ಬೆಳಗಾವಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣದ ಆರೋಪಿಯೋರ್ವ ನ್ಯಾಯಾಲಯದ ಆವರಣದಲ್ಲೇ ಪಾಕ್ ಪರ ಘೋಷಣೆ ಕೂಗಿದ ಆರೋಪ ಬೆಳಗಾವಿಯಲ್ಲಿ ಇಂದು ಕೇಳಿ ಬಂದಿದೆ.


ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿನ ವಿಚಾರಣಾಧೀನ ಕೈದಿ ಜಯೇಶ್ ಪೂಜಾರಿ ಎಂಬಾತ ಈ ಘೋಷಣೆ ಕೂಗಿದ್ದಾನೆ ಎಂದು ಹೇಳಲಾಗಿದೆ. ಘೋಷಣೆ ಕೂಗುತ್ತಿದ್ದಂತೆ ವಕೀಲರು, ಸಾರ್ವಜನಿಕರು ಹಿಡಿದು ಥಳಿಸಿದ್ದಾರೆ.


ಜೈಲಿನಲ್ಲಿದ್ದುಕೊಂಡೇ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿರುವುದಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಮಂಗಳೂರಿನ ಡಬಲ್ ಮರ್ಡರ್ ಆರೋಪಿ ಹಾಗೂ ವಿವಿಧ ಪ್ರಕರಣಗಳ ಪ್ರಮುಖ ಆರೋಪಿ ಜಯೇಶ್ ಪೂಜಾರಿ ಅಲಿಯಾಸ್ ಜಯೇಶ್ ಕಾಂತ್ ಕಳೆದ ವರ್ಷ ಜನವರಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಕರೆ ಮಾಡಿದ್ದನು. ಸಚಿವ ನಿತಿನ್ ಗಡ್ಕರಿ ಅವರ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಕಚೇರಿಗೆ ಬೆದರಿಕೆ ಕರೆ ಮಾಡಿದ್ದನು. 10 ಕೋಟಿ ನೀಡದಿದ್ದರೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದನು. ಪ್ರಕರಣವನ್ನು ದಾಖಲಿಸಿಕೊಂಡು ಮಹಾರಾಷ್ಟ್ರ ಪೊಲೀಸರು ಕರಣದ ತನಿಖೆ ನಡೆಸಿದ್ದರು. ಆರೋಪಿ ಜಯೇಶ್ ಪೂಜಾರಿ ಮೂಲತಃ ಮಂಗಳೂರಿನ ಪುತ್ತೂರಿನವನಾಗಿದ್ದು ಮುಂಬೈನಲ್ಲಿದ್ದು ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.


























