



ಶಾಸಕ ಸುನಿಲ್ ಕುಮಾರ್ ಕೆಲಸ ದೇವರು ಮೆಚ್ಚುವಂತದ್ದು: ಡಾ.ಆಳ್ವ
ಕಾರ್ಕಳದ ಶಾಸಕ ಹಾಗೂ ಮಾಜಿ ಸಚಿವ ಸುನಿಲ್ ವಿ. ಕುಮಾರ್ ಅವರು ಆಯೋಜಿಸಿರುವ ವಿಕಾಸ ಉದ್ಯೋಗ ಸೇತು ಕಾರ್ಯಕ್ರಮವು ದೇವರು ಮೆಚ್ಚುವ ಕೆಲಸವಾಗಿದೆ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದ್ದಾರೆ.
ಕಾರ್ಕಳದಲ್ಲಿ ಆಯೋಜನೆಗೊಂಡಿದ್ದ ಒಂದು ದಿನದ ವಿಕಾಸ ಉದ್ಯೋಗ ಸೇತು ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇಂತಹ ಕೆಲಸ ಕಾರ್ಯಗಳಲ್ಲಿ ಯಾವುದೇ ರಾಜಕೀಯ ಇಚ್ಛಾಶಕ್ತಿಯಿಲ್ಲದೆ ಸಾರ್ವಜನಿಕ ಸೇವಾ ಭಾವನೆಯೆ ಪ್ರಧಾನವಾಗಿರುವುದು. ತಾನು ಯಾವುದೇ ರಾಜಕೀಯ ಪಕ್ಷದೊಂದಿಗೆ ನೇರವಾಗಿ ಸಂಬಂಧ ಇಟ್ಟುಕೊಂಡಿದವನಲ್ಲ.ಆದರೆ ಶಾಸಕ ಸುನಿಲ್ ಕುಮಾರ್ ಮತ್ತು ನನ್ನ ನಡುವಿನ ಆತ್ಮೀಯ ಸಂಬಂಧವು ಅನೇಕ ವರ್ಷಗಳಿಂದ ಅನ್ಯೋನ್ಯವಾಗಿ ಬೆಳೆದು ಬಂದಿರುತ್ತದೆ.
ಸುನಿಲ್ ಕುಮಾರ್ ಅವರು ರಾಜ್ಯ ಸರಕಾರದಲ್ಲಿ ಸಚಿವನಾಗಿದ್ದಾಗ ಮಾಡಿರುವ ಕೆಲವೊಂದು ಅಭೂತಪೂರ್ವ ಕೆಲಸಗಳನ್ನು ಈ ಸಂದರ್ಭದಲ್ಲಿ ಡಾ.ಆಳ್ವ ಸ್ಮರಿಸಿದರು.
ಉದ್ಯೋಗ ದೊರಕಿಸುವ ಇಂಥ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ತುಂಬಾ ಆಸಕ್ತಿಯಿಂದ ಪಾಲ್ಗೊಳ್ಳಬೇಕು. ಉದ್ಯೋಗ ದಕ್ಕಿಸಿಕೊಳ್ಳುವ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು. ಆಳ್ವಾಸ್ ಕ್ಯಾಂಪಸ್ ನಲ್ಲಿ ಪ್ರತಿ ವರ್ಷ ನಡೆಯುವ ಪ್ರಗತಿ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವುದಕ್ಕೆ ಎಲ್ಲರಿಗೂ ಅವಕಾಶವಿದೆ ಎಂದಿರುವ ಡಾ.ಆಳ್ವ , ಈ ವಿಕಾಸ ಉದ್ಯೋಗ ಸೇತುವಿನಲ್ಲಿ ಭಾಗವಹಿಸಿದ್ದ ಹಾಗೂ ಉದ್ಯೋಗ ಪತ್ರ ಪಡೆದುಕೊಂಡ ಎಲ್ಲರನ್ನೂ ಅಭಿನಂದಿಸಿದರು.



























