ವಿಟ್ಲ : ರಸ್ತೆಯಲ್ಲಿ ಬಿದ್ದುಸಿಕ್ಕಿದ ರೂ.3,000 ನಗದನ್ನು ವಾರಿಸ್ತುದಾರರಿಗೆ ಒಪ್ಪಿಸಿದ ಪ್ರಮಾಣಿಕ ಸತ್ಕಾರ್ಯವನ್ನು ವಿಟ್ಲ ಸೈಂಟ್ ರೀಟಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ನಡೆಸಿದ್ದು, ವ್ಯಾಪಕ ಪ್ರಶಂಸೆ ವ್ಯಕ್ತಗೊಂಡಿದೆ.
ಸೈಂಟ್ ರೀಟಾ ವಿದ್ಯಾಸಂಸ್ಥೆಯ ಐದನೇ ತರಗತಿಯ ವಿದ್ಯಾರ್ಥಿ ಇಬ್ರಾಹಿಂ ರಿಷಾನ್ ವಿದ್ಯಾರ್ಥಿಗೆ ಶಾಲಾ ರಸ್ತೆಯಲ್ಲಿ ರೂ.3000 ಬಿದ್ದು ಸಿಕ್ಕಿತು. ಆತ ಸೋದರ ರಿಯಾನ್ ಮತ್ತು ಗೆಳೆಯ ಸುಜಾನ್ ಅವರ ಗಮನಕ್ಕೆ ತಂದಿದ್ದನು.
ಅವರೆಲ್ಲರೂ ಒಟ್ಟಾಗಿ ಪಕ್ಕದ ಆರಾಧನಾ ಮುದ್ರಣಾಲಯದ ಮಾಲಕ ವಿಜಯರಿಗೆ ಮಾಹಿತಿ ತಿಳಿಸಿ “ರಸ್ತೆಯಲ್ಲಿ ಬಿದ್ದು ಸಿಕ್ಕಿತು, ಯಾರದ್ದೆಂದು ತಿಳಿಯದು” ಎಂದು ಪ್ರಾಮಾಣಿಕವಾಗಿ ಹೇಳಿದರು.
ಸರಸ್ವತಿ ಸಹಕಾರಿ ಬ್ಯಾಂಕ್ ಶಾಖೆಗೆ ಅಳವಡಿಸಿದ ಸಿ.ಸಿ.ಟಿ.ವಿಯ ಫೂಟೇಜ್ ಮೂಲಕ ನೋಡಿದಾಗ ಮುತ್ತುರಾಜ್ ಎಂಬವರ ಜೇಬಿನಿಂದ ಹಣ ಬೀಳುತ್ತಿರುವುದನ್ನು ಗಮನಿಸಿದರು. ಮುತ್ತುರಾಜರನ್ನು ಕರೆಸಿ ಹಣ ಹಸ್ತಾಂತರಿಸಿದರು.
ಈ ಘಟನೆಯು ಬಂಟ್ವಾಳ ತಾಲೂಕು ಮಕ್ಕಳ ಕಲಾಲೋಕದ ಗಮನಕ್ಕೆ ಬರಲಾಗಿ ತಕ್ಷಣ ಕಾರ್ಯ ಪ್ರವೃತ್ತರಾದರು. ಹಣ ಹಿಂತಿರುಗಿಸಲು ಕಾರಣರಾದ ವಿದ್ಯಾರ್ಥಿಗಳನ್ನು ಮತ್ತು ಶಾಲೆಯನ್ನು ಗುರುತಿಸಿ ಪ್ರಾಂಶುಪಾಲ ಫಾದರ್ ಸುನಿಲ್ ಪ್ರವೀಣ್ ಪಿಂಟೋ ಇವರನ್ನು ಸಂಪರ್ಕಿಸಿದರು. ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿಗಳು ಮತ್ತು ಉತ್ತಮವಾಗಿ ಸ್ಪಂದಿಸಿದ ವಿಜಯ್ ಇವರಿಗೆ ಶಾಲಾ ಎಸ್ಸೆಂಬ್ಲಿಯಲ್ಲಿ ಮುತ್ತುರಾಜ್ ಇವರ ಸಹಕಾರದೊಂದಿಗೆ ಪುಸ್ತಕ ಸ್ಮರಣಿಕೆ ಮತ್ತು ಸಿಹಿ ತಿಂಡಿ ನೀಡಿ ಗೌರವಿಸಲಾಯಿತು.
ವಿದ್ಯಾರ್ಥಿಗಳ ಒಳ್ಳೆಯತನ ಮತ್ತು ಪ್ರಾಮಾಣಿಕತೆಯನ್ನು ಪ್ರಾಂಶುಪಾಲರು ಮನ ತುಂಬಿ ಹರಸಿದರು.
ಸ್ವಸ್ಥ ಸಮಾಜಕ್ಕಾಗಿ, “ಸಾಮಾಜಿಕ ಸ್ವಚ್ಛತಾ ಆಂದೋಲನ”ವನ್ನು ಅಲ್ಲಲ್ಲಿ ಸಂಘಟಿಸುತ್ತಿರುವ ಬಂಟ್ವಾಳ ತಾಲೂಕು ಮಕ್ಕಳ ಕಲಾಲೋಕವು ಜನರಲ್ಲಿರುವ ಜೀವನ ಮೌಲ್ಯಗಳು ಸಮಾಜಕ್ಕೆ ಆದರ್ಶವಾದುವುಗಳು. ಮೇಲ್ಪಂಕ್ತಿಯ ಸಂದೇಶ ನೀಡಿದ ಸದ್ಗುಣಗಳಿರುವ ಮಕ್ಕಳನ್ನು ಪಡೆದ ತಂದೆ ತಾಯಿಯರು ಧನ್ಯರೆಂದು ಮೆಚ್ಚುಗೆ ಪ್ರಕಟಪಡಿಸಿರುವರು.
ವರದಿ : ರಮೇಶ ಎಂ. ಬಾಯಾರು
ಅಧ್ಯಕ್ಷರು, ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ದ.ಕ



































