ಮಂಗಳೂರು: ರಾಕೇಶ್ ಕೊಲೆ ಪ್ರಕರಣ – ಮೂವರಿಗೆ ಜೀವಾವಧಿ, ನಾಲ್ಕನೇ ಆರೋಪಿಗೆ 3 ವರ್ಷ ಜೈಲು ಶಿಕ್ಷೆ
RB NEWS
Bureau Report
ಮಂಗಳೂರು: ರಾಕೇಶ್ ಕೊಲೆ ಪ್ರಕರಣ – ಮೂವರಿಗೆ ಜೀವಾವಧಿ, ನಾಲ್ಕನೇ ಆರೋಪಿಗೆ 3 ವರ್ಷ ಜೈಲು ಶಿಕ್ಷೆ
ಮಂಗಳೂರು: 2019ರಲ್ಲಿ ಪಂಜಿಮೊಗರು ಬಳಿ ನಡೆದ ರಾಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿರುವ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮೂವರಿಗೆ ಜೀವಾವಧಿ ಶಿಕ್ಷೆ ಹಾಗೂ ನಾಲ್ಕನೇ ಆರೋಪಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಮೃತನ ತಂದೆಗೆ 50 ಸಾವಿರ ರೂ. ಪರಿಹಾರ ನೀಡುವಂತೆಯೂ ನ್ಯಾಯಾಲಯ ಆದೇಶಿಸಿದೆ. ಸುನೀಲ್ ಕುಮಾರ್ ಅಲಿಯಾಸ್ ಕೌಟಿ, ಪ್ರವೀಣ್ ಪೂಜಾರಿ ಅಲಿಯಾಸ್ ಚೋಟು, ಪ್ರೀತಂ ಅಲಿಯಾಸ್ ಅಭಿ ಮತ್ತು ರೋಹಿತ್ ಕುಮಾರ್ ಅಲಿಯಾಸ್ ಶೂಟರ್ ಶಿಕ್ಷೆಗೊಳಗಾದ ಆರೋಪಿಗಳು. 2019ರ ಜನವರಿ 3ರಂದು ಪಂಜಿಮೊಗರು–ಮಲಾಡಿ ರಸ್ತೆಯಲ್ಲಿರುವ ಎಂ.ವಿ. ಶೆಟ್ಟಿ ಕಾಲೇಜಿನ ಬಳಿ ಈ ಹತ್ಯೆ ನಡೆದಿತ್ತು. ಪ್ರಾಸಿಕ್ಯೂಷನ್ ಪ್ರಕಾರ, ಮೃತ ರಾಕೇಶ್ ಮೊದಲ ಆರೋಪಿ ಸುನೀಲ್ ಕುಮಾರ್ ಅವರ ಸಹೋದರಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ. ಇದೇ ವಿಚಾರಕ್ಕೆ ಸಂಬಂಧಿಸಿದ ದ್ವೇಷದಿಂದ ಸುನೀಲ್ ಕುಮಾರ್, ಪ್ರವೀಣ್ ಪೂಜಾರಿ, ಪ್ರೀತಂ ಮತ್ತು ರೋಹಿತ್ ಕುಮಾರ್ ಸೇರಿ ರಾಕೇಶ್ ಮೇಲೆ ಕತ್ತಿಗಳಿಂದ ದಾಳಿ ನಡೆಸಿ ಕೊಲೆ ಮಾಡಿದ್ದರು. ಈ ಕುರಿತು ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಪೊಲೀಸ್ ಇನ್ಸ್ಪೆಕ್ಟರ್ ಕೆ.ಆರ್. ನಾಯಕ್ ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶ ರಾಜೇಶ್ ಮಾರುತಿ ಕಾಮಟೆ ಅವರು ನಾಲ್ವರು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿ ಶಿಕ್ಷೆ ಪ್ರಕಟಿಸಿದ್ದಾರೆ. ಮೂವರಿಗೆ ಜೀವಾವಧಿ ಶಿಕ್ಷೆ ಮೊದಲನೇ ಆರೋಪಿ ಸುನೀಲ್ ಕುಮಾರ್, ಎರಡನೇ ಆರೋಪಿ ಪ್ರವೀಣ್ ಪೂಜಾರಿ ಹಾಗೂ ಮೂರನೇ ಆರೋಪಿ ಪ್ರೀತಂಗೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 ಹಾಗೂ 120(ಬಿ) ಮತ್ತು 34ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಹಾಗೂ ತಲಾ 15,000 ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ನಾಲ್ವರು ಆರೋಪಿಗಳಿಗೂ ಐಪಿಸಿ ಸೆಕ್ಷನ್ 201 ಮತ್ತು 34ರ ಅಡಿಯಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ 5,000 ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದರೆ ಹೆಚ್ಚುವರಿಯಾಗಿ ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ನಾಲ್ಕನೇ ಆರೋಪಿ ರೋಹಿತ್ ಕುಮಾರ್ಗೆ ಐಪಿಸಿ ಸೆಕ್ಷನ್ 212 ಮತ್ತು 34ರ ಅಡಿಯಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ 5,000 ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದರೆ ಹೆಚ್ಚುವರಿಯಾಗಿ ಒಂದು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಮೃತನ ತಂದೆಗೆ 50 ಸಾವಿರ ರೂ. ಪರಿಹಾರ ಆರೋಪಿಗಳಿಂದ ವಸೂಲಿ ಮಾಡಲಾದ ಒಟ್ಟು 70,000 ರೂ. ದಂಡದ ಮೊತ್ತದಲ್ಲಿ 20,000 ರೂ.ಗಳನ್ನು ಸರ್ಕಾರಕ್ಕೆ ಜಮೆ ಮಾಡಲು ಹಾಗೂ ಉಳಿದ 50,000 ರೂ.ಗಳನ್ನು ಮೃತ ರಾಕೇಶ್ ಅವರ ತಂದೆಗೆ ಪರಿಹಾರವಾಗಿ ನೀಡಲು ನ್ಯಾಯಾಲಯ ಆದೇಶಿಸಿದೆ. ಪ್ರಕರಣದಲ್ಲಿ ರಾಜ್ಯದ ಪರವಾಗಿ ಸರ್ಕಾರಿ ಅಭಿಯೋಜಕ ಮೋತಿಲಾಲ್ ಚೌಧರಿ ವಾದ ಮಂಡಿಸಿದ್ದರು.