ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಮೂವರು ಅಪರಾಧಿಗಳನ್ನು ಬಿಗಿ ಭದ್ರತೆಯಲ್ಲಿ ಶ್ರೀಲಂಕಾಕ್ಕೆ ಕಳುಹಿಸಲಾಗಿದೆ.

ಚೆನ್ನೈ ವಿಮಾನ ನಿಲ್ದಾಣದಿಂದ ರಾಜೀವ್ ಗಾಂಧಿ ಹಂತಕರಾದ ಮುರುಗನ್, ಜಯಕುಮಾರ್ ಹಾಗೂ ರಾಬರ್ಟ್ ಅವರನ್ನು ಶ್ರೀಲಂಕಾಕ್ಕೆ ಸುರಕ್ಷಿತವಾಗಿ ಕಳುಹಿಸಲಾಗಿದೆ.
ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಮೂವರೂ ಅಪರಾಧಿಗಳು ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಇವರನ್ನು 2022ರಲ್ಲಿ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.
ಎರಡು ವರ್ಷದ ಹಿಂದೆ ಮುರುಗನ್, ರಾಬರ್ಟ್ ಪಯಾಸ್ ಹಾಗೂ ಜಯಕುಮಾರ್ ಜೈಲಿನಿಂದ ಬಿಡುಗಡೆಯಾಗಿದ್ದರು. ಇವರನ್ನು ತಿರುಚ್ಚಿಯ ವಿಶೇಷ ನಿರಾಶ್ರಿತರ ಕೇಂದ್ರದಲ್ಲಿ ಇರಿಸಲಾಗಿತ್ತು. ಕೇಂದ್ರ ಗೃಹ ಸಚಿವಾಲಯದ ಅನುಮತಿ ಮೇರೆಗೆ ಇವರನ್ನು ನಿರಾಶ್ರಿತರ ಕೇಂದ್ರದಲ್ಲಿ ಇರಿಸಲಾಗಿತ್ತು. ಇವರು ಶ್ರೀಲಂಕಾ ನಾಗರಿಕರಾಗಿರುವ ಕಾರಣ ಹಾಗೂ ಈಗಾಗಲೇ ಜೈಲು ಶಿಕ್ಷೆ ಅನುಭವಿಸಿ, ಬಿಡುಗಡೆಯಾಗಿರುವ ಕಾರಣ ದ್ವೀಪರಾಷ್ಟ್ರಕ್ಕೆ ಚೆನ್ನೈ ಏರ್ಪೋರ್ಟ್ನಿಂದ ವಾಪಸ್ ಕಳುಹಿಸಲಾಗಿದೆ.


ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿ 1991ರ ಮೇ 21ರಂದು ಎಲ್ಟಿಟಿಇ ಮಹಿಳಾ ಆತ್ಮಹತ್ಯಾ ಬಾಂಬರ್ ಮೂಲಕ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ನಳಿನಿ ಶ್ರೀಹರನ್ ಸೇರಿ ಆರು ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ನವೆಂಬರ್ 11ರಂದು ಆದೇಶಿಸಿತ್ತು.






































