ಬೀಡಿ ಕಾರ್ಮಿಕರಿಂದ ಅನಿರ್ಧಿಷ್ಟಾವಧಿ ಧರಣಿ
ಮಂಗಳೂರು : 2024 ಎಪ್ರಿಲ್ 1 ರಿಂದ ನೀಡಬೇಕಾದ ಏರಿಳಿತ ತುಟ್ಟಿಭತ್ತೆಯನ್ನು ನೀಡದೆ ಬೀಡಿ ಕಾರ್ಮಿಕರನ್ನು ವಂಚಿಸುತ್ತಿರುವ ಬೀಡಿ ಮಾಲಕರ ವಿರುದ್ದ ಬೀಡಿ ಕಾರ್ಮಿಕರು ಮಂಗಳೂರಿನ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯೆದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ.
ಜಿಲ್ಲೆಯ ಸಮಸ್ತ ಕಾರ್ಮಿಕ ವರ್ಗದ ಪರವಾಗಿ ಸಿಐಟಿಯು ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದೆ.
ಅವಿಭಜಿತ ದ.ಕ.ಜಿಲ್ಲೆಯ ಅರ್ಥಿಕತೆಯ ಜೀವನಾಡಿಯಾದ ಬೀಡಿ ಉದ್ಯಮ ಸದ್ಯದ ಪರಿಸ್ಥಿತಿಯಲ್ಲಿ ಸಂಕಷ್ಟದಲ್ಲಿದ್ದರೂ ಇಂದಿಗೂ ಲಕ್ಷಾಂತರ ಸಂಖ್ಯೆಯ ತಾಯಂದಿರು ಬೀಡಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ.
ಆ ಮೂಲಕ ಜಿಲ್ಲೆಯ ಆರ್ಥಿಕತೆಗೆ ಶಕ್ತಿ ತುಂಬುತ್ತಿದ್ದಾರೆ. ಅಂತಹ ತಾಯಂದಿರಿಗೆ ಕಳೆದ ಕೆಲವು ವರ್ಷಗಳಿಂದ ತುಟ್ಟಿಭತ್ತೆ ನೀಡಿಲ್ಲ,ಕನಿಷ್ಟ ಕೂಲಿಯನ್ನೂ ನೀಡಿಲ್ಲ. ಕೇಳಿದರೆ ವಿಷಯ ಕೋರ್ಟ್ ನಲ್ಲಿದೆ. ಅಲ್ಲಿ ಇತ್ಯರ್ಥವಾಗಲಿ ಎಂದು ಬೀಡಿ ಮಾಲೀಕರು ತೆಪ್ಪಗೆ ಕೂತಿದ್ದಾರೆ.
ಪ್ರಸಕ್ತ ವರ್ಷದ ಏರಿಳಿತ ತುಟ್ಟಿಭತ್ತೆ ನೀಡಿರಿ ಎಂದು ಕೇಳಿದರೆ ಅದಕ್ಕೂ ಬೀಡಿ ಮಾಲಕರು ಸೊಪ್ಪು ಹಾಕುತ್ತಿಲ್ಲ. ಇಂತಹ ಘೋರ ಅನ್ಯಾಯ ಬೀಡಿ ಮಾಲಕರು ಬೀಡಿ ಕಟ್ಟುವ ತಾಯಂದಿರಿಗೆ ಮಾಡುತ್ತಿದ್ದರೆ,ಅವಿಭಜಿತ ದ.ಕ.ಜಿಲ್ಲೆಯ ಶಾಸಕ,ಸಂಸದ ಸೇರಿದಂತೆ ಯಾವನೇ ಒಬ್ಬ ಜನಪ್ರತಿನಿಧಿಯೂ ಕೂಡಾ ಧ್ವನಿ ಎತ್ತುದಿಲ್ಲ. ಬೀಡಿ ಮಾಲಕರೊಂದಿಗೆ ಇವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಕೈ ಜೋಡಿಸಿಕೊಂಡಿದ್ದಾರೆ ಎಂದು ಸಿಐಟಿಯು ಮುಖಂಡ ಸುನೀಲ್ ಕುಮಾರ್ ಬಜಾಲ್ ಆರೋಪಿಸಿದ್ದಾರೆ.



































