ಮಂಗಳೂರು: ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಾಣಾಧೀನ ಕೈದಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ವೆನ್ಹಾಕ್ ಆಸ್ಪತ್ರೆಯಲ್ಲಿ ಸೋಮವಾರ ಬೆಳಗಿನ ಜಾವ ನಡೆದಿರುವುದು ವರದಿಯಾಗಿದೆ.
ಕೇರಳದ ಕಡೂರುಗೊಡು ನಿವಾಸಿ ಮುಹಮ್ಮದ್ ನೌಫಲ್ (26) ಆತ್ಮಹತ್ಯೆ ಮಾಡಿಕೊಂಡ ವಿಚಾರಾಣಾಧೀನ ಕೈದಿ ಎಂದು ಪ್ರಕರಣ ದಾಖಲಿಸಿರುವ ಪಾಂಡೇಶ್ವರ ಪೊಲೀಸರು ತಿಳಿಸಿದ್ದಾರೆ.
ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ 2022ರ ಡಿ.22ರಿಂದ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಈತನನ್ನು 2024ರ ಎ.25ರಂದು ವೆನ್ಹಾಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
ವೆನ್ಹಾಕ್ ಆಸ್ಪತ್ರೆಯ ಜೈಲು ವಾರ್ಡ್ಲ್ಲಿ ಇತರ ಕೈದಿಗಳೊಂದಿಗೆ ಇದ್ದ ಮುಹಮ್ಮದ್ ನೌಫಲ್ ಬೆಳಗ್ಗಿನ ಜಾವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.


























