ಬಂಟ್ವಾಳ: ಸ್ಟುಡಿಯೋ ಮಾಲೀಕನ ಕೊಲೆಗೆ ಯತ್ನ – ನಾಲ್ವರು ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆ
RB NEWS
Bureau Report
ಬಂಟ್ವಾಳ: ಸ್ಟುಡಿಯೋ ಮಾಲೀಕನ ಕೊಲೆಗೆ ಯತ್ನ – ನಾಲ್ವರು ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆ
ಮಂಗಳೂರು ನ್ಯಾಯಾಲಯದಿಂದ ತೀರ್ಪು; ₹88 ಸಾವಿರ ದಂಡ ವಿಧಿಸಿ ಆದೇಶ
ಬಂಟ್ವಾಳ, ಅ. 28: ಸ್ಟುಡಿಯೋ ಮಾಲೀಕನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಏಳು ವರ್ಷಗಳ ಜೈಲು ಶಿಕ್ಷೆ ಹಾಗೂ ಒಟ್ಟು 88 ಸಾವಿರ ರೂ. ದಂಡ ವಿಧಿಸಿ ಬುಧವಾರ ತೀರ್ಪು ಪ್ರಕಟಿಸಿದೆ. ಶಿಕ್ಷೆಗೊಳಗಾದವರನ್ನು ಮಹಮ್ಮದ್ ಸೈಫುದಿನ್, ಮಹಮ್ಮದ್ ಅರ್ಷಾದ್, ಅಬ್ದುಲ್ ರಹಿಮಾನ್ ಅಲಿಯಾಸ್ ಮುನ್ನಿ ಹಾಗೂ ಮಹಮ್ಮದ್ ಸವಾದ ಎಂದು ಗುರುತಿಸಲಾಗಿದೆ. 2020ರ ಅಕ್ಟೋಬರ್ 28ರಂದು ನಡೆದಿದ್ದ ಕೃತ್ಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ–ಫರಂಗಿಪೇಟೆ ಪ್ರದೇಶದಲ್ಲಿ 2020ರ ಅಕ್ಟೋಬರ್ 28ರಂದು ಸಂಜೆ ಈ ಘಟನೆ ನಡೆದಿತ್ತು. ಸ್ಟುಡಿಯೋ ಮಾಲೀಕ ದಿನೇಶ್ ಅವರು ತಮ್ಮ ಸ್ಟುಡಿಯೋದಲ್ಲಿದ್ದ ವೇಳೆ, ಪೂರ್ವದ್ವೇಷದ ಹಿನ್ನೆಲೆಯಲ್ಲಿ ನಾಲ್ವರು ಆರೋಪಿಗಳು ಅಲ್ಲಿಗೆ ಬಂದು ಕತ್ತಿಯಿಂದ ಕಡಿದು ಕೊಲೆ ಮಾಡಲು ಯತ್ನಿಸಿದ್ದರು ಎಂದು ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 103/2020ರ ಅಡಿಯಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ 307, 324, 326, 504, 506 ಹಾಗೂ 34ರಂತೆ ಪ್ರಕರಣ ದಾಖಲಿಸಲಾಗಿತ್ತು. ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಕೆ ಪ್ರಕರಣದ ತನಿಖೆ ನಡೆಸಿದ ಅಂದಿನ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರಸನ್ನ ಎಂ.ಎಸ್. ಅವರು ಆರೋಪಿಗಳನ್ನು ಬಂಧಿಸಿ, ಅವರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶರಾದ ಜಗದೀಶ್ ವಿ.ಎನ್. ಅವರು ನಾಲ್ವರು ಆರೋಪಿಗಳಿಗೂ ಏಳು ವರ್ಷಗಳ ಜೈಲು ಶಿಕ್ಷೆ ಹಾಗೂ ಒಟ್ಟು 88,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕಿ ಜ್ಯೋತಿ ನಾಯಕ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.