ಶ್ರವಣಬೆಳಗೊಳ ಕಾರ್ಕಳ ಮತ್ತು ವೇಣೂರು , ಆ ಮೂರೂ ಕಡೆಯಲ್ಲಿರುವ ಏಕಶಿಲಾ ವಿಗ್ರಹದ ಬಾಹುಬಲಿ ಮೂರ್ತಿಯ ಕೆತ್ತನೆಯ ಕೆಲಸವು ಕೆಲ್ಲತ್ತೆ ಮಾರ್ನಾಡಿನ ಕಲ್ಕುಡು ಕುಟುಂಬದವರಿಂದಲೇ ಮಾಡಲ್ಪಟ್ಟಿತು ಎನ್ನುವ ಕತೆಯು ಜನಪದ ಕತೆಯಾಗಿ ,ಸಂಧಿ ಪಾಡ್ದನವಾಗಿ ಈಗಲೂ ಬಾಯಿಪಾಠವಾಗಿ ಉಳಿದುಕೊಂಡಿದೆ.ಭೂತಾರಾಧನೆಯ ಸಂದರ್ಭದಲ್ಲಿ ಅದೇ ಕತೆಯನ್ನು ಹೇಳುವ ಸಂಧಿ ಪಾಡ್ದನವನ್ನು ಹೇಳಲಾಗುತ್ತಿದೆ.
ಕಲ್ಕುಡನ ಕತೆ ಪ್ರಕಾರ ಮೊದಲು ಕೆತ್ತಿದ್ದು ಶ್ರವಣಬೆಳಗೊಳದ ವಿಗ್ರಹ.ಕೊನೆಯದು ವೇಣೂರಿನ ಮೂರ್ತಿ.
ಕಾರ್ಕಳ ತಾಲೂಕಿನ ಇರ್ವತ್ತೂರು ಗ್ರಾಮದ ಪಕ್ಕದ ಕೆಲ್ಲತ್ತೆ ಮಾರ್ನಾಡು ಶಂಭು ಕಲ್ಕುಡನ ಊರು. ಅವನ ಪೂರ್ತಿ ಹೆಸರು ಶಂಭು ನಾರಾಯಣ ಆಚಾರ್ಯ.ಈಗಿನ ಪ್ರಕಾರ ಎಸ್.ಎನ್. ಆಚಾರ್ಯ! ಮೂಲತಃ ತಮಿಳುನಾಡಿನವರು ಎನ್ನಲಾಗುತ್ತಿದೆ.ಅವರ ಕಡೇ ಪುತ್ರ ಬೀರು ಕಲ್ಕುಡ ಎಂಬಾತನೇ ಕಾರ್ಕಳ ಮತ್ತು ವೇಣೂರಿನ ಬಾಹುಬಲಿ ವಿಗ್ರಹವನ್ನು ಕೆತ್ತಿದನು ಎನ್ನುವುದು ಪ್ರತೀತಿ.
ಎಲ್ಲಣ್ಣ,ಮಲ್ಲಣ್ಣ,ಬಿಕುರು,ನಂದು ಬೀರು ಮತ್ತು ಏಕೈಕ ಪುತ್ರಿ ಕಾಳಮ್ಮ.
ಬೆಳಗೊಳದ ಬಾಹುಬಲಿ ವಿಗ್ರಹ ಕೆತ್ತನೆಗೆಂದು ಶಂಭು ನಾರಾಯಣ ಆಚಾರ್ಯ ಅವರು ಹೋಗುವ ಸಮಯದಲ್ಲಿ ಪತ್ನಿ ಬಸುರಿಯಾಗಿರುತ್ತಾಳೆ.
ಫಲವಾಗಿ ಬೀರು ಕಲ್ಕುಡ ಮತ್ತು ಕಾಳಮ್ಮ ಅವಳಿ ಮಕ್ಕಳಾಗಿ ಹುಟ್ಟಿ ಬೆಳೆಯುತ್ತಾರೆ. ಅಪ್ಪನಿಲ್ಲದೆ ಹುಟ್ಟಿದ್ದಾನೆ ಎನ್ನುವ ನಿಂದನೆಯನ್ನು ಓರಗೆಯವರ ಮಾತಿನಿಂದ ಕೇಳುವುದನ್ನು ಸಹಿಸಲಾಗದೆ ತಂದೆಯನ್ನು ಅರಸುತ್ತ ಹೋದ ಬೀರುಗೆ ದಾರಿಯುದ್ದ ಹೋಗುತ್ತಿರುವಾಗ ಶಂಭು,ಬೆಳಗೊಳದಲ್ಲಿ ಗೊಮ್ಮಟ ಮೂರ್ತಿ ಕೆತ್ತನೆ ಮಾಡುತ್ತಿದ್ದಾನೆ ಎನ್ನುವ ವಿಚಾರ ತಿಳಿದು ಕುತೂಹಲದಿಂದ ಅಲ್ಲಿಗೆ ಹೋಗುತ್ತಾನೆ. ಅಲ್ಲಿ ತನ್ನ ಪರಿಚಯ ಹೇಳಿಕೊಂಡ ನಂತರ ಇಬ್ಬರೂ ಒಂದಾಗುತ್ತಾರೆ ,ತದನಂತರ ಮಗ ಬೀರು ಆ ಆಗಸದೆತ್ತರದ ಪ್ರತಿಮೆಯನ್ನು ತನ್ನ ಕಣ್ಣಳತೆಯಲ್ಲೇ ವೀಕ್ಷಿಸಿ ಮೂರ್ತಿಯ ಎಡ ಹಾಗೂ ಬಲ ಭುಜದಲ್ಲಿ ಒಂದು ನೂಲು ದಪ್ಪದಷ್ಟು ಏರು ಕೆಳಗೆ ವ್ಯತ್ಯಾಸವಾಗಿದೆ ಎಂದಾಗ ಶಂಭು ನಾರಾಯಣ ಆಚಾರ್ಯನಿಗೆ ದಿಗ್ಭ್ರಮೆಯಾಗುತ್ತದೆ, ಲೋಪವಾಗಿಲರುವುದು ಸರಿ ಎಂದು ಕಂಡು ಬರುತ್ತದೆ.
ಅಮೋಘ ಶಿಲ್ಪಿಯಾಗಿರುವ ನನ್ನಲ್ಲಿಯೇ ಲೋಪ ಉಂಟಾದುದನ್ನು ಮಗ ಗುರುತಿಸಿದನಲ್ಲವೇ,ಮುಂದೆ ನನ್ನ ಪ್ರತಿಭೆಗೆಲ್ಲಿ ಬೆಲೆ ಎಂದು ತನ್ನಲ್ಲಿನ ಬೆಳ್ಳಿಯ ಚೂರಿಯಿಂದ ಎದೆಗೆ ಇರಿದುಕೊಂಡು ಸಾಯುತ್ತಾನೆ. ಆ ನಂತರ ,ಬಾಹುಬಲಿ ಮೂರ್ತಿಯ ಭುಜದ ಕೆತ್ತನೆಯಲ್ಲಿ ಆಗಿದ್ದ ಕಿರು ವ್ಯತ್ಯಾಸವನ್ನು ಬೀರು ಕಲ್ಕುಡ ಸರಿಪಡಿಸಿ ತಂದೆಯನ್ನಗಲಿಕೆಗೆ ತಾನು ಕಾರಣನಾಗಿರುವ ದುಃಖದಲ್ಲಿ ಕಾರ್ಕಳಕ್ಕೆ ಮರಳುತ್ತಾನೆ.
ಚಾವುಂಡರಾಯನ ಅಪೇಕ್ಷೆಯಂತೆ ಕಂಡರಿಸಿದ ಶಿಲ್ಪಿ ಅರಿಷ್ಟನೇಮಿ ಹಾಗೂ ಮೂರ್ತಿಯನ್ನು ಶಂಭು ನಾರಾಯಣ ಆಚಾರ್ಯ ಕೆತ್ತಿರುವರು.13-03-981 ರಲ್ಲಿ ಶ್ರವಣಬೆಳಗೊಳದ ಗೊಮ್ಮಟ ಮೂರ್ತಿಯ ನಿರ್ಮಾಣವಾಗಿತ್ತು ಎಂದು ಉಲ್ಲೇಖವಿದೆ.
ಕಾರ್ಕಳದ ಭೈರವರಸನು ಶಂಭು ನಾರಾಯಣ ಆಚಾರ್ಯ ರ ಮಗ ಬೀರು ಕಲ್ಕುಡನಲ್ಲಿ ಕಾರ್ಕಳದಲ್ಲೂ ಬಾಹುಬಲಿ ಮೂರ್ತಿಯನ್ನು ಕೆತ್ತಿಸುತ್ತಾನೆ.ಕ್ರಿಸ್ತ ಶಕ13-02-1432 ರಲ್ಲಿ ಆ ಮೂರ್ತಿಯನ್ನು ಕೆತ್ತಲಾಯಿತು.
ವೇಣೂರಿನಲ್ಲಿ ಪ್ರತಿಷ್ಠಾಪಿಸಲಾಗಿರುವ ಮೂವತ್ತೆಂಟು ಅಡಿಗಳಷ್ಟು ಎತ್ತರದ ಬಾಹುಬಲಿ ಮೂರ್ತಿಯನ್ನು ತಿಮ್ಮಣ್ಣ ಅಜಿಲರ ಕೇಳಿಕೆಯಂತೆ ಬೀರು ಕಲ್ಕುಡ ಕೆತ್ತಿರವುದಾಗಿ ಹೇಳಲಾಗುತ್ತಿದೆ.ಅದು 1604 ರಲ್ಲಿ ಸ್ಥಾಪನೆಯಾಗಿತ್ತು.
ಕಾರ್ಕಳದ ಬಾಹುಬಲಿ ಮೂರ್ತಿಯನ್ನು ಕೆತ್ತಿದ ಬೀರು ಕಲ್ಕುಡನೇ ವೇಣೂರಿನ ಪ್ರತಿಮೆಯನ್ನು ಕೆತ್ತಿದ್ದು.ಒಂದು ಪ್ರಶ್ನೆ ಏನೆಂದರೆ ದೈಹಿಕವಾಗಿ ಭಾಗಶಃ ವಿಕಲಾಂಗನಾಗಿದ್ದ ಬೀರು ಕಲ್ಕುಡ ವಿಗ್ರಹವನ್ನು ನಿಜವಾಗಿಯೂ ಕೆತ್ತಿದನೇ ಎಂದು.
ಕಾರ್ಕಳದ ಬಾಹುಬಲಿ ವಿಗ್ರಹವನ್ನು ಮೇಲೆ ಬೆಟ್ಟಕ್ಕೆ ಕೊಂಡೊಯ್ಯಲಾಗಗೆ ಸಾಕಷ್ಟು ತೊಂದರೆಯನ್ನು ಎದುರಿಸಿದ ಭೈರವರಸನಿಗೆ ಶಿಲ್ಪಿ ಬೀರು ಕಲ್ಕುಡನಲ್ಲೇ ಪರಿಹಾರ ಕೇಳುವುದಕ್ಕೆ ಮನಸ್ಸಾಗಿ ಆತನಿಗೆ ಬರ ಹೇಳುತ್ತಾನೆ.
ಹಾಗೆ ಕರೆಸಿದ ಬೀರುವನ್ನು ವಿನಂತಿ ಮಾಡುವಾಗ,ಈ ಭವ್ಯ ಮೂರ್ತಿಯನ್ನು ಮೇಲೆ ಬೆಟ್ಟಕ್ಕೆ ಸಾಗಿಸಿ ಅಲ್ಲಿ ನೆಟ್ಟಗೆ ನಿಲ್ಲಿಸದಿಯೇ ಆದರೆ ನಿನಗೆ ವಿಶೇಷ ಗೌರವ,ಬಂಗಾರ ಕೊಡುವುದಾಗಿ ಭರವಸೆ ನೀಡುವುದರಿಂದ ಬೀರು ಕಲ್ಕುಡನೇ ಮಹಾಮೂರ್ತಿಯನ್ನು ಅಚ್ಚರಿಯೆನ್ನುವ ಹಾಗೆ ಮೇಲೆ ಬೆಟ್ಟಕ್ಕೆ ಸಾಗಿಸಿ,ಸುಲಭ ಸನ್ನೆಗಳಿಂದ ಮೂರ್ತಿಯನ್ನು ನೆಟ್ಟಗೆ ನಿಲ್ಲಿಸುತ್ತಾನೆ. ಅಲ್ಲಿ ಇರಬೇಕಾದ ಕಂಬಗಳು ಇತ್ಯಾದಿಯನ್ನು ನಿರ್ಮಿಸಿ ಕಾರ್ಯ ಪೂರ್ತಿಗೊಳಿಸುತ್ತಾನೆ.
ಇನ್ನು ಬೇರೆಲ್ಲಿಯೂ ಈ ರೀತಿಯ ಭವ್ಯ ಬಾಹಬಲಿ ಮೂರ್ತಿಯನ್ನು ಕೆತ್ತಕೂಡದು ಎಂದು ತೀರ್ಮಾನಿಸಿದ ಭೈರವಸೂಡ ಅರಸನು ಶಿಲ್ಪಿ ಬೀರು ಕಲ್ಕುಡನಿಗೆ ಒಂದು ಕೈಗೆ ಬಂಗಾರದ ಬಳೆ ಒಂದು ಕಾಲಿಗೆ ಬೆಳ್ಳಿಯ ಕಡಗ ತೊಡಿಸಿ ಉಳಿದ ಕೈ ಕಾಲನ್ನು ಕತ್ತರಿಸುತ್ತಾನೆ ಎಂದು ಜನಪದ ಹಾಡಿನ ಇತಿಹಾಸ ಹೇಳುತ್ತದೆ.ಬೀರ ಕಲ್ಕುಡನ ಸಂಧಿ ಪಾಡ್ದನದಲ್ಲಿ ಅದನ್ನೇ ಹೇಳಲಾಗುತ್ತಿದೆ.
ಒಬ್ಬ ಅರಸನಿಗೆ ನೆರೆಯ ಅರಸನ ಬಗ್ಯೆ ಅಸೂಯೆ ಇರಬಹುದು ಅಥವಾ ದ್ವೇಷ ಇರಬಹುದು.
ವೇಣೂರಿನ ತಿಮ್ಮಣ್ಣ ಅಜಿಲರು ಕೂಡ ಇಂಥದೇ ಭವ್ಯ ಬಾಹುಬಲಿ ಮೂರ್ತಿಯನ್ನು ಕೆತ್ತಿಸುವ ಕೆಲಸ ಮಾಡಿಯಾರು ಎಂದು ಮನವರಿಕೆಯಾಗಿದ್ದರಿಂದಲೇ ಬೈರವಸೂಡ ಅರಸ ಆ ಕುಕೃತ್ಯ ಮಾಡಿಸಿರಬಹುದು ಎನ್ನುವುದಕ್ಕೆ ಅವಕಾಶವಿದೆ.
ಜೈನರ ಅಹಿಂಸಾ ಪರಮೋಧರ್ಮ ತತ್ವಾಚರಣೆಗೆ ಈ ಕುಕೃತ್ಯ ಆಕ್ಷೇಪಾರ್ಹವಾಗಿರುವುದರಿಂದ ಬೈರವಸೂಡ ಅರಸನು ಆ ಕೆಟ್ಟ ಕೆಲಸ ಮಾಡಿಸುವುದಕ್ಕೆ ಸಾಧ್ಯವಿಲ್ಲ ಎನ್ನುವ ಅರ್ಥದಲ್ಲಿ ವಾದಿಸುವುದಾದರೂ ಅರಸನಾದವನು ಏನು ಮಾಡುವುದಕ್ಕೂ ಹೇಸುವುದಿಲ್ಲ ಅನ್ನುವ ಸತ್ಯ ವಿಚಾರವೂ ಒಪ್ಪುವಂಥದ್ದೆ.
ಇಲ್ಲಿ ಹುಟ್ಟುವ ಇನ್ನೊಂದು ಪ್ರಶ್ನೆಯೆಂದರೆ ಬೀರು ಕಲ್ಕುಡನು ವೇಣೂರಿನ ಗೊಮ್ಮಟ ಕೆತ್ತನೆಯಾಗುವಾಗ ಕಾರ್ಕಳದ ಮೂರ್ತಿ ನಿರ್ಮಾಣವಾಗಿ ಸುಮಾರು ನೂರ ಎಪ್ಪತ್ತೆರಡು ವರ್ಷಗಳು ಕಳೆಯುತ್ತದೆ. ಅಷ್ಟು ವರ್ಷಗಳ ಅಂತರದಲ್ಲಿ ಬೀರು ಕಲ್ಕುಡ ಕೆತ್ತಿದ್ದಾನೆಯೆಂದಾದರೆ ಶಂಭು ನಾರಾಯಣ ಆಚಾರ್ಯ ದಂಪತಿಗಳು ಅವರು ಮಾನವ ರೂಪದಲ್ಲಿ ಕಂಡು ಬಂದಿರುವ ಕಲ್ಕುಡ ಕಲ್ಲುರ್ಟಿ ದೈವಗಳಾಗಿರಬೇಕು.
ವಾಲ್ಪಾಡಿ ಗ್ರಾಮದ ಮಜಲೋಡಿ ಗುತ್ತು ಮನೆ ಜೈನರದ್ದು.ಅಲ್ಲಿಯ ಚಾವಡಿಯ ಮಂಚದ ಮೇಲೆ ಒಬ್ಬ ಸಾಮಾನ್ಯ ವೃದ್ಧ ಕುಳಿತುಕೊಂಡದ್ದನ್ನು ಪೂಜೆಗೆಂದು ಸ್ನಾನ ಮುಗಿಸಿ ಬಂದ ಮನೆಯ ಯಜಮಾನ ಈ ವೃದ್ದನನ್ನು ಕಂಡು ಉದ್ರಿಕ್ತರಾಗಿ,ಯಾರೋ ನೀನು ತಿರುಗೋಜಿ,ನಟ್ಟೋಜಿ,ಈ ಮಂಚದಲ್ಲಿ ಕುಳಿತುಕೊಳ್ಳುವಷ್ಟು ಧೈರ್ಯ,ಅಹಂಕಾರವ ?ಎಂದು ಗದರಿಸಿದರೂ ತಿರುಗಾಟ ಮಾಡಿ ಬಂದು. ಕುಳಿತಿದ್ದ ಆ ವೃದ್ಧ ಕದಲಲೇ ಇಲ್ಲ. ಬೆತ್ತ ತಂದು ಬೆನ್ನಿಗೆ ಬಾರಿಸಿದಾಗ ಆ ವೃದ್ದ ಅಲ್ಲಿಂದ ಮಾಯವಾಗುತ್ತಾನೆ ,ದಾರಿಯುದ್ದಕ್ಕೂ ಬೆನ್ನು ತುರಿಸಿಕೊಂಡು ಅಳುತ್ತ ಸಾಗಿದವನು ಕೊಯಕುಡೆ ಎಂಬಲ್ಲಿನ ಜೈನರ ಮನೆಗೆ ಪ್ರವೇಶಿಸಿ ಸತ್ಯವನ್ನು ಹೇಳಿ ಅಲ್ಲಿ ಸ್ಥಾಪನೆಯಾಗುತ್ತಾನೆ.ಅದು ಕಲ್ಕುಡ ದೈವ, ಕೋಲ ಕಟ್ಟುವಾಗ ಬೆನ್ನಿಗೆ ಹೊಡೆದಿರುವುದನ್ನು ನಟನೆಯಲ್ಲಿ ತೋರಿಸುವ ಕ್ರಮ ಈಗಲೂ ಉಂಟು.
ಅದೇ ಪ್ರಕಾರ ಈ ಶಂಭು ನಾರಾಯಣ ಆಚಾರ್ಯರೂ ಮಾನವ ರೂಪದಲ್ಲಿ ಕಾಣಿಸಿಕೊಂಡಿರಬಹುದೇ.
ಕಾರ್ಕಳದ ಗೊಮ್ಮಟನ ಕೆತ್ತನೆಯಾಗಿ ಸುಮಾರು 172 ವರ್ಷಗಳ ಬಳಿಕ ವೇಣೂರಿನ ಗೊಮ್ಮಟನ ರಚನೆಯಾಗಿರುವುದು. ಅಷ್ಟು ಸುಧೀರ್ಘ ವರ್ಷಗಳ ಜೀವನವನ್ನು ಬೀರು ಕಲ್ಕುಡ ಅನುಭವಿಸಿದ್ದಾನೆಯೇ ಎಂಬುದು ಚಿಂತಿಸಬೇಕಾದ ಸಂಗತಿಯಾಗುತ್ತದೆ.
ಕಾರ್ಕಳದ ಗೊಮ್ಮಟ ಮೂರ್ತಿಯನ್ನು ಬೆಟ್ಟಕ್ಕೆ ಒಯ್ಯುವಾಗ ಮಾಡಿರುವ ಎಲ್ಲ ಸಿದ್ಧತೆಗಳೂ ಫಲಕೊಡಲಿಲ್ಲ,ಯಾವುದೇ ಮಾತ್ರಕ್ಕೂ ಭವ್ಯ ಮೂರ್ತಿಯನ್ನು ಒಂದಿಂಚು ದೂರ ಎಳೆದೊಯ್ಯುವಲ್ಲಿಯೂ ಆಗಿನ ಸನ್ನೆ ಸೂತ್ರಗಳು ಕೆಲಸ ಮಾಡಲಿಲ್ಲ. ಅಲ್ಲಿ ಯಾವುದೋ ಲೋಪ ಆಗಿರಬಹುದೆಂದು ಮನವರಿಕೆ ಯಾದಾಗ ಭೈರವರಸು ತಾನು ಆ ಶಿಲ್ಪಿಯನ್ಬಳಿಕ ಮೂರ್ತಿಯ ಸಾಗಾಟ ಹಾಗೂ ನಿಲ್ಲಿಸುವ ಕೆಲಸ ಸರಾಗವಾಗಿ ನಡೆಯಿತು ಎಂದು ಕತೆಯಲ್ಲಿ ಹೇಳಲಾಗಿದೆ.ಮುಂದೆ ಆತನಿಗೆ ಕೊಟ್ಟ ಭರವಸೆ ಪ್ರಕಾರ ಯಾವುದೇ ಸನ್ಮಾನ ಉಡುಗೊರೆಯನ್ನೂ ಮಾಡದೆ ,ಆತ ಇನ್ನೆಲ್ಲಿಯೂ ಈ ರೀತಿಯ ಕೆತ್ತನೆ ಕೆಲಸ ಮಾಡಕೂಡದೆಂದು ಬೀರು ಕಲ್ಕುಡನ ಒಂದು ಕೈ ಮತ್ತು ಒಂದು ಕಾಲನ್ನು ಕತ್ತರಿಸಲು ಭೈರವರಸ ಆಜ್ಞಾಪಿಸುತ್ತಾನೆ ಎಂದು ಕತೆ ಹೇಳುತ್ತದೆ.
ಬೀರು ಕಲ್ಕುಡ ಅಂಗ ವೈಕಲ್ಯನಾಗಿ ವೇಣೂರಿಗೆ ಹೋಗುತ್ತಾನೆ ಅಲ್ಲಿ ತಿಮ್ಮಣ್ಣ ಅಜಿಲರು ಆತನಿಗೆ ಆಶ್ರಯ ಕೊಡುತ್ತಾರೆ.ಅಜಿಲರ ಮನದಿಚ್ಚೆಯಂತೆ ಅಲ್ಲಿಯೂ ಒಂದು ಗೋಮಟಮೂರ್ತಿಯ ಕೆತ್ತನೆ ಮಾಡುತ್ತಾನೆ.
ನೀನು ಕೈಯೊಂದು ಕಾಲೊಂದು ಕಳೆದುಕೊಂಡವನು ಹಾಗಿರುವಾಗ ನಿನಗೆ ಕೆತ್ತನೆಯ ಕೆಲಸ ಅಸಾಧ್ಯವೆಂದೇ ಸೂಚಿಸುತ್ತದೆ.ನಿನ್ನ ಶಿಷ್ಷಂದಿರಿಗೆ ಮಾರ್ಗದರ್ಶನ ಮಾಡುವುದರ ಮೂಲಕ ಮೂರ್ತಿ ಕೆತ್ತನೆ ಮಾಡಿಸು ಎಂದು ಅಜಿಲರು ಹೇಳಿದ ಮಾತಿಗೆ ಬೀರು ಕಲ್ಕುಡನು,ಅದ್ಯಾವುದೂ ಬೇಡ ನಾನೇ ಕೆತ್ತನೆ ಕೆಲಸ ಮಾಡುವೆನು ಎಂದು ನೂತನ ಕೊಟ್ಟು ಕೆಲವೇ ದಿನಗಳಲ್ಲಿ ಬಾಹುಬಲಿ ಮೂರ್ತಿಯನ್ನು ರಚಿಸುತ್ತಾನೆ ಎಂದು ತುಳು ಜನಪದ ಸಂಧಿ ಪಾಡ್ದಾನದಲ್ಲಿ ಹೇಳಲಾಗುತ್ತಿದೆ.
ಡಾ।ಅಮೃತ ಸೋಮೇಶ್ವರ ಅವರು ಸಂಪಾದಿಸಿರುವ ತುಳು ಪಾಡ್ದನ ಸಂಪುಟ ಪುಸ್ತಕದಲ್ಲಿ ವೇಣೂರಿನ ಬಾಹುಬಲಿ ಮೂರ್ತಿಯನ್ನು ಬೀರು ಕಲ್ಕುಡ ಕೆತ್ತಿರವ ಬಗ್ಯೆ ಹೀಗೆ ಪಾಡ್ದನವಿದೆ,
ಅಂಬರ ಕರ್ತು ತಿಮ್ಮಣ್ಣಾಜಿಲೆರ್ ಚಾವಡಿಗು ಲೆಪುಡಾಯೆರ್
ಎಂಕುಳೆಗಂದ್ಂಡ ಗುಮ್ಮಡಸ್ವಾಮಿನ ಬೇಲೆ ಬೆನೊಡುಂದೆರ್
ಬೇಲೆ ಬೆನೆರೆ ಕೈ ಇತ್ತಿನವುಲು ಕಾರಿಜ್ದಿ ಕರ್ತುಲೆ
ಕಾರಿತ್ತಿನವುಲು ಕೈ ಇಜ್ಜಿ ಕರ್ತುಲೆಂದೆ ಬೀರು ಕಲ್ಕುಡೆ
ನಿನ ಜಾತಿ ಸಕದಾಕ್ಲೆಡ ಬೆಲೆಗ ಕುಸೆಲ್ ಪನ್ಲಾಂದೆರ್
ಅಂಚ ಗುರ್ತು ಕುಸೆಲ್ ಪಣ್ಪುನೇಕ್ ಯಾನೇ ಬೆನುವೆಂದ್ ಪಂಡೆನೋ
ಮನಗಾಣಿಸಲ ಮದಿಪೊಲ್ಲ ಪೊರ್ತುಡು ಬೇಲೆ ತೊಡುಗ್ವೆ ಕಲ್ಕುಡೆ
ಮುಪ್ಪ ದಿನೊತ್ತ ಬೇಲೆನ್ ಮೂಜ್ ಮಲ್ತೆನಾ.
(ವೇಣೂರಿನ ಅರಸ ತಿಮ್ಮಣ್ಣಾಜಿಲರ ಚಾವಡಿಗೆ ಕರೆಸಿದರು,ನಮಗೆ ಗೊಮ್ಮಟಸ್ವಾಮಿಯ ಕೆಲಸವಾಗಬೇಕೆಂದರು.ಆಗ ಬೀರು ಕಲ್ಕುಡನು,ಕೆಲಸಗೈಯಲುವಕೈಯಿದ್ಗಲ್ಲಿ ಕಾಲಿಲ್ಲ,ಕಾಲಿಗ್ಗಲ್ಲಿ ಕೈಯಿಲ್ಲ ಎಂದಾಗ,ನಿನ್ನ ಜಾತಿ ಸರೀಕರೊಡನೆ ಕೆಲಸದ ಮರ್ಮ ಹೇಳೆಂದರು.ಹಾಗೆ ಗುರುತು ಮರ್ಮ ತಿಳಿಸುವುದಕ್ಕಿಂತ ನಾನೇ ಮಾಡುವೆನೆಂದ ಬ್ರ ಕಲ್ಕುಡ.ಮೂವತ್ತು ದಿನಗಳ ಕೆಲಸವನ್ನು ಮೂರು ದಿನಗಳಲ್ಲಿ ಮಾಡಿ ಮುಗಿಸಿದ)
ಬೀರು ಕಲ್ಕುಡನ ಸಹೋದರಿ ಕಾಳಮ್ಮ ತನ್ನ ಸಹೋದರನನ್ನು ಹುಡುಕಿಕೊಂಡು ಹೋಗುವಾಗ ವೇಣೂರಿನಲ್ಲಿ ಸಂಧಿಸುತ್ತಾಳೆ.ಕಾರ್ಕಳದ ಭೈರವಸನು ಮಾಡಿದ ಘೋರ ಅನ್ಯಾಯವನ್ನು ಕಂಡು ಕ್ಷುದ್ರಳಾಗುತ್ತಾಳೆ. ಅದಕ್ಕೆ ಪ್ರತೀಕಾರವಾಗಿ ನಾವು ಮಾಯಕದ ಭೂತಗಳಾಗಿ ಭೈರವರಸುವನ್ನು ಕಾಡಬೇಕು ಎಂದು ಅಲ್ಲಿ ಇಬ್ಬರೂ ಅದೃಶೃರಾಗುತ್ತಾರೆ.
ಕಲ್ಕುಡನ ತಂದೆ ಶಂಭು ನಾರಾಯಣ ಆಚಾರ್ಯರು ವ್ಯಕ್ತಿಯಾಗಿದ್ದರೋ ಅಥವಾ ಶಕ್ತಿಯಾಗಿದ್ದರೋ ಎನ್ನುವಲ್ಲಿ ಗೊಂದಲವಿದೆ.
ಕೆಲ್ಲತ್ತೆ ಮಾರ್ನಾಡಿನಲ್ಲಿ ಅವರ ಮೂಲ ಮನೆಯಿದೆ.ಆಚಾರಿಗಳ ಆರಾಧ್ಯ ದೇವರು ವಿಶ್ವಕರ್ಮ ದೇವರು,ಕಾಳಿಕಾ ಮಾತೆ.ಈ ಶಂಭು ನಾರಾಯಣಾಚಾರ್ಯರು ತನ್ನ ಆರಾಧ್ಯ ದೈವವನ್ನು ಪ್ರಾರ್ಥಿಸುವುದಾಗಲಿ,ಅವರಿಗೆ ಹರಕೆ ಹೊರುವಂತೆ ಕಾರ್ಕಳದ ಬೈರವ ಅರಸುಗೆ ಸಲಹೆ ಕೊಡುವುದಾಗಲಿ ಎಲ್ಲೂ ಉಲ್ಲೇಖವಿರುವುದಿಲ್ಲ.
ಶಂಭು ನಾರಾಯಣ ಆಚಾರ್ಯರವರು ಬೆಳಗೊಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಕೂಡಾ ಅಲ್ಲಿ ಭೇಟಿಯಾಗಿರುವ ಮಗ ಬೀರು ಕಲ್ಕುಡನ ಶರೀರಕ್ಕೆ ದೈವ ಪ್ರವೇಶ ಆಗುವ ಕ್ರಿಯೆಯೇ ಆಗಿರತ್ತದೆ ಎನ್ನುವುದಕ್ಕೆ ಸಾಧ್ಯವಾಗುತ್ತದೆ.
ಇನ್ನು, ಕಾರ್ಕಳದ ಗೊಮ್ಮಟ ಕೆತ್ತನೆಯ ತರುವಾಯ ಮತ್ತೆಲ್ಲಿಯೂ ಕೆತ್ತಬಾರದು ಎಂದು ಬೈರವಸೂಡನು ಬೀರು ಕಲ್ಕುಡನನ್ನು ವಿಕಲಾಂಗನನ್ನಾಗಿ ಮಾಡಿಸುತ್ತಾರೆಂದರೆ ಆ ಶಕ್ತಿಯು ಕಾರ್ಕಳದಲ್ಲಿಯೇ ಇದ್ದುಕೊಳ್ಳಬೇಕು ಎಂಬ ಅರ್ಥವನ್ನು ತೋರಿಸುವುದಾಗಿರಬೇಕು.
ಎರಡಾದ ಮೇಲೆ ಮೂರಕ್ಕೆ ಮುಕ್ತಾಯ ಮಾಡಬೇಕು ಎನ್ನುವ ನಂಬಿಕೆ ಮೇಲೆ ಶಂಭು ಕಲ್ಕುಡನು ವೇಣೂರಿನಲ್ಲಿ ಬಾಹುಬಲಿ ಮೂರ್ತಿಯನ್ನು ಕೆತ್ತಿರಬೇಕು ಶತಮಾನಗಳಿಗೂ ಹೆಚ್ಚು ಕಾಲ ನಂತರ ವೇಣೂರಿನ ಮೂರ್ತಿಯ ಕೆತ್ತನೆ ಮಾಡುವುದೆಂದಾಗ ಆ ಬೀರು ಕಲ್ಕುಡ ಎನ್ನುವ ಶಕ್ತಿ ಕಾರ್ಕಳದಲ್ಲಿಯೇ ಬಿದ್ದುಕೊಂಡಿರಬೇಕಾಗುತ್ತದೆ.ಹಾಗೆ ಉಳಿದುಕೊಂಡಿರಬೇಕಾದರೆ ಹೀಗೆ ಕೈ ಕಾಲು ಕತ್ತರಿಸಿದ ಕತೆ ಹೆಣೆಯಲೇಬೇಕಾಗುತ್ತದೆ.
ಹಾಗೆಯೆ ಬೈರವಸೂಡನ ಅಂತ್ಯವನ್ನು ವರ್ಣಿಸುವುದಕ್ಕೆ ಕಲ್ಕುಡನ ಕಾರಣಿಕವನ್ನು ವೈಭವೀಕರಿಸುವುದಕ್ಕೆ ಅಲ್ಲಿ ಉಂಟಾಗುವ ಅನೇಕ ಬಗೆಯ ಅಡೆ ತಡೆಗಳು,ಮಂತ್ರವಾದಿಗಳ ಪ್ರವೇಶ ಇತ್ಯಾದಿಯನ್ನು ಪಾಡ್ದನದಲ್ಲಿ ಸೇರಿಸಲಾಗಿದೆ.
ಕಾರಣಿಕ ಶಕ್ತಿಯ ದೈವವನ್ನು ಕಣ್ಣಿಗೆ ಕಟ್ಟುವ ಬಗೆಯಲ್ಲಿ ವೈಭವೀಕರಿಸಲು ಬೈರವಸೂಡ ಅರಸನಿಗೆ ಅಂಥ ಆರೋಪ ಹೊರಿಸಲಾಯಿತು ಎಂದು ತಿಳಿಯಬಹುದಾಗುತ್ತದೆ.
ಇದೊಂದು ಜನಪದ ಕತೆಯಲ್ಲಿ ಕಂಡು ಬರುತ್ತಿರುವ ಗಂಭೀರ ಹಾಗೂ ತರ್ಕಬದ್ಧ ವಿಚಾರ.
ಕಲ್ಕುಡ-ಕಲ್ಲರ್ಟಿ ದೈವಗಳ ಪ್ರಭಾವ ಕಾರ್ಳದಲ್ಲಿಯೇ ಹೆಚ್ಚು ಮಹತ್ವ ಪಡೆದುಕೊಂಡಿರುವುದೂ ಸತ್ಯ.ಗೋಮಟೇಶ್ವರನ ಮೂರ್ತಿಯ ತಲೆಗೆ ಕಾಗೆ ಹಿಕ್ಕೆ ಹಾಕುತ್ತದೆ,ತಲೆಗೆ ಮುಳ್ಳಿನ ಕಿರೀಟವಿಡಬೇಕು ಎಂದು ಒಂದು ಸಮುದಾಯದವರು ತಮಾಷೆ ಮಾಡಿದಾಗ ಕಾರ್ಕಳಕ್ಕೆ ಬೆಂಕಿ ಬೀಳಿಸಿ ಭಯ ಹುಟ್ಟಿಸಿದ ಕಲ್ಕುಡನ ಕತೆ ಈಗಲೂ ಇದೆ.ಕಾರ್ಕಳದ ಕಲ್ಕುಡನ ಪ್ರಭಾವ ಅದು ವರ್ಣನೆಗೆ ಸಿಗುವಂಥದ್ದಲ್ಲ.(ಆಧಾರ)
-ವಿ. ಕೆ. ವಾಲ್ಪಾಡಿ
ವೇಣೂರು ಬಾಹುಬಲಿ ಚಿತ್ರ ಕೃಪೆ ,ಯಜ್ಞ ಮಂಗಳೂರು






































