪರ ಸಾಕ್ಷಿ ಹೇಳಿದುದಾಗಿ ಪೈಯವರು ತಿಳಿಸಿ ಆ ಪ್ರದರ್ಶನ ಪ್ರಭಾಕರ ಭಟ್ಟರ ಮುಖಂಡತ್ವದಲ್ಲಿ ನಡೆದಿತ್ತೆಂದರು. 1971ರ ಪಾರ್ಲಿಮೆಂಟ್ ಚುನಾವಣೆಯ ಸಂದರ್ಭದಲ್ಲಿ ಪ್ರಬಾಕರ ಭಟ್ ಮತ್ತು ಇಸ್ಮಾಯಿಲ್ರ ನಡುವೆ ನಡೆದಿದ್ದ ಘರ್ಷಣೆಯನ್ನು ವಿವರಿಸಿದ ಸದಾನಂದ ಪೈಯವರು 1975ರಲ್ಲಿ ಕಾಂಗ್ರೆಸ್ ಸರಕಾರ ತುರ್ತು ಪರಿಸ್ಥಿತಿ ಜಾರಿ ಮಾಡಿದ ಬಳಿಕ ತಾವಿಬ್ಬರೂ ಸರಕಾರಕ್ಕೆ ವಿರೋಧವಾದ ಚಟುವಟಿಕೆಗಳ ಕುರಿತು ಪೊಲೀಸರಿಗೆ ವರ್ತಮಾನ ಕೊಡುತ್ತಿದ್ದುದು ನಿಜವೆಂದರು.

1976ರ ಜೂನ್ ಮಧ್ಯದಲ್ಲಿ ಮೃತ ಇಸ್ಮಾಯಿಲ್ ಅವರಿಗೆ ಒಂದು ಅನಾಮಧೇಯ ಬೆದರಿಕೆಯ ಇನ್ಲ್ಯಾಂಡ್ ಲೆಟರ್ ಬಂದಿದ್ದನ್ನು ಅವರು ತಮಗೆ ತೋರಿಸಿದ್ದಾರೆಂದು ಹೇಳಿದ ಪೈಯವರು ಆ ಪತ್ರದಲ್ಲಿ
ಶ್ರೀಯುತ ಇಸ್ಮಾಯಿಲ್ ಅವರಿಗೆ, ನಿಮಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ನೀವು ಪ್ರಭಾಕರ ಭಟ್ಟರನ್ನು ಮೀಸಾದಲ್ಲಿ ಕಳುಹಿಸಿರುತ್ತೀರಿ. ಇನ್ನು ಮುಂದೆಯೂ ಜನಸಂಘ ಮತ್ತು ಆರೆಸ್ಸೆಸ್ ಕಾರ್ಯಕರ್ತರಿಗೆ ಇದೇ ರೀತಿ ಉಪದ್ರವ ಕೊಟ್ಟಲ್ಲಿ ನೀವು ಜೀವಂತವಾಗಿ ಉಳಿಯಲಾರಿರಿ. ನಮ್ಮ ಸಂಘಟನೆಯು ಹಳ್ಳಿಯಿಂದ ದಿಲ್ಲಿಯವರೆಗೆ ಇದೆ. ಇದು ನಿಮಗೆ ಕಡೆಯ ಪತ್ರ. ಜಾಗ್ರತೆ! ಜಾಗ್ರತೆ! ಸ್ವ. ಸು’ ಎಂದು ಬರೆಯಲಾಗಿತ್ತೆಂದು ವಿವರಿಸಿದರು.
ತಾವು ಮತ್ತು ಪದ್ಮನಾಭ ರೈ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ತುರ್ತು ಪರಿಸ್ಥಿತಿಯ ಲಾಭ ಪಡೆದು ಜನರನ್ನು ಪೊಲೀಸರ ಸಹಕಾರದಿಂದ ಪೀಡಿಸುತ್ತಿದ್ದೇವೆಂದು ಹೇಳಿದ ಮಾತುಗಳು ತೀರಾ ಸುಳ್ಳೆಂದು ಪೈ ಹೇಳಿದರು.
ಶಿವರಾಮ ಶೆಟ್ಟರ ಸಾಕ್ಷಿ
4-9-76ರಂದು ರಾತ್ರಿ ತಮಗೆ ಬಂದ ಫೋನ್ ಕರೆ, 5-9-76 ಮುಂಜಾನೆ ನರಸಿಂಹ ಮಡಿವಾಳ ಮತ್ತಿತರರು ಬಂದು ಇಸ್ಮಾಯಿಲ್ ಕಾಣೆಯಾದುದನ್ನು ತಿಳಿಸಿದ ರೀತಿ, ಅನಂತರ ಬಂಟ್ವಾಳ ಪೊಲೀಸ್ ಸ್ಟೇಷನ್ನಲ್ಲಿ ದೂರು ನೀಡಿದುದು ಮೊದಲಾದ ಅಂಶಗಳನ್ನು ವಿವರಿಸಿದ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಮ ಶೆಟ್ಟಿಯವರು ತಾ 8-9-76ರಂದು ರಾತ್ರಿ ಸುಮಾರು 11 ಗಂಟೆಗೆ ಹೆಣ ಸಿಕ್ಕಿದ ವರ್ತಮಾನ ತಿಳಿದು ನಾನು 9-9-76ರಂದು ಬೆಳಿಗ್ಗೆ 4 ಗಂಟೆಗೆ ಕಲ್ಲಡ್ಕಕ್ಕೆ ಬಂದೆ. ಅಲ್ಲಿ ಬೆಟ್ಟ ಈಶ್ವರ ಭಟ್ಟರು ಸಿಕ್ಕಿದರು. ಅವರ ಕಾರಿನಲ್ಲಿ ಸರಪಾಡಿಗೆ ಹೋಗಿ ಬೆಳಗ್ಗೆ ಸುಮಾರು 5.45ಕ್ಕೆ ಶವವನ್ನು ನೋಡಿದಾಗ ಶವದ ಮೇಲೆ ಬಟ್ಟೆಗಳೇನೂ ಇರಲಿಲ್ಲ.
ಅದು ಇಸ್ಮಾಯಿಲ್ ಅವರ ಶವವೆಂದು ಗುರುತು ಹಿಡಿದೆ. ಶವದ ಕುತ್ತಿಗೆಯಲ್ಲಿ ನೈಲಾನ್ ಹಗ್ಗ ಮತ್ತು ಹುರಿ ಹಗ್ಗಗಳಿದ್ದವು. ಪೊಲೀಸರು ಮಹಜರು ನಡೆಸಿದರು. ಮಹಜರಿಗೆ ನಾನೂ ಸಹಿ ಹಾಕಿದ್ದೇನೆ’ ಎಂದು ವಿವರಿಸಿದರು. ಇಸ್ಮಾಯಿಲ್ ಪತ್ನಿ ಸಾಕ್ಷಿ ತಮ್ಮ ಮನೆಯಲ್ಲಿರುವವರ ವಿವರಗಳನ್ನು ನೀಡಿದ ಮೃತ ಇಸ್ಮಾಯಿಲ್ ಅವರ ಪತ್ನಿ ಬೀಫಾತಿಮಾ ಅವರು 3-9-76ರಂದು ಮಂಗಳೂರಿಗೆ ಹೋಗಿದ್ದ ತನ್ನ ಪತಿ 4-9-76ರಂದು ಬೆಳಗ್ಗೆ ಕಲ್ಲಡ್ಕಕ್ಕೆ ಮರಳಿ ಬಂದಿದ್ದರೆOದೂ, ಕೆಲಸದವನ ಮೂಲಕ ಬೀಗದ ಕೈ ತರಿಸಿ ಅಂಗಡಿಯ ಬಾಗಿಲು ತೆರೆದ ನಂತರ ಮನೆಗೆ ಬಂದು ಮುಖ ತೊಳೆದು ಪುನ: ಅಂಗಡಿಗೆ ಹೋಗಿದ್ದರೆಂದೂ ರಮ್ಜಾನ್ ಸಂಬಂಧ ಹಗಲು ಅವರು ಉಪವಾಸವಿದ್ದು, ಸಾಯಂಕಾಲ 6.30ರ ಸಮಯ ಟಿಫಿನ್ ಕ್ಯಾರಿಯರ್ನಲ್ಲಿ ಅಕ್ಕಿ ರೊಟ್ಟಿ, ಗೋಧಿ ಪಾಯಸ, ಹೀರೆಕಾಯಿ ಪಲ್ಯವನ್ನು, ಒಂದು ಸೀಯಾಳವನ್ನು ಕೊಟ್ಟು ತಾನು ಕಳುಹಿಸಿರುವುದಾಗಿಯೂ, ಅವಳು ರಾತ್ರಿ 9.30ಕ್ಕೆ ಖಾಲಿ ಟಿಫಿನ್ ಕ್ಯಾರಿಯರ್ ತಂದಳೆOದೂ ವಿವರಿಸಿದರು. ಅನಂತರ ಮನೆಯಲ್ಲಿ ತಾವೆಲ್ಲರೂ ಮಲಗಿದ್ದು 11 ಗಂಟೆಗೊಮ್ಮೆ ತಾನು ಎದ್ದು ಹೊರಗೆ ನೋಡಿದಾಗ ಅಂಗಡಿಯ ಎರಡು ಬಾಗಿಲು ತೆರೆದಿತ್ತೆಂದೂ, ಅದನ್ನು ನೋಡಿ ತಾನು ಮತ್ತೆ ಮಲಗಿದುದಾಗಿಯೂ, ಬಳಿಕ 2.30ರ ಸಮಯ ಪುನ: ಎದ್ದು ನೋಡಿದಾಗಲೂ ಅಂಗಡಿ ಬಾಗಿಲು ತೆರೆದು ಒಳಗೂ ಹೊರಗೂ ಲೈಟ್ ಉರಿಯುತ್ತಿತ್ತಲ್ಲದೆ ಅಂಗಡಿಯ ಎದುರು ಒಂದು ಸೈಕಲ್ ನಿಂತಿತ್ತೆಂದೂ ಅವರು ತಿಳಿಸಿದರು. ಸ್ವಲ್ಪ ಹೊತ್ತಿನ ನಂತರ ಯಾರೋ ಬಾಗಿಲು ಬಡಿದ ಶಬ್ದ ಕೇಳಿ ತಮ್ಮ ತಂದೆ ಬಾಗಿಲು ತೆರೆದರೆಂದೂ, ಪದ್ಮನಾಭ ರೈಯವರು ಬೀಗದ ಕೈಯನ್ನು ತನ್ನ ತಂದೆಯವರಿಗೆ ಕೊಟ್ಟುದಲ್ಲದೆ ನರಸಿಂಹ ಮಡಿವಾಳರು ಟಾರ್ಚ್ಲೈಟನ್ನು ತನ್ನ ಕೈಯ್ಯಲ್ಲಿ ಕೊಟ್ಟು ಅವರುಇಸ್ಮಾಯಿಲ್ರನ್ನು 11 ಗಂಟೆಗೆ ಪೊಲೀಸ್ ಜೀಪಿನಲ್ಲಿ ಕರೆದುಕೊಂಡು ಹೋಗಿದ್ದಾರೆ’ ಎಂದು ತಿಳಿಸಿದಾಗ ತಾನು ಸ್ವಲ್ಪ ಗಲಾಟೆ ಮಾಡಿದುದಾಗಿಯೂ ಹೇಳಿದರು.
ತನ್ನ ಪತಿ ಕಾಣೆಯಾದ ದಿನ ಅವರು ಬಿಳಿ ಅಂಗಿ, ಬಿಳಿ ವೇಸ್ಟಿ, ಬನಿಯನ್, ಕೈಗೆ ವಾಚ್, ಕಾಲಿಗೆ ಚಪ್ಪಲ್ ಹಾಕಿಕೊಂಡು ಹೋಗಿದ್ದರೆಂದು ತಿಳಿಸಿದ ಬೀಫಾತಿಮಾ ಅವರು ಸಿಓಡಿ ಪೊಲೀಸರು ತನಿಖೆ ಸಮಯ ಜಪ್ತಿ ಮಾಡಿ ಸ್ವಾಧೀನ ಪಡಿಸಿಕೊಂಡ ಚಡ್ಡಿಯ ತುಂಡು ಮತ್ತು ಚಪ್ಪಲಿಗಳನ್ನು ತೋರಿಸಿದಾಗ ಅವು ತನ್ನ ಗಂಡನದೇ ಎಂಬುದನ್ನು ತಾನು ಗುರುತಿಸಿರುವುದಾಗಿಯೂ ಕೋರ್ಟಿನಲ್ಲಿ ಅವುಗಳನ್ನು ತೋರಿಸಿದರು.
ತನ್ನ ಗಂಡನ ಬಟ್ಟೆಗಳನ್ನೆಲ್ಲ 1 ನೇ ಸಾಕ್ಷಿ ನರಸಿಂಹ ಮಡಿವಾಳನೇ ಮಡಿ ಮಾಡುತ್ತಿದ್ದು, ಆ ಬಟ್ಟೆಗಳಲ್ಲಿ `ದೋಬಿ ಮಾರ್ಕ್’ ಮಾಡುತ್ತಿದ್ದರೆಂದೂ ಅವರು ಹೇಳಿದರು.
ತಾ.9-9-76ರಂದು ತನ್ನ ಗಂಡನ ಶವವನ್ನು ಸುಮಾರು ಅಪರಾಹ್ನ 2 ಅಥವಾ 2.30ರ ಸಮಯ ತನ್ನ ಮನೆಗೆ ತಂದರೆOದೂ ಮುಖವನ್ನು ನೋಡಿ ತನ್ನ ಗಂಡನ ಶವ ಎಂಬುದನ್ನು ತಾನು ಗುರುತಿಸಿರುವುದಾಗಿಯೂ ಬೀಫಾತಿಮಾ ಅವರು ಉತ್ತರಿಸಿದರು.
ಮುಂದುವರಿಯುವುದು…































