ಸಾಣೂರು : ಕೊನೆಗೂ ಸಿಕ್ಕಿತು ಮುಕ್ತಿ

ಕಾರ್ಕಳ : ಮಂಗಳೂರು ಬಿರ್ಕನಕಟ್ಟೆ ಯಿಂದ ಕಾರ್ಕಳದ ಪುಲ್ಕೇರಿ ಬೈಪಾಸ್ ನಡುವೆ ಸಾಣೂರಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-169 ಇದರ ಅಭಿವೃದ್ಧಿ ಕಾಮಗಾರಿಯಲ್ಲಿ ತೋರಿರುವ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರು ನಡೆಸುತ್ತಿರುವ ಹೋರಾಟಕ್ಕೆ ಒಂದಿಷ್ಟು ಜಯಸಂದಿದೆ.
ಮಳೆಗಾಲದಲ್ಲಿ ಸುರಿಯುವ ಮಳೆ ನೀರು ಸಮರ್ಪಕವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಕಲ್ಪಿಸದೇ ಇರುವುದರಿಂದ ತಗ್ಗುಪ್ರದೇಶಗಳಲ್ಲಿ ಕೃತಕ ನೆರೆ ಗೆ ಕಾರಣವಾಗಿತ್ತು. ಪರಣಾಮವಾಗಿ ಇಂದಿರಾ ನಗರ ರಸ್ತೆಯು ಕೃತಕ ನೆರೆಗೆ ತುತ್ತಾಗಿ ಸಂಪರ್ಕ ಕಳೆದುಕೊಂಡಿತು.
ಇಂದಿರಾನಗರ ಕಾಲೋನಿಯಲ್ಲಿ ನೂರಕ್ಕಿಂತಲೂ ಹೆಚ್ಚು ಮನೆಗಳಿದ್ದು, ಪ್ರತಿನಿತ್ಯ ಸಂಚರಿಸುವ ದ್ವಿಚಕ್ರ ವಾಹನ, ರಿಕ್ಷಾ, ಇನ್ನಿತರ ವಾಹನಗಳ ಚಾಲಕರು ಬಹಳ ಅಪಾಯಕಾರಿ ಸ್ಥಿತಿಯಲ್ಲಿ ಕೃತಕ ನೆರೆಯ ಪ್ರದೇಶದಲ್ಲಿ ವಾಹನಗಳನ್ನು ಚಲಾಯಿಸಬೇಕಾಗಿತ್ತು.
ವಿದ್ಯಾರ್ಥಿಗಳು ,ಮಹಿಳೆಯರು, ವೃದ್ಧರು ಬಹಳ ಕಷ್ಟಪಟ್ಟು ತಮ್ಮ ಬಟ್ಟೆಯನ್ನು ತೋಯಿಸಿಕೊಂಡು ಕೃತಕ ನೆರೆ ಪ್ರದೇಶದಲ್ಲಿ ಕಾಲು ಹಾಕುತ್ತಾ ಸಾಗುತ್ತಿದ್ದು ಪ್ರಯಾಣಿಕರು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಹಿಡಿ ಶಾಪ ಹಾಕುತ್ತಿದ್ದರು.

ಈ ನಡುವೆ ಇಂದಿರಾನಗರ ಅಡ್ಡರಸ್ತೆಗೆ ಅಡ್ಡಲಾಗಿ ಕಾಂಕ್ರೀಟ್ ಮೋರಿಯನ್ನು ಅಳವಡಿಸುವಲ್ಲಿ ಕಂಟ್ರಾಕ್ಟರ್ ಮುಂದಾಗಿದ್ದು ಇದರ ಕಾಮಗಾರಿ ಜು.5ರಂದು ನಡೆದಿದೆ. ಆ ಮೂಲಕ ನಾಗರಿಕರ ಓಡಾಟಕ್ಕೆ ಹಾಗೂ ವಾಹನಗಳ ಸಂಚಾರಕ್ಕೆ ಅನುವು ಆಗಿದೆ. ಆ ಮೂಲಕ ಗ್ರಾಮಸ್ಥರ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖ ಸಾಣೂರು ನರಸಿಂಹ ಕಾಮತ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.






































