ರಾ.ಹೆ. 169 : ಸಾಣೂರು ಸರಕಾರಿ ಶಾಲೆಯ ಗೇಟಿನ ಮುಂಭಾಗದಲ್ಲಿ ಅಪಾಯಕಾರಿ ಹೊಂಡ : ಹೆದ್ದಾರಿ ಕಾಮಗಾರಿ ಅವಾಂತರ!?!?



ಮಳೆಗಾಲ ಪ್ರಾರಂಭವಾದಂದಿನಿಂದ ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸಾಣೂರಿನ ಜನತೆ ಹೈರಾಣವಾಗಿದ್ದಾರೆ.
ಚರಂಡಿ ವ್ಯವಸ್ಥೆ ಇಲ್ಲ!?!?
ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಚರಂಡಿ ವ್ಯವಸ್ಥೆ ಮಾಡದೇ ಇರುವುದರಿಂದ ಮೊದಲ ಮಳೆಗೆ ರಸ್ತೆಯ ನೀರು ಸಾಣೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ತುಂಬಿ ಶಾಲಾ ಮಕ್ಕಳಿಗೆ ನಡೆದಾಡದ ಸ್ಥಿತಿ ನಿರ್ಮಾಣವಾಗಿತ್ತು.
ಆ ಬಳಿಕ ಹೆದ್ದಾರಿ ಗುತ್ತಿಗೆದಾರ ಕಂಪನಿಯವರು ರಸ್ತೆ ಬದಿ ಚರಂಡಿ ವ್ಯವಸ್ಥೆ ಮಾಡುವ ಬದಲು ನೀರು ನಿಲ್ಲುತ್ತಿದ್ದ ಶಾಲಾ ಮೈದಾನದ ಬಳಿ ಮಣ್ಣು ಹಾಕಿ ಎತ್ತರಿಸಿದ್ದರು.
ಅಪಾಯಕಾರಿ ಜೇಡಿಮಣ್ಣು
ಅಂಟು ಅಂಟಾದ ಶೇಡಿ ಮಣ್ಣು ಹಾಕಿರುವುದರಿಂದ ಶಾಲಾ ಮಕ್ಕಳು ಜಾರಿ ಬಿದ್ದು ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿತ್ತು.
ಆ ಬಳಿಕ ಶಾಲಾ ಅಧ್ಯಾಪಕರು ಮತ್ತು ಗ್ರಾಮಸ್ಥರ ಒತ್ತಡದ ಮೇಲೆ ಶಾಲಾ ಮುಂಭಾಗದ ಗೇಟಿನ ಎದುರು ರಸ್ತೆಯ ಪಕ್ಕದಲ್ಲಿ ಚರಂಡಿ ನಿರ್ಮಾಣ ಮಾಡಿ ರಸ್ತೆ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಿದ್ದರು ಜೊತೆಗೆ ಶಾಲೆಯ ಗೇಟಿನ ಮುಂಭಾಗದಲ್ಲಿ ಎರಡು ಕಾಂಕ್ರೀಟ್ ಮೋರಿಗಳನ್ನು ಹಾಕಿ ಶಾಲಾ ಮುಂಭಾಗದಲ್ಲಿ ಸಂಚರಿಸಲು ಅವಕಾಶ ಮಾಡಿಕೊಟ್ಟಿದ್ದರು.
ಕಳಪೆ ಕಾಮಗಾರಿ.. ನಿರ್ಲಕ್ಷದ ಪರಮಾವಧಿ!!
ಇದೀಗ ಕಳಪೆ ಕಾಮಗಾರಿಯಿಂದಾಗಿ ಹಾಕಿರುವ ಎರಡು ಕಾಂಕ್ರೀಟ್ ಮೋರಿಗಳ ಮಧ್ಯೆ ಸ್ವಲ್ಪ ಜಾಗ ಬಿಟ್ಟಿರುವುದರಿಂದ ಮೇಲ್ಮೈಯಲ್ಲಿ ಮಣ್ಣು ಕುಸಿದು, ಫುಟ್ಬಾಲ್ ಗಾತ್ರದ ಹೊಂಡ ನಿರ್ಮಾಣವಾಗಿದೆ. !
ಅಪಾಯದ ಕರೆಗಂಟೆ!?!?
ಪ್ರತಿ ದಿನ ಶಾಲೆಗೆ ಬರುವ ಪುಟಾಣಿ ಮಕ್ಕಳು ಹೊಂಡವನ್ನು ಗಮನಿಸದೆ ಕಾಲಿಟ್ಟರೆ ಪ್ರಾಣಪಾಯ ಸಂಭವಿಸುವ ಸಾಧ್ಯತೆ ಇದೆ.
ತಾತ್ಕಾಲಿಕವಾಗಿ ರಿಕ್ಷಾ ಚಾಲಕರು ಅದರ ಮೇಲೆ ಕಲ್ಲನ್ನು ಇಟ್ಟಿರುತ್ತಾರೆ.
ಹೆದ್ದಾರಿ ಗುತ್ತಿಗೆದಾರ ಕಂಪನಿಯವರು ಕೂಡಲೇ ಎರಡು ಕಾಂಕ್ರೀಟ್ ಮೋರಿಗಳ ಮಧ್ಯ ಇರುವ ಜಾಗವನ್ನು ಸರಿಪಡಿಸಿ ಶಾಶ್ವತ ಸುರಕ್ಷಿತ ಕಾಮಗಾರಿ ಮಾಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.
ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರ ಕಂಪನಿ, ದಿಲೀಪ್ ಬಿಲ್ಡ್ ಕಾನ್ ಈ ಬಗ್ಗೆ ಕೂಡಲೇ ಎಚ್ಚೆತ್ತು ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವಾರು ಅಸುರಕ್ಷಿತ ಕಾಮಗಾರಿಗಳ ಬಗ್ಗೆ ಈಗಾಗಲೇ ಗ್ರಾಮಸ್ಥರು ಎಚ್ಚರಿಸಿದ್ದರೂ ಅಸಡ್ಡೆ ತೋರುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಸಾಣೂರು ಜನತೆಯ ಸಾಮೂಹಿಕ ಪ್ರತಿಭಟನೆಯ ರುಚಿ ತೋರಿಸಬೇಕಾಗಿದೆ ಎಂದು ಸಾಣೂರು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ರವರು ಎಚ್ಚರಿಸಿದ್ದಾರೆ.






































