ಭಾರತ ಬಲಿಷ್ಠ ಯುವಶಕ್ತಿಯ ರಾಷ್ಟ್ರ: ನ್ಯಾಯಾಧೀಶ ಆಬುತಾಹಿರ್

Picture of RB NEWS

RB NEWS

Bureau Report

ಕಾರ್ಕಳ : ಮನುಷ್ಯ ಮತ್ತು ಪ್ರಾಣಿಗಳಿಗೆ ಬುದ್ದಿಯಿದೆ. ಆದರೆ ಮನುಷ್ಯನಿಗೆ ಮಾತ್ರ ಆಲೋಚನೆ ಮಾಡುವಂತಹ ಶಕ್ತಿಯಿರುವುದನ್ನು ಅರಿತುಕೊಳ್ಳಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಂಬಾಕು ಮುಂತಾದ ದುಶ್ಚಟಗಳಿಂದ ಮುಕ್ತರಾಗಿ ಆರೋಗ್ಯ ಪೂರ್ಣ ಬದುಕು ನಡೆಸಲು ಮುಂದಾಗಬೇಕು. ವಿಶ್ವದ ಹಲವು ರಾಷ್ಟ್ರಗಳು ಭಾರತದ ದೊಡ್ಡ ಪ್ರಮಾಣದ ಯುವ ಶಕ್ತಿಯ ಮೇಲೆ ನಂಬಿಕೆ ಇಟ್ಟಿವೆ. ಆದುದರಿಂದ ದೇಶದ ಆಸ್ತಿಯಾಗಿ ಹೊರಹೊಮ್ಮ ಬೇಕೆಂದು ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶ ಆಬುತಾಹಿರ್ ಅಭಿಮತ ವ್ಯಕ್ತಪಡಿಸಿದರು.

ಕಾನೂನು ನೆರವು ಸಮಿತಿ, ಕಾರ್ಕಳ, ನ್ಯಾಯವಾದಿಗಳ ಸಂಘ (ರಿ.) ಮತ್ತು ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಸಂಯುಕ್ತ ಪ್ರೌಢಶಾಲೆ ಪೆರ್ವಾಜೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ತಂಬಾಕು ನಿಷೇಧ ದಿನ ಸಲುವಾಗಿ ಕಾನೂನು ಅರಿವು ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಕಾರ್ಕಳ ನ್ಯಾಯವಾದಿಗಳ ಸಂಘ(ರಿ.) ಇದರ ಕೋಶಾಧಿಕಾರಿಗಳಾದ ಹೆಚ್ ಅರುಣ್ ಕುಮಾರ್ ಶೆಟ್ಟಿಯವರು, ಕಾರ್ಕಳ ಕಾನೂನು ನೆರವು ಸಮಿತಿಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ಮಕ್ಕಳು ತಂಬಾಕನ್ನು ಬಹಿಷ್ಕರಿಸಬೇಕೆಂದರು.‌

ಸಂಪನ್ಮೂಲ ವ್ಯಕ್ತಿಯಾಗಿ ಕಾನೂನು ಅರಿವು ಮಾಹಿತಿ ನೀಡಿದ ವಕೀಲ ಲೋಲಾಕ್ಷ ಅವರು, ತಂಬಾಕು ಬಳಕೆ, ಮಾರಾಟದ ಬಗ್ಗೆ ಹಲವಾರು ಕೇಂದ್ರ ಮತ್ತು ರಾಜ್ಯ ಕಾನೂನುಗಳ ಬಗ್ಗೆ ಸಮಗ್ರ ವಿವರಣೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾಭಿವೃದ್ಧಿ ಸಮಿತಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಹಿರಿಯ ವಕೀಲ ವಿಜಯರಾಜ್ ಶೆಟ್ಟಿಯವರು, ಮಕ್ಕಳು ತಂಬಾಕು ಅಲ್ಲದೆ ಮದ್ಯದ ಚಟಕ್ಕೂ ಬೀಳಬಾರದು ಮಕ್ಕಳು ತಂಬಾಕು ಮತ್ತು ಮದ್ಯವನ್ನು ತಾವೂ ತ್ಯಜಿಸಿ ತಮ್ಮ ಮನೆಯಲ್ಲಿ ಅಂತಹ ವ್ಯಸನಿಗಳಿದ್ದರೆ ಅವರನ್ನು ಸಹ ಪರಿವರ್ತನೆ ಮಾಡಬೇಕೆಂದರು.

ಶಾಲಾ ಮುಖ್ಯೋಪಾಧ್ಯಾಯ ದಿವಾಕರ್ ನೇತೃತ್ವದಲ್ಲಿ ಸಮಾರಂಭ ನಡೆಯಿತು. ಅಧ್ಯಾಪಕ ಹರಿಶ್ಚಂದ್ರ ಬಾಯಾರಿ ಸ್ವಾಗತಿಸಿ, ಅಧ್ಯಾಪಕಿ ವೇದಾವತಿ ವಂದನಾರ್ಪಣೆಗೈದರು. ಲಲಿತ ಅಧ್ಯಾಪಕಿ ಕಾರ್ಯಕ್ರಮ ನಿರೂಪಿಸಿದರು

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top