ಬೆಂಗಳೂರು : ರಾಜಕೀಯ ರಂಗದಲ್ಲಿ ತಾನೇ ಕಟ್ಟಿದ್ದ ಪಕ್ಷವನ್ನೇ ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಭಾರೀ ಸಂಕಷ್ಟ ಶುರುವಾಗಿದೆ.
ಬಿಜೆಪಿಗೆ ಸೇರ್ಪಡೆಗೊಂಡ ಬೆಳವಣಿಯಿಂದ ಜನಾರ್ದನ ರೆಡ್ಡಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಕಾಂಗ್ರೆಸ್ ವಿಧಾನಸಭೆ ಸ್ಪೀಕರ್ ಯುಟಿ ಖಾದರ್‌ಗೆ ದೂರು ಸಲ್ಲಿಸಲಾಗಿದೆ.
ಕೆಪಿಸಿಸಿ ವಕ್ತಾರ ಸಿ ರಮೇಶ್ ಬಾಬು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ ಇವರು ಸ್ಪೀಕರ್‌ಗೆ ದೂರು ಸಲ್ಲಿಸಿದವರು.
ಬಿಜೆಪಿಗೆ ಸೇರಿದ ಜನಾರ್ದನ ರೆಡ್ಡಿ ಅವರನ್ನು ಸಂವಿಧಾನದ 10ನೇ ಅನುಸೂಚಿ ಅನ್ವಯ ಅನರ್ಹಗೊಳಿಸಬೇಕು ಎಂದು ಕಾಂಗ್ರೆಸ್ ಮುಖಂಡರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಲ್ಲಿ ಪುಟ್ಬಾಲ್ ಗುರುತು ಚಿಹ್ನೆಯಡಿ ಸ್ಪರ್ಥಿಸಿ ಗೆಲುವು ಸಾಧಿಸಿದ್ದರು.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಬಿಜೆಪಿ ಜೊತೆ ವಿಲೀನ ಮಾಡಲು ವಿಧಾನಸಭಾ ಸ್ಪೀಕರ್ ಹಾಗೂ ಚುನಾವಣಾ ಆಯೋಗದ ಅನುಮತಿ ಪಡೆಯಬೇಕು. ಇಂತಹ ಪ್ರಕ್ರಿಯೆಯು ನಡೆದಿಲ್ಲ ಎಂಬ ಆರೋಪವು ಕಾಂಗ್ರೆಸ್ ಪಕ್ಷದ ಮುಖಂಡರದು.
ಅದಲ್ಲದೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಯಾವುದೇ ಪದಾಧಿಕಾರಿಯಾಗಿರದಿದ್ದರೂ ಜನಾರ್ದನ ರೆಡ್ಡಿ ಪಕ್ಷವನ್ನು ವಿಲೀನ ಮಾಡುವುದಾಗಿ ಘೋಷಿಸಿರುವುದು ಪಕ್ಷಾಂತರ ನಿಷೇಧ ಕಾಯಿದೆಯ ಉಲ್ಲಂಘನೆಯಾಗಿದೆ ಎಂದು ದೂರು ನೀಡಿದ್ದಾರೆ.






































