ರಾ ಹೆ 169: ಸಾಣೂರು ಮುರತಂಗಡಿ ಸರ್ವಿಸ್ ರಸ್ತೆ ಬದಿ ಭೂಕುಸಿತ : ಬಾಯ್ತೆರೆದ ಮೃತ್ಯುಕೂಪ !
ಕಾರ್ಕಳ : ಕಳೆದ ಮೂರು ವಾರಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರತ್ತಂಗಡಿ ಪ್ರಶಾಂತ ಕಾಮತ್ ರವರ ಮನೆಯ ಮುಂಭಾಗದ ಸರ್ವಿಸ್ ರಸ್ತೆ ಬದಿಯ ಮಣ್ಣು ಕುಸಿದು ಬೃಹದಾಕಾರದ ಹೊಂಡವಾಗಿದ್ದು ಅಪಾಯಕಾರಿ ಸ್ಥಿತಿ ನಿರ್ಮಾಣಗೊಂಡಿದೆ.

ಈಗಾಗಲೇ ಹಲವಾರು ಬಾರಿ ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರ ಕಂಪನಿಯವರಿಗೆ ತಿಳಿಸಿದರೂ ಕೇವಲ ಒಂದೆರಡು ಬಾರಿ ರಸ್ತೆ ಬದಿಗೆ ಕೆಂಪು ಮಣ್ಣು ಸುರಿದು, ಇದೀಗ ಮಳೆ ನೀರಿಗೆ ಸರ್ವಿಸ್ ರಸ್ತೆ ಇಡೀ ಕೆಂಪಾಗಿ ರಾಡಿ ಎದ್ದಿದೆ.
ಜಾರುತ್ತಿರುವ ಮಣ್ಣಿನ ಮೇಲೆ ಈಗಾಗಲೇ ಹಲವಾರು ಬೈಕ್ ಸವಾರರು ನಿಯಂತ್ರಣ ತಪ್ಪಿ ಗಾಯವನ್ನುಂಟು ಮಾಡಿದ್ದಾರೆ.
ಮಣ್ಣು ಕುಸಿದಿರುವ ಪಕ್ಕದಲ್ಲಿಯೇ ಎರಡು ಹೋಟೆಲ್ ಗಳಿದ್ದು, ಲಾರಿ, ಕಾರು ಇನ್ನಿತರ ವಾಹನಗಳು ರಸ್ತೆ ಬದಿಗೆ ಪಾರ್ಕ್ ಮಾಡುತ್ತಿವೆ. ಮಣ್ಣು ಕುಸಿದು ವಾಹನಗಳು ಪಲ್ಟಿಯಾದರೆ 10 ಅಡಿ ಗಾತ್ರದಲ್ಲಿ ಕೆಳಗೆ ಬೀಳುವ ಅಪಾಯಕಾರಿ ಸನ್ನಿವೇಶ ನಿರ್ಮಾಣಗೊಂಡಿದೆ.
ಗುತ್ತಿಗೆದಾರ ಕಂಪನಿಯವರ ಬೇಜವಾಬ್ದಾರಿತನದಿಂದಾಗಿ ಪ್ರಾಣಪಾಯವಾದರೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆದಾರ ಕಂಪನಿಯೇ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ಆಗ್ರಹಿಸಿದ್ದಾರೆ.
ಸರ್ವಿಸ್ ರಸ್ತೆ ಬದಿಯಲ್ಲಿ ಕುಸಿದಿರುವ ಭಾಗಕ್ಕೆ ಕಲ್ಲು ಅಥವಾ ಕಾಂಕ್ರೀಟ್ ನ ತಡೆಗೋಡೆ ನಿರ್ಮಾಣವಾದರೆ ಮಾತ್ರ ಶಾಶ್ವತ ಪರಿಹಾರ ಸಿಗಬಹುದು.






























