ಮಂಗಳೂರಿನ KFCಯಲ್ಲಿ ಗಬ್ಬು ವಾಸನೆ, ಹಳೆಯ ಮಾಂಸ! ಹಳಸಿದ ಎಣ್ಣೆ !! ದಿಡೀರ್ ದಾಳಿಗೆ ಬಯಲಾಯ್ತು ಅವ್ಯವಸ್ಥೆ
RB NEWS
Bureau Report
ಮಂಗಳೂರಿನ KFCಯಲ್ಲಿ ಗಬ್ಬು ವಾಸನೆ, ಹಳೆಯ ಮಾಂಸ! ಹಳಸಿದ ಎಣ್ಣೆ !! ದಿಡೀರ್ ದಾಳಿಗೆ ಬಯಲಾಯ್ತು ಅವ್ಯವಸ್ಥೆ
ಮಂಗಳೂರು, ಆ.16: ನಗರದ ಕೆ.ಎಸ್. ರಾವ್ ರಸ್ತೆಯ ಸಿಟಿ ಸೆಂಟರ್ ಮಾಲ್ನಲ್ಲಿರುವ ಕೆಎಫ್ಸಿ ಔಟ್ಲೆಟ್ನಲ್ಲಿ ಕಲುಷಿತ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಶನಿವಾರ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಅನೈರ್ಮಲ್ಯ, ಹಳೆಯ ಮಾಂಸ ಹಾಗೂ ಅವಧಿ ಮೀರಿದ ಎಣ್ಣೆ ಪತ್ತೆಯಾಗಿದ್ದು, ಅಧಿಕಾರಿಗಳು ಮಾಂಸದ ಮಾದರಿಗಳನ್ನು ವಶಪಡಿಸಿಕೊಂಡು ಔಟ್ಲೆಟ್ಗೆ ಬೀಗ ಹಾಕಿದ್ದಾರೆ. ಮಾಜಿ ಮೇಯರ್ ಹಾಗೂ ಬಿಜೆಪಿ ನಾಯಕಿ ಕವಿತಾ ಸನಿಲ್ ಅವರು ತಮ್ಮ 10 ವರ್ಷದ ಮಗುವಿಗಾಗಿ ಸ್ವಿಗ್ಗಿ ಮೂಲಕ ಪೆರಿ-ಪೆರಿ ಚಿಕನ್ ಆರ್ಡರ್ ಮಾಡಿದ್ದರು ಎನ್ನಲಾಗಿದೆ. ಆಹಾರ ಮನೆಗೆ ಬಂದ ಬಳಿಕ ಮಗು ಚಿಕನ್ ಸೇವಿಸುತ್ತಿದ್ದ ವೇಳೆ ಮಾಂಸ ಕಪ್ಪು ಬಣ್ಣಕ್ಕೆ ತಿರುಗಿರುವುದು ಕಂಡುಬಂದಿದ್ದು, ತೀವ್ರ ದುರ್ವಾಸನೆಯೂ ಬರುತ್ತಿತ್ತು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಕವಿತಾ ಸನಿಲ್ ಅವರು ಬಿಲ್ ಸಮೇತ ಸಿಟಿ ಸೆಂಟರ್ ಮಾಲ್ನಲ್ಲಿರುವ ಕೆಎಫ್ಸಿ ಔಟ್ಲೆಟ್ಗೆ ತೆರಳಿ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಬಳಿಕ ಪ್ರಕರಣವನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರ ಗಮನಕ್ಕೂ ತರಲಾಗಿದ್ದು, ಸಚಿವರ ಸೂಚನೆಯ ಮೇರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಹಾಗೂ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಪ್ರವೀಣ್ ನೇತೃತ್ವದ ತಂಡ ಕೆಎಫ್ಸಿಗೆ ದಾಳಿ ನಡೆಸಿದೆ. ಸ್ಟೋರೇಜ್ ರೂಂನಲ್ಲಿ ಗಬ್ಬು ವಾಸನೆ ಅಧಿಕಾರಿಗಳು ಔಟ್ಲೆಟ್ನ ಸ್ಟೋರೇಜ್ ರೂಂ ಪರಿಶೀಲಿಸಿದ ವೇಳೆ ಗಬ್ಬು ವಾಸನೆ ಬರುತ್ತಿತ್ತು ಎನ್ನಲಾಗಿದೆ. ಅಲ್ಲಿ ಮೂರು ಮಾದರಿಯ ಚಿಕನ್ಗಳನ್ನು ದಾಸ್ತಾನು ಮಾಡಲಾಗಿದ್ದು, ಮಾಂಸದ ಗುಣಮಟ್ಟ ಮತ್ತು ಸಂಗ್ರಹಣಾ ವ್ಯವಸ್ಥೆ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಸಿಬ್ಬಂದಿಯನ್ನು ಈ ಬಗ್ಗೆ ಪ್ರಶ್ನಿಸಿದಾಗ ಸಮರ್ಪಕ ಉತ್ತರ ದೊರೆಯಲಿಲ್ಲ ಎಂದು ತಿಳಿದುಬಂದಿದೆ. ಕೆಎಫ್ಸಿಗೆ ಕೋಳಿ ಮಾಂಸ ಬೆಂಗಳೂರಿನಿಂದ ಪೂರೈಕೆಯಾಗುತ್ತದೆ ಎನ್ನಲಾಗಿದ್ದು, ಹಲವು ತಿಂಗಳುಗಳ ಹಿಂದಿನ ಮಾಂಸವನ್ನು ದಾಸ್ತಾನು ಮಾಡಲಾಗಿತ್ತು ಎಂಬ ಆರೋಪವೂ ಕೇಳಿಬಂದಿದೆ. ಇದೇ ವೇಳೆ ಅವಧಿ ಮೀರಿದ ಎಣ್ಣೆಯೂ ಪತ್ತೆಯಾಗಿದ್ದು, ಆಹಾರ ತಯಾರಿಕೆಯಲ್ಲಿ ಅದರ ಬಳಕೆ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಮಾದರಿ ಮೈಸೂರಿನ ಪ್ರಯೋಗಾಲಯಕ್ಕೆ ಪತ್ತೆಯಾದ ಚಿಕನ್ ಹಾಗೂ ಇತರ ಆಹಾರ ಪದಾರ್ಥಗಳ ಮಾದರಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ಅವುಗಳನ್ನು ಪರೀಕ್ಷೆಗಾಗಿ ಮೈಸೂರಿನ ಆಹಾರ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಲು ನಿರ್ಧರಿಸಿದ್ದಾರೆ. ಪ್ರಯೋಗಾಲಯದ ವರದಿ ಬಂದ ಬಳಿಕ ಆಹಾರ ಸುರಕ್ಷತಾ ಕಾಯ್ದೆಯಡಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಔಟ್ಲೆಟ್ನಲ್ಲಿ ಅನೈರ್ಮಲ್ಯ, ಹಳಸಿದ ಮಾಂಸ ಹಾಗೂ ಅವಧಿ ಮೀರಿದ ಎಣ್ಣೆ ಪತ್ತೆಯಾಗಿರುವುದು ಕಂಡುಬಂದಿದ್ದು, ಸಾರ್ವಜನಿಕರಿಗೆ ಆಹಾರ ಪೂರೈಕೆಯಲ್ಲಿ ಸುರಕ್ಷತಾ ಮಾನದಂಡಗಳನ್ನು ಪಾಲಿಸಲಾಗಿದೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ. ಅಧಿಕೃತ ಪ್ರಯೋಗಾಲಯದ ವರದಿ ಹಾಗೂ ಇಲಾಖೆಯ ಮುಂದಿನ ಕ್ರಮದ ಬಳಿಕವೇ ಮಾಂಸದ ನೈಜ ಗುಣಮಟ್ಟ ಮತ್ತು ಆಹಾರ ಕಲುಷಿತವಾಗಿರುವುದಕ್ಕೆ ಸಂಬಂಧಿಸಿದ ಅಂತಿಮ ಸ್ಪಷ್ಟತೆ ದೊರೆಯಲಿದೆ.