ಸುಬ್ರಹ್ಮಣ್ಯ ಧಾರೇಶ್ವರರದ್ದು ನಾಲ್ಕುವರೆ ದಶಕದ ರಂಗ ವ್ಯವಸಾಯ.ಹಿಮ್ಮೇಳ,ಮುಮ್ಮೆಳ ಮತ್ತು ಪ್ರೇಕ್ಷಕ ವರ್ಗ ಈ ಮೂರನ್ನು ಒಂದೇ ತಂತಿಗೆ ಪೋಣಿಸಿ ವಿರಾಜಮಾನರಾದವರು.ಯಕ್ಷಲೋಕದ ಅನರ್ಘ್ಯ ರತ್ನವಾಗಿ ಮೆರೆದವರು. ಸಾಮಾಜಿಕ ಪ್ರಸಂಗಗಳನ್ನು ರಂಗ ಪ್ರಯೋಗಗಳಿಂದ ಜನಪ್ರಿಯಗೊಳಿಸಿದವರು.
- ಎಂ. ನಾ.ಚಂಬಲ್ತಿಮಾರ್@ಕಣಿಪುರ
ಅವರದ್ದು ಪ್ರೀತಿ ಜಿನುಗುವ ಜೀವ…
ಸುಬ್ರಹ್ಮಣ್ಯ ಧಾರೇಶ್ವರರು ಆಪ್ತ ಭಾಗವತರು..ಮಾತನಾಡಿದಷ್ಟೂ ಮೊಗೆಮೊಗೆದು ಅರಳುತ್ತ ಮತ್ತಷ್ಟು ಆಪ್ತರಾಗುವವರು…
ಅವರ ಆಸಕ್ತಿ, ಅರಿವು ಮತ್ತದರ ವಿಸ್ತಾರ ಅಪರಿಮಿತ.
ಕರಾವಳಿಯ ಗೋಕರ್ಣದ ಇಲೆಕ್ಟ್ರಿಷಿಯನ್ ಹುಡುಗನೊಬ್ಬ ಬಡಗಿನ ಭಾಗವತಿಕೆಗೆ ನೀಡಿದ ಬೆಡಗು , ಅದರಲ್ಲಿ ಪಡೆದ ಯಶಸ್ಸು ಶತ್ರುಗಳೂ ಅಸೂಯೆ ಪಡುವಂಥದ್ದು!
ಅವರದ್ದು ಸರಿಸುಮಾರು ನಾಲ್ಕೂವರೆ ದಶಕದ ರಂಗವ್ಯವಸಾಯ. ಹಿಮ್ಮೇಳ, ಮುಮ್ಮೇಳ, ಪ್ರೇಕ್ಷಕ ಈ ಮೂರನ್ನೂ ಒಂದೇ ತಂತಿಗೆ ಪೋಣಿಸಿ ರಂಗ ಸೃಷ್ಟಿಸುವ ಕಥನಕಲೆಯಲ್ಲಿ ಅವರು ವಿರಾಜಮಾನರು..
ಪ್ರಸಂಗ ಎಂಬ ರಂಗ ಪಠ್ಯವೇ ಬೇರೆ. ಅದರ ರಂಗಪ್ರದರ್ಶನವೇ ಬೇರೆ. ಆದ್ದರಿಂದಲೇ ಆಟವನ್ನು ಭಾಗವತರು ಆಡಿಸುವುದು ಎನ್ನುವುದು. ಎಂಥ ಪ್ರಸಂಗವೇ ಇರಲಿ, ಆಟವನ್ನು ಆಡಿಸುವುದರಲ್ಲಿ, ಪ್ರಸಂಗವನ್ನು ಮೇಲೆ ಹಾಕುವುದರಲ್ಲಿ ಧಾರೇಶ್ವರರದ್ದು ಎತ್ತಿದ ಕೈ…
ಅವರ ರಂಗತಂತ್ರಗಳೇ ಅನ್ಯಾದೃಶ.
ಅವರು ದೃಶ್ಯದಿಂದ ದೃಶ್ಯಕ್ಕೆ ಕಥನವನ್ನು ಹೆಣೆದ ಭಾಗವತ. ಮಾತಿನಿಂದ ಮಾತಿಗೆ ಕಥೆ ಪೋಣಿಸಲು ಪ್ರಚೋದಿಸುವ ಭಾಗವತ. ಪ್ರೇಕ್ಷಕರನ್ನು ಕಣ್ಣರಳಿಸಿ ಕೂರುವಂತೆ ಮಾಡಿದ ಭಾಗವತ.
ಒಟ್ಟು ಒಂದು ಪ್ರಸಂಗ, ಅದರ ಕಥಾವಸ್ತು, ಅದರೊಳಗಿನ ರಸವನ್ನು ಪ್ರೇಕ್ಷಕರಿಗೆ ರುಚಿಕಟ್ಟಾಗಿ ತಲುಪಿಸಲು ರಂಗಭೂಮಿಯ ಗಿಮಿಕ್ ಗಳನ್ನೆಲ್ಲ ಬಳಸಿ ಗೆದ್ದ ಅವರು ಪ್ರೇಕ್ಷಕ ಮನಸ್ಸಿನ ಕಲಾವಿದ. ಯಾವನೇ ಕಲಾವಿದ ಮೊದಲು ಪ್ರೇಕ್ಷಕನಾಗಿ ಯೋಚಿಸಬೇಕೆಂದೇ ಹೇಳುತ್ತಿದ್ದವರು…
ಧಾರೇಶ್ವರರು ರಂಗನಿಷ್ಠ ಕಲಾವಿದ. ಅವರ ತೊಡಗಿಸುವಿಕೆಯ ಸಮರ್ಪಣೆಯಲ್ಲಿ ಆಧ್ಯಾತ್ಮದಂಥ ಮಗ್ನತೆಯ ಅನುಸಂಧಾನವಿದೆ. ಇದು ಕಲಾವಿದರೆಲ್ಲರಿಗೆ ಅನುಸರಣೀಯ ನಡೆ.
ಕಾಳಿಂಗ ನಾವಡರು ಮತ್ತು ಧಾರೇಶ್ವರರು ಒಂದೇ ಕಾಲದಲ್ಲಿ ಬೆಳಕಿಗೆ ಬಂದವರು. ನಾವಡರು ಪ್ರಸಿದ್ದಿಯ ಉತ್ತುಂಗಕ್ಕೇರಿ ನಾಗಾಲೋಟ ಓಡುವಾಗ ಅವರೆದುರಲ್ಲಿ ತನ್ನ ಸ್ಥಾನ ತನ್ನದೇ ಕ್ರಿಯಾಶೀಲತೆಯಿಂದ ತಾನೇ ನಿರ್ಮಿಸಿಕೊಂಡ ಕೀರ್ತಿ ಧಾರೇಶ್ವರರದ್ದು.
ಇದು ಸ್ನೇಹಶೀಲ ಸ್ಪರ್ಧೆ…
ಇವರಿಬ್ಭರ ಕೊಡುಗೆಯಿಂದ ಯಕ್ಷಗಾನದ ವ್ಯಾಪಕತೆ , ಜನಪ್ರಿಯತೆ ವಿಸ್ತಾರವಾಯಿತು. ಆಡಿಯೋ ಕ್ಯಾಸೆಟ್ ಉದ್ಯಮ ಬೆಳೆಯಿತು.
ಧಾರೇಶ್ವರರು ಪೌರಾವಣಿಕ ಮತ್ತು ಸಾಮಾಜಿಕ ಪ್ರಸಂಗಗಳ ಅಂತರ, ಮಹತ್ವ ಅರಿತವರು. ಅವರೆಂದೂ ಪೌರಾಣಿಕಕ್ಕೆ ಸಾಮಾಜಿಕದ ಪೌಡರ್ ಮೆತ್ತಲಿಲ್ಲ. ಆದರೆ ಸಾಮಾಜಿಕ ಪ್ರಸಂಗಗಳನ್ನು ರಂಗಪ್ರಯೋಗಗಳಿಂದ ಜನಪ್ರಿಯಗೊಳಿಸಿದರು. ಮೇಳವನ್ನು ಬ್ರಾಂಡ್ ಮಾಡಿದರು. ಸಾಮಾಜಿಕ ಆಖ್ಯಾನಗಳಿಗೆ ಮೇಲ್ಪಂಕ್ತಿ ಹಾಕಿದರು…
ಧಾರೇಶ್ವರರು ಅನೇಕ ಕಲಾವಿದರನ್ನು ಸೃಜಿಸಿದವರು. ರಂಗದ ಯಶಸ್ಸಿಗೆ ಟೀಂ ವರ್ಕ್ ಬೇಕೆಂದು ತೋರಿಸಿಕೊಟ್ಟವರು..
ರಾಗ-ಪ್ರಯೋಗ ಮತ್ತು ಪದ್ಯಾರ್ಥಗಳ ಕವಿ ಕಲ್ಪನೆ ಹಾಗೂ ಸಂಭಾಷಣೆಯ ಬಗ್ಗೆ ತುಂಬಾ ಆಸಕ್ತರಾದ ಅವರು ಒಲವಿನ ಮನುಷ್ಯ.
ಅವರದ್ದು ಪ್ರೀತಿ ಜಿನುಗುವ ಜೀವ..
ಹಂಗಾರಕಟ್ಟೆ ಕೇಂದ್ರದಲ್ಲಿ 1978ರಿಂದ ನಾರಾಯಣ ಉಪ್ಪೂರರ ಶಿಷ್ಯರಾಗಿ ಭಾಗವತಿಕೆ ಕಲಿತ ಅವರು ಗುರು ಸದಾನಂದ ಐತಾಳರ ಅನುಪಸ್ಥಿತಿಯಲ್ಲಿ ಶಿಕ್ಷಣವನ್ನೂ ನೀಡಿದ್ದಾರೆ. ಧಾರೇಶ್ವರರ ಈ ಹೊಳಪಿಗೆ ಕಾರಣ ಹಿಲ್ಲೂರು ಗಣಪತಿ ಹೆಗಡೆ ಎಂಬುದನ್ನೊಮ್ಮೆ ಅವರೇ ಹೇಳಿದ್ದರು…
ಯಕ್ಷಗಾನದ ಹಾಡುಗಾರಿಕೆಯ ಬಗ್ಗೆ ಖಚಿತವಾಗಿ ದೃಷ್ಟಿ ಧೋರಣೆಯೊಂದಿಗೆ ಮಾತಾಡುತ್ತಿದ್ದ ಅವರೊಬ್ಬ ಸಾಹಿತ್ಯ ಪ್ರೇಮಿಯಾದ ಅಸ್ಖಲಿತ ವಾಗ್ಮಿ.
ಉ.ಕ ದ ಗೋಕರ್ಣದಲ್ಲಿ ಜನಿಸಿದ್ದರೂ, ಬೈಂದೂರು ಸಮೀಪದ ಕಿರಿಮಂಜೇಶ್ವರದಲ್ಲಿ ವಾಸವಾಗಿದ್ದ ಅವರು ಈಗ ಕಾಲನ ಕರೆಗೆ ಓ ಗೊಟ್ಟು ತೆರಳಿದ್ದಾರೆ….
ಇನ್ನೇನಿದ್ದರೂ ನೆನಪು….
ಭಾಷ್ಪಾಂಜಲಿಗಳು…
———————- ———–



































