ಸಮುದ್ರದ ಅಲೆಗೆ ಸಿಲುಕಿದ ಬಾಲಕ

Picture of RB NEWS

RB NEWS

Bureau Report


ಮಂಗಳೂರು: ಸ್ನೇಹಿತರೊಂದಿಗೆ ಪಣಂಬೂರು ಬೀಚ್‌ಗೆ ತೆರಳಿದ್ದ 14 ವರ್ಷದ ಬಾಲಕನೊಬ್ಬ ಸಮುದ್ರದಲ್ಲಿ ನಾಪತ್ತೆಯಾಗಿರುವ ಘಟನೆ ಭಾನುವಾರ ಸಂಜೆ ನಡೆದಿದೆ. ಸಮುದ್ರದ ಭಾರಿ ಅಲೆಗೆ ಸಿಲುಕಿ ಬಾಲಕ ನೀರುಪಾಲಾಗಿರುವ ಶಂಕೆ ವ್ಯಕ್ತವಾಗಿದ್ದು, ಪಣಂಬೂರು ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ನಾಪತ್ತೆಯಾದ ಬಾಲಕನನ್ನು ಬೆಳ್ತಂಗಡಿ ತಾಲೂಕಿನ ಕಸಬಾ ಗ್ರಾಮದ ರೆಂಕೆದ ಗುತ್ತು ನಿವಾಸಿ ಸೇಸಪ್ಪ ಅವರ ಪುತ್ರ ಶ್ರೇಯಸ್ (14) ಎಂದು ಗುರುತಿಸಲಾಗಿದೆ.
ಶ್ರೇಯಸ್ ತನ್ನ ಐವರು ಸ್ನೇಹಿತರೊಂದಿಗೆ ಭಾನುವಾರ ಪಣಂಬೂರು ಬೀಚ್‌ಗೆ ತೆರಳಿದ್ದ. ಈ ವೇಳೆ ಸ್ನೇಹಿತರೊಂದಿಗೆ ಸಮುದ್ರದ ನೀರಿನಲ್ಲಿ ಆಟವಾಡುತ್ತಿದ್ದಾಗ ಏಕಾಏಕಿ ಬಂದ ಭಾರಿ ಅಲೆಗೆ ಸಿಲುಕಿದ್ದಾನೆ ಎನ್ನಲಾಗಿದೆ. ಅಲೆಯ ರಭಸಕ್ಕೆ ಸಮುದ್ರದೊಳಗೆ ಕೊಚ್ಚಿಕೊಂಡು ಹೋದ ಬಳಿಕ ಶ್ರೇಯಸ್ ಕಾಣೆಯಾಗಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯ ಬಗ್ಗೆ ಶ್ರೇಯಸ್‌ನ ಸ್ನೇಹಿತರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಬಳಿಕ ತಂದೆ ಪಣಂಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಾಲಕನ ಪತ್ತೆಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಸಮುದ್ರದಲ್ಲಿ ನಾಪತ್ತೆಯಾಗಿರುವ ಬಾಲಕನಿಗಾಗಿ ಪೊಲೀಸರು ಹಾಗೂ ಸಂಬಂಧಪಟ್ಟ ರಕ್ಷಣಾ ಸಿಬ್ಬಂದಿ ಶೋಧ ನಡೆಸುತ್ತಿದ್ದು, ಘಟನೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top