ಮೂಡುಬಿದಿರೆ: ವಿದ್ಯುತ್ ಶಾಕ್‌ಗೆ ತಾಯಿ-ಮಗ ದಾರುಣ ಸಾವು

Picture of RB NEWS

RB NEWS

Bureau Report

ಮೂಡುಬಿದಿರೆ: ವಿದ್ಯುತ್ ಶಾಕ್‌ಗೆ ತಾಯಿ-ಮಗ ದಾರುಣ ಸಾವು

ಬಟ್ಟೆ ಒಣಗಿಸಲು ಹಾಕುವಾಗ ಅವಘಡ; ಮಗನ ರಕ್ಷಣೆಗೆ ಧಾವಿಸಿದ ತಾಯಿಯೂ ಬಲಿ

ಮೂಡುಬದಿರೆ ವಿದ್ಯುತ್ ಶಾಕ್ ತಗುಲಿ ತಾಯಿ ಮತ್ತು ಮಗ ದಾರುಣವಾಗಿ ಮೃತಪಟ್ಟ ಘಟನೆ ಮೂಡುಬಿದಿರೆ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರ್ಣಬೆಟ್ಟುವಿನ ಪೊಸಲಾಯಿ ಎಂಬಲ್ಲಿ ಸಂಭವಿಸಿದೆ.

ಮೃತರನ್ನು ಮರ್ಸಿ ಮಸ್ಕರೇನಸ್ (45) ಮತ್ತು ಅವರ ಪುತ್ರ ಶೋನ್ ಮಸ್ಕರೇನಸ್ (18) ಎಂದು ಗುರುತಿಸಲಾಗಿದೆ. ಶೋನ್ ಮೂಡುಬಿದಿರೆಯ ಹೋಲಿ ರೋಸರಿ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದನು.

ಬುಧವಾರ ಸಂಜೆ 6.30ರಿಂದ 7 ಗಂಟೆಯ ನಡುವಿನ ಅವಧಿಯಲ್ಲಿ ಈ ದುರಂತ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಗುರುವಾರ ಬೆಳಗ್ಗೆ 7ರಿಂದ 8 ಗಂಟೆಯ ವೇಳೆಗೆ ತೋಟದ ಕೆಲಸಕ್ಕೆ ಬಂದ ಕಾರ್ಮಿಕ ಸುಂದರ ಪೂಜಾರಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಮಗನ ರಕ್ಷಣೆಗೆ ಧಾವಿಸಿದ ತಾಯಿಯೂ ಬಲಿ

ಮಾಹಿತಿಯ ಪ್ರಕಾರ, ಸ್ನಾನ ಮುಗಿಸಿ ಬಂದ ಶೋನ್ ಮನೆಯ ಹೊರಭಾಗದಲ್ಲಿ ಬಟ್ಟೆ ಒಣಗಿಸಲು ಹಾಕುವ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಶಾಕ್‌ಗೆ ಒಳಗಾಗಿದ್ದಾನೆ. ಮಗನಿಗೆ ವಿದ್ಯುತ್ ಶಾಕ್ ತಗುಲಿದ್ದನ್ನು ಕಂಡ ತಾಯಿ ಮರ್ಸಿ ಆತನನ್ನು ರಕ್ಷಿಸಲು ಧಾವಿಸಿದ್ದು, ಅವರಿಗೂ ವಿದ್ಯುತ್ ಪ್ರವಹಿಸಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮನೆಯ ಹಂಚಿನ ಛಾವಣಿಗೆ ಮರದ ಬದಲಾಗಿ ಕಬ್ಬಿಣದ ಪಕ್ಕಾಸುಗಳನ್ನು ಅಳವಡಿಸಲಾಗಿತ್ತು. ವಿದ್ಯುತ್ ತಂತಿ ತುಂಡಾಗಿ ಕಬ್ಬಿಣದ ಪಕ್ಕಾಸಿಗೆ ವಿದ್ಯುತ್ ಪ್ರವಹಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಬಟ್ಟೆ ಒಣಗಿಸಲು ಹಾಕುವ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿ ಈ ದುರಂತ ಸಂಭವಿಸಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆಯ ನಿಖರ ಕಾರಣವನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬೇಕಿದೆ.

ಆಧಾರವಾಗಿದ್ದ ತಾಯಿ-ಮಗನ ಸಾವು

ಮರ್ಸಿ ಅವರ ಪತಿ ಸೈಮನ್ ಮಸ್ಕರೇನಸ್ ಸುಮಾರು 15 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಅಂದಿನಿಂದ ತಾಯಿ ಮತ್ತು ಮಗ ಇಬ್ಬರೇ ಮನೆಯಲ್ಲಿ ವಾಸವಾಗಿದ್ದು, ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕುಟುಂಬದ ಜವಾಬ್ದಾರಿಯನ್ನು ಸೈಮನ್ ಅವರ ಸಹೋದರ ಜೆರಿ ಮಸ್ಕರೇನಸ್ ನೋಡಿಕೊಳ್ಳುತ್ತಿದ್ದರು. ಅವರು ವಿದೇಶದಿಂದ ಮರಳಿದ ಬಳಿಕ ಮೃತದೇಹಗಳ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ತಹಸೀಲ್ದಾರ್ ಶ್ರೀಧರ ಮುಂದಲಮನಿ, ಪಾಲಡ್ಕ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ಸುಕೇಶ್ ಶೆಟ್ಟಿ ಕೇಮಾರು, ಪೊಲೀಸರು ಹಾಗೂ ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಒಂದೇ ಕುಟುಂಬದ ಆಧಾರವಾಗಿದ್ದ ತಾಯಿ-ಮಗನನ್ನು ವಿದ್ಯುತ್ ಅವಘಡ ಬಲಿಪಡೆದಿರುವುದು ಸ್ಥಳೀಯರಲ್ಲಿ ತೀವ್ರ ದುಃಖ ಮೂಡಿಸಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top