ಸುಹಾಸ್ ಶೆಟ್ಟಿ ಹತ್ಯೆ : ಅಲ್ಲಲ್ಲಿ ಪ್ರತಿದಾಳಿ


ಮಂಗಳೂರು:ಬಜಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಿಂದು ಸಂಘಟನೆಗೆ ಸೇರಿದ ಸುಹಾಸ್ ಶೆಟ್ಟಿಯ ಬರ್ಬರ ಕೊಲೆ ಕೃತ್ಯವನ್ನು ಖಂಡಿಸಿ ಹಿಂದು ಪರ ಸಂಘಟನೆಗಳು ಶುಕ್ರವಾರದಂದು ದಕ್ಷಿಣ ಕನ್ನಡ ಜಿಲ್ಲೆ ಬಂದ್ ಕರೆ ನೀಡಿತ್ತು. ಅದೇ ಸಂದರ್ಭದಲ್ಲಿ ಮಂಗಳೂರು ಪರಿಸರ ಹಾಗೂ ಉಡುಪಿಯಲ್ಲಿ ಕೆಲವೊಂದು ಅಹಿತಕರ ಘಟನೆ ನಡೆದಿದೆ.
ಮೀನು ವ್ಯಾಪಾರಿಯ ಕೊಲೆ ಯತ್ನ !

ಮಂಗಳೂರು ನಗರದ ಕುಂಟಿಕಾನದಲ್ಲಿ ಮೀನು ವ್ಯಾಪಾರಿಯೋರ್ವರು ಗ್ರಾಹಕರೊಬ್ಬರನ್ನು ಕಾಯುತ್ತಿದ್ದಾಗ, ಅವರ ಮೇಲೆ ಕಲ್ಲು ಹೊತ್ತು ಹಾಕಿ ಕೊಲೆಗೆ ಯತ್ನಿಸಿರುವ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಹಲ್ಲೆಗೊಳಗಾದ ಮೀನು ವ್ಯಾಪಾರಿಯನ್ನು ಉಳ್ಳಾಲದ ಲುಕ್ಕಾನ್ ಎಂದು ಗುರುತಿಸಲಾಗಿದೆ.
ಶುಕ್ರವಾರ ಬೆಳಗ್ಗೆ 6.30ರ ಸುಮಾರಿಗೆ ಮೀನು ವ್ಯಾಪಾರಿಯಾಗಿರುವ ಲುಕ್ಕಾನ್, ಕುಂಟಿಕಾನದಲ್ಲಿ ಮೀನು ಕೊಡಲು ಗ್ರಾಹಕರೋರ್ವರನ್ನು ಕಾಯುತ್ತಿದ್ದರು. ಆ ವೇಳೆ ಕಪ್ಪು ಬಣ್ಣದ ಇನ್ನೋವಾ ಕಾರಿನಲ್ಲಿ ಬಂದ ತಂಡವು, ಲುಕ್ಕಾನ್ ಅವರ ಮೇಲೆ ಹಲ್ಲೆ ಮಾಡಿದೆ ಎಂದು ತಿಳಿದು ಬಂದಿದೆ.
ತಪ್ಪಿಸಿಕೊಂಡು ಓಡಿ ಹೋಗಲು ನೋಡಿದಾಗ ಅಟ್ಟಾಡಿಸಿಕೊಂಡು ಬಂದು ಲುಕ್ಕಾನ್ ಅವರನ್ನು ಕೆಳಗೆ ಬೀಳಿಸಿದ ತಂಡವು ಅವರ ಮೇಲೆ ಕಲ್ಲು ಹೊತ್ತು ಹಾಕಿ ಕೊಲೆಗೆ ಪ್ರಯತ್ನಿಸಿದೆ. ಅದನ್ನು ನೋಡಿದ ಸ್ಥಳೀಯ ಹಿಂದೂ ಮಹಿಳೆಯೊಬ್ಬರು ಬೊಬ್ಬೆ ಹೊಡೆದು ರಕ್ಷಣೆಗೆ ಮುಂದಾಗಿದ್ದರಿಂದ ಜೀವಾಪಾಯದಿಂದ ಪಾರಾಗಿದ್ದೇನೆ ಎಂದು ಲುಕ್ಕಾನ್ ತಿಳಿಸಿದ್ದಾರೆ.
ಗಾಯಾಳು ಲುಕ್ಕಾನ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ತೊಕ್ಕೊಟ್ಟು ಒಳಪೇಟೆಯಲ್ಲಿ ದಾಳಿ

ಉಳ್ಳಾಲ: ಯುವಕನ ಮೇಲೆ ತಂಡವೊಂದು ದಾಳಿ ನಡೆಸಿದ ಘಟನೆ ತೊಕ್ಕೊಟ್ಟು ಒಳಪೇಟೆ ಬಳಿ ನಡೆದಿದೆ.
ಅಳೇಕಲ ನಿವಾಸಿ ಫೈಝಲ್ ಘಟನೆಯಲ್ಲಿ ಗಾಯಗೊಂಡವರು.
ಫೈಝಲ್ ಅವರು ಕಲ್ಲಾಪು ಮಾರುಕಟ್ಟೆ ಗೆ ಬರುತ್ತಿದ್ದ ವೇಳೆ ಒಳಪೇಟೆ ಬಳಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ಯುವಕನಿಗೆ ಚೂರಿ ಇರಿತ

ಮಂಗಳೂರು: ನಗರದ ಹೊರವಲಯದ ಕಣ್ಣೂರಿನಲ್ಲಿ ಶುಕ್ರವಾರ ಮುಂಜಾನೆ ರಸ್ತೆ ಬದಿ ನಿಂತಿದ್ದ ನೌಶಾದ್ ಎಂಬ ಯುವಕರೋರ್ವರಿಗೆ ಚೂರಿಯಿಂದ ಇರಿದ ಘಟನೆ ನಡೆದಿದೆ.
ತೊಕ್ಕೊಟ್ಟು ಸಮೀಪದ ಕಲ್ಲಾಪು ಮಾರ್ಕೆಟ್ಗೆ ತೆರಳಲು ನೌಶಾದ್ ಮುಂಜಾನೆ 3ಗಂಟೆ ಸುಮಾರಿಗೆ ಅಡ್ಯಾರ್ ಕಣ್ಣೂರು ಹೆದ್ದಾರಿಯಲ್ಲಿ ನಿಂತಿದ್ದರು. ಈ ವೇಳೆ ಎರಡು ದ್ವಿಚಕ್ರ ವಾಹನಗಳಲ್ಲಿ ಆಗಮಿಸಿದ ನಾಲ್ವರು ದುಷ್ಕರ್ಮಿಗಳು ನೌಷಾದ್ ಬೆನ್ನಿಗೆ ಚೂರಿಯಿಂದ ಇರಿದ್ದಾರೆ ಎನ್ನಲಾಗಿದೆ. ತಕ್ಷಣ ನೌಶಾದ್ ಅವರು ಓಡಿ ತಪ್ಪಿಸಿಕೊಂಡಿದ್ದು, ಬಳಿಕ ಸ್ಥಳೀಯರು ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ರಿಕ್ಷಾ ಚಾಲಕನ ಮೇಲೆ ದಾಳಿಗೆ ಯತ್ನ : ಇಬ್ಬರ ಬಂಧನ

ಉಡುಪಿ: ರಿಕ್ಷಾ ಚಾಲಕರೊಬ್ಬರ ಮೇಲೆ ಇಬ್ಬರು ದುಷ್ಕರ್ಮಿಗಳು ದಾಳಿ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಉಡುಪಿಯ ಶೇಡಿಗುಡ್ಡೆ ಬಳಿ ನಡೆದಿದೆ.
ಹಿರಿಯಡ್ಕ ಬೊಮ್ಮರಬೆಟ್ಟುವಿನ ಸಂದೇಶ್ (31) ಮತ್ತು ಬಾಪೂಜಿ ದರ್ಖಾಸು ನಿವಾಸಿ ಸುಶಾಂತ್ (32) ಬಂಧಿತ ಆರೋಪಿಗಳು.
ಅಬುಬಕ್ಕರ್(50) ಎಂಬುವವರು ಆಟೋ ರಿಕ್ಷಾದಲ್ಲಿ ಆತ್ರಾಡಿಯಿಂದ ಮದಗ ಕಡೆಗೆ ಮುಖ್ಯರಸ್ತೆಯಲ್ಲಿ ಬರುತ್ತಿರುವಾಗ ಆತ್ರಾಡಿ ಗ್ಯಾಸ್ ಪೆಟ್ರೋಲ್ ಬಂಕ್ ಬಳಿ ಬೈಕ್ ನಲ್ಲಿ ಬಂದ ಇಬ್ಬರು ಅವಾಚ್ಯ ಶಬ್ದಗಳಿಂದ ಬೈದಿದ್ದು, ಅಲ್ಲದೇ ಅಬುಬಕ್ಕರ್ ಅವರ ಆಟೋರಿಕ್ಷಾವನ್ನು ಅಡ್ಡಗಟ್ಟಿ ನಿಲ್ಲಿಸಲು ಪ್ರಯತ್ನಿಸಿದ್ದಾರೆ.
ಗಾಡಿಯನ್ನು ನಿಲ್ಲಿಸದೇ ಮುಂದೆ ಬಂದಾಗ, ಹಿಂಬದಿ ಕುಳಿತ ವ್ಯಕ್ತಿಯ ಕೈಯಲ್ಲಿ ತಲವಾರು ರೀತಿಯ ಆಯುಧವಿದ್ದು, ಅವರಲ್ಲಿ ಒಬ್ಬ ವ್ಯಕ್ತಿ ಅಬುಬಕ್ಕರ್ ಅವರನ್ನು ಉದ್ದೇಶಿಸಿ “ಆಯನ್ ಕಡುಪು ಬುಡೊಚ್ಚಿ” ಎಂಬುದಾಗಿ ಹೇಳಿದ್ದು ಅಬುಬಕ್ಕರ್ ಅವರು ಶೇಡಿಗುಡ್ಡೆ ಬಳಿ ರೋಸ್ ಬಸ್ಸಿನವರ ಮನೆ ಬಳಿ ಇರುವ ರಸ್ತೆಯಲ್ಲಿ ಆಟೋ ರಿಕ್ಷಾವನ್ನು ನಿಲ್ಲಿಸಿ ಓಡಲು ಪ್ರಶ್ನಿಸಿದಾಗ ಬೈಕ್ ನಲ್ಲಿದ್ದ ಒಬ್ಬ ವ್ಯಕ್ತಿಯು ತನ್ನ ಕೈಯಲ್ಲಿದ್ದ ತಲವಾರಿನಿಂದ ಅಬುಬಕ್ಕರ್ ಅವರ ತಲೆಗೆ ಬೀಸಿದ್ದಾನೆ.
ಇನ್ನೊಬ್ಬ ವ್ಯಕ್ತಿಯು ಯಾವುದೋ ಬಾಟಲಿಯನ್ನು ಕೈ ಯಲ್ಲಿ ಹಿಡಿದು ಆಟೋ ರಿಕ್ಷಾದ ಮುಂಬಾಗದ ಗ್ಲಾಸಿಗೆ ಹೊಡೆದಿರುತ್ತಾನೆ, ಅವರು ಕೊಲ್ಲುವ ಉದ್ದೇಶದಿಂದ ಈ ರೀತಿ ಮಾಡುತ್ತಿರುವುದನ್ನು ತಿಳಿದು ಬಂದಿದೆ.
.
ಅಬುಬಕ್ಕರ್ ಅಲ್ಲೇ ಪಕ್ಕದಲ್ಲಿದ್ದ ಕಂಪೌಂಡ್ ನ್ನು ಜಿಗಿದು ಓಡಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಗುರುವಾರ ರಾತ್ರಿ ದ.ಕ. ಜಿಲ್ಲೆಯ ಬಜೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಈ ಕೃತ್ಯ ಎಸಗಿರುವುದಾಗಿ ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ.












