ಉಡುಪಿ : ಸಹಕಾರ ಭಾರತಿ ದೇಶದ ಏಕೈಕ ಸದೃಢ ಸಂಘಟನೆಯಾಗಿದೆ. ಉಡುಪಿ ಜಿಲ್ಲೆಯ ಏಳೂ ತಾಲೂಕುಗಳಲ್ಲಿ ಸಕ್ರಿಯವಾದ ತಾಲೂಕು ಘಟಕದ ಕಾರ್ಯ ಚಟುವಟಿಕೆಗಳ ಮೂಲಕ ಸಹಕಾರಿ ಸಂಸ್ಥೆಗಳ ಅಗತ್ಯ ಬೇಡಿಕೆಗಳನ್ನು ಸರಕಾರದ ಮುಂದಿಡಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ ಎಂದು ಸಹಕಾರಿ ಬಾರತಿ ಸಂಘಟನೆಯ ಉಡುಪಿ ಜಿಲ್ಲಾ ಅಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಹೇಳಿದರು.
ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಭವನ ಉನ್ನತಿಯಲ್ಲಿ ಆಯೋಜಿಸಲಾಗಿದ್ದ ಸಹಕಾರ ಭಾರತಿ ಬ್ರಹ್ಮಾವರ ತಾಲೂಕು ಅಭ್ಯಾಸ ವರ್ಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ತಿಮ್ಮಪ್ಪ ಹೆಗಡೆ
ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ, ಅಭ್ಯಾಸ ವರ್ಗವು ಸಹಕಾರಿ ಸಂಘಗಳ ಹೊಸ ಕಾಯ್ದೆ ಕಾನೂನುಗಳ ಪರಿಜ್ಞಾನವನ್ನು ಮೂಡಿಸಿಕೊಳ್ಳಲು ಮತ್ತು ಸಹಕಾರಿ ಜ್ಞಾನವನ್ನು ಹೆಚ್ಚಿಸುವಲ್ಲಿ ಸಹಕಾರಿ ಯಾಗಲಿ ಎಂದು ಶುಭ ಹಾರೈಸಿದರು.
ಬ್ರಹ್ಮಾವರ ತಾಲೂಕು ಸಹಕಾರ ಭಾರತಿ ಅಧ್ಯಕ್ಷ ಅಶೋಕ ಪ್ರಭುರವರು ಅಧ್ಯಕ್ಷತೆಯನ್ನು ವಹಿಸಿ, ಬ್ರಹ್ಮಾವರ ತಾಲೂಕಿನ ಎಲ್ಲಾ ಸಹಕಾರ ಸಂಸ್ಥೆಗಳ ಆಡಳಿತ ಮಂಡಳಿ, ಅಧಿಕಾರಿ ಮತ್ತು ಸಿಬ್ಬಂದಿ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ಸಹಕಾರ ಭಾರತಿ ಮುಂದಿನ ಕಾರ್ಯ ಯೋಜನೆಯನ್ನು ಹಾಕಿಕೊಳ್ಳಲಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ರಾಜ್ಯ ಹಾಲು ಪ್ರಕೋಷ್ಟದ ಸಂಚಾಲಕ ಸಾಣೂರು ನರಸಿಂಹ ಕಾಮತ್ ರವರು ಮಾತನಾಡಿ ದೇಶದಲ್ಲಿ ಈಗಾಗಲೇ 8 ಲಕ್ಷ ಸಹಕಾರಿ ಸಂಸ್ಥೆಗಳ ದತ್ತಾಂಶಗಳನ್ನು ಕೇಂದ್ರ ಸರಕಾರವು ಸಹಕಾರಿ ಇಲಾಖೆಯ ಮೂಲಕ ಸಂಗ್ರಹಿಸಿದೆ. ಮುಂದಿನ ದಿನಗಳಲ್ಲಿ ಏಕರೂಪದ ತಂತ್ರಾಂಶದ ಮೂಲಕ ಸಹಕಾರಿ ಸಂಸ್ಥೆಗಳ ವ್ಯವಹಾರದ ಎಲ್ಲಾ ಅಂಕಿ ಅಂಶಗಳನ್ನು ಕ್ರೂಢೀಕರಿಸಿ ಸಹಕಾರಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಹಲವಾರು ಪ್ರೋತ್ಸಾಹಕ ಯೋಜನೆಗಳನ್ನು ಜಾರಿಗೆ ತರಲಿದೆ ಎಂದರು.
ಹೈನುಗಾರರು ಸೊಸೈಟಿಗಳಿಗೆ ಪೂರೈಸುವ ಹಾಲಿನ ದರ ಏರಿಕೆಯ ಬಗ್ಗೆ ಈ ಹಿಂದೆ ಎರಡು ಬಾರಿ ಉಡುಪಿ ಜಿಲ್ಲಾ ಮಟ್ಟದಲ್ಲಿ ಸಹಕಾರ ಭಾರತಿ ಪ್ರತಿಭಟನ ಸಭೆಗಳನ್ನು ನಡೆಸಿ ಸರಕಾರದ ಗಮನವನ್ನು ಸೆಳೆದಿತ್ತು.
ಇದೀಗ ಕಳೆದ ಆರು ತಿಂಗಳಿನಿಂದ ಬಾಕಿ ಇರುವ ಪ್ರೋತ್ಸಾಹ ಧನವನ್ನು ಏಕಗಂಟಿನಲ್ಲಿ ಬಿಡುಗಡೆ ಮಾಡಲು, ಪಶು ಆಹಾರಕ್ಕೆ ಪ್ರತಿ ಕೆಜಿಗೆ 5 ರೂಪಾಯಿ ಸಬ್ಸಿಡಿ ಮತ್ತು ಪ್ರೋತ್ಸಾಹ ಧನವನ್ನು ಈಗಿರುವ ಐದು ರೂಪಾಯಿಯಿಂದ 10 ರೂಪಾಯಿಗೆ ಏರಿಸಲು ಹಾಗೂ 2019 ರ ಜಾನುವಾರು ಗಣತಿಯ ಪ್ರಕಾರ ಪಶು ಚಿಕಿತ್ಸಾಲಯ ಮತ್ತು ಪಶು ಆಸ್ಪತ್ರೆಗಳನ್ನುಮುಚ್ಚಲು ಹೊರಟಿರುವ ಸರಕಾರದ ನಿರ್ಧಾರದ ವಿರುದ್ಧ ರಾಜ್ಯ ವ್ಯಾಪಿ ಹೋರಾಟವನ್ನು ಸಂಘಟಿಸಲಾಗುವುದು ಎಂದು ತಿಳಿಸಿದರು.
ಮಾಹಿತಿ ಶಿಬಿರದ ಮೊದಲ ಅವಧಿಯಲ್ಲಿ ಸಹಕಾರ ಭಾರತಿಯ ಹುಟ್ಟು ಮತ್ತು ಬೆಳವಣಿಗೆ ಯ ಬಗ್ಗೆ ಸಹಕಾರ ಭಾರತಿ ಮೈಸೂರು ವಿಭಾಗದ ಸಂಘಟನಾ ಪ್ರಮುಖ ಮೋಹನ್ ಕುಮಾರ್ ಕುಂಬಳೇಕರ್ ರವರು ಸವಿವರ ವಾದ ಮಾಹಿತಿ ಮಾರ್ಗದರ್ಶನ ನೀಡಿದರು.
ಸಹಕಾರಿ ಕಾಯಿದೆ ಮತ್ತು ಸಹಕಾರಿ ಸಂಸ್ಥೆಗಳ ಆಡಳಿತ ನಿರ್ವಹಣೆಯ ಬಗ್ಗೆ ಸಹಕಾರ ಸಂಘಗಳ ಉಪನಿಬಂಧಕರ ಕಛೇರಿ, ಮಂಗಳೂರು ಇದರ ಅಧೀಕ್ಷಕ ಎನ್ .ಜೆ. ಗೋಪಾಲ್ ರವರು ಸುಧೀರ್ಘವಾದ ಮಾಹಿತಿ ಮಾರ್ಗದರ್ಶನ ನೀಡಿ ಸಹಕಾರಿಗಳ ಜೊತೆಗೆ ನೇರ ಸಂವಾದ ನಡೆಸಿದರು.
ಸಹಕಾರ ಭಾರತಿ ರಾಷ್ಟ್ರೀಯ ಮತ್ಸ್ಯ ಪ್ರಕೋಷ್ಟದ ಸಹ ಸಂಚಾಲಕ ಮಂಜುನಾಥ ಎಸ್ಕೆ ರಾಜ್ಯ ಸರಕಾರವು ಸಹಕಾರಿ ಕಾಯ್ದೆಯಲ್ಲಿ ತಂದಿರುವ ನೂತನ ತಿದ್ದುಪಡಿಗಳ ಬಗ್ಗೆ ಮಾಹಿತಿ ನೀಡಿದರು.
ಸಹಕಾರ ಭಾರತಿ ಉಡುಪಿ ಜಿಲ್ಲಾ ಹಾಲು ಪ್ರಕೋಷ್ಟದ ಸಂಚಾಲಕ ಕನ್ನಾರು ಕಮಲಾಕ್ಷ ಹೆಬ್ಬಾರ್ ರವರು ಸ್ವಾಗತಿಸಿದರು. ಮಂಜುನಾಥ ಆಚಾರ್ಯ ನಿರೂಪಿಸಿದರು. *ಕಾರ್ಯದರ್ಶಿ ಸತೀಶ್ ಕೆ .ನಾಯಕ್ ಧನ್ಯವಾದ ಸಮರ್ಪಣೆ ಗೈದರು.



































