[t4b-ticker]

ಭಾವಶುದ್ಧಿಯ ಬಾಹುಬಲಿ ಮಹಾಮಸ್ತಕಾಭಿಷೇಕ

Picture of RB NEWS

RB NEWS

Bureau Report

ಭಾವಶುದ್ಧಿಯ ಬಾಹುಬಲಿ ಮಹಾಮಸ್ತಕಾಭಿಷೇಕ

ವೇಣೂರಿನ ಪಲ್ಗುಣಿ ನದಿ ತೀರದ ಎತ್ತರದ ದಿಬ್ಬದಲ್ಲಿ ಅನಂತ ದೂರಕ್ಕೆ ದೃಷ್ಟಿ ನೆಟ್ಚು ಉತ್ತರಾಭಿಮುಖವಾಗಿ ನಿಂತಿರುವ ಆಜಾನುಬಾಹು ಏಕಶಿಲಾ ಮೂರ್ತಿ ಬಾಹುಬಲಿಗೆ ಸಾವಿರಾರು ಮಂದಿ ಭಕ್ತರ ಜೈ ಭಾಗವಾನ್ ಬಾಹುಬಲಿ ಎಂಬ ಘಂಟಾಘೋಷದ ಒಕ್ಕೊರಲ ಉದ್ಘೋಷಣೆಯೊಂದಿಗೆ ಬಗೆಬಗೆಯ ಪವಿತ್ರ ದ್ರವ್ಯಗಳಿಂದ ಮಹಾಮಸ್ತಕಾಭಿಷೇಕ ಸಂಪನ್ನಗೊಳ್ಳುವುದು.

ಜಲಾಭಿಷೇಕದಿಂದ ಬೃಹತ್ಮೂರ್ತಿಗೆ ಮಹಾಮಜ್ಜನ ಮಾಡಿ ಮುಗಿಸಿದಂತೆಯೆ ಕರತಾಡನಗಳ ಸಂತಸ, ಸಂಭ್ರಮವು ಮುಗಿಲನೇರಿ ಸಂಚರಿಸಿ ದಶದಿಕ್ಕುಗಳಿಗೆ ಪಸರಿಸುತ್ತಿತ್ತು. ಸತ್ಯ ಅಹಿಂಸೆ ತ್ಯಾಗದ ಒಂದೊಂದು ಮಂತ್ರಾಕ್ಷರದಂತೆ ಕರತಾಡನದ ಸದ್ದು ಭೂಮಿಯಾಕಾಶಕ್ಕೆ ಚೆಲ್ಲಿದಂತೆ ಭಾಸವಾಗುತ್ತಿತ್ತು.

ಮೂಡುಬಿದಿರೆ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳ ಮಂತ್ರೋಚ್ಚಾರಗಳು ಪ್ರತಿಯೊಂದು ಬಗೆಯ ದ್ರವ್ಯಾಭಿಷೇಕಕ್ಕೆ ಮುನ್ನುಡಿಯಾಗಿ ಬೆಟ್ಟದಲ್ಲಿ ಅನುರಣಿಸುತ್ತಿರುವಾಗ ಮಹಾಭಿಷೇಕವನ್ನು ಕಣ್ತುಂಬ ,ಮನಸಿನ ತುಂಬ ,ಎದೆಯಾಳಕ್ಕೂ ತುಂಬಿಸಿಕೊಳ್ಳುವುದಕ್ಕೆ ಭಕ್ತಿ ಭಾವನೆಗಳಿಂದ ಮೂರ್ತಿಯನ್ನು ದಿಟ್ಚಿಸುವ ಭಕ್ತ ಶ್ರಾವಕ ಶ್ರಾವಕಿಯರ ಮನೋಲ್ಲಾಸ ಗೊಮ್ಮಟನ ಸತ್ಯ ಶಾಂತಿ ಹಾಗೂ ತ್ಯಾಗದ ಮಾಳವನ್ನೆ ಮಂತ್ರಮುಗ್ಧಗೊಳಿಸಿಬಿಡುತ್ತಿತ್ತು.

ಮಲ್ಲಯುದ್ಧ,ದೃಷ್ಟಿ ಯುದ್ಧ ,ಜಲಯುದ್ಧ ಮುಗಿಸಿ ಬಂದು ನಿಂತ ಬಾಹುಬಲನಿಗೆ ತಂಪೆರಚುವಂತೆ,ದಣಿವಾರಿಸುವಂತೆ ತಿಳಿದುಕೊಳ್ಳುವ ಕ್ಷೀರಾಭಿಷೇಕದ ಬಿಳಿನೊರೆಯನ್ನು ಕಂಡಾಗ ಭಕ್ತಿ ಭಾವುಕತೆಯಿಂದ ದಿಟ್ಟಿಸುವವರೆಲ್ಲರೂ ತಮ್ಮ ಹೃದಯ ,ಮನಸುಗಳಲ್ಲಿನ ಕಪ್ಪು ಕಲ್ಮಶಗಳನ್ನು ಅದೇ ಬಾಹುಬಲಿ ಮಿಂದ ಹಾಲಿನಿಂದ ತೊಳೆದುಕೊಂಡರೇನೋ ಎಂಬಂತೆ ಅಂಗಣದಲ್ಲಿ ಕುಣಿದಾಡಿದರು.

ನೆತ್ತಿಯಲ್ಲಿ ಸುರಿದ ಐನೂರುಕ್ಕೂ ಹೆಚ್ಚು ಲೀಟರ್ ಪ್ರಮಾಣಗಳಷ್ಟು ಕ್ಷೀರವನ್ನು ಸುರಿದಾಗಂತೂ ನಿಂತ ಗೊಮ್ಮಟನು ಮತ್ತಷ್ಟು ತನ್ನಲ್ಲಿನ ಶಾಶ್ವತವಾದ ನಿರ್ಲಿಪ್ತಭಾವದಲ್ಲೆ ಮುಗುಳ್ನಗೆಯನ್ನು ವಿಸ್ತರಿಸುವಂತೆ ಕಂಡು ಭಕ್ತರು ಭಾವಪರವಶಕ್ಕೊಳಗಾಗುತ್ತಿದ್ದರು.

ಚಂದನ ಶ್ರೀಗಂಧ ದ್ರವ್ಯಗಳನ್ನು ತಲೆಯಿಂದ ಪಾದಗಳವರೆಗೆ ಸುರಿಸಿಕೊಂಡರೂ ತಾನದನ್ನು ಆಘ್ರಾಣಿಸದೆ ಲೋಕಕ್ಕೆ ಪಸರಿಸುತ್ತ ತದೇಕಚಿತ್ತದಿಂದ ನಿಂತಿರುವ ಆತನ ನಿರ್ಭಾವುಕತನವು ಜಯಘೋಷ ಹಾಕುತ್ತಿದ್ದ ಶ್ರಾವಕ ಶ್ರಾವಕಿಯರಿಗೆ ತ್ಯಾಗದ ಕಠಿಣತೆಯನ್ನು ಅಕ್ಷರಶಃ ತೋರಿಸಿಕೊಡುತ್ತತ್ತು.

ಇಕ್ಷು ರಸ,ಅಕ್ಕಿ ಹಿಟ್ಟು,ಅರಿಶಿಣ,ಕಷಾಯ ಮುಂತಾದ್ದರ ಒಟ್ಟು ಹದಿನಾರು ಬಗೆಯ ಮಹಾಮಜ್ಜನಗಳೆಲ್ಲದಕ್ಕೂ ಜಗ್ಗದ ಜಗದೇಕ ವೀರ ಬಾಹುಬಲಿಗೆ ಎಲ್ಲವೂ ದೂರ,ಎಲ್ಲವೂ ತ್ಯಾಗ! ಎಂದಿಗೂ ಶಾಂತಿ,ಎಲ್ಲೆಡೆಗೂ ಅಹಿಂಸೆ,ತ್ಯಾಗವೇ ಸಂದೇಶವಾಗಿ ಹೊರಹೊಮ್ಮತ್ತಿತ್ತು.

ಭಗವಾನ್ ಬಾಹುಬಲಿಗೆ ಭಕ್ತರ ಭಾವಾಭಿಷೇಕವೇ ಹೊರತು ಅದು ಬೇರೇನೂ ಅಲ್ಲ ಅನ್ನುವುದಕ್ಕೆ ಸಾಕ್ಷಿಯೆಂಬಂತೆ ಮೂರ್ತಿಯ ಶಿರಕ್ಕೆ ಸುರಿದ ದ್ರವ್ಯಗಳಾವುದೂ ಮೈಗಂಟಿಕೊಳ್ಳದೆ ಧರೆಗಿಳಿಯುತಿತ್ತು! ನೂರಾರು ಮಂದಿ ಸಾವಿರಾರು ಮಂದಿಗಳ ಸಮ್ಮುಖದಲ್ಲಿ ಮಹಾಮೂರ್ತಿಗೆ ಮಾಡುವ ಮಹಾಮಜ್ಜನಕ್ಕಾಗಿ ಭಗವಾನರಿಂದ ಯಾವ ಪ್ರಶಂಸೆಯೂ ಸಿಗದೆ,ಅದು ಸ್ವೀಕಾರವೂ ಆಗುತ್ತಿಲ್ಲ ಎನ್ನುವಂತೆ ಭಾಸವಾದರೂ ಅವರವರ ಭಾವಶುದ್ದಿಗೊಳ್ಳುವ ಅಪೂರ್ವ ಕ್ಷಣವಾಗಿ ಮೈಯೆಲ್ಲ ರೋಮಾಂಚನಗೊಳ್ಳುತ್ತಿರುವುದು ಅಷ್ಟೇ ಸಾರ್ಥಕ ಸತ್ಯ.

ಮಹಾಮಜ್ಜನದ ಸೇವಾಕರ್ತರುಗಳ ಅದೆಂಥದೋ ವರ್ಣನಾತೀತ ಮೆರುಗು ವಿನ್ಯಾಸಗಳು ,ಆಹ್ವಾನ ಆತಿಥ್ಯಗಳು ,ಗೊಮ್ಮಟನ ಪರಿಸರದಲ್ಲಿ ಕಣ್ಣು ಕುಕ್ಕಿದರೂ, ಹೊಟ್ಟೆ ಬಿರಿದರೂ,ಆಕಾಶ ಮುಟ್ಟುವ ಹಾಗೆ ನಲಿದಾಡಿದರೂ ಅದು ನಶ್ವರ ಎನ್ನುವ ಸಂದೇಶದಲ್ಲಿ ಕದಲದೆ ಸ್ಥಿತಪ್ರಜ್ಞನಾಗಿ ನಿಂತ ವೈರಾಗ್ಯಮೂರ್ತಿ ಬಾಹುಬಲಿಗೆ ಬೃಹದಾಕಾರದ ಹೂವಿನ ಹಾರದ ಜೊತೆಗೆ ಮಹಾ ಮಂಗಳಾರತಿ ಎತ್ತುವಾಗಿನ ಸಭಾ ಕೂಗು ಆಜಾನುಬಾಹುವನೆದುರಗೆ ನಿಂತ ಕುಬ್ಜರ ಜಯಕಾರಗಳು ,ಭಕ್ತಿಯ ಮೌನಗಳು ಭಾವಶುದ್ಧಿಗಳಾಗಿರುವುದನ್ನು ಸಾಕ್ಷಾತ್ಕರಿಸಿತು.

-ವಿ. ಕೆ. ವಾಲ್ಪಾಡಿ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top