ಬಂಟ್ವಾಳ: ಗೋಳ್ತಮಜಲು ಸರಕಾರಿ ಪ್ರಾಥಮಿಕ ಶಾಲೆಯ 40 ಅಡಿ ಎತ್ತರದ ನೀರಿನ ಟ್ಯಾಂಕ್ ಸ್ವಚ್ಛ ಗೊಳಿಸಿದ ಕಲ್ಲಡ್ಕ ಶೌರ್ಯ ವಿಪತ್ತು ನಿರ್ವಹಣಾ ತಂಡದ ಕಾರ್ಯ ಸಾಧನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಶಾಲೆಯಲ್ಲಿ ದೊಡ್ಡ ನೀರಿನ ಟ್ಯಾಂಕ್ ಇದ್ದು ಸ್ವಚ್ಚತೆ ಇಲ್ಲದೆ ಪಾಳು ಬಿದ್ದಿತ್ತು.
ಮೂಲಸೌಕರ್ಯಗಳಲ್ಲಿ ಕುಡಿಯುವ ನೀರು ಒಂದಾಗಿದ್ದು, ಶಾಲಾ ಮಕ್ಕಳು ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದರು.
ಶಾಲಾ ಸಮಿತಿಯು ಹಲವಾರು ಬಾರಿ ಪಂಚಾಯತ್ತಿಗೆ ದೂರು ನೀಡಿದರೂ ಯಾವುದೇ ರೀತಿ ಸ್ಪಂದಿಸದೇ ಕಡೆಗಣಿಸಲಾಗಿತ್ತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕಶೌಯ೯ ವಿಪತ್ತು ತಂಡದವರಿಗೆ ಮಾಡಿದ ಮನವಿ ಸಕಾರತ್ಮಕ ಸ್ವಂದನೆ ದೊರಕಿತ್ತು.
ಟ್ಯಾಂಕಿನಿಂದ ಬೇರ್ಪಟ್ಟು ಧರೆಶಾಹಿಯಾಗಿದ್ದ ಬೃಹತ್ ಆಕಾರದ ಕಬ್ಬಿಣದ ಏಣಿಯನ್ನು ಎತ್ತಿ ನಿಲ್ಲಿಸಲಾಗಿತ್ತು.
40 ಅಡಿ ಎತ್ತರದ ಟ್ಯಾಂಕ್ ನೊಳಗೆ ಸಿಲುಕಿ ಸತ್ತು ಬಿದ್ದ ಉಡ,ಇಲಿ ಗಳನ್ನು ಹೊರ ತೆಗೆಯಲಾಗಿತ್ತು.
ಕ್ರಿಮಿನಾಶಕ ದ್ರಾವಣದಿಂದ ಟ್ಯಾಂಕ್ ತೊಳೆದು ಸ್ವಚ್ಚ ಮಾಡಲಾಯಿತು.

ಟ್ಯಾಂಕ್ ಪೂರ್ತಿ ನೀರು ಶೇಖರಿಸಿ ಹೊರ ಬಿಡಲಾಯಿತು. ಸತತ ಎರಡು ದಿನ ಹಾಗೆ ಮಾಡಿದ ಬಳಿಕ ಯೋಗ್ಯ ವೆನಿಸಿದ ಬಳಿಕ ಶಾಲಾ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರನ್ನು ಇದೇ ಟ್ಯಾಂಕ್ ನಿಂದ ಬಳಸುವಂತೆ ಯೋಜನೆ ಮಾಡಲಾಗಿದೆ.
ಗ್ರಾಮ ಪಂಚಾಯತ್ ನಿಲುವಿಗೆ ಖೇದ
ಶಾಲಾ ಜಾಗದಲ್ಲೇ ಶಾಲಾ ಆವರಣದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಬಹುಗ್ರಾಮ ನೀರಿನ ಯೋಜನೆಯ ದೊಡ್ಡ ಟ್ಯಾಂಕ್ ರಚನೆ ಆಗಿದ್ದರೂ, ಅಂಗನವಾಡಿ ಹಾಗೂ ಪ್ರಾಥಮಿಕ ಶಾಲಾ ಮಕ್ಕಳಿಗೆ ಸರಿಯಾದ ನೀರಿನ ವ್ಯವಸ್ಥೆ ಕಲ್ಪಿಸದಿರುವುದು ವಿಪರ್ಯಾಸವಾಗಿದೆ.
ತರಗತಿ ನಡೆಯುವ ಪಕ್ಕದಲ್ಲಿ ಶಿಥಿಲ ಅವಸ್ಥೆಯಲ್ಲಿ ಕಟ್ಟಡ ಒಂದು ಇದ್ದು ಅದನ್ನು ತೆರೆವುಗೊಳಿಸದೆ ಗ್ರಾಮಪಂಚಾಯತ್ ಹಾಗೂ ಶಿಕ್ಷಣ ಇಲಾಖೆ ಮಕ್ಕಳ ಪ್ರಾಣದ ಜೊತೆ ಯಾಕೆ ಚೆಲ್ಲಾಟ ಆಡುತ್ತೆ ಎಂಬುದೇ ಯಕ್ಷಪ್ರಶ್ನೆಯಾಗಿದೆ.
ಸಂಬಂಧಪಟ್ಟವರು ಕೂಡಲೇ ಸ್ಪಂದಿಸಿ, ಪಾಳುಬಿದ್ದ ಕಟ್ಟಡವನ್ನು ತೆರವುಗೊಳಿಸಿ ಮಕ್ಕಳು ಭಯಬೀತವಿಲ್ಲದೆ ಶಿಕ್ಷಣ ಪಡೆಯುವಂತಾಗಬೇಕೆಂದು ಕಲ್ಲಡ್ಕ ಶೌರ್ಯ ವಿಪತು ತಂಡ ಆಗ್ರಹಿಸಿದೆ.


























