ಮೂಡುಬಿದಿರೆ: ಯುವಕನೊಬ್ಬ ತಲವಾರು ಹಿಡಿದು ಓಡಾಡಿ ಸಾರ್ವಜನಿಕರಲ್ಲಿ ಆತಂಕ ಉಂಟುಪಡಿಸಿದ ಘಟನೆ ಮೂಡುಬಿದಿರೆ ಹೃದಯಭಾಗವಾಗಿರುವ ಬಸ್ ನಿಲ್ದಾಣದಲ್ಲಿ ನಡೆದಿದೆ.
ಘಟನೆಯ ರೂವಾರಿ ಆರೋಪಿ ರಾಜೇಶ್‌ನನ್ನು ಪೊಲೀಸರು ವಶಕ್ಕೆ ಪಡೆದು, ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಿದ್ದಾರೆ. ರಾಜೇಶ್ ಬಸ್ ನಿಲ್ದಾಣದಲ್ಲಿರುವ ಮೊಬೈಲ್ ಅಂಗಡಿಯೊಂದಕ್ಕೆ ತೆರಳಿ, ಅಂಗಡಿಯಲ್ಲಿದ್ದ ಯುವಕನಿಗೆ ತಲವಾರು ತೋರಿಸಿ ಮೊಬೈಲ್ ನೀಡುವಂತೆ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ. ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಭಯಭೀತರಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ರಾಜೇಶ್‌ನನ್ನು ವಶಕ್ಕೆ ಪಡೆದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಘಟನೆಯಿಂದ ಕೆಲಕಾಲ ಬಸ್ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ರಾಜೇಶ್ ಅಮಲು ಪದಾರ್ಥ ಸೇವಿಸಿದ್ದ ಹಾಗೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ವಿರುದ್ಧ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.