ಸಂಪತ್ತು ಒಟ್ಟು ಮಾಡಿ ಬಿಟ್ಟು ಹೋಗುವ ಬದಲು ಕೊಟ್ಟು ಹೋಗುವುದು ಲೇಸು : ಕಾರ್ಕಳ ಕಮಲಾಕ್ಷ ಕಾಮತ್
ಕಾರ್ಕಳ : ಆಸ್ತಿಪಾಸ್ತಿ, ಒಡವೆ, ಹಣ , ಸಂಪತ್ತು ಕೂಡಿಡುವಷ್ಟು ದೊಡ್ಡ ದುಶ್ಚಟ ಜಗತ್ತಿನಲ್ಲಿ ಬೇರೆ ಇನ್ನೊಂದಿಲ್ಲ. ನಮ್ಮ ಸಂಪಾದನೆ ನ್ಯಾಯೋಚಿತವಾದುದಾಗಿರಬೇಕು. ಆದರೆ ಅತಿಯಾಸೆ ,ದುರಾಸೆಯಿಂದ ಅದನ್ನುಕೂಡಿಡುವುದು ಅಕ್ಷಮ್ಯ ಅಪರಾಧ. ಲೆಕ್ಕವಿಲ್ಲದಷ್ಟು ಅಗಾಧ ಸಂಪತ್ತನ್ನು ಕೂಡಿಟ್ಟು ಬಿಟ್ಟು
ಹೋಗುವ ಬದಲು ಬಡಬಗ್ಗರಿಗೆ ಕೊಟ್ಟು ಹೋಗುವುದು ಲೇಸು ಎಂದು ಚಾರ್ಟರ್ಡ್ ಅಕೌಂಟೆಂಟ್ ಕಾರ್ಕಳ ಕಮಲಾಕ್ಷ ಕಾಮತ್ ನುಡಿದರು .
ಅವರು ಕಾರ್ಕಳ ಪೆರ್ವಾಜೆಯ ಅಮಿತ್ ಎಸ್. ಪೈ ಸ್ಮಾರಕ ಸ್ವಾಮಿ ವಿವೇಕಾನಂದ ಯೋಗ ಮತ್ತು ಧ್ಯಾನ ಮಂದಿರದಲ್ಲಿ ಎಸ್ ವಿ ಟಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಬಿ ಕಾಮ್ ಪರೀಕ್ಷೆಯಲ್ಲಿ 8 ನೆ ರಾಂಕ್ ಪಡೆದ ಶ್ರೀನಿಧಿ ನಾಯಕ್ ಮತ್ತು ಬಜಗೋಳಿ ಸೇಕ್ರೆಡ್ ಹಾರ್ಟ್ ಪ್ರೌಢ ಶಾಲೆಯ ವಿದ್ಯಾರ್ಥಿನಿ ಎಸ್ ಎಸ್ ಎಲ್ ಸಿ ಯಲ್ಲಿ 6 ನೆಯ ರಾಂಕ್ ಪಡೆದ ಅನ್ವಿ ಪಿ. ಜೈನ್ ಅವರನ್ನು ಸನ್ಮಾನಿಸಿ ಮಾತನಾಡಿದರು.

ಸಂಪತ್ತಿನ ಸದ್ವಿನಿಯೋಗ ಅತ್ಯಂತ ಶ್ರೇಷ್ಠ ಮತ್ತು ಮಹಾನ್ ಪುಣ್ಯದ ಕೆಲಸ. ಕಡು ಬಡವರಿಗೆ, ದುರ್ಬಲ ವರ್ಗದವರಿಗೆ, ಹಣದ ಕೊರತೆ
ಯಿಂದ ವಿದ್ಯಾಭ್ಯಾಸ ಮುಂದುವರಿಸಲಾಗದೇ ಕಂಗಾಲಾದ ವಿದ್ಯಾರ್ಥಿ
ಗಳಿಗೆ, ಅನಾರೋಗ್ಯ ಪೀಡಿತರ ವೈದ್ಯಕೀಯ ವೆಚ್ಚ ಭರಿಸುವ ಕಾರ್ಯಗಳಿಂದ ಮನುಷ್ಯಜನ್ಮ ಸಾರ್ಥಕವಾಗುವುದು ಎಂದು ಕಾರ್ಕಳ ಕಮಲಾಕ್ಷ ಕಾಮತ್ ಅಭಿಪ್ರಾಯಿಸಿದರು.
ಕಾರ್ಕಳ ಪುರಸಭೆಯ ಮಾಜಿ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ” ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಂದು ಹೇರಳ ಅವಕಾಶಗಳಿವೆ. ಜೊತೆಗೆ ಸಮಾಜದ, ಸಂಘಸಂಸ್ಥೆಗಳ, ದಾನಿಗಳ ಬೆಂಬಲ, ಪ್ರೋತ್ಸಾಹ ಒದಗಿ ಬರುತ್ತಿರುವುದು ಸಂತಸದ ವಿಚಾರ ” ಎಂದರು.
ಹೊಸಸಂಜೆ ಬಳಗದ ಅಧ್ಯಕ್ಷ ಆರ್. ದೇವರಾಯ ಪ್ರಭು , ಮಂದಿರದ ಪ್ರವರ್ತಕರಾದ ಶ್ರೀನಿವಾಸ ಜಿ. ಕೆ. ಪೈ ಮತ್ತು ನಿರ್ಮಲಾ ಪೈ ಉಪಸ್ಥಿತರಿದ್ದರು.
ಸುಜಾತಾ ಶೆಟ್ಟಿ ಸ್ವಾಗತಿಸಿದರು. ಸುನೀತಾ ಬಂಗೇರ ಕಾರ್ಯಕ್ರಮ ನಿರ್ವಹಿಸಿದರು. ಗೌರಿ ಟೀಚರ್ ಮತ್ತು ಕಾವ್ಯಾ ಸಹಕರಿಸಿದರು.
ಸೌಮ್ಯಾ ಹೆಗ್ಡೆ ವಂದಿಸಿದರು.












