


ಸಿಓಡಿ ಪೊಲೀಸರಿಂದ ತನಿಖೆ ಆರಂಭ
ಭಾಗ-೪
ಕಲ್ಲಡ್ಕ ಇಸ್ಮಾಯಿಲ್ ನಿಗೂಢ ನಾಪತ್ತೆ ಹಾಗೂ ಹತ್ಯೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದು ರಾಜ್ಯ ಸಿಓಡಿ ಪೊಲೀಸರು. ಸಿಓಡಿ ಎಸ್ಪಿ ಎಲ್. ರೇವಣ್ಣಸಿದ್ದಯ್ಯ ಅವರ ನೇತೃತ್ವದಲ್ಲಿ ಸಿಓಡಿ ಇನ್ಸ್ಪೆಕ್ಟರ್ ಸಿದ್ದಲಿಂಗಪ್ಪ ಮತ್ತು ಹತ್ತಕ್ಕೂ ಹೆಚ್ಚು ಅಧಿಕಾರಿಗಳು ಈ ತನಿಖೆಯಲ್ಲಿ ತಲ್ಲೀನರಾಗಿದ್ದರು.
ಸಿಓಡಿ ತನಿಖಾಧಿಕಾರಿಗಳ ತಂಡ ಮೊದಲು ಸಂಶಯ ಪಟ್ಟದ್ದೇ ಪೊಲೀಸರ ಮೇಲೆ. ಅದಕ್ಕೆ ಕಾರಣವೂ ಇತ್ತು.
ಇಸ್ಮಾಯಿಲ್ ಅವರನ್ನು ಕರೆದುಕೊಂಡು ಹೋಗಿರುವುದು ಪೊಲೀಸ್ ಜೀಪನ್ನು ಹೋಲುವಂತಹ ಡೀಸೆಲ್ ಚಾಲಿತ ಜೀಪಿನಲ್ಲಿ. ಆದ್ದರಿಂದ ಬಂಟ್ವಾಳ ಪರಿಸರದಲ್ಲಿ ಇಂತಹ ಜೀಪುಗಳ ಬಗ್ಗೆ ತನಿಖೆ ನಡೆಸಿದರು.
ಆದರೆ ಯಾವುದೇ ಮಾಹಿತಿ ದೊರಕಿರಲಿಲ್ಲ. ಇಸ್ಮಾಯಿಲ್ ಅವರನ್ನು ಪೊಲೀಸ್ ಸಮವಸ್ತ್ರದಲ್ಲಿ ಇದ್ದಂತಹ ವ್ಯಕ್ತಿಗಳು ಕರೆದುಕೊಂಡು ಹೋಗಿ ಕುತ್ತಿಗೆಗೆ ನೈಲಾನ್ ಮತ್ತು ಹುರಿ ಹಗ್ಗ ಬಿಗಿದು ಕೊಲೆ ಮಾಡಿರುವುದು ಖಚಿತವಾಗಿದ್ದರಿಂದ ಕೆಲವು ಇಲಾಖೆಯಿಂದ ವಿವಿಧ ಕಾರಣಗಳಿಂದ ಅಮಾನತು ಅಥವಾ ವಜಾಗೊಂಡಿರುವ ಪೊಲೀಸರ ಬಗ್ಗೆಯೂ ತನಿಖೆ ನಡೆಯಿತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.
ಇಸ್ಮಾಯಿಲ್ ಅವರಿಗೆ ವಿದೇಶಿ ಸೊತ್ತುಗಳ ವ್ಯವಹಾರ ಇತ್ತು. ಕಸ್ಟಮ್ಸ್ ಸುಂಕ ಪಾವತಿ ಮಾಡದೆ ಕಳ್ಳ ದಾರಿಯಲ್ಲಿ ಬರುವಂತಹ ಸೊತ್ತುಗಳನ್ನು ತಂದು ಕಂತು ರೂಪದಲ್ಲಿ ಅವರು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದಿದ್ದ ಕಸ್ಟಮ್ಸ್ ಇಲಾಖೆಯವರು ಇಸ್ಮಾಯಿಲ್ ಅವರನ್ನು ಕರೆದುಕೊಂಡು ಹೋಗಿರಬಹುದೇ ಎಂಬ ಬಗ್ಗೆಯೂ ತನಿಖೆ ನಡೆದಿತ್ತು.
ಅದು ಪ್ರಯೋಜನಕ್ಕೆ ಬಂದಿರಲಿಲ್ಲ. ಆ ಸಂದರ್ಭದಲ್ಲಿ ಅಂತಾರಾಜ್ಯ ಅಕ್ಕಿ ಸಾಗಾಟಕ್ಕೆ ನಿರ್ಬಂಧ ಇತ್ತು. ಪರಿಣಾಮವಾಗಿ ನೂರಾರು ಮಂದಿ ಕೇರಳಕ್ಕೆ ವಿವಿಧ ರೂಪದಲ್ಲಿ ಅಕ್ಕಿಯನ್ನು ಕಳ್ಳ ದಾರಿಯಲ್ಲಿ ಸಾಗಾಟ ಮಾಡುತ್ತಿದ್ದರು. ಕೇರಳಕ್ಕೆ ಕಲ್ಲಡ್ಕ ಮೂಲಕವೇ ಅಕ್ಕಿ ಸಾಗಾಟ ಆಗುತ್ತಿತ್ತು. ಈ ಕಳ್ಳಸಾಗಾಟವನ್ನು ತಡೆಯಲು ಪೊಲೀಸರು ಮತ್ತು ಕಂದಾಯ ಇಲಾಖೆಯ ವಿಶೇಷ ತಂಡಗಳು ಪ್ರಯತ್ನ ನಡೆಸುತ್ತಿತ್ತು. ನೂರಾರು ಮಂದಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಈ ಅಕ್ಕಿ ಸಾಗಾಟದ ಬಗ್ಗೆ ಇಸ್ಮಾಯಿಲ್ ಅವರು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು ಎಂಬ ಸಂಶಯಗಳಿತ್ತು.

ಅಕ್ಕಿ ಸಾಗಾಟ ನಿರ್ಬಂಧವನ್ನು ತೆಗೆಯಬೇಕೆಂದು ಜನಸಂಘದ ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದರು. ರಾಜ್ಯ ಸರಕಾರದ ಸಚಿವ ಕೆ.ಎಚ್. ರಂಗನಾಥ್ ಅವರು ದ.ಕ. ಜಿಲ್ಲಾ ಪ್ರವಾಸಕ್ಕೆ ಬಂದಿದ್ದ ಸಂದರ್ಭದಲ್ಲಿ ಜನಸಂಘ ಹಾಗೂ ಆರೆಸ್ಸೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನೆ ವಿಕೋಪಕ್ಕೆ ಹೋಗಿದ್ದು ಸಚಿವ ರಂಗನಾಥ್ ಅವರ ತಲೆಯ ಭಾಗಕ್ಕೆ ಕಲ್ಲೇಟು ಬಿದ್ದು ಗಾಯವಾಗಿತ್ತು. ಈ ಸಂಬಂಧವಾಗಿ ಆರೆಸ್ಸೆಸ್ ಪ್ರಮುಖ ಕಲ್ಲಡ್ಕ ಪ್ರಭಾಕರ ಭಟ್ ಸಹಿತ ಹಲವರ ಮೇಲೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು.
ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರವಾಗಿ ಕಲ್ಲಡ್ಕ ಇಸ್ಮಾಯಿಲ್, ಸದಾನಂದ ಪೈ ಮತ್ತಿತರ ಕಾಂಗ್ರೆಸ್ ಕಾರ್ಯಕರ್ತರು ಸಾಕ್ಷಿದಾರರಾಗಿದ್ದರು.
ಈ ಪ್ರಕರಣ ಬಂಟ್ವಾಳ ನ್ಯಾಯಾಲಯದಲ್ಲಿ ವಿಚಾರಣೆ ನಡೆದ ಸಂದರ್ಭದಲ್ಲಿ ಕಲ್ಲಡ್ಕ ಇಸ್ಮಾಯಿಲ್ ಮತ್ತಿತರರು ಪ್ರಾಸಿಕ್ಯೂಷನ್ ಪರವಾಗಿ ಸಾಕ್ಷಿ ನುಡಿದಿದ್ದರು. ಆದರೆ ಆ ಪ್ರಕರಣ ನ್ಯಾಯಾಲಯದಲ್ಲಿ ಬಿದ್ದು ಹೋಗಿತ್ತು. ಈ ಹಿನ್ನೆಲೆಯಲ್ಲಿ ಕಲ್ಲಡ್ಕ ಇಸ್ಮಾಯಿಲ್ ಅವರ ಕೊಲೆ ನಡೆದಿರಬಹುದೇ ಎಂಬ ಬಗ್ಗೆ ಸಿಓಡಿ ಪೊಲೀಸರು ತನಿಖೆಯನ್ನು ಕೇಂದ್ರೀಕರಿಸಿದ್ದರು.
ಯಾಕೆಂದರೆ ಇಸ್ಮಾಯಿಲ್ ಅವರು ನಾಪತ್ತೆಯಾಗಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿ ತಿಂಗಳು ನಾಲ್ಕು ಕಳೆದರೂ ನಿರ್ದಿಷ್ಟ ಆರೋಪಿಗಳನ್ನು ಗುರುತಿಸಲು ಸಿಓಡಿ ಪೊಲೀಸರಿಗೆ ಸಾಧ್ಯವಾಗಿರಲಿಲ್ಲ.
ರಾಜ್ಯದಲ್ಲಿ ಡಿ. ದೇವರಾಜ ಅರಸು ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ತಿತ್ವದಲ್ಲಿದ್ದರೂ ಇಸ್ಮಾಯಿಲ್ ಅವರ ಹಂತಕರನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ ಎಂದು ಅಂದಿನ ವಿರೋಧ ಪಕ್ಷಗಳ ಶಾಸಕರು ಮತ್ತು ಆಡಳಿತ ಪಕ್ಷದ ಶಾಸಕರೂ ಸರಕಾರದ ಮೇಲೆ ಒತ್ತಡ ತಂದಿದ್ದರು.
ರಾಜ್ಯ ವಿಧಾನಸಭೆಯ ಅಧಿವೇಶನದಲ್ಲೂ ಸಹ ಈ ವಿಚಾರ ಪ್ರಸ್ತಾಪವಾಗಿ ಸರಕಾರಕ್ಕೆ ಮುಜುಗರವಾಗಿತ್ತು. ಸರಕಾರದ ಪರವಾಗಿ ನಿರ್ದಿಷ್ಟ ರೀತಿಯಲ್ಲಿ ಉತ್ತರ ಕೊಡುವಲ್ಲಿ ಅಂದಿನ ಮುಖ್ಯಮಂತ್ರಿ, ಗೃಹ ಸಚಿವರು ವಿಫಲರಾಗಿದ್ದರು. ಇದರಿಂದ ಸರಕಾರದ ಪ್ರಮುಖರು ಸಿಓಡಿ ತನಿಖಾಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದರು. ಆದರೆ ಸಿಓಡಿ ತನಿಖಾಧಿಕಾರಿಗಳು ಅತ್ಯಂತ ಜಟಿಲವಾಗಿದ್ದಂತಹ ಮತ್ತು ಸಾರ್ವಜನಿಕವಾಗಿ ಕುತೂಹಲ ಕೆರಳಿಸಿದ್ದಂತಹ ಪ್ರಕರಣದಲ್ಲಿ ನೈಜ ಆರೋಪಿಗಳನ್ನು ಹೊರತುಪಡಿಸಿ ಬೇರೆ ಯಾರನ್ನೋ ಫಿಕ್ಸ್ ಮಾಡುವಂತಿರಲಿಲ್ಲ.

ಆ ಸಂದರ್ಭದಲ್ಲಿ ರಾಷ್ಟ್ರಾದ್ಯಂತ ತುರ್ತು ಪರಿಸ್ಥಿತಿ ಜಾರಿಯಲ್ಲಿತ್ತು. ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿಷೇಧಿಸಲಾಗಿತ್ತು. ಆ ಸಂಘಟನೆ ಬೇರೊಂದು ಹೆಸರಿನಲ್ಲಿ ತುರ್ತು ಪರಿಸ್ಥಿತಿ ವಿರುದ್ದ ಹೋರಾಟಗಳನ್ನು ಸಂಘಟಿಸುತ್ತಿತ್ತು. ತುರ್ತು ಪರಿಸ್ಥಿತಿ ವಿರುದ್ದ ಹೋರಾಟದ ಸುದ್ದಿಗಳನ್ನು ಅಂದಿನ ಪತ್ರಿಕೆಗಳು ಪ್ರಕಟಿಸುವಂತಿರಲಿಲ್ಲ. ಯಾಕೆಂದರೆ ಮಾಧ್ಯಮ ನಿರ್ಬಂಧ ಇತ್ತು.
ಜಿಲ್ಲಾಧಿಕಾರಿಗಳು ನೋಡಿ ಅನುಮತಿಸಿದ ವರದಿಗಳನ್ನು ಮಾತ್ರ ಪ್ರಕಟಿಸಬಹುದಿತ್ತು. ಆ ಕಾಲದಲ್ಲಿ ಜಿಲ್ಲೆಯಲ್ಲಿ ಜನಪ್ರಿಯತೆಯನ್ನು ಪಡೆದಿದ್ದ ಸಿಪಿಸಿ ಕಂಪೆನಿಯ ವಿ.ಎಸ್. ಕುಡ್ವ ಅವರು ಸಂಪಾದಕರಾಗಿದ್ದ ನವಭಾರತ’ ಮತ್ತು ಮಣಿಪಾಲದ ಪೈ ಬಂಧುಗಳು ಹೊರತರುತ್ತಿದ್ದ ಟಿ. ಸತೀಶ್ ಪೈ ಸಂಪಾದಕತ್ವದ ಉದಯವಾಣಿ’ ದಿನಪತ್ರಿಕೆಗಳು ಸರಕಾರದ ನಿರ್ಬಂಧಗಳಿಗೆ ಒಳಪಟ್ಟು ಜಿಲ್ಲಾಧಿಕಾರಿಗಳ ಅನುಮತಿಯ ಮೇರೆಗೆ ಸುದ್ದಿಗಳನ್ನು ಪ್ರಕಟಿಸುತ್ತಿತ್ತು.

ಆ ಸಂದರ್ಭದಲ್ಲಿ ಮಂಗಳೂರಿನಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖವಾಣಿಯಂತಿದ್ದ ಹೊಸದಿಗಂತ’ ಪತ್ರಿಕೆಯೂ ಚಾಲ್ತಿಯಲ್ಲಿತ್ತು. ಈ ಪತ್ರಿಕೆಯು ಕುದ್ರೋಳಿಯ ಸಿಂಧು ಮುದ್ರಣದಲ್ಲಿ ಪ್ರಕಟವಾಗುತ್ತಿತ್ತು. ಈ ಮುದ್ರಣಾಲಯಕ್ಕೆ ಜಿಲ್ಲಾಧಿಕಾರಿಯವರು ಬೀಗ ಜಡಿದಿದ್ದರು. ಆ ಸಂದರ್ಭದಲ್ಲಿ ಹಂಪನಕಟ್ಟೆಯ ಅಕ್ಕಮಕ್ಕನ ಬಿತ್ತಿಲ್ ಎಂಬಲ್ಲಿಂದದಿವ್ಯವಾಣಿ’ ಎಂಬ ದಿನಪತ್ರಿಕೆ ಪ್ರಕಟವಾಗುತ್ತಿತ್ತು. ರಾಘವೇಂದ್ರ ಎಂ. ನಾಗೋರಿ ಅವರು ಅದರ ಸಂಪಾದಕರಾಗಿದ್ದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದೊಂದಿಗೆ ಗುರುತಿಸಿಕೊಂಡಿದ್ದ ಅವರನ್ನು ಮೀಸಾ ಕಾಯ್ದೆಯಡಿ ಬಂಧಿಸಿ ಜೈಲಿಗೆ ಅಟ್ಟಲಾಗಿತ್ತು. ಅವರ ರಾಘವೇಂದ್ರ ಪ್ರಿಂಟಸ್ಸ್ ಗೆ ಬೀಗಮುದ್ರೆ ಹಾಕಲಾಗಿತ್ತು. ಸರಕಾರವು ಆ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯನ್ನು ವಿರೋಧಿಸುವವರನ್ನು ವ್ಯವಸ್ಥಿತವಾಗಿ ಅದುಮುತ್ತಿತ್ತು. ಪರಿಣಾಮವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಮತ್ತು ಜನಸಂಘ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಧುರೀಣರು ಜೈಲು ಪಾಲಾಗಿದ್ದರು.
ನ್ಯಾಯಾಲಯದಲ್ಲೂ ಸಹ ನ್ಯಾಯ ದೊರಕುತ್ತಿರಲಿಲ್ಲ. ನ್ಯಾಯಾಂಗದ ಮೇಲೂ ಪರಿಣಾಮ ಬೀರಿತ್ತು. ಇಂತಹ ಸಂದರ್ಭದಲ್ಲೇ ಇಸ್ಮಾಯಿಲ್ ಅವರ ನಿಗೂಢ ಹತ್ಯೆ ನಡೆದಿತ್ತು. ಈ ಹತ್ಯೆಯಲ್ಲಿ ಆರೆಸ್ಸೆಸ್ ಸಂಘಟನೆಯ ಪಾತ್ರ ಇರಬಹುದೇ ಎಂಬ ಬಗ್ಗೆಯೂ ಸಿಓಡಿ ಪೊಲೀಸರಿಗೆ ಸಂಶಯ ಇತ್ತು.
ಇಸ್ಮಾಯಿಲ್ ಅವರ ಹತ್ಯೆಯಾಗುವುದಕ್ಕಿಂತ ಮೊದಲು ವಿಟ್ಲದ ಕಾಂಗ್ರೆಸ್ ಮುಖಂಡ ವಿ.ಕೆ. ಖಾದರ್ ಎಂಬವರ ಮೇಲೆ ನಾಡಕೋವಿಯಿಂದ ಗುಂಡು ಹಾರಿಸಲಾಗಿತ್ತು. ವಿ.ಕೆ. ಖಾದರ್ ಅವರು ವಿಟ್ಲ ಪರಿಸರದಲ್ಲಿ ಪ್ರಭಾವಿ ಕಾಂಗ್ರೆಸ್ ಮುಖಂಡರಾಗಿದ್ದರು. ಅವರು ವಿಟ್ಲ ಪರಿಸರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಗುರುತಿಸಿಕೊಂಡಿದ್ದ ಹಲವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು. ಇದರಿಂದಾಗಿ ಹಲವಾರು ಮಂದಿ ಆರೆಸ್ಸೆಸ್ ಕಾರ್ಯಕರ್ತರು ಜೈಲು ಪಾಲಾಗಿದ್ದರು.
ಈ ಹಿನ್ನೆಲೆಯಲ್ಲಿಯೇ ವಿ.ಕೆ. ಖಾದರ್ ಅವರ ಮೇಲೆ ಗುಂಡು ಹಾರಿಸಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಗಳನ್ನು ವಿಟ್ಲ ಪೊಲೀಸರಿಗೆ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಇದಕ್ಕೆ ಕಾರಣವೂ ಇತ್ತು. ವಿಟ್ಲ ಪರಿಸರ ಕೇರಳ ರಾಜ್ಯದೊಂದಿಗೆ ನಂಟನ್ನು ಬೆಳೆಸಿಕೊಂಡಿದೆ. ಅತ್ಯಧಿಕ ಸಂಖ್ಯೆಯಲ್ಲಿ ಅಡಿಕೆ ಬೆಳೆಗಾರರಿರುವ ಪ್ರದೇಶವೂ ಹೌದು. ಅಲ್ಲಿನ ಕೃಷಿಕರು ವನ್ಯ ಜೀವಿಗಳಿಂದ ಬೆಳೆಯನ್ನು ರಕ್ಷಿಸಲು ಬಂದೂಕುಗಳನ್ನು ಹೊಂದಿದ್ದಾರೆ. ಬಹುತೇಕ ಮನೆಗಳಲ್ಲಿ ಲೈಸೆನ್ಸ್ ಇದ್ದ ಬಂದೂಕುಗಳಿವೆ. ಇಂತಹ ಬಂದೂಕುಗಳ ಪೈಕಿ ಒಂದು ಬಂದೂಕಿನಿಂದ ವಿ.ಕೆ. ಖಾದರ್ ಅವರ ಮೇಲೆ ಗುಂಡು ಹಾರಿಸಲಾಗಿತ್ತು. ಇದರಿಂದಾಗಿ ನಿರ್ದಿಷ್ಟ ಆರೋಪಿಗಳನ್ನು ಪತ್ತೆ ಹಚ್ಚಲು ವಿಟ್ಲ ಪೊಲೀಸರಿಗೆ ಸಾಧ್ಯವಾಗಿರಲಿಲ್ಲ.
ಆ ಕಾಲದಲ್ಲಿ ಬಂಟ್ವಾಳವನ್ನು ಹೊರತುಪಡಿಸಿದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಗಳು ಹೆಚ್ಚಾಗಿದ್ದದ್ದು ಪುತ್ತೂರು ಮತ್ತು ಸುಳ್ಯದಲ್ಲಿ. ಪುತ್ತೂರಿನ ನ್ಯಾಯವಾದಿ ಉರಿಮಜಲು ರಾಮ್ ಭಟ್ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸಕ್ರಿಯರಾಗಿದ್ದರು.
ಅವರ ಪೂರ್ತಿ ಕುಟುಂಬ ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿತ್ತು. ಈ ಹೋರಾಟದಲ್ಲಿ ಈ ಕುಟುಂಬದ್ದು ರಾಷ್ಟ್ರೀಯ ದಾಖಲೆ. ಈ ಕುಟುಂಬದ ೪೪ ಮಂದಿ ಮೀಸಾ ಕಾಯ್ದೆಯಡಿಯಲ್ಲಿ ಯಾವುದೇ ಕಾನೂನು ಬಾಹಿರ ಕೃತ್ಯಗಳಲ್ಲಿ ಪಾಲ್ಗೊಳ್ಳದೆ ಸುಮಾರು ಒಂದೂವರೆ ವರ್ಷಗಳಿಗಿಂತಲೂ ಅಧಿಕ ಸಮಯವನ್ನು ಜೈಲಿನಲ್ಲಿ ಕಳೆದಿದ್ದರು. ಪೊಲೀಸರ ಚಿತ್ರಹಿಂಸೆಯನ್ನೂ ಅನುಭವಿಸಿದ್ದರು.
ಈ ಎಲ್ಲಾ ಕಷ್ಟಕಾರ್ಪಣ್ಯಗಳಿಗೆ ಮೂಲ ಕಾರಣವಾಗಿದ್ದದ್ದು ಕೇಂದ್ರ ಸರಕಾರ ಜಾರಿಗೊಳಿಸಿದ್ದಂತಹ ತುರ್ತು ಪರಿಸ್ಥಿತಿ. ಇದರ ಪ್ರಯೋಜನವನ್ನು ಪಡೆದ ಸ್ಥಳೀಯ ಕಾಂಗ್ರೆಸ್ ಮುಖಂಡರು ತಮ್ಮ ರಾಜಕೀಯ ವಿರೋಧಿಗಳನ್ನು ಮಟ್ಟ ಹಾಕಲು ಪೊಲೀಸರನ್ನು ಬಳಸಿಕೊಳ್ಳುತ್ತಿದ್ದರು. ಪೊಲೀಸರೂ ಸಹ ಕಾಂಗ್ರೆಸ್ ಮುಖಂಡರ ಮಾಹಿತಿಯ ಅನ್ವಯ ಕಾರ್ಯಾಚರಣೆ ನಡೆಸಿ ಆರೆಸ್ಸೆಸ್ ಕಾರ್ಯಕರ್ತರನ್ನು ಜೈಲಿಗೆ ಕಳುಹಿಸುತ್ತಿದ್ದರು.
ಇದರ ಪರಿಣಾಮವಾಗಿಯೃ ವಿಟ್ಲದ ವಿ.ಕೆ. ಖಾದರ್ ಅವರ ಮೇಲೆ ಗುಂಡು ಹಾರಿಸಿ ಕೊಲೆಗೈಯ್ಯಲು ಯತ್ನಿಸಲಾಗಿತ್ತು. ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಭಾಗಿಯಾದವರಲ್ಲಿ ಸುಳ್ಯ ಕಡೆಯ ಆರೆಸ್ಸೆಸ್ ಕಾರ್ಯಕರ್ತರ ಸಂಖ್ಯೆ ಗಣನೀಯವಾಗಿತ್ತು. ಈ ಕಾರ್ಯಕರ್ತರ ಬಗ್ಗೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ ಜಯಪ್ರಕಾಶ್ ಶೆಟ್ಟಿ ಎಂಬಾತನನ್ನು ರಸ್ತೆ ಬದಿಯಲ್ಲಿಯೇ ಕಡಿದು ಕೊಲೆಗೈಯ್ಯಲಾಗಿತ್ತು. ಜಯಪ್ರಕಾಶ್ ಶೆಟ್ಟಿ ತನ್ನ ಮುದ್ರಣಾಲಯಕ್ಕೆ ಮುದ್ರಿತ ಕಾಗದಗಳನ್ನು ಕೊಂಡುಹೋಗುವ ಸಂದರ್ಭದಲ್ಲಿ ಕೊಲೆಗೈಯ್ಯಲಾಗಿತ್ತು.
ಈ ಪ್ರಕರಣದ ಆರೋಪಿಗಳೂ ಪತ್ತೆಯಾಗಿರಲಿಲ್ಲ. ಆದ್ದರಿಂದ ಈ ಮೂರೂ ಪ್ರಕರಣಗಳ ಹಿನ್ನೆಲೆಯಲ್ಲಿ ಸ್ಥಳೀಯ ಆರೆಸ್ಸೆಸ್ ಕಾರ್ಯಕರ್ತರ ಕೈವಾಡ ಇರಬಹುದೆಂದು ಸಿಓಡಿ ಪೊಲೀಸರು ಶಂಕಿಸಿ ತನಿಖೆಯನ್ನು ಕೇಂದ್ರೀಕರಿಸಿದ್ದರು. ಈ ಹಿಂದೆ ಹಲವಾರು ಸಂಶಯಗಳ ಬಗ್ಗೆ ತನಿಖೆ ನಡೆಸಿದ್ದರೂ ನೈಜ ಆರೋಪಿಗಳ ಗುರುತು ಪತ್ತೆ ಯಾಗದೇ ಇದ್ದುದರಿಂದ ಇಸ್ಮಾಯಿಲ್ ಅವರನ್ನು ಪೊಲೀಸ್ ಜೀಪಿನಂತೆ ಹೋಲುವ ಜೀಪಿನಲ್ಲಿ ಬಂದು ಕರೆದಿದ್ದ ವ್ಯಕ್ತಿಯನ್ನು ಇಸ್ಮಾಯಿಲ್ ಅವರ ಅಂಗಡಿ ಪಕ್ಕದ ಲಾಂಡ್ರಿ ಅಂಗಡಿಯ ನರಸಿಂಹ ಮಡಿವಾಳ ನೋಡಿದ್ದರು.
ಆ ವ್ಯಕ್ತಿಯ ಕಣ್ಣು ಮೆಳ್ಳೆಗಣ್ಣು ಆಗಿತ್ತು ಎಂಬುದನ್ನು ಅವರು ಸಿಓಡಿ ಪೊಲೀಸರಿಗೆ ತಿಳಿಸಿದ್ದರು. ಈ ಒಂದು ಚಿಕ್ಕ ಸುಳಿವನ್ನು ಆಧರಿಸಿಯೇ ತನಿಖೆ ನಡೆಸಲು ಸಿಓಡಿ ಪೊಲೀಸರು ನಿರ್ಧರಿಸಿದ್ದರು. ಇಸ್ಮಾಯಿಲ್ ಅವರನ್ನು ಆರೆಸ್ಸೆಸ್ ಹಿನ್ನೆಲೆಯ ಕಾರ್ಯಕರ್ತರ ತಂಡವೇ ಭಾರೀ ಸಂಚು ರೂಪಿಸಿ ಹತ್ಯೆಗೈದಿದೆ ಎಂಬ ನಿರ್ಧಾರಕ್ಕೆ ಬಂದಂತಹ ಸಿಓಡಿ ಪೊಲೀಸರು ಮೆಳ್ಳೆಗಣ್ಣಿನ ಆರೆಸ್ಸೆಸ್ ಕಾರ್ಯಕರ್ತನ ಬೇಟೆಗೆ ಇಳಿದರು.
ಮುಂದುವರಿಯುವುದು…

































