ಮಾಡಹಾಗಲ ಬೆಳೆದು ಮಾದರಿಯಾದ ಹೊಸ್ಮಾರಿನ ಯುವಕ
ಒಂದೂವರೆ ಎಕರೆಯಲ್ಲಿ ನಳ ನಳಿಸುತ್ತಿದೆ ಬೆಳೆ

ಕಾರ್ಕಳ: ಕರಾವಳಿಯ ಯುವಕರು ಕೃಷಿಯಿಂದ ವಿಮುಖರಾಗಿ ಬೆಂಗಳೂರು, ಮುಂಬೈ ಹೊರದೇಶಗಳಿಗೆ ಉದ್ಯೋಗ ಅರಸಿ ಹೋಗುತ್ತಿದ್ದಾರೆ. ಹಳ್ಳಿಯ ಹೆಚ್ಚಿನ ಗದ್ದೆಗಳು ಪಾಳುಬಿದ್ದಿವೆ. ಇಲ್ಲವೇ ಲೇಔಟ್ ಗಳಾಗಿ ಮನೆಗಳು ಮೇಲೆದ್ದು ನಿಂತಿವೆ. ಆದರೆ ಕಾರ್ಕಳದ ಕುಡಿಮೀಸೆಯ ಯುವಕನೊಬ್ಬ ತರಕಾರಿ ಸೇರಿದಂತೆ ವಿವಿಧ ದೇಶ, ವಿದೇಶದ ಹಣ್ಣಿನ ಕೃಷಿಯೊಂದಿಗೆ ವಿಶೇಷವಾದ ಕಾಡುಪೀರೆ (ಮಾಡಹಾಗಲ ಕೃಷಿ) ಮಾಡುವ ಮೂಲಕ ಮಾದರಿಯಾಗಿದ್ದಾರೆ. ಅವರ ಕೃಷಿ ಲೋಕದ ಪರಿಚಯ ಇಲ್ಲಿದೆ.

ಕಾರ್ಕಳ ತಾಲೂಕು ಹೊಸ್ಮಾರುನ ಲೀಲಾ ಫಾರ್ಮ್ ನ ಶ್ರವಣ್ ಶೆಣೈಗೆ ಬಿಬಿಎ ಪದವೀಧರ. ಈಗ ಅವರಿಗೆ 22 ವರ್ಷ ವಯಸ್ಸು ಕೃಷಿಯಲ್ಲಿ ಏನಾದರೂ ಹೊಸತನ್ನು ಸಾಧಿಸಬೇಕೆಂಬ ಹಂಬಲ ಹೊಂದಿರುವ ಶ್ರವಣ್ ಅವರು ಇದೀಗ ಮಾಡಹಾಗಲ ಬೆಳೆ ಮೂಲಕ ಯುವಕರಿಗೆ ಪ್ರೇರಣೆಯಾಗಿದ್ದಾರೆ.

ಹೇಗೆ ಬೆಳೆಯುವುದು: ಕಾಡಿನಲ್ಲಿ ದೊರೆಯುವ ಮಾಡಹಾಗಲ ಚೌತಿ, ಅಷ್ಟಮಿಗೆ ಮಾತ್ರ ದೊರೆಯುವ ತರಕಾರಿ. ಅದಕ್ಕೆ ಕತ್ತಿ ತಾಗಿಸುವಂತಿಲ್ಲ. ಕೃತಕ ಪರಾಗಸ್ಪರ್ಶವೂ ಅಗತ್ಯವಿಲ್ಲ, ಜೇನು ನೊಣಗಳಿಂದಲೇ ಪರಾಗಕ್ರಿಯೆ ನಡೆದು ಕಾಯಿಕಟ್ಟುತ್ತದೆ. ಆದರೆ ಶ್ರವಣ್ ಶೆಣ್ಣೆ ಬೆಳೆಸಿರುವ ಹೈಬ್ರೀಡ್ ಮಾಡಹಾಗಲ ಹಾಗಲ್ಲ. ಕೃತಕ ಪರಾಗಸ್ಪರ್ಶ ಮೂಲಕ ಬೆಳೆ ತೆಗೆಯುತ್ತಿದ್ದು ವರ್ಷವಿಡಿ ಕಾಡುಪೀರೆ ಪಡೆಯುತ್ತಿದ್ದಾರೆ.
ಯಾವ ತಳಿ: ಶ್ರವಣ್ ಅವರು ಬೆಳೆದಿರುವುದು ವೈಲ್ಡ್ ಮತ್ತು ಅಸ್ಸಾಂ ತಳಿಯ ಕ್ರಾಸ್ ಬ್ರೀಡ್ ಆಗಿದ್ದು ತೆಳು ಕಿತ್ತಳೆ ಬಣ್ಣದಲ್ಲಿ ಕಾಯಿಗಳಿರುತ್ತದೆ. ಮಾಡಹಾಗಲದಲ್ಲಿ ಗಂಡು ಮತ್ತು ಹೆಣ್ಣಂಬ ವಿಧವಿದೆ. ಗಂಡು ಹೂವಿನ ಪರಾಗವನ್ನು ತೆಗೆದು ಹೆಣ್ಣು ಹೂವಿಗೆ ಪರಾಗಸ್ಪರ್ಶ ಮಾಡಬೇಕು. (ಹೆಣ್ಣು ಹೂವಿನ ಹಿಂಭಾಗದಲ್ಲಿ ಕಾಯಿ ಕಟ್ಟಿರುತ್ತದೆ). ಒಂದು ಗಂಡು ಹೂವಿನ ಪರಾಗದಿಂದ ಹೊಸಬರಾದರೆ 4-5 ಹೆಣ್ಣು ಹೂವಿಗೆ ಪರಾಗಸ್ಪರ್ಶ ಮಾಡಬಹುದು. ಅನುಭವ ಹೆಚ್ಚಾದ ಬಳಿಕ ಎಳರಿಂದ ಹತ್ತು ಹೂವಿಗೂ ಪರಾಗಸ್ಪರ್ಶ ನಡೆಸಬಹುದು ಎಂಬುದು ಶೆಣೈ ಅನುಭವದ ಮಾತು. ಪರಾಗಸ್ಪರ್ಶ ಕ್ರಿಯೆ ನಡೆದು 15 ದಿನಗಳಲ್ಲಿ ಮಾಡಹಾಗಲ ಕಟಾವಿಗೆ ಬರುವುದು ಈ ಹೈಬ್ರೀಡ್ ತಳಿಯ ವೈಶಿಷ್ಟ್ಯ. ಬೆಳಗ್ಗೆ 6.30ರಿಂದ 9.30ರ ಒಳಗೆ ಪರಾಗಕ್ರಿಯೆ ನಡೆಸುವುದು ಅಗತ್ಯ ಎಂಬುದು ಶ್ರವಣ್ ಅಭಿಪ್ರಾಯ.
ಕೃತಕ ಪರಾಗಸ್ಪರ್ಶ ನಡೆದು ಕೇವಲ 15 ದಿನದಲ್ಲಿ ಮಾಡಹಾಗಲ ಕಟಾವಿಗೆ ರೆಡಿಯಾಗುತ್ತದೆ. ಶ್ರವಣ್ ಅವರ ತೋಟದಲ್ಲಿ 4 ಮಂದಿ ಬೆಳಗ್ಗಿನ ವೇಳೆ ಪರಾಗಸ್ಪರ್ಶ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಶ್ರವಣ್ ಅವರ ತಂದೆ ಕೂಡ ಈ ಕಾರ್ಯಕ್ಕೆ ಸಹಕಾರ ಒದಗಿಸುತ್ತಾರೆ.

ಒಂದು ಬಳ್ಳಿಯಲ್ಲಿ 8 ಕೆಜಿ: ಶ್ರವಣ್ ಪ್ರಸ್ತುತ ಒಂದೂವರೆ ಎಕರೆಯಲ್ಲಿ ಮಾಡಹಾಗಲ ಕೃಷಿ ಮಾಡುತ್ತಿದ್ದಾರೆ. ಒಂದು ಬಳ್ಳಿಯಲ್ಲಿ 8 ಕೆ.ಜಿ.ವರೆಗೆ ಫಸಲು ಪಡೆಯಬಹುದು. 10 ಹೆಣ್ಣು ಪ್ರಬೇಧದ ಬಳ್ಳಿಗೆ 1 ಗಂಡು ಬಳ್ಳಿ, ಒಂದು ಸಾಲಿನಲ್ಲಿ 20 ಗಿಡಗಳನ್ನು ನಾಟಿ ಮಾಡುವುದಾದರೆ ಆ ಪೈಕಿ ಒಂದು ಬಳ್ಳಿ ಗಂಡಾಗಿದ್ದು, ಉಳಿದಿರುವುದು ಹೆಣ್ಣಾಗಿರುತ್ತದೆ.
ಸಂಪೂರ್ಣ ಸಾವಯವ: ಸೆಗಣಿ ನೀರು, ಹಟ್ಟಿಗೊಬ್ಬರ ಬಳ್ಳೆ ಹರಡುವ ನೆಟ್, ಕಳೆ ನಿರ್ವಹಣೆ ಸರಿಯಾಗಿದ್ದಲ್ಲಿ ಮಾತ್ರವೇ ಉತ್ತಮ ಫಸಲು ಪಡೆಯುವುದು ಸಾಧ್ಯ. ಶ್ರವಣ್ ರಾಸಾಯನಿಕ ಬಳಸದೇ ಕೇವಲ ಹಟ್ಟಿ ಗೊಬ್ಬರದಲ್ಲಿಯೇ ಕೃಷಿ ನಡೆಸುತ್ತಿರುವುದು ಇನ್ನೊಂದು ವಿಶೇಷ, ನಾಲ್ಕು ವರ್ಷದ ಹಿಂದೆ ತೀರ್ಥಹಳ್ಳಿಯಿಂದ ಗಿಡಗಳನ್ನು ತಂದಿದ್ದು ಪ್ರಸ್ತುತ ಸ್ವತಃ ಗಿಡಗಳನ್ನು ತಯಾರಿ ಮಾಡುತ್ತಿದ್ದಾರೆ. ಅಲ್ಲದೆ ಈ ಕೃಷಿಯಲ್ಲಿ ಆಸಕ್ತಿ ಇರುವದವರಿಗೆ ಸಸಿ, ಮಾರ್ಗದರ್ಶನ ನೀಡಲು ಸಿದ್ಧರಿದ್ದಾರೆ. ಮಾಡಹಾಗಲ ಬಹುಬೇಡಿಕೆಯ ತರಕಾರಿಯಾಗಿದ್ದು, ಸ್ವತಃ ಮನೆಗೆ ಬಂದು ಗ್ರಾಹಕರು ಖರೀದಿ ಮಾಡುತ್ತಾರೆ. ಅದೇ ರೀತಿ ಉಡುಪಿ ಮಂಗಳೂರು ಸೇರಿದಂತೆ ರಾಜ್ಯ ಹೊರರಾಜ್ಯಕ್ಕೂ ಕಳುಹಿಸುತ್ತಾರೆ.
ಕರಾವಳಿಯಲ್ಲಿ ಮೊದಲು…
ನಾನು ಕಳೆದ 4 ವರ್ಷದ ಹಿಂದೆ ತೀರ್ಥಹಳ್ಳಿಯಿಂದ ಗಿಡ ತಂದು ನಾಟಿ ಮಾಡಿದ್ದು, ಪ್ರಸ್ತುತ ನಾವೇ ಗಿಡ ತಯಾರಿಸುತ್ತಿದ್ದೇವೆ. ಉತ್ತಮ ಫಸಲನ್ನು ಪಡೆದಿದ್ದೇವೆ. ಕರಾವಳಿ ಭಾಗದಲ್ಲಿ ಮೊದಲ ಬಾರಿಗೆ ಎನ್ನುವಂತೆ ಈ ಕೃಷಿ ಮಾಡಿದ್ದು ಯುವಕರು ಸೇರಿದಂತೆ ಕೃಷಿ ಮಾಡಲು ಆಸಕ್ತಿ ಇರುವವರಿಗೆ ಮಾರ್ಗದರ್ಶನ ನೀಡಲು ಸಿದ್ಧ
–ಶ್ರವಣ್ ಯುವ ಕೃಷಿಕ


































