ಮಾರ್ಚ್ 8 ವಿಶ್ವ ಮಹಿಳಾ ದಿನವಾಗಿ ಆಚರಿಸಲಾಗುತ್ತದೆ. ಜಗತ್ತಿನಾದ್ಯಂತ ಮಹಿಳೆ ತನ್ನ ಸ್ಥಾನಮಾನ, ನಡೆದು ಬಂದ ದಾರಿ ಸಮಾಜಕ್ಕೆ ನೀಡಿದ ಕೊಡುಗೆ ಇವನ್ನೆಲ್ಲಾ ಅವಲೋಕಿಸುವ ದಿನವಿದು. ಮಹಿಳಾ ದಿನಾಚರಣೆ ಇದು ಯಾವುದೇ ವ್ಯಕ್ತಿಯೊಬ್ಬರ ಹುಟ್ಟು ಹಬ್ಬ ಅಥವಾ ಪುಣ್ಯತಿಥಿಯ ನೆನಪಿಗಾಗಿ ಆರಂಭಿಸಿದ್ದಲ್ಲ. ಮಹಿಳೆಯರು ಬದುಕಿನ ಹಕ್ಕಿಗಾಗಿ ನಡೆಸಿದ ಹೋರಾಟದ ನೆನಪಿಗಾಗಿ ಇದನ್ನು ಆಚರಿಸಲಾಗುತ್ತದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಮಹಿಳೆಯರ ಬದುಕು ಗಮನಾರ್ಹ ಸುಧಾರಣೆ ಕಂಡಿದೆ.
ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಗುರುತಿಸಲು ಪ್ರತಿ ವರ್ಷ ಮಾರ್ಚ್ 8ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ.1911ರಲ್ಲಿ ಮೊದಲ ಬಾರಿಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿನ ಮಹಿಳೆಯರ ಸಾಧನೆಗಳನ್ನು ಗುರುತಿಸುವುದು ಮತ್ತು ಮಹಿಳಾ ಸಮಾನತೆ, ಲಿಂಗ ತಾರತಮ್ಯ ಕುರಿತು ಅರಿವು ಮೂಡಿಸುವುದು ಈ ದಿನದ ವಿಶೇಷತೆ.
21ನೆಯ ಶತಮಾನದಲ್ಲಿ ಮಹಿಳೆ ಎದುರಿಸುತ್ತಿರುವ ಸಮಸ್ಯೆಗಳು ಭಿನ್ನವಾಗಿದೆ. ಹಾಗೆಂದು ಹೆಣ್ಣು ಹೆದರಿ ಕುಳಿತಿಲ್ಲ. ಜೀವನದ ಪ್ರತಿಯೊಂದು ಸಮಸ್ಯೆಯನ್ನೂ ಪರಿಹರಿಸಿಕೊಳ್ಳುವ ಶಕ್ತಿ ತನ್ನಲ್ಲಿ ಇದೆ ಎಂದು ಸಾಬೀತು ಪಡಿಸಿದ್ದಾಳೆ. ಸ್ತ್ರೀ ಕನಸು ಹೌದು ವಾಸ್ತವವು ಹೌದು. ಹೆಣ್ಣನ್ನು ಪ್ರಕೃತಿಗೆ ಭೂಮಿಗೆ ಹೋಲಿಸುತ್ತಾರೆ, ಏಕೆಂದರೆ ಹೆಣ್ಣು ತನ್ನ ಮೇಲೆ ಆಗುವ ದೌರ್ಜನ್ಯಗಳನ್ನು ಮೌನವಾಗಿ ಸಹಿಸಿ ಒಳಿತನ್ನೇ ಹಾರೈಸುತ್ತಾಳೆ ಎಂಬ ವಿಶ್ವಾಸದಿಂದ. ಜನಪದರು ಕೂಡ ಹೆಣ್ಣಿನ ಬದುಕನ್ನು ತಾನು ಕುದಿದು ಬಣ್ಣ ನೀಡುವ ಸುಣ್ಣಕ್ಕೆ ತಾನು ಉರಿದು ಬೆಳಕು ನೀಡುವ ದೀಪಕ್ಕೆ ಹೋಲಿಸಿದ್ದಾರೆ .
ಇಂಥ ಹೆಣ್ಣಿನ ಕುರಿತು ಕವಿ ಜಿ.ಎಸ್.ಶಿವರುದ್ರಪ್ಪನವರು
ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೆ ಸಾಕೆ
ಎಂದಿದ್ದಾರೆ
ಇಂದು ಹೆಣ್ಣು ನಾಲ್ಕು ಗೋಡೆಗಳ ನಡುವೆ ಕಾಲಕಳೆಯುವ ಕಾಲ ಕಣ್ಮರೆಯಾಗಿ ಪುರುಷ ಪ್ರಧಾನ ಸಮಾಜದಲ್ಲಿ ಪುರುಷರಷ್ಟೆ ಧೀಮಂತಿಕೆಯಿಂದ ಬದುಕಲು ಸಾಧ್ಯವೆಂದು ಸಾಧನೆಗಳ ಮೂಲಕ ತೋರಿಸಿ ಕೊಟ್ಟಿದ್ದಾಳೆ ಆದರೆ ತನ್ನ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಡೆಯುವ ದಾರಿ ಕಾಣದೆ ಅಸಹಾಯಕಳಾಗಿದ್ದಾಳೆ.
ಅಲ್ಲಮನು ತನ್ನ ವಚನದಲ್ಲಿ ‘ ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ, ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ, ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ, ಮನದ ಮುಂದಣ ಆಸೆಯೇ ಮಾಯೆ ಎಂದಿದ್ದಾನೆ.
ರಾಮಾಯಣ ನಡೆದದ್ದು ಸೀತೆಯೆಂಬ ಹೆಣ್ಣಿನಿಂದಾಗಿ, ಮಹಾಭಾರತ ನಡೆದದ್ದು ಮಣ್ಣಿನಿಂದಾಗಿ ಎನ್ನುವ ಪುರುಷ ಪ್ರಧಾನ ಸಮಾಜ ಗಂಡಿನ ದುಷ್ಟ ಮನಸ್ಥಿತಿ ಈ ಯುದ್ಧ ನಡೆಯಲು ಕಾರಣ ಎಂದು ಹೇಳಲು ಮರೆತಿರುವುದು ವಿಪರ್ಯಾಸ.
ಹೆಣ್ಣಿನ ವ್ಯಕ್ತಿತ್ವವನ್ನು ಗೌರವಿಸುವ ಮನಸ್ಥಿತಿಯನ್ನು ಕಳೆದುಕೊಂಡು ಅವಳನ್ನು ಒಂದು ಭೋಗದ ವಸ್ತುವಾಗಿ ಕಾಣುತ್ತಿರುವ ಮನಸ್ಥಿತಿಯೇ ಹೆಣ್ಣಿನ ಮೇಲೆ ನಡೆಯುತ್ತಿರುವ ಅತ್ಯಾಚಾರ, ಅನಾಚರ, ಭ್ರೂಣ ಹತ್ಯೆಯಂತಹ ಕೌರ್ಯಗಳ ಹಿಂದೆ ಅಡಗಿದೆ ಎನ್ನುವುದು ನನ್ನ ಅನಿಸಿಕೆ. ತಾವು ಏನು ಮಾಡಿದರೂ ನಡೆಯುತ್ತದೆ ಎನ್ನುವ ಪುರುಷ ಧೋರಣೆ ಸಹ ಇದಕ್ಕೆ ಕಾರಣವಾಗಿರಬಹುದು.
ಆದ್ದರಿಂದ ಮಕ್ಕಳಲ್ಲಿ ಬಾಲ್ಯದಿಂದಲೇ ಮಹಿಳೆಯನ್ನು ಗೌರವಿಸುವ ಮನೋಭಾವ ಬೆಳೆಸಬೇಕಾಗಿದೆ. ಹೆಣ್ಣನ್ನು ಭೋಗದ ವಸ್ತು ಎಂಬಂತೆ ಬಿಂಬಿಸುವ ಎಲ್ಲಾ ವಿಚಾರಗಳನ್ನು ತಿರಸ್ಕರಿಸಿ ಪ್ರತಿಯೊಬ್ಬರೂ ಮಾನಸಿಕವಾಗಿ ತಮಗೆ ತಾವೇ ನೈತಿಕ ಗೆರೆಯನ್ನು ಎಳೆದುಕೊಳ್ಳಬೇಕಾಗಿದೆ. ಹಾಗೆಯೇ ಮುಂದೆಂದೂ ಯಾರೂ ಅತ್ಯಾಚಾರದಂತಹ ಕುಕೃತ್ಯಗಳಿಗೆ ತೊಡಗದಂತೆ ಬಿಗಿಯಾದ ಕಠಿಣ ಕಾನೂನಿನ ಅವಶ್ಯಕತೆ ಇದೆ.
ಮಹಿಳಾ ದಿನಾಚರಣೆ ಎಂದಾಗ ನಮ್ಮ ಕಣ್ಣೆದುರು ಸಾಧಕ ಮಹಿಳೆಯರನ್ನು ಗುರುತಿಸುತ್ತಾ ಹೋಗುತ್ತದೆ. ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರು ನಮ್ಮ ಮುಂದೆ ಕಾಣಿಸಿಕೊಳ್ಳುತ್ತಾರೆ. ಆದರೆ ವೃತ್ತಿಯಲ್ಲಿ ಯಶಸ್ವಿಯಾದ ಮಹಿಳೆಯರನ್ನು ಮಾತ್ರ ಸಾಧಕ ಮಹಿಳೆಯರು ಎನ್ನಲಾಗದು.
ಯಶಸ್ವಿನ ಮಾನದಂಡಗಳು ಬದಲಾಗಬೇಕಾಗಿದೆ.ಕೂಲಿ, ನಾಲಿ ಮಾಡಿ ತನ್ನ ಕುಟುಂಬವನ್ನು ಸಲಹುವ ಮಹಿಳೆಯರು ಕೂಡ ಯಶಸ್ವಿ ಮಹಿಳೆಯರಲ್ಲವೇ ? ತನ್ನ ಆಸೆಗಳನ್ನು ಬದಿಗೊತ್ತಿ ಜೀವಮಾನವಿಡೀ ಗಂಡ,ಮಕ್ಕಳಿಗಾಗಿ ದುಡಿದು ಒಳ್ಳೆಯ ವ್ಯಕ್ತಿಯನ್ನು, ಸತ್ಪ್ರಜೆಯನ್ನು ಸಮಾಜಕ್ಕೆ ಕೊಡುವ ಮಹಿಳೆ ಕೂಡ ಯಶಸ್ವಿ ಮಹಿಳೆಯೆ.
. Inspire Inclusion’ ಎಂಬುದು 2024ರ ಅಂತಾರಾಷ್ಟ್ರೀಯ ಮಹಿಳಾ ದಿನದ ಅಭಿಯಾನದ ಘೋಷವಾಕ್ಯವಾಗಿದೆ ಪ್ರತಿಯೊಂದರಲ್ಲಿಯೂ ಮಹಿಳೆಯರ ಒಳಗೊಳ್ಳುವಿಕೆಯನ್ನು ಹಾಗೂ ಅವರನ್ನು ಅರ್ಥಮಾಡಿಕೊಳ್ಳಲು ಮತ್ತು ಗೌರವಿಸಲು ನಾವು ಇತರರನ್ನು ಪ್ರೇರೇಪಿಸಿದಾಗ ಉತ್ತಮ ಜಗತ್ತನ್ನು ರೂಪಿಸಬಹುದು ಎಂದು ಇದರ ಅರ್ಥವಾಗಿದೆ.
ಇಂದಿನ ಕಾಲದಲ್ಲಿ ಮಹಿಳೆಗೆ ಬೇಕಾಗಿರುವುದು ಸ್ವೇಚೆಯಲ್ಲ, ಆಳುವ ಅಧಿಕಾರವಲ್ಲ.ಆಕೆಗೆ ಅವಶ್ಯವಿರುವುದು ಸಹಜವಾಗಿ ಬೆಳೆಯುವ ಅವಕಾಶ. ಹೆಣ್ಣಿಗೂ ಒಂದು ವ್ಯಕ್ತಿತ್ವವಿದೆ. ಅವಳ ಭಾವನೆಗೂ ಬೆಲೆ ಕೊಡಬೇಕು ಎಂಬ ವಿಚಾರ ಪ್ರತಿಯೊಬ್ಬರಲ್ಲಿ ಬಂದಾಗ ಮಹಿಳಾ ದಿನಾಚರಣೆ ಸಾರ್ಥಕತೆ ಪಡೆದುಕೊಳ್ಳುತ್ತದೆ.
– ಮಿತ್ರಪ್ರಭಾ ಹೆಗ್ಡೆ


























